[1] ಯೋಷೀಯನು ಅರಸನಾದಾಗ ಎಂಟು ವರ್ಷದವನಾಗಿದ್ದನು, ಅವನು ಮೂವತ್ತೊಂದು ವರ್ಷ ಯೆರೂಸಲೇಮಿನಲ್ಲಿ ಆಳಿದನು. ಅವನ ತಾಯಿ ಬೊಚ್ಕತಿನ ಅದಾಯನ ಮಗಳಾದ ಯೆದೀದಾ ಎಂಬವಳು.
[2] ಅವನು ಯೆಹೋವ ದೇವರ ದೃಷ್ಟಿಗೆ ಒಳ್ಳೆಯದನ್ನು ಮಾಡಿ, ಎಡಕ್ಕಾಗಲಿ ಬಲಕ್ಕಾಗಲಿ ತಿರುಗದೆ ತನ್ನ ಪೂರ್ವಜನಾದ ದಾವೀದನ ಮಾರ್ಗಗಳಲ್ಲಿಯೇ ನಡೆದನು.
[3] ಯೋಷೀಯನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ, ಅರಸನು ಕಾರ್ಯದರ್ಶಿಯಾದ ಮೆಷುಲ್ಲಾಮನ ಮಗ, ಅಚಲ್ಯನ ಮಗನಾದ ಶಾಫಾನನನ್ನು ಯೆಹೋವ ದೇವರ ಆಲಯಕ್ಕೆ ಕಳುಹಿಸಿ,
[4] “ನೀನು ಮಹಾಯಾಜಕನಾದ ಹಿಲ್ಕೀಯನ ಬಳಿಗೆ ಹೋಗು. ಅವನು ಯೆಹೋವ ದೇವರ ಆಲಯದ ದ್ವಾರಪಾಲಕರು ಜನರಿಂದ ತೆಗೆದುಕೊಂಡು ಕೂಡಿಸಿದ ಹಣವನ್ನು ಲೆಕ್ಕ ಮಾಡಲಿ.
[5] ಅವರು ಅದನ್ನು ಯೆಹೋವ ದೇವರ ಆಲಯದ ಕೆಲಸಕ್ಕೆ ನೇಮಕಗೊಂಡ ಮೇಲ್ವಿಚಾರಕರ ಕೈಯಲ್ಲಿ ಒಪ್ಪಿಸಲಿ.
[6] ಆಲಯ ದುರಸ್ತಿ ಮಾಡುವಂತೆ ಯೆಹೋವ ದೇವರ ಆಲಯದಲ್ಲಿ ಕೆಲಸ ಮಾಡುವವರಾದ ಬಡಗಿಯರಿಗೂ, ಶಿಲ್ಪಿಗಾರರಿಗೂ, ಕಲ್ಲುಕೆಲಸದವರಿಗೂ ಕೊಟ್ಟು, ಆಲಯವನ್ನು ದುರಸ್ತಿ ಮಾಡಲು ಮರಗಳನ್ನೂ, ಕೆತ್ತಿದ ಕಲ್ಲುಗಳನ್ನೂ ಕೊಂಡುಕೊಳ್ಳುವುದಕ್ಕೆ ಕೊಡಲಿ.
[7] ಆದರೆ ಅವರು ನಂಬಿಗಸ್ತರಾಗಿ ಕೆಲಸ ಮಾಡಿದ್ದರಿಂದ, ಅವರ ಕೈಗೆ ಒಪ್ಪಿಸಿದ ಹಣವನ್ನು ಕುರಿತು ಅವರಿಂದ ಲೆಕ್ಕ ಕೇಳುವ ಅವಶ್ಯಕತೆ ಇಲ್ಲ, ಎಂದು ಹೇಳು,” ಎಂದನು.
[8] ಆಗ ಮಹಾಯಾಜಕನಾದ ಹಿಲ್ಕೀಯನು ಕಾರ್ಯದರ್ಶಿಯಾದ ಶಾಫಾನನಿಗೆ, “ನನಗೆ ಯೆಹೋವ ದೇವರ ಆಲಯದಲ್ಲಿ ಮೋಶೆಯ ನಿಯಮದ ಗ್ರಂಥವು ಸಿಕ್ಕಿರುತ್ತದೆ,” ಎಂದನು. ಹಿಲ್ಕೀಯನು ಆ ಗ್ರಂಥವನ್ನು ಶಾಫಾನನಿಗೆ ಒಪ್ಪಿಸಿದನು. ಅವನು ಅದನ್ನು ಓದಿದನು.
[9] ಕಾರ್ಯದರ್ಶಿಯಾದ ಶಾಫಾನನು ಅರಸನ ಬಳಿಗೆ ಬಂದು ಅರಸನಿಗೆ, “ಯೆಹೋವ ದೇವರ ಆಲಯದಲ್ಲಿ ದೊರಕಿದ ಹಣವನ್ನು ನಿನ್ನ ಸೇವಕರು ಕೂಡಿಸಿ, ಯೆಹೋವ ದೇವರ ಆಲಯದ ಕೆಲಸಕ್ಕೆ ನೇಮಕಗೊಂಡ ಮೇಲ್ವಿಚಾರಕರ ಕೈಯಲ್ಲಿ ಒಪ್ಪಿಸಿದ್ದಾರೆ,” ಎಂದನು.
[10] ಇದಲ್ಲದೆ, “ಯಾಜಕನಾದ ಹಿಲ್ಕೀಯನು ನನಗೆ ಪುಸ್ತಕವನ್ನು ಒಪ್ಪಿಸಿದ್ದಾನೆ,” ಎಂದು ತೋರಿಸಿ, ಶಾಫಾನನು ಅದನ್ನು ಅರಸನ ಮುಂದೆ ಓದಿದನು.
[11] ಅರಸನು ಮೋಶೆಯ ನಿಯಮದ ಪುಸ್ತಕದ ಮಾತುಗಳನ್ನು ಕೇಳಿದಾಗ, ತನ್ನ ವಸ್ತ್ರಗಳನ್ನು ಹರಿದುಕೊಂಡನು.
[12] ಇದಲ್ಲದೆ ಅರಸನು ಯಾಜಕನಾದ ಹಿಲ್ಕೀಯನಿಗೂ, ಶಾಫಾನನ ಮಗನಾದ ಅಹೀಕಾಮನಿಗೂ, ಮೀಕಾಯನ ಮಗನಾದ ಅಕ್ಬೋರನಿಗೂ, ಕಾರ್ಯದರ್ಶಿಯಾದ ಶಾಫಾನನಿಗೂ, ಅರಸನ ಸೇವಕನಾದ ಅಸಾಯನಿಗೂ ಆಜ್ಞಾಪಿಸಿ,
[13] “ನೀವು ಹೋಗಿ ಸಿಕ್ಕಿದ ಈ ಗ್ರಂಥದ ವಾಕ್ಯಗಳ ಕುರಿತು ನನಗೋಸ್ಕರವೂ, ಜನರಿಗೋಸ್ಕರವೂ, ಸಮಸ್ತ ಯೆಹೂದ್ಯರಿಗೋಸ್ಕರವೂ ಯೆಹೋವ ದೇವರ ಬಳಿಯಲ್ಲಿ ವಿಚಾರಿಸಿರಿ. ಏಕೆಂದರೆ ನಮ್ಮನ್ನು ಕುರಿತು ಬರೆದಿರುವ ಎಲ್ಲವನ್ನೂ ಕೈಗೊಂಡು ನಡೆಯಲು ನಮ್ಮ ಪಿತೃಗಳು ಈ ಗ್ರಂಥದ ಮಾತುಗಳನ್ನು ಕೇಳದೆ ಹೋದುದರಿಂದ, ದೇವರ ಮಹಾಕೋಪಕ್ಕೆ ಪಾತ್ರರಾಗಿದ್ದೇವೆ,” ಎಂದನು.
[14] ಯಾಜಕನಾದ ಹಿಲ್ಕೀಯ, ಅಹೀಕಾಮ್, ಅಕ್ಬೋರ್, ಶಾಫಾನ್ ಅಸಾಯ ಎಂಬವರು ಪ್ರವಾದಿನಿ ಹುಲ್ದಳ ಬಳಿಗೆ ವಿಚಾರಿಸಲು ಹೋದರು. ಆಕೆಯು ಹರ್ಹಸನ ಮೊಮ್ಮಗನೂ ತಿಕ್ವನ ಮಗನೂ ರಾಜವಸ್ತ್ರಗಳ ಮೇಲ್ವಿಚಾರಕನೂ ಆದ ಶಲ್ಲೂಮನ ಹೆಂಡತಿ. ಅವಳು ಯೆರೂಸಲೇಮಿನೊಳಗೆ ಹೊಸದಾದ ನಿರ್ಮಿತ ಭಾಗದಲ್ಲಿ ವಾಸವಾಗಿದ್ದಳು.
[15] ಹುಲ್ದಳು ಅವರಿಗೆ, “ನಿಮ್ಮನ್ನು ನನ್ನ ಬಳಿಗೆ ಕಳುಹಿಸಿದವನಿಗೆ ನೀವು ಇಸ್ರಾಯೇಲ್ ದೇವರಾದ ಯೆಹೋವ ದೇವರ ಮಾತುಗಳನ್ನು ತಿಳಿಸಿರಿ:
[16] ‘ನಾನು ಈ ಸ್ಥಳದ ಮೇಲೆಯೂ ಅದರ ನಿವಾಸಿಗಳ ಮೇಲೆಯೂ ಯೆಹೂದದ ಅರಸನು ಓದಿದ ಗ್ರಂಥದಲ್ಲಿ ಬರೆದಿರುವ ಪ್ರತಿಯೊಂದರಂತೆ ಕೇಡನ್ನು ಬರಮಾಡುವೆನು.
[17] ಏಕೆಂದರೆ ಅವರು ನನ್ನನ್ನು ಬಿಟ್ಟುಬಿಟ್ಟು, ತಮ್ಮ ಸಮಸ್ತ ಕ್ರಿಯೆಗಳಿಂದ ನನಗೆ ಕೋಪವನ್ನು ಎಬ್ಬಿಸುವಂತೆ ಇತರ ದೇವರುಗಳಿಗೆ ಧೂಪವನ್ನು ಸುಟ್ಟಿದ್ದಾರೆ. ಆದ್ದರಿಂದ ನನ್ನ ಕೋಪವು ಈ ಸ್ಥಳದ ಮೇಲೆ ಹೊತ್ತಿ ಉರಿಯುತ್ತಿದೆ, ಅದು ಆರಿಹೋಗುವುದಿಲ್ಲ.’
[18] ಆದರೆ ಯೆಹೋವ ದೇವರನ್ನು ವಿಚಾರಿಸಲು ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಿಗೆ ನೀವು ಹೇಳಬೇಕಾದದ್ದು ಇದೇ, ‘ನೀವು ಕೇಳಿದ ಮಾತುಗಳನ್ನು ಕುರಿತು ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ,
[19] ಈ ಸ್ಥಳವೂ ಅದರ ನಿವಾಸಿಗಳೂ ನಾಶಕ್ಕೂ ಶಾಪಕ್ಕೂ ಗುರಿಯಾಗುವರೆಂದು ನಾನು ಹೇಳಿದ್ದನ್ನು ನೀನು ಕೇಳಿದಾಗ, ನಿನ್ನ ಹೃದಯವು ಮೃದುವಾಗಿ ನೀನು ನಿನ್ನನ್ನು ಯೆಹೋವ ದೇವರ ಮುಂದೆ ತಗ್ಗಿಸಿಕೊಂಡೆ. ನಿನ್ನ ವಸ್ತ್ರಗಳನ್ನು ಹರಿದುಕೊಂಡು ನನ್ನ ಸಮ್ಮುಖದಲ್ಲಿ ಕಣ್ಣೀರು ಸುರಿಸಿದ್ದರಿಂದ ನಾನು ನಿನ್ನ ಮೊರೆಯನ್ನು ಕೇಳಿದೆನು.
[20] ಆದ್ದರಿಂದ ನಾನು ನಿನ್ನನ್ನು ನಿನ್ನ ಪಿತೃಗಳ ಬಳಿಯಲ್ಲಿ ಸೇರಿಸಿಕೊಳ್ಳುವೆನು; ನೀನು ಸಮಾಧಾನದಿಂದ ನಿನ್ನ ಸಮಾಧಿಗೆ ಸೇರುವೆ. ನಾನು ಈ ಸ್ಥಳದ ಮೇಲೆ ಬರಮಾಡುವ ಕೇಡನ್ನು ನಿನ್ನ ಕಣ್ಣುಗಳು ಕಾಣುವುದಿಲ್ಲ,’ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದಳು. ಅವರು ಹೋಗಿ ಈ ಉತ್ತರವನ್ನು ಅರಸನಿಗೆ ತಿಳಿಸಿದರು.