Skip to content
Opens in a new window
Listen to this chapter • 8:48

[1] ಇಸ್ರಾಯೇಲಿನ ಅರಸನಾದ ಯಾರೊಬ್ಬಾಮನ ಆಳ್ವಿಕೆಯ ಇಪ್ಪತ್ತೇಳನೆಯ ವರ್ಷದಲ್ಲಿ, ಯೆಹೂದದ ಅರಸನಾಗಿರುವ ಅಮಚ್ಯನ ಮಗ ಅಜರ್ಯನು ಆಳಲು ಆರಂಭಿಸಿದನು.

[2] ಅವನು ಅರಸನಾದಾಗ, ಹದಿನಾರು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಐವತ್ತೆರಡು ವರ್ಷ ಆಳಿದನು. ಅವನ ತಾಯಿಯ ಹೆಸರು ಯೆಕೊಲ್ಯಳು, ಅವಳು ಯೆರೂಸಲೇಮಿನವಳು.

[3] ಅವನು ತನ್ನ ತಂದೆಯಾದ ಅಮಚ್ಯನಂತೆ ಯೆಹೋವ ದೇವರ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಿದನು.

[4] ಆದರೂ ಪೂಜಾಸ್ಥಳಗಳನ್ನು ತೆಗೆದುಹಾಕಲಿಲ್ಲ ಆದ್ದರಿಂದ ಜನರು ಪೂಜಾಸ್ಥಳಗಳ ಮೇಲೆ ಬಲಿಗಳನ್ನೂ ಧೂಪಗಳನ್ನೂ ಅರ್ಪಿಸುವುದನ್ನು ಮುಂದುವರೆಸಿದ್ದರು.

[5] ಯೆಹೋವ ದೇವರು ಅರಸನನ್ನು ಮರಣದ ದಿವಸದವರೆಗೂ ಕುಷ್ಠರೋಗದಿಂದ ಬಾಧಿಸಿದ್ದರಿಂದ, ಅವನು ಪ್ರತ್ಯೇಕವಾದ ಮನೆಯಲ್ಲಿ ವಾಸವಾಗಿದ್ದನು. ಅರಸನ ಮಗ ಯೋತಾಮನು ರಾಜಗೃಹಾಧಿಪತ್ಯವನ್ನು ಮತ್ತು ಪ್ರಜಾಪಾಲನೆಯನ್ನೂ ನೋಡಿಕೊಳ್ಳುತ್ತಿದ್ದನು.

[6] ಅಜರ್ಯನ ಇತರ ಕ್ರಿಯೆಗಳನ್ನು ಅವನು ಮಾಡಿದ ಸಮಸ್ತವನ್ನು ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.

[7] ಅಜರ್ಯನು ಮೃತನಾಗಿ ತನ್ನ ಪಿತೃಗಳ ಬಳಿಗೆ ಸೇರಿದನು. ಅವನನ್ನು ದಾವೀದನ ಪಟ್ಟಣದಲ್ಲಿ ಅವನ ಪಿತೃಗಳ ಬಳಿಯಲ್ಲಿ ಸಮಾಧಿಮಾಡಿದರು. ಅವನಿಗೆ ಬದಲಾಗಿ ಅವನ ಮಗನಾದ ಯೋತಾಮನು ಅರಸನಾದನು.

[8] ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಮೂವತ್ತೆಂಟನೆಯ ವರ್ಷದಲ್ಲಿ ಯಾರೊಬ್ಬಾಮನ ಮಗನಾದ ಜೆಕರ್ಯನು ಸಮಾರ್ಯದಲ್ಲಿ ಇಸ್ರಾಯೇಲರ ಅರಸನಾದನು. ಅವನು ಆರು ತಿಂಗಳು ಆಳಿದನು.

[9] ಅವನು ತನ್ನ ಪಿತೃಗಳು ಮಾಡಿದ ಪ್ರಕಾರ, ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಅವನು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಪಾಪಗಳನ್ನು ತೊರೆದುಬಿಡಲಿಲ್ಲ.

[10] ಯಾಬೇಷನ ಮಗ ಶಲ್ಲೂಮನು ಜೆಕರ್ಯನ ಮೇಲೆ ಒಳಸಂಚುಮಾಡಿ, ಜನರ ಮುಂದೆ ಅವನನ್ನು ಹೊಡೆದು, ಕೊಂದುಹಾಕಿ, ಅವನಿಗೆ ಬದಲಾಗಿ ಅರಸನಾದನು.

[11] ಜೆಕರ್ಯನ ಇತರ ಕ್ರಿಯೆಗಳು ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.

[12] “ನಿನ್ನ ಸಂತತಿಯವರು ನಾಲ್ಕನೆಯ ತಲೆಮಾರಿನವರೆಗೂ ಇಸ್ರಾಯೇಲಿನ ಸಿಂಹಾಸನದ ಮೇಲೆ ಕುಳಿತುಕೊಳ್ಳುವರು,” ಎಂದು ಯೆಹೋವ ದೇವರು ಯೇಹುವಿಗೆ ಹೇಳಿದ ವಾಕ್ಯದಂತೆ ಇವೆಲ್ಲವೂ ನೆರವೇರಿತು.

[13] ಯೆಹೂದದ ಅರಸನಾದ ಉಜ್ಜೀಯನ ಆಳ್ವಿಕೆಯ ಮೂವತ್ತೊಂಬತ್ತನೆಯ ವರ್ಷದಲ್ಲಿ ಯಾಬೇಷನ ಮಗ ಶಲ್ಲೂಮನು ಅರಸನಾಗಿ, ಸಮಾರ್ಯದಲ್ಲಿ ಒಂದು ತಿಂಗಳು ಆಳಿದನು.

[14] ಗಾದಿಯ ಮಗ ಮೆನಹೇಮನು ತಿರ್ಚದಿಂದ ಸಮಾರ್ಯಕ್ಕೆ ಬಂದು, ಸಮಾರ್ಯದಲ್ಲಿ ಯಾಬೇಷನ ಮಗ ಶಲ್ಲೂಮನನ್ನು ಹೊಡೆದು, ಕೊಂದುಹಾಕಿ ಅವನಿಗೆ ಬದಲಾಗಿ ಅರಸನಾದನು.

[15] ಶಲ್ಲೂಮನ ಇತರ ಕ್ರಿಯೆಗಳೂ ಅವನು ಮಾಡಿದ ಒಳಸಂಚೂ ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.

[16] ಆ ಸಮಯದಲ್ಲಿ ಮೆನಹೇಮನು ತಿರ್ಚದಿಂದ ತಿಪ್ಸಹು ಪಟ್ಟಣಕ್ಕೆ ಹೋದಾಗ ಅಲ್ಲಿಯವರು ತಮ್ಮ ಊರುಬಾಗಿಲುಗಳನ್ನು ತನಗೆ ತೆರೆಯದೆ ಇದ್ದುದರಿಂದ ಎಲ್ಲರನ್ನೂ, ಅದರ ಮೇರೆಗಳಲ್ಲಿದ್ದವರೆಲ್ಲರನ್ನೂ ಸಂಹರಿಸಿದನು. ತಿಪ್ಸಹವನ್ನು ಹಾಳು ಮಾಡಿ, ಎಲ್ಲಾ ಗರ್ಭಿಣಿಯರ ಹೊಟ್ಟೆಗಳನ್ನು ಸೀಳಿಸಿದನು.

[17] ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಮೂವತ್ತೊಂಬತ್ತನೆಯ ವರ್ಷದಲ್ಲಿ ಗಾದಿಯ ಮಗ ಮೆನಹೇಮನು ಇಸ್ರಾಯೇಲರ ಅರಸನಾಗಿ ಸಮಾರ್ಯದಲ್ಲಿ ಹತ್ತು ವರ್ಷ ಆಳಿದನು.

[18] ಅವನು ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಅವನು ತನ್ನ ದಿವಸಗಳಲ್ಲೆಲ್ಲಾ ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಪಾಪಗಳನ್ನು ತೊರೆದುಬಿಡಲಿಲ್ಲ.

[19] ಅಸ್ಸೀರಿಯಾ ದೇಶದ ಅರಸನಾದ ಪೂಲನು ಇಸ್ರಾಯೇಲ್ ದೇಶದ ಮೇಲೆ ಯುದ್ಧಕ್ಕೆ ಬಂದನು. ಆಗ ಮೆನಹೇಮನು ಅವನ ಬೆಂಬಲವನ್ನು ಪಡೆಯಲು ಮತ್ತು ರಾಜ್ಯವನ್ನು ದೃಢಪಡಿಸಲು ಪೂಲನಿಗೆ ಮೂವತ್ತು ನಾಲ್ಕು ಸಾವಿರ ಕಿಲೋಗ್ರಾಂ ಬೆಳ್ಳಿಯನ್ನು ಕೊಟ್ಟನು.

[20] ಮೆನಹೇಮನು ಈ ಹಣವನ್ನು ಇಸ್ರಾಯೇಲಿನಿಂದ ವಸೂಲಿ ಮಾಡಿದನು. ಪ್ರತಿಯೊಬ್ಬ ಶ್ರೀಮಂತನು ಅಸ್ಸೀರಿಯದ ಅರಸನಿಗೆ ಕೊಡಬೇಕಾದ ಅರ್ಧ ಕಿಲೋಗ್ರಾಂ ಬೆಳ್ಳಿಯನ್ನು ನೀಡಬೇಕಾಗಿತ್ತು. ಆದ್ದರಿಂದ ಅಸ್ಸೀರಿಯದ ಅರಸನು ದೇಶದಲ್ಲಿ ನಿಲ್ಲದೆ ತನ್ನ ಸೈನ್ಯದೊಂದಿಗೆ ಹಿಂದಿರುಗಿ ಹೋದನು.

[21] ಮೆನಹೇಮನ ಇತರ ಕ್ರಿಯೆಗಳೂ ಅವನು ಮಾಡಿದ ಸಮಸ್ತವೂ ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.

[22] ಮೆನಹೇಮನು ಮೃತನಾಗಿ ತನ್ನ ಪಿತೃಗಳ ಜೊತೆ ಸೇರಿದನು. ಅವನ ಮಗ ಪೆಕಹ್ಯನು ಅವನಿಗೆ ಬದಲಾಗಿ ಅರಸನಾದನು.

[23] ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಐವತ್ತನೆಯ ವರ್ಷದಲ್ಲಿ ಮೆನಹೇಮನ ಮಗ ಪೆಕಹ್ಯನು ಸಮಾರ್ಯದಲ್ಲಿ ಇಸ್ರಾಯೇಲಿನ ಅರಸನಾಗಿ, ಎರಡು ವರ್ಷ ಆಳಿದನು.

[24] ಪೆಕಹ್ಯನು ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಅವನು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಪಾಪಗಳನ್ನು ತೊರೆಯಲಿಲ್ಲ.

[25] ಆದರೆ ಅವನ ಅಧಿಪತಿಯಾದಂಥ ರೆಮಲ್ಯನ ಮಗ ಪೆಕಹನು ಗಿಲ್ಯಾದಿನ ಐವತ್ತು ಮಂದಿಯನ್ನು ತನ್ನ ಸಂಗಡ ಕೂಡಿಸಿಕೊಂಡು ಪೆಕಹ್ಯನ ವಿರುದ್ಧ ಒಳಸಂಚುಮಾಡಿ, ಸಮಾರ್ಯದಲ್ಲಿರುವ ಅರಮನೆಯ ಗರ್ಭಗೃಹದಲ್ಲಿ ಪೆಕಹ್ಯನನ್ನು ಮತ್ತು ಅರ್ಗೋಬ್, ಅರ್ಯೇ ಎಂಬವರನ್ನು ಕೊಂದುಹಾಕಿದನು. ಅನಂತರ, ಪೆಕಹ್ಯನಿಗೆ ಬದಲಾಗಿ ಪೆಕಹನು ಅರಸನಾದನು.

[26] ಪೆಕಹ್ಯನ ಇತರ ಕ್ರಿಯೆಗಳೂ ಅವನು ಮಾಡಿದ್ದೆಲ್ಲವೂ ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.

[27] ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಐವತ್ತೆರಡನೆಯ ವರುಷದಲ್ಲಿ ರೆಮಲ್ಯನ ಮಗ ಪೆಕಹನು ಸಮಾರ್ಯದಲ್ಲಿ ಇಸ್ರಾಯೇಲರ ಅರಸನಾಗಿ, ಇಪ್ಪತ್ತು ವರ್ಷ ಆಳಿದನು.

[28] ಅವನು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಅವನು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಪಾಪಗಳನ್ನು ತೊರೆದುಬಿಡಲಿಲ್ಲ.

[29] ಇಸ್ರಾಯೇಲಿನ ಅರಸನಾದ ಪೆಕಹನ ಕಾಲದಲ್ಲಿ ಅಸ್ಸೀರಿಯದ ಅರಸನಾದ ತಿಗ್ಲತ್ಪಿಲೆಸೆರನು ಬಂದು, ಇಯ್ಯೋನ್, ಆಬೇಲ್ ಬೇತ್ ಮಾಕಾ, ಯಾನೋಹ, ಕೆದೆಷ್, ಹಾಚೋರ್, ಗಿಲ್ಯಾದ್, ಗಲಿಲಾಯ ಮತ್ತು ನಫ್ತಾಲಿಯ ಎಲ್ಲಾ ಭೂಮಿಯನ್ನು ವಶಮಾಡಿಕೊಂಡು, ಜನರನ್ನು ಸೆರೆಯಾಗಿ ಅಸ್ಸೀರಿಯಾ ದೇಶಕ್ಕೆ ಒಯ್ದನು.

[30] ಇದಲ್ಲದೆ ಏಲನ ಮಗ ಹೋಶೇಯನು ರೆಮಲ್ಯನ ಮಗ ಪೆಕಹನ ವಿರುದ್ಧ ಒಳಸಂಚುಮಾಡಿ, ಇವನನ್ನು ಉಜ್ಜೀಯನ ಮಗ ಯೋತಾಮನ ಆಳ್ವಿಕೆಯ ಇಪ್ಪತ್ತನೆಯ ವರ್ಷದಲ್ಲಿ ಸಂಹರಿಸಿ, ಅವನಿಗೆ ಬದಲಾಗಿ ಅರಸನಾದನು.

[31] ಪೆಕಹನ ಇತರ ಕ್ರಿಯೆಗಳೂ ಅವನು ಮಾಡಿದ್ದೆಲ್ಲವೂ ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.

[32] ಇಸ್ರಾಯೇಲಿನ ಅರಸನೂ, ರೆಮಲ್ಯನ ಮಗನೂ ಆದ ಪೆಕಹನ ಆಳಿಕೆಯ ಎರಡನೆಯ ವರ್ಷದಲ್ಲಿ ಯೆಹೂದದ ಅರಸನಾದ ಉಜ್ಜೀಯನ ಮಗ ಯೋತಾಮನು ಆಳಲು ಆರಂಭಿಸಿದನು.

[33] ಯೋತಾಮನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಹದಿನಾರು ವರ್ಷ ಆಳಿದನು. ಚಾದೋಕನ ಮಗಳಾದ ಯೆರೂಷ ಅವನ ತಾಯಿ.

[34] ಅವನು ತನ್ನ ತಂದೆಯಾದ ಉಜ್ಜೀಯನಂತೆ ಯೆಹೋವ ದೇವರ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಿದನು.

[35] ಆದರೂ ಪೂಜಾಸ್ಥಳಗಳನ್ನು ತೆಗೆದುಹಾಕಲಿಲ್ಲ ಆದ್ದರಿಂದ ಜನರು ಪೂಜಾಸ್ಥಳಗಳ ಮೇಲೆ ಬಲಿಗಳನ್ನೂ ಧೂಪಗಳನ್ನೂ ಅರ್ಪಿಸುವುದನ್ನು ಮುಂದುವರೆಸಿದ್ದರು. ಯೋತಾಮನು ಯೆಹೋವ ದೇವರ ಆಲಯದ ಮೇಲಿನ ಬಾಗಿಲನ್ನು ಕಟ್ಟಿಸಿದನು.

[36] ಯೋತಾಮನ ಇತರ ಕ್ರಿಯೆಗಳೂ ಅವನು ಮಾಡಿದ ಸಮಸ್ತವೂ ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.

[37] ಆ ದಿವಸಗಳಲ್ಲಿ ಯೆಹೋವ ದೇವರು ಅರಾಮಿನ ಅರಸನಾದ ರೆಚೀನನನ್ನೂ ರೆಮಲ್ಯನ ಮಗ ಪೆಕಹನನ್ನೂ ಯೆಹೂದದ ವಿರೋಧವಾಗಿ ಕಳುಹಿಸಲು ಆರಂಭಿಸಿದರು.

[38] ಯೋತಾಮನು ಮೃತನಾಗಿ ತನ್ನ ಪಿತೃಗಳ ಬಳಿಗೆ ಸೇರಿದನು. ಅವನ ಶವವನ್ನು ತಂದೆಯಾದ ದಾವೀದನ ಪಟ್ಟಣದಲ್ಲಿ ಅವನ ಪಿತೃಗಳ ಸ್ಮಶಾನದಲ್ಲಿ ಸಮಾಧಿಮಾಡಿದರು. ಅವನ ಮಗ ಆಹಾಜನು ಅವನಿಗೆ ಬದಲಾಗಿ ಅರಸನಾದನು.

2 ಅರಸುಗಳು — Chapters