Skip to content
Opens in a new window
Listen to this chapter • 7:47

[1] ಪ್ರವಾದಿಗಳ ಮಂಡಳಿಯು ಎಲೀಷನಿಗೆ, “ಇಗೋ, ಈಗ ನಾವು ನಿನ್ನ ಸಂಗಡ ವಾಸವಾಗಿರುವ ಸ್ಥಳವು ನಮಗೆ ಇಕ್ಕಟ್ಟಾಗಿದೆ. ಅಪ್ಪಣೆಕೊಡು,

[2] ನಾವು ಯೊರ್ದನಿನವರೆಗೂ ಹೋಗಿ, ಪ್ರತಿ ಮನುಷ್ಯನು ಅಲ್ಲಿಂದ ಒಂದೊಂದು ತೊಲೆಯನ್ನು ತೆಗೆದುಕೊಂಡು ಬಂದು, ವಾಸವಾಗಿರುವುದಕ್ಕೆ ನಮಗೋಸ್ಕರ ಒಂದು ಸ್ಥಳವನ್ನು ಅಲ್ಲಿ ಮಾಡುವೆವು,” ಎಂದರು. ಅವನು, “ಹೋಗಿರಿ,” ಎಂದನು.

[3] ಆಗ ಅವರಲ್ಲಿ ಒಬ್ಬನು ಎಲೀಷನಿಗೆ, “ನೀವು ದಯಮಾಡಿ ನಿಮ್ಮ ಸೇವಕರ ಸಂಗಡ ಬರುವಿರಾ?” ಎಂದನು. ಅದಕ್ಕವನು, “ನಾನು ಬರುತ್ತೇನೆ,” ಎಂದನು.

[4] ಹಾಗೆಯೇ ಅವನು ಅವರ ಸಂಗಡ ಹೋದನು. ಅವರು ಯೊರ್ದನ್ ನದಿಯ ಕಡೆಗೆ ಬಂದು ಅಲ್ಲಿ ಮರಗಳನ್ನು ಕಡಿದರು.

[5] ಆದರೆ ಒಬ್ಬನು ಮರವನ್ನು ಬೀಳಿಸುವಾಗ ಕೊಡಲಿಯು ನೀರಿನೊಳಕ್ಕೆ ಬಿತ್ತು. ಆಗ ಅವನು, “ಅಯ್ಯೋ! ಯಜಮಾನನೇ, ನಾನು ಅದನ್ನು ಸಾಲವಾಗಿ ತೆಗೆದುಕೊಂಡದ್ದು,” ಎಂದು ಕೂಗಿ ಹೇಳಿದನು.

[6] ದೇವರ ಮನುಷ್ಯನು, “ಅದು ಎಲ್ಲಿ ಬಿತ್ತು?” ಎಂದನು. ಅವನು ಎಲೀಷನಿಗೆ ಸ್ಥಳವನ್ನು ತೋರಿಸಿದ ತರುವಾಯ, ಎಲೀಷನು ಒಂದು ಕಟ್ಟಿಗೆಯನ್ನು ಕಡಿದು ಅಲ್ಲಿ ಹಾಕಿದ್ದರಿಂದ ಆ ಕಬ್ಬಿಣವು ತೇಲಿತು.

[7] ಪ್ರವಾದಿಯು, “ನೀನು ತೆಗೆದುಕೋ,” ಎಂದನು. ಹಾಗೆಯೇ ಅವನು ತನ್ನ ಕೈಯನ್ನು ಚಾಚಿ ಅದನ್ನು ತೆಗೆದುಕೊಂಡನು.

[8] ಅರಾಮ್ಯರ ಅರಸನು ಇಸ್ರಾಯೇಲಿನ ಮೇಲೆ ಯುದ್ಧ ಮಾಡುತ್ತಿದ್ದನು. ಇಂಥಿಂಥ ಸ್ಥಳದಲ್ಲಿ ತನ್ನ ದಂಡು ಇಳಿಯಬೇಕೆಂದು ತನ್ನ ಸೇವಕರ ಸಂಗಡ ಯೋಚನೆ ಮಾಡಿಕೊಂಡನು.

[9] ಆಗ ದೇವರ ಮನುಷ್ಯನು ಇಸ್ರಾಯೇಲಿನ ಅರಸನಿಗೆ, “ಅಂಥಾ ಸ್ಥಳವನ್ನು ಹಾದುಹೋಗದೆ ಜಾಗ್ರತೆಯಾಗಿ ಇರು. ಏಕೆಂದರೆ ಅರಾಮ್ಯರು ಅಲ್ಲಿಗೆ ಇಳಿದು ಬಂದಿದ್ದಾರೆ,” ಎಂದು ಹೇಳಿ ಕಳುಹಿಸಿದನು.

[10] ಹೀಗೆಯೇ ದೇವರ ಮನುಷ್ಯನು ತನ್ನನ್ನು ಎಚ್ಚರಿಸಿ, ತನಗೆ ಹೇಳಿದ ಸ್ಥಳಕ್ಕೆ ಇಸ್ರಾಯೇಲಿನ ಅರಸನು ಹೇಳಿ ಕಳುಹಿಸಿ, ತನ್ನ ಸೈನ್ಯವನ್ನು ಕರೆಯಿಸಿಕೊಂಡನು. ಹೀಗೆ ಅವನು ಹಲವು ಸಾರಿ ತಪ್ಪಿಸಿಕೊಂಡನು.

[11] ಆದ್ದರಿಂದ ಅರಾಮ್ಯರ ಅರಸನ ಹೃದಯವು ಇದರ ನಿಮಿತ್ತ ಕಳವಳಗೊಂಡು, ಅವನು ತನ್ನ ಸೇವಕರನ್ನು ಕರೆದು ಅವರಿಗೆ, “ನಮ್ಮಲ್ಲಿ ಇಸ್ರಾಯೇಲಿನ ಅರಸನ ಕಡೆಯವನು ಯಾರು? ನೀವು ನನಗೆ ತಿಳಿಸುವುದಿಲ್ಲವೋ?” ಎಂದನು.

[12] ಅವನ ಸೇವಕರಲ್ಲಿ ಒಬ್ಬನು, “ನನ್ನ ಒಡೆಯನೇ, ಅರಸನೇ, ಯಾವನೂ ಇಲ್ಲ. ಆದರೆ ಇಸ್ರಾಯೇಲಿನಲ್ಲಿರುವ ಪ್ರವಾದಿಯಾದ ಎಲೀಷನು ನಿನ್ನ ಮಲಗುವ ಕೋಣೆಯಲ್ಲಿ ನೀನು ಹೇಳುವ ಮಾತುಗಳನ್ನು ಸಹ ಇಸ್ರಾಯೇಲಿನ ಅರಸನಿಗೆ ಹೇಳುತ್ತಾನೆ,” ಎಂದನು.

[13] ಆಗ ಅರಾಮ್ಯರ ಅರಸನು, “ನಾನು ಅವನನ್ನು ಹಿಡಿಯುವ ಹಾಗೆ ನೀವು ಹೋಗಿ ಅವನು ಎಲ್ಲಿದ್ದಾನೋ ನೋಡಿರಿ,” ಎಂದನು. ಅವನು ದೋತಾನಿನಲ್ಲಿದ್ದಾನೆಂದು ಅವನಿಗೆ ತಿಳಿಸಿದರು.

[14] ಆದ್ದರಿಂದ ಅರಾಮ್ಯರ ಅರಸನು ಅಲ್ಲಿಗೆ ಕುದುರೆಗಳನ್ನೂ ರಥಗಳನ್ನೂ ಮಹಾಸೈನ್ಯವನ್ನೂ ಕಳುಹಿಸಿದನು. ಅವರು ರಾತ್ರಿಯಲ್ಲಿ ಬಂದು ಪಟ್ಟಣವನ್ನು ಸುತ್ತಿಕೊಂಡರು.

[15] ದೇವರ ಮನುಷ್ಯನ ಸೇವಕನು ಉದಯದಲ್ಲಿ ಎದ್ದು ಹೊರಗೆ ಹೊರಟಾಗ, ಕುದುರೆಗಳೂ ರಥಗಳೂ ಉಳ್ಳ ಸೈನ್ಯ ಪಟ್ಟಣವನ್ನು ಸುತ್ತಿಕೊಂಡಿರುವುದನ್ನು ಕಂಡು ಎಲೀಷನಿಗೆ, “ಅಯ್ಯೋ! ನನ್ನ ಯಜಮಾನನೇ, ನಾವು ಏನು ಮಾಡುವುದು?” ಎಂದನು.

[16] ಆದರೆ ಪ್ರವಾದಿಯು, “ಭಯಪಡಬೇಡ. ಅವರ ಸಂಗಡ ಇರುವವರಿಗಿಂತ ನಮ್ಮ ಕಡೆ ಇರುವವರು ಹೆಚ್ಚಾಗಿದ್ದಾರೆ,” ಎಂದನು.

[17] ಆಗ ಎಲೀಷನು, “ಯೆಹೋವ ದೇವರೇ, ನೀವು ದಯಮಾಡಿ ಇವನು ಕಾಣುವ ಹಾಗೆ ಇವನ ಕಣ್ಣುಗಳನ್ನು ತೆರೆಯಿರಿ,” ಎಂದು ಪ್ರಾರ್ಥಿಸಿದನು. ಯೆಹೋವ ದೇವರು ಆ ಯುವ ಸೇವಕನ ಕಣ್ಣುಗಳನ್ನು ತೆರೆದಾಗ, ಎಲೀಷನ ಸುತ್ತಲೂ ಬೆಟ್ಟದಲ್ಲಿ ಬೆಂಕಿಯ ರಥಗಳೂ, ಕುದುರೆಗಳೂ ತುಂಬಿರುವುದನ್ನು ಅವನು ಕಂಡನು.

[18] ಶತ್ರುಗಳು ಸಮೀಪಕ್ಕೆ ಬಂದಾಗ ಎಲೀಷನು, “ಯೆಹೋವ ದೇವರೇ, ನೀವು ದಯಮಾಡಿ ಈ ಜನರನ್ನು ಕುರುಡರನ್ನಾಗಿ ಮಾಡಿರಿ,” ಎಂದು ಪ್ರಾರ್ಥಿಸಿದನು. ಎಲೀಷನ ಮಾತಿನ ಹಾಗೆಯೇ ದೇವರು ಅವರನ್ನು ಕುರುಡರನ್ನಾಗಿ ಮಾಡಿದರು.

[19] ಆಗ ಎಲೀಷನು ಅವರಿಗೆ, “ಇದು ಆ ಮಾರ್ಗವಲ್ಲ, ಇದು ಆ ಪಟ್ಟಣವಲ್ಲ, ನನ್ನ ಹಿಂದೆ ಬನ್ನಿರಿ. ನೀವು ಹುಡುಕುವ ಮನುಷ್ಯರ ಬಳಿಗೆ ನಿಮ್ಮನ್ನು ಬರಮಾಡುವೆನು,” ಎಂದು ಹೇಳಿ ಅವರನ್ನು ಸಮಾರ್ಯಕ್ಕೆ ನಡೆಸಿದನು.

[20] ಅವರು ಸಮಾರ್ಯಕ್ಕೆ ಬಂದಾಗ, ಎಲೀಷನು, “ಯೆಹೋವ ದೇವರೇ, ಇವರು ಕಾಣುವಂತೆ ಇವರ ಕಣ್ಣುಗಳನ್ನು ತೆರೆಯಿರಿ,” ಎಂದನು. ಆಗ ಯೆಹೋವ ದೇವರು ಅವರ ಕಣ್ಣುಗಳನ್ನು ತೆರೆದರು. ಅವರು ನೋಡಿದಾಗ ಸಮಾರ್ಯದ ಮಧ್ಯದಲ್ಲಿದ್ದರು.

[21] ಇಸ್ರಾಯೇಲಿನ ಅರಸನು ಅವರನ್ನು ಕಂಡಾಗ ಎಲೀಷನಿಗೆ, “ನನ್ನ ತಂದೆಯೇ, ನಾನು ಸಂಹರಿಸಲೋ, ಸಂಹರಿಸಲೋ?” ಎಂದನು.

[22] ಅದಕ್ಕವನು, “ಸಂಹರಿಸಬೇಡ. ನೀನು ನಿನ್ನ ಖಡ್ಗದಿಂದಲೂ ನಿನ್ನ ಬಿಲ್ಲಿನಿಂದಲೂ ಸೆರೆಯಾಗಿ ತೆಗೆದುಕೊಳ್ಳದವರನ್ನು ಹೊಡೆಯುತ್ತೀಯೋ? ರೊಟ್ಟಿಯನ್ನೂ, ನೀರನ್ನೂ ಇವರ ಮುಂದೆ ಇಡು. ಅವರು ತಿಂದು ಕುಡಿದು ತಮ್ಮ ಯಜಮಾನನ ಬಳಿಗೆ ಹೋಗಲಿ,” ಎಂದನು.

[23] ಆಗ ಅವರಿಗೋಸ್ಕರ ದೊಡ್ಡ ಔತಣ ಮಾಡಿಸಿದನು. ಅವರು ತಿಂದು ಕುಡಿದ ತರುವಾಯ ಅವರನ್ನು ಕಳುಹಿಸಿಬಿಟ್ಟನು. ಅವರು ತಮ್ಮ ಯಜಮಾನನ ಬಳಿಗೆ ಹೋದರು. ಅರಾಮ್ಯರ ದಂಡುಗಳು ಇಸ್ರಾಯೇಲ್ ದೇಶದ ಮೇಲೆ ಮತ್ತೆ ದಾಳಿಮಾಡಲಿಲ್ಲ.

[24] ಸ್ವಲ್ಪ ಸಮಯದ ನಂತರ, ಅರಾಮಿನ ಅರಸ ಬೆನ್ಹದದನು ತನ್ನ ಸಮಸ್ತ ಸೈನ್ಯವನ್ನು ಕೂಡಿಸಿಕೊಂಡು ಹೊರಟುಹೋಗಿ, ಸಮಾರ್ಯವನ್ನು ಮುತ್ತಿಗೆಹಾಕಿದನು.

[25] ಆಗ ಸಮಾರ್ಯದಲ್ಲಿ ದೊಡ್ಡ ಬರವಿತ್ತು. ಒಂದು ಕತ್ತೆಯ ತಲೆಯು ಎಂಬತ್ತು ಶೆಕೆಲ್ ಬೆಳ್ಳಿಗೆ, ಸುಮಾರು ನೂರು ಗ್ರಾಂ ಪಾರಿವಾಳದ ಗೊಬ್ಬರವನ್ನು ಐದು ಶೆಕೆಲ್ ಬೆಳ್ಳಿಗೆ ಮಾರಲಾಗುವವರೆಗೂ ಅದನ್ನು ಮುತ್ತಿಗೆಹಾಕಿದನು.

[26] ಇಸ್ರಾಯೇಲಿನ ಅರಸನು ಗೋಡೆಯ ಮೇಲೆ ಹಾದು ಹೋಗುತ್ತಿರುವಾಗ, ಒಬ್ಬ ಸ್ತ್ರೀಯು ಅವನನ್ನು ಕೂಗಿ, “ನನ್ನ ಯಜಮಾನನೇ, ಅರಸನೇ, ಸಹಾಯ ಮಾಡಿ,” ಎಂದಳು.

[27] ಅದಕ್ಕವನು, “ಯೆಹೋವ ದೇವರು ನಿನಗೆ ಸಹಾಯ ಮಾಡದೆ ಹೋದರೆ, ನಾನು ಎಲ್ಲಿಂದ ನಿನಗೆ ಸಹಾಯ ಮಾಡಲಿ? ಕಣದಿಂದಲೋ, ದ್ರಾಕ್ಷಿ ಆಲೆಯಿಂದಲೋ?” ಎಂದನು.

[28] ಅರಸನು ಅವಳಿಗೆ, “ನಿನ್ನ ದುಃಖವೇನು?” ಎಂದನು. ಅದಕ್ಕವಳು, “ಈ ಸ್ತ್ರೀಯು ನನಗೆ ಹೇಳಿದ್ದೇನೆಂದರೆ, ‘ಈ ಹೊತ್ತು ನಾವು ನಿನ್ನ ಮಗನನ್ನು ತಿನ್ನುವಂತೆ ಅವನನ್ನು ಕೊಡು, ನಾಳೆ ನನ್ನ ಮಗನನ್ನು ತಿನ್ನೋಣ,’ ಎಂದಳು.

[29] ಹಾಗೆಯೇ ನಾವು ನನ್ನ ಮಗನನ್ನು ಬೇಯಿಸಿ ಅವನನ್ನು ತಿಂದೆವು. ಮಾರನೆಯ ದಿವಸದಲ್ಲಿ ನಾನು ಅವಳಿಗೆ, ‘ನಾವು ನಿನ್ನ ಮಗನನ್ನು ತಿನ್ನುವಂತೆ ಅವನನ್ನು ಕೊಡು,’ ಎಂದೆನು. ಆದರೆ ಅವಳು ತನ್ನ ಮಗನನ್ನು ಬಚ್ಚಿಟ್ಟಿದ್ದಾಳೆ,” ಎಂದಳು.

[30] ಅರಸನು ಆ ಸ್ತ್ರೀಯು ಹೇಳಿದ ಮಾತುಗಳನ್ನು ಕೇಳಿದಾಗ, ತನ್ನ ವಸ್ತ್ರಗಳನ್ನು ಹರಿದುಕೊಂಡು ಗೋಡೆಯ ಮೇಲೆ ಹಾದುಹೋದನು. ಜನರು ಕಂಡಾಗ ಅವನ ಮೈಮೇಲೆ ಗೋಣಿತಟ್ಟು ಇತ್ತು.

[31] ಆಗ ಅವನು, “ಶಾಫಾಟನ ಮಗ ಎಲೀಷನ ತಲೆಯನ್ನು ಹಾರಿಸದಿದ್ದರೆ, ದೇವರು ನನಗೆ ಇದರಂತೆಯೂ ಇನ್ನೂ ಹೆಚ್ಚಾಗಿಯೂ ಮಾಡಲಿ,” ಎಂದನು.

[32] ಎಲೀಷನು ಊರಿನ ಹಿರಿಯರೊಡನೆ ತನ್ನ ಮನೆಯಲ್ಲಿ ಕುಳಿತುಕೊಂಡಿದ್ದನು. ಅರಸನು ತನ್ನ ಹತ್ತಿರ ಇದ್ದ ಒಬ್ಬ ದೂತನನ್ನು ಕಳುಹಿಸಿದನು. ಅವನು ಇನ್ನೂ ಸ್ವಲ್ಪ ದೂರದಲ್ಲಿರುವಾಗಲೇ ಎಲೀಷನು ಹಿರಿಯರಿಗೆ, “ನೋಡಿರಿ, ಆ ಕೊಲೆಗಾರನ ಮಗನು ನನ್ನ ತಲೆಯನ್ನು ಹಾರಿಸುವುದಕ್ಕೆ ದೂತನನ್ನು ಕಳುಹಿಸಿದ್ದಾನೆ. ದೂತನು ಇಲ್ಲಿಗೆ ಬಂದ ಕೂಡಲೇ ನೀವು ಬಾಗಿಲನ್ನು ಮುಚ್ಚಿ, ಅವನು ಒಳಗೆ ಬಾರದಂತೆ ಅದನ್ನು ಒತ್ತಿಹಿಡಿಯಿರಿ. ಅವನ ಹಿಂದೆಯೇ ಬರುತ್ತಿರುವ ಅವನೊಡೆಯನ ಕಾಲಿನ ಸಪ್ಪಳ ಕೇಳಿಸುತ್ತಿದೆಯಲ್ಲವೇ?” ಎಂದು ಹೇಳಿದನು.

[33] ಎಲೀಷನು ಅವರೊಡನೆ ಮಾತನಾಡುತ್ತಿರುವಾಗಲೇ ಆ ದೂತನೂ ಅವನ ಹಿಂದಿನಿಂದ ಅರಸನೂ ಅಲ್ಲಿಗೆ ಬಂದರು. ಅರಸನು ಎಲೀಷನಿಗೆ, “ನೋಡು, ಈ ಆಪತ್ತು ಯೆಹೋವ ದೇವರಿಂದಲೇ ಬಂದದ್ದು. ಇನ್ನು ಮುಂದೆ ನಾನೇಕೆ ಅವರನ್ನು ನಂಬಿ ನಿರೀಕ್ಷಿಸಿಕೊಂಡಿರಬೇಕು?” ಎಂದನು.

2 ಅರಸುಗಳು — Chapters