Skip to content
Opens in a new window
Listen to this chapter • 5:34

[1] ಇದಾದನಂತರ ನೆರೆದುಬಂದ ಇಸ್ರಾಯೇಲರೆಲ್ಲರೂ ಯೆಹೂದ ದೇಶದ ಪಟ್ಟಣಗಳಿಗೆ ಹೋಗಿ ಕಲ್ಲು ಕಂಬಗಳನ್ನು ಒಡೆದು, ಅಶೇರ ವಿಗ್ರಹ ಸ್ತಂಭಗಳನ್ನು ಕಡಿದುಹಾಕಿ, ಪೂಜಾಸ್ಥಳಗಳನ್ನೂ, ಯಜ್ಞವೇದಿಗಳನ್ನೂ ಹಾಳುಮಾಡಿಬಿಟ್ಟರು. ಯೆಹೂದ ಬೆನ್ಯಾಮೀನ್ ಪ್ರಾಂತ್ಯಗಳಲ್ಲದೆ ಎಫ್ರಾಯೀಮ್, ಮನಸ್ಸೆ ಪ್ರಾಂತ್ಯಗಳಲ್ಲಿಯೂ ಯಾವುದೊಂದನ್ನೂ ಉಳಿಸಲಿಲ್ಲ. ಆ ಮೇಲೆ ಇಸ್ರಾಯೇಲರೆಲ್ಲರೂ ತಮ್ಮ ತಮ್ಮ ಸ್ವಾಸ್ತ್ಯವಿರುವ ಪಟ್ಟಣಗಳಿಗೆ ಹೋದರು.

[2] ಹಿಜ್ಕೀಯನು ಯಾಜಕರ ಮತ್ತು ಲೇವಿಯರ ಆಯಾ ವರ್ಗಗಳವರನ್ನು ಅವರವರಿಗೆ ನೇಮಕವಾದ ಸೇವೆಗೆ ಅಂದರೆ, ಸರ್ವಾಂಗಹೋಮ, ಸಮಾಧಾನ ಯಜ್ಞ, ಇವುಗಳನ್ನು ಸಮರ್ಪಿಸುವುದಕ್ಕೂ ಯೆಹೋವನ ಪಾಳೆಯದ ದ್ವಾರಗಳಲ್ಲಿ ಸೇರಿ ಯೆಹೋವನನ್ನು ಆರಾಧಿಸುತ್ತಾ, ಕೀರ್ತಿಸುತ್ತಾ, ಕೃತಜ್ಞತಾಸ್ತುತಿಮಾಡುತ್ತಾ ಇರುವುದಕ್ಕೂ ನೇಮಿಸಿದನು.

[3] ಇದಲ್ಲದೆ, ಅರಸನು ಯೆಹೋವನ ಧರ್ಮಶಾಸ್ತ್ರದ ವಿಧಿಗನುಸಾರವಾಗಿ ಪ್ರಾತಃಕಾಲ, ಸಾಯಂಕಾಲ, ಸಬ್ಬತ್ ದಿನ, ಅಮಾವಾಸ್ಯೆ ಹಾಗು ಹಬ್ಬಗಳಲ್ಲಿ ಸಮರ್ಪಣೆಯಾಗತಕ್ಕ ಸರ್ವಾಂಗಹೋಮಗಳಿಗಾಗಿ ಆಗಬೇಕಾದ ಎಲ್ಲವನ್ನು ತನ್ನ ಸ್ವಂತ ಆಸ್ತಿಯಿಂದಲೇ ಸಲ್ಲಿಸಬೇಕು ಎಂದು ಸೂಚಿಸಿದನು.

[4] ಯಾಜಕರು ಮತ್ತು ಲೇವಿಯರು ಯೆಹೋವನ ಧರ್ಮಶಾಸ್ತ್ರದಲ್ಲಿ ಆಸಕ್ತರಾಗಿರುವುದಕ್ಕಾಗಿ ಅವರಿಗೆ ಸಲ್ಲತಕ್ಕ ಜೀವನಾಂಶವನ್ನು ಯೆರೂಸಲೇಮಿನಲ್ಲಿ ವಾಸಿಸುವ ಜನರು ಕೊಡಬೇಕೆಂತಲೂ ಗೊತ್ತುಮಾಡಿದನು.

[5] ಈ ರಾಜಾಜ್ಞೆಯು ಪ್ರಕಟವಾದ ಕೂಡಲೆ ಇಸ್ರಾಯೇಲರು ಧಾನ್ಯ, ದ್ರಾಕ್ಷಾರಸ, ಎಣ್ಣೆ, ಜೇನು ಮುಂತಾದ ಎಲ್ಲಾ ಹುಟ್ಟುವಳಿಗಳಲ್ಲಿಯೂ ಪ್ರಥಮಫಲವನ್ನು ರಾಶಿರಾಶಿಯಾಗಿ ತಂದುಕೊಟ್ಟರು ಮತ್ತು ತಮ್ಮ ಎಲ್ಲಾ ಆದಾಯದ ದಶಮಾಂಶವನ್ನೂ ಉದಾರವಾಗಿ ಸಲ್ಲಿಸಿದರು.

[6] ಯೆಹೂದದ ಪಟ್ಟಣಗಳಲ್ಲಿ ವಾಸಿಸುತ್ತಿರುವ ಇಸ್ರಾಯೇಲರೂ ಯೆಹೂದ್ಯರೂ ಕುರಿದನ ಹಿಂಡುಗಳಲ್ಲಿ ದಶಮಾಂಶವನ್ನು ಕೊಟ್ಟದ್ದಲ್ಲದೆ, ದೇವರಾದ ಯೆಹೋವನಿಗೆ ಸಮರ್ಪಣೆಯಾಗತಕ್ಕ ಪರಿಶುದ್ಧ ದ್ರವ್ಯಗಳಲ್ಲಿಯೂ ದಶಮಾಂಶವನ್ನು ತಂದು ರಾಶಿಮಾಡಿದರು.

[7] ಹೀಗೆ ರಾಶಿಮಾಡುವುದು ಮೂರನೆಯ ತಿಂಗಳಿಂದ ಪ್ರಾರಂಭವಾಯಿತು. ಏಳನೆಯ ತಿಂಗಳಲ್ಲಿ ಅದು ಮುಕ್ತಾಯಗೊಂಡಿತು ಅರಸನಾದ

[8] ಹಿಜ್ಕೀಯನೂ ಮತ್ತು ಪದಾಧಿಕಾರಿಗಳೂ ಬಂದು ಆ ರಾಶಿಗಳನ್ನು ನೋಡಿದಾಗ ಯೆಹೋವನನ್ನು ಕೊಂಡಾಡಿ ಆತನ ಪ್ರಜೆಗಳಾದ ಇಸ್ರಾಯೇಲರನ್ನು ಹರಸಿದರು.

[9] ಹಿಜ್ಕೀಯನೂ ಯಾಜಕರ ಮತ್ತು ಲೇವಿಯರ ಹತ್ತಿರ ಆ ರಾಶಿಗಳ ವಿಷಯದಲ್ಲಿ ವಿಚಾರಿಸಿದಾಗ,

[10] ಚಾದೋಕ್ ಸಂತಾನದ ಮಹಾಯಾಜಕನಾದ ಅಜರ್ಯನು ಅವನಿಗೆ, “ಜನರು ದೇವರಾದ ಯೆಹೋವನಿಗೋಸ್ಕರ ನೈವೇದ್ಯಕ್ಕಾಗಿ ಪ್ರತ್ಯೇಕಿಸತಕ್ಕದ್ದನ್ನು ಆತನ ಆಲಯಕ್ಕೆ ತಂದಂದಿನಿಂದ ಯೆಹೋವನು ತನ್ನ ಪ್ರಜೆಗಳಿಗೆ ಸಮೃದ್ಧಿಯಾಗಿ ಅನುಗ್ರಹಿಸಿದ್ದಾನೆ. ನಾವು ಉಂಡು ತೃಪ್ತರಾಗಿ ಇನ್ನೂ ಇಷ್ಟು ದೊಡ್ಡ ರಾಶಿಯನ್ನು ಉಳಿಸಿಕೊಂಡಿರುತ್ತಾರೆ” ಎಂದನು.

[11] ಆಗ ಹಿಜ್ಕೀಯನು ಯೆಹೋವನ ಆಲಯದಲ್ಲಿ ಕೊಠಡಿಗಳನ್ನು ಸಿದ್ಧಮಾಡಲು ಆಜ್ಞಾಪಿಸಿದನು.

[12] ಅವು ಸಿದ್ಧವಾದ ಮೇಲೆ ಜನರು ಕಾಣಿಕೆಗಳನ್ನೂ, ತಮ್ಮ ಆದಾಯದ ದಶಮಾಂಶವನ್ನೂ ಹಾಗು ದೇವರ ನೈವೇದ್ಯಕ್ಕಾಗಿ ಮುಡುಪಾಗಿ ಇಟ್ಟಿದ್ದನ್ನು ನಂಬಿಕೆಯಿಂದ ತಂದು ಅವುಗಳಲ್ಲಿ ಹಾಕುತ್ತಿದ್ದರು. ಈ ಎಲ್ಲಾ ಉಗ್ರಾಣಗಳ ಮೇಲ್ವಿಚಾರಣೆಗೆ ಲೇವಿಯನಾದ ಕೋನನ್ಯನು ಮುಖ್ಯಸ್ಥನಾಗಿದ್ದನು. ಅವನ ತಮ್ಮನಾದ ಶಿಮ್ಮಿಯು ದ್ವಿತೀಯ ಸ್ಥಾನದವನಾಗಿದ್ದನು.

[13] ಅರಸನಾದ ಹಿಜ್ಕೀಯನ ಮತ್ತು ಯೆಹೋವನ ಆಲಯದ ಅಧಿಪತಿಯಾದ ಅಜರ್ಯನ ನಿಯಮದಂತೆ ಯೆಹೀಯೇಲ್, ಅಜಜ್ಯ, ನಹತ್, ಅಸಾಹೇಲ್, ಯೆರೀಮೋತ್, ಯೋಜಾಬಾದ್, ಎಲೀಯೇಲ್, ಇಸ್ಮಕ್ಯ, ಮಹತ್, ಬೆನಾಯ ಇವರು ಕೋನನ್ಯನ ಮತ್ತು ಅವನ ತಮ್ಮನಾದ ಶಿಮ್ಮೀಯ ಕೈಕೆಳಗಿನ ಪಾರುಪತ್ಯಗಾರರಾಗಿದ್ದರು.

[14] ಮೂಡಣದಿಕ್ಕಿನ ದ್ವಾರಪಾಲಕನಾಗಿದ್ದ ಇಮ್ನನ ಮಗನಾದ ಕೋರೆ ಎಂಬ ಲೇವಿಯನು, ಜನರು ಸ್ವಂತ ಇಚ್ಛೆಯಿಂದ ದೇವರಿಗೆ ಕಾಣಿಕೆಯಾಗಿ ಸಮರ್ಪಿಸುತ್ತಿದ್ದ ವಸ್ತುಗಳ ಮೇಲ್ವಿಚಾರಕನಾಗಿದ್ದನು. ಅಲ್ಲದೆ ಯೆಹೋವನ ನೈವೇದ್ಯಕ್ಕಾಗಿ ಪ್ರತ್ಯೇಕಿಸಲ್ಪಟ್ಟ ದ್ರವ್ಯ, ಮಹಾಪರಿಶುದ್ಧ ವಸ್ತು, ಇವುಗಳನ್ನು ಹಂಚಿಕೊಡುವವನೂ ಆಗಿದ್ದನು.

[15] ಇವನ ಕೈಕೆಳಗೆ ಏದೆನ್, ಮಿನ್ಯಾಮಿನ್, ಯೇಷೂವ, ಶೆಮಾಯ, ಅಮರ್ಯ, ಶೆಕನ್ಯ ಎಂಬುವವರಿದ್ದರು. ಇವರು ಯಾಜಕರ ಪಟ್ಟಣಗಳಲ್ಲಿದ್ದು, ನಂಬಿಕೆಯಿಂದ ತಮ್ಮ ಬಂಧುಗಳಿಗೆ ದೊಡ್ಡವರು ಚಿಕ್ಕವರು ಎಂಬ ಭೇದಮಾಡದೆ ಅವರವರ ವರ್ಗಗಳ ಪ್ರಕಾರ ಪಾಲುಕೊಡುತ್ತಿದ್ದರು.

[16] ಆಯಾ ಉದ್ಯೋಗ ವರ್ಗಗಳಿಗನುಸಾರವಾಗಿ ಅನುದಿನದ ಸೇವೆಗಾಗಿ ಯೆಹೋವನ ಆಲಯಕ್ಕೆ ಬರುತ್ತಿದ್ದ ಗಂಡಸರಲ್ಲಿ ಮೂರು ವರ್ಷ ವರ್ಷಕ್ಕಿಂತ ಹೆಚ್ಚು ವಯಸ್ಸುಳ್ಳವರ ಪಟ್ಟಿಯಲ್ಲಿ ಬರೆಯಲ್ಪಟ್ಟವರಿಗೆ ಮಾತ್ರ ಕೊಡುತ್ತಿರಲಿಲ್ಲ.

[17] ಆ ಪಟ್ಟಿಯಲ್ಲಿ ಗೋತ್ರಗಳಿಗೆ ಅನುಸಾರವಾಗಿಯೂ ಆಯಾ ಉದ್ಯೋಗ ವರ್ಗಗಳಿಗೆ ಅನುಸಾರವಾಗಿಯೂ ಇಪ್ಪತ್ತು ವರ್ಷಕ್ಕಿಂತ ಹೆಚ್ಚು ವಯಸ್ಸುಳ್ಳ ಯಾಜಕರು, ಲೇವಿಯರು,

[18] ಅವರವರ ಹೆಂಡತಿಯರು, ಗಂಡುಹೆಣ್ಣು ಮಕ್ಕಳು, ಅಂತು ತಮ್ಮ ಉದ್ಯೋಗದ ನಿಮಿತ್ತ ತಮ್ಮನ್ನು ದೇವರಿಗೆ ನಂಬಿಕೆಯಿಂದ ಪ್ರತಿಷ್ಠಿಸಿಕೊಂಡ ಸಮೂಹದವರೂ ಅವರಿಗೆ ಸೇರಿದವರೆಲ್ಲರೂ ಲಿಖಿತರಾಗಿದ್ದರು.

[19] ಇದಲ್ಲದೆ, ಆರೋನನ ಸಂತಾನದವರಾದ ಯಾಜಕರು ಆಯಾ ಪಟ್ಟಣಗಳಿಗೆ ಸೇರಿದ ಹುಲ್ಲುಗಾವಲುಗಳಲ್ಲಿದ್ದವರಿಗೆ ಪಾಲುಕೊಡುತ್ತಿದ್ದರು. ಇವರು ಯಾಜಕ ಸಂತಾನದ ಎಲ್ಲಾ ಗಂಡಸರಿಗೂ, ಪಟ್ಟಿಯಲ್ಲಿ ಲಿಖಿತರಾದ ಎಲ್ಲಾ ಲೇವಿಯರಿಗೂ, ಸಿಕ್ಕತಕ್ಕ ಭಾಗಗಳನ್ನು ಹಂಚಿಕೊಡುವುದಕ್ಕೆ ಹೆಸರೆಸರಾಗಿ ನೇಮಿಸಲ್ಪಟ್ಟರೂ ಪುರುಷರಿದ್ದರು.

[20] ಹಿಜ್ಕೀಯನು ಯೆಹೂದದಲ್ಲೆಲ್ಲಾ ಇದೇ ವ್ಯವಸ್ಥೆಯನ್ನು ಮಾಡಿದನು. ಅವನು ತನ್ನ ದೇವರಾದ ಯೆಹೋವನಿಗೆ ಒಳ್ಳೆಯವನೂ, ನೀತಿವಂತನೂ, ನಂಬಿಗಸ್ತನೂ ಆಗಿ ನಡೆದನು.

[21] ಅವನು ತನ್ನ ದೇವರ ಒಲುಮೆಯನ್ನು ಪಡೆದುಕೊಳ್ಳುವುದಕ್ಕಾಗಿ ದೇವಾಲಯದ ಸೇವೆ ಮಾಡುವ, ಕಾರ್ಯದಲ್ಲಿಯೂ ಧರ್ಮಶಾಸ್ತ್ರವಿಧಿಗಳ ಸಂಬಂಧದಲ್ಲಿಯೂ, ತಾನು ಪ್ರಾರಂಭಿಸಿದ ಎಲ್ಲಾ ಕಾರ್ಯಗಳನ್ನು ಯಥಾರ್ಥಚಿತ್ತದಿಂದಲೂ ಪ್ರಾಮಾಣಿಕನಾಗಿಯೂ ನಡೆದುಕೊಂಡು ಕೃತಾರ್ಥನಾದನು.

2 ಪೂರ್ವಕಾಲವೃತ್ತಾಂತ — Chapters