[1] ರೆಹಬ್ಬಾಮನು ಯೆರೂಸಲೇಮನ್ನು ತಲುಪಿದ ನಂತರ ಇಸ್ರಾಯೇಲ್ಯರಿಗೆ ವಿರುದ್ಧವಾಗಿ ಯುದ್ಧಮಾಡುವುದಕ್ಕೂ, ರಾಜ್ಯವನ್ನು ತಿರುಗಿ ತನ್ನ ವಶಪಡಿಸಿಕೊಳ್ಳುವುದಕ್ಕೂ ಯೆಹೂದ ಬೆನ್ಯಾಮೀನ್ ಕುಲಗಳಿಂದ ಲಕ್ಷದ ಎಂಭತ್ತು ಸಾವಿರ ಮಂದಿ ಶ್ರೇಷ್ಠ ಸೈನಿಕರನ್ನು ಕೂಡಿಸಿದನು.
[2] ಆಗ ದೇವರ ಮನುಷ್ಯನಾದ ಶೆಮಾಯನಿಗೆ, ಯೆಹೋವನ ವಾಕ್ಯವು ಉಂಟಾಗಿ ಹೇಳಿದ್ದೇನಂದರೆ,
[3] “ನೀನು ಹೋಗಿ ಸೊಲೊಮೋನನ ಮಗನೂ, ಯೆಹೂದದ ಅರಸನಾದ ರೆಹಬ್ಬಾಮನಿಗೂ ಯೆಹೂದದ ಬೆನ್ಯಾಮೀನ್ ಕುಲಗಳ ಇಸ್ರಾಯೇಲರೆಲ್ಲರಿಗೂ,
[4] ಯೆಹೋವನು ಇಂತೆನ್ನುತ್ತಾನೆ, ‘ನೀವು ನಿಮ್ಮ ಸಹೋದರರೊಡನೆ ಯುದ್ಧಮಾಡುವುದಕ್ಕೆ ಹೋಗಬಾರದು. ಎಲ್ಲರೂ ಹಿಂತಿರುಗಿ ಹೋಗಿರಿ; ಈ ಕಾರ್ಯವು ಯೆಹೋವನಿಂದಾಗಿದೆ ಎಂದು ಹೇಳಬೇಕು’” ಎಂಬ ಯೆಹೋವನ ವಾಕ್ಯವುಂಟಾಗಲು ಅವರು ಯೆಹೋವನ ಮಾತನ್ನು ಕೇಳಿ ಯಾರೊಬ್ಬಾಮನಿಗೆ ವಿರುದ್ಧವಾಗಿ ಯುದ್ಧಕ್ಕೆ ಹೊರಡದೆ ಹಿಂತಿರುಗಿ ಹೋದರು.
[5] ರೆಹಬ್ಬಾಮನು ಯೆರೂಸಲೇಮಿನಲ್ಲಿ ವಾಸವಾಗಿದ್ದು ಯೆಹೂದ ಸಂರಕ್ಷಣೆಗಾಗಿ ಪಟ್ಟಣಗಳನ್ನು ಕಟ್ಟಿಸಿದನು.
[6] ಆ ಪಟ್ಟಣಗಳು ಯಾವುವೆಂದರೆ: ಬೇತ್ಲೆಹೇಮ್, ಏತಾಮ್, ತೆಕೋವ,
[7] ಬೇತ್ಚೂರ್, ಸೋಕೋ, ಅದುಲ್ಲಾಮ್,
[8] ಗತ್ ಊರು, ಮಾರೇಷ, ಜೀಫ್
[9] ಅದೋರೈಮ್, ಲಾಕೀಷ್, ಅಜೇಕ,
[10] ಚೊರ್ಗ, ಅಯ್ಯಾಲೋನ್, ಹೆಬ್ರೋನ್. ಕೋಟೆಕೊತ್ತಲುಗಳುಳ್ಳ ಈ ಪಟ್ಟಣಗಳು ಯೆಹೂದ ಬೆನ್ಯಾಮೀನ್ ಪ್ರಾಂತ್ಯಗಳಾಗಿದ್ದವು.
[11] ಅವನು ಈ ಕೋಟೆಗಳನ್ನು ಬಲಪಡಿಸಿ, ನಾಯಕರ ವಶಕ್ಕೆ ಕೊಟ್ಟು, ಪ್ರತಿ ಒಂದರಲ್ಲಿ ಆಹಾರಪದಾರ್ಥ, ಎಣ್ಣೆ, ದ್ರಾಕ್ಷಾರಸವನ್ನು ಸಂಗ್ರಹಿಸಿಟ್ಟನು. ಗುರಾಣಿ ಬರ್ಜಿಗಳನ್ನೂ ಸಂಗ್ರಹಿಸಿಟ್ಟನು.
[12] ಪ್ರತಿಯೊಂದು ಪಟ್ಟಣದಲ್ಲಿ ಗುರಾಣಿ ಬರ್ಜಿಗಳನ್ನೂ ಸಂಗ್ರಹಿಸಿ, ಅವುಗಳನ್ನು ಮತ್ತಷ್ಟು ಭದ್ರಪಡಿಸಿದನು. ಯೆಹೂದ ಬೆನ್ಯಾಮೀನ್ ಕುಲಗಳು ಅವನ ಸ್ವಾಧೀನದಲ್ಲಿದ್ದವು.
[13] ಎಲ್ಲಾ ಇಸ್ರಾಯೇಲ್ ಪ್ರಾಂತ್ಯಗಳಲ್ಲಿದ್ದ ಯಾಜಕರೂ ಮತ್ತು ಲೇವಿಯರೂ ಅವನೊಡನೆ ಬಂದು ಸೇರಿಕೊಂಡರು.
[14] ಲೇವಿಯರು ಯೆಹೋವನಿಗೆ ಯಾಜಕ ಸೇವೆ ಮಾಡದಂತೆ ಯಾರೊಬ್ಬಾಮನೂ ಮತ್ತು ಅವನ ಮಕ್ಕಳೂ ಅವರನ್ನು ಬಹಿಷ್ಕರಿಸಿದ್ದರಿಂದ ಲೇವಿಯರು ತಮ್ಮ ಹುಲ್ಲುಗಾವಲುಗಳಿದ್ದ ತಮ್ಮ ಆಸ್ತಿಗಳನ್ನು ಬಿಟ್ಟು ಯೆಹೂದಕ್ಕೂ ಯೆರೂಸಲೇಮಿಗೂ ಬಂದರು.
[15] ಯಾರೊಬ್ಬಾಮನು ತಾನು ಏರ್ಪಡಿಸಿದ ಪೂಜಾ ಸ್ಥಳಗಳಿಗಾಗಿ ಹಾಗೂ ಹೋರಿಕುರಿಗಳ ಮೂರ್ತಿ ಪೂಜೆಗಳಿಗಾಗಿ ಬೇರೆ ಪೂಜಾರಿಗಳನ್ನು ನೇಮಿಸಿದನು.
[16] ಇಸ್ರಾಯೇಲರ ಎಲ್ಲಾ ಕುಲಗಳಲ್ಲಿ ಇಸ್ರಾಯೇಲ್ ದೇವರಾದ ಯೆಹೋವನ ದರ್ಶನವನ್ನು ಬಯಸುತ್ತಿದ್ದವರು ತಮ್ಮ ಪೂರ್ವಿಕರ ದೇವರಾದ ಯೆಹೋವನಿಗೆ ಯಜ್ಞವನ್ನರ್ಪಿಸುವುದಕ್ಕಾಗಿ ಆ ಲೇವಿಯರನ್ನು ಹಿಂಬಾಲಿಸಿ ಯೆರೂಸಲೇಮಿಗೆ ಬಂದರು.
[17] ಇವರೆಲ್ಲರೂ ಮೊದಲನೆಯ ಮೂರು ವರ್ಷಗಳಲ್ಲಿ ದಾವೀದ ಹಾಗು ಸೊಲೊಮೋನರ ಮಾರ್ಗದಲ್ಲೇ ನಡೆಯುತ್ತಿದ್ದರು. ಅಂತೆಯೇ ಯೆಹೂದ ರಾಜ್ಯವು ಆ ವರ್ಷಗಳಲ್ಲಿ ಅಭಿವೃದ್ಧಿಯಾಗಿ, ಸೊಲೊಮೋನನ ಮಗನಾದ ರೆಹಬ್ಬಾಮನು ಬಲಗೊಂಡನು.
[18] ರೆಹಬ್ಬಾಮನು ದಾವೀದನ ಮಗನಾದ ಯೆರೀಮೋತನ ಮಗಳಾದ ಮಹ್ಲತ್ತಳನ್ನು, ಇಷಯನ ಮೊಮ್ಮಗಳೂ ಎಲೀಯಾಬನ ಮಗಳೂ ಆದ ಅಬೀಹೈಲಳನ್ನೂ ಹೆಂಡತಿಯನ್ನಾಗಿ ಮಾಡಿಕೊಂಡನು.
[19] ಆಕೆಯು ಅವನಿಂದ ಯೆಗೂಷ್, ಶೆಮರ್ಯ, ಜಾಹಮ್ ಎಂಬ ಗಂಡು ಮಕ್ಕಳನ್ನು ಹೆತ್ತಳು.
[20] ಅನಂತರ ಅವನು ಅಬ್ಷಾಲೋಮನ ಮಗಳಾದ ಮಾಕ ಎಂಬಾಕೆಯನ್ನು ಮದುವೆಮಾಡಿಕೊಂಡನು; ಆಕೆಯು ಅವನಿಂದ ಅಬೀಯ, ಅತ್ತೈ, ಜೀಜ, ಶೆಲೋಮೀತ್ ಎಂಬುವರನ್ನು ಹೆತ್ತಳು.
[21] ರೆಹಬ್ಬಾಮನು ತನ್ನ ಎಲ್ಲಾ ಪತ್ನಿಯರಲ್ಲಿಯೂ, ಉಪಪತ್ನಿಯರಲ್ಲಿಯೂ ಅಬ್ಷಾಲೋಮನ ಮಗಳಾದ ಮಾಕಳನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದನು. ಅವನಿಗೆ ಹದಿನೆಂಟು ಮಂದಿ ಪತ್ನಿಯರೂ, ಅರುವತ್ತು ಮಂದಿ ಉಪಪತ್ನಿಯರೂ ಇದ್ದರು. ಇವರಲ್ಲಿ ಅವನಿಗೆ ಇಪ್ಪತ್ತೆಂಟು ಮಂದಿ ಗಂಡುಮಕ್ಕಳೂ ಅರುವತ್ತು ಮಂದಿ ಹೆಣ್ಣುಮಕ್ಕಳೂ ಹುಟ್ಟಿದರು.
[22] ರೆಹಬ್ಬಾಮನು ಮಾಕಳ ಮಗನಾದ ಅಬೀಯನನ್ನು ಅರಸನನ್ನಾಗಿ ಮಾಡಬೇಕೆಂದು ಅವನನ್ನು ಅವನ ಅಣ್ಣ ತಮ್ಮಂದಿರಲ್ಲಿ ಪ್ರಧಾನನ್ನಾಗಿಯೂ ಪ್ರಭುವನ್ನಾಗಿಯೂ ನೇಮಿಸಿದನು.
[23] ತನ್ನ ಉಳಿದ ಎಲ್ಲಾ ಮಕ್ಕಳನ್ನು ಜಾಣತನದಿಂದ ವಿಂಗಡಿಸಿ, ಯೆಹೂದ ಬೆನ್ಯಾಮೀನ್ ಪ್ರದೇಶಗಳಲ್ಲಿದ್ದ ಕೋಟೆಕೊತ್ತಲುಗಳುಳ್ಳ ಆಯಾ ಪಟ್ಟಣಗಳಲ್ಲಿರಿಸಿ, ಅವರಿಗೆ ಬೇಕಾದಷ್ಟು ಆಹಾರವನ್ನು ಏರ್ಪಡಿಸಿ, ಅನೇಕ ಮಂದಿ ಹೆಂಡತಿಯರನ್ನೂ ಗೊತ್ತು ಮಾಡಿಕೊಟ್ಟನು.