[1] ಯೆಹೋಯಾಕೀಮನ ಆಳಿಕೆಯಲ್ಲಿ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ದೇಶವನ್ನು ದಾಳಿಮಾಡಿದನು. ಯೆಹೋಯಾಕೀಮನು ಮೂರು ವರ್ಷ ಅವನ ಸೇವಕನಾಗಿದ್ದು, ತರುವಾಯ ಅವನ ಮೇಲೆ ತಿರುಗಿಬಿದ್ದನು.
[2] ಯೆಹೋವ ದೇವರು ಬಾಬಿಲೋನಿಯರನ್ನೂ, ಅರಾಮ್ಯರನ್ನೂ, ಮೋವಾಬ್ಯರನ್ನೂ, ಅಮ್ಮೋನಿಯರನ್ನೂ ಅವನ ಮೇಲೆ ಕಳುಹಿಸಿದನು. ಯೆಹೋವ ದೇವರು ಪ್ರವಾದಿಗಳಾದ ತನ್ನ ಸೇವಕರ ಮುಖಾಂತರ ಹೇಳಿದ ಮಾತಿನ ಪ್ರಕಾರ, ಯೆಹೂದವನ್ನು ನಾಶಮಾಡುವಂತೆ ಅದರ ಮೇಲೆ ಅವರನ್ನು ಬರಮಾಡಿದನು.
[3] ನಿಶ್ಚಯವಾಗಿ ಯೆಹೋವ ದೇವರ ಅಪ್ಪಣೆಯಿಂದ ಇದು ಯೆಹೂದದ ಮೇಲೆ ಆಯಿತು. ಮನಸ್ಸೆಯು ತನ್ನ ಸಮಸ್ತ ಕೃತ್ಯಗಳಿಂದ ಮಾಡಿದ ಪಾಪಗಳ ನಿಮಿತ್ತ, ಯೆಹೂದವನ್ನು ದೇವರು ತಮ್ಮ ಸಮ್ಮುಖದಿಂದ ತೆಗೆದುಹಾಕುವಂತೆ ಇದಾಯಿತು.
[4] ಇದಲ್ಲದೆ ಮನಸ್ಸೆಯು ಚೆಲ್ಲಿದ ನಿರಪರಾಧದ ರಕ್ತದ ನಿಮಿತ್ತ ಇದಾಯಿತು. ಅವನು ನಿರಪರಾಧದ ರಕ್ತದಿಂದ ಯೆರೂಸಲೇಮನ್ನು ತುಂಬಿಸಿದ್ದನು. ಯೆಹೋವ ದೇವರು ಅದನ್ನು ಕ್ಷಮಿಸಲು ಸಿದ್ಧವಾಗಿರಲಿಲ್ಲ.
[5] ಯೆಹೋಯಾಕೀಮನ ಇತರ ಕ್ರಿಯೆಗಳೂ, ಅವನು ಮಾಡಿದ ಸಮಸ್ತವೂ ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
[6] ಯೆಹೋಯಾಕೀಮನು ಮೃತನಾಗಿ ತನ್ನ ಪಿತೃಗಳ ಸಂಗಡ ಸೇರಿದನು. ಅವನಿಗೆ ಬದಲಾಗಿ ಅವನ ಮಗ ಯೆಹೋಯಾಖೀನನು ಅರಸನಾದನು.
[7] ಆದರೆ ಈಜಿಪ್ಟಿನ ಅರಸನು ತನ್ನ ದೇಶದಿಂದ ತಿರುಗಿ ಬರಲಿಲ್ಲ. ಏಕೆಂದರೆ ಈಜಿಪ್ಟ್ ನದಿ ಮೊದಲುಗೊಂಡು ಯೂಫ್ರೇಟೀಸ್ ನದಿಯವರೆಗೂ ಈಜಿಪ್ಟಿನ ಅರಸನಿಗೆ ಇದ್ದದ್ದನ್ನೆಲ್ಲಾ ಬಾಬಿಲೋನಿನ ಅರಸನು ಸ್ವಾಧೀನಮಾಡಿಕೊಂಡಿದ್ದನು.
[8] ಯೆಹೋಯಾಖೀನನು ಅರಸನಾದಾಗ ಹದಿನೆಂಟು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಮೂರು ತಿಂಗಳು ಆಳಿದನು. ಅವನ ತಾಯಿಯು ಯೆರೂಸಲೇಮಿನ ಎಲ್ನಾತಾನನ ಮಗಳಾದ ನೆಹುಷ್ಟಾ.
[9] ಅವನು ತನ್ನ ತಂದೆಯು ಮಾಡಿದಂತೆ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡಿದನು.
[10] ಆ ಕಾಲದಲ್ಲಿ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಸೈನ್ಯದವರು ಯೆರೂಸಲೇಮಿಗೆ ವಿರೋಧವಾಗಿ ಬಂದು ಆ ಪಟ್ಟಣಕ್ಕೆ ಮುತ್ತಿಗೆ ಹಾಕಿದರು.
[11] ಅಷ್ಟರಲ್ಲಿ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ತಾನೇ ಆ ಪಟ್ಟಣಕ್ಕೆ ಬಂದನು.
[12] ಆಗ ಯೆಹೂದದ ಅರಸನಾದ ಯೆಹೋಯಾಖೀನನೂ, ಅವನ ತಾಯಿಯೂ, ಅವನ ಸೇವಕರೂ, ಅವನ ಪ್ರಧಾನರೂ, ಅವನ ಕಂಚುಕಿಯರೂ ಅಧಿಕಾರಿಗಳ ಸಹಿತವಾಗಿ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಗೆ ಶರಣಾದರು. ಬಾಬಿಲೋನಿನ ಅರಸನು ತನ್ನ ಆಳಿಕೆಯ ಎಂಟನೆಯ ವರ್ಷದಲ್ಲಿ ಯೆಹೋಯಾಕೀನನನ್ನು ಸೆರೆಹಿಡಿದನು.
[13] ಯೆಹೋವ ದೇವರು ಮುಂತಿಳಿಸಿದ ಪ್ರಕಾರವೇ ನೆಬೂಕದ್ನೆಚ್ಚರನು ಯೆಹೋವ ದೇವರ ಆಲಯದಲ್ಲಿ ಸಮಸ್ತ ಬೊಕ್ಕಸಗಳನ್ನೂ, ಅರಮನೆಯ ಬೊಕ್ಕಸಗಳನ್ನೂ, ಇಸ್ರಾಯೇಲಿನ ಅರಸನಾದ ಸೊಲೊಮೋನನು ಅರಸನ ಆಲಯದಲ್ಲಿ ಮಾಡಿದ ಬಂಗಾರದ ಸಮಸ್ತ ಪಾತ್ರೆಗಳನ್ನೂ ಸೂರೆಯಾಗಿ ತೆಗೆದುಕೊಂಡನು.
[14] ಅವನು ಯೆರೂಸಲೇಮಿನವರೆಲ್ಲರನ್ನೂ, ಸಮಸ್ತ ಪ್ರಧಾನರನ್ನೂ, ಸಮಸ್ತ ಸ್ಥಿತಿಯುಳ್ಳ ಪರಾಕ್ರಮಶಾಲಿಗಳನ್ನೂ, ಹತ್ತು ಸಾವಿರ ಸೆರೆಯವರನ್ನೂ ಮತ್ತು ಸಮಸ್ತ ಕೌಶಲಗಾರರನ್ನೂ, ಕಮ್ಮಾರರನ್ನೂ ಅಲ್ಲಿಂದ ಒಯ್ದನು. ದೇಶದಲ್ಲಿ ಬಡವರು ಹೊರತು ಉಳಿದವರು ಯಾರೂ ಇರಲಿಲ್ಲ.
[15] ನೆಬೂಕದ್ನೆಚ್ಚರನು ಯೆಹೋಯಾಖೀನನನ್ನು ಬಾಬಿಲೋನಿಗೆ ಸೆರೆಯಾಗಿ ಒಯ್ದನು. ಅರಸನ ತಾಯಿಯನ್ನೂ, ಅರಸನ ಹೆಂಡತಿಯರನ್ನೂ, ಅವನ ಅಧಿಕಾರಿಗಳನ್ನೂ, ದೇಶದ ಪ್ರತಿಷ್ಠಿತರನ್ನೂ ಯೆರೂಸಲೇಮಿನಿಂದ ಬಾಬಿಲೋನಿಗೆ ಸೆರೆಯಾಗಿ ಒಯ್ದನು.
[16] ಬಾಬಿಲೋನಿನ ಅರಸನು ಸಮಸ್ತ ಸ್ಥಿತಿವಂತರಾದ ಏಳು ಸಾವಿರ ಸೈನಿಕರನ್ನೂ, ಕೌಶಲಗಾರರನ್ನೂ ಮತ್ತು ಕಮ್ಮಾರರೂ ಆದ ಸಾವಿರ ಜನರನ್ನೂ ಬಾಬಿಲೋನಿಗೆ ಸೆರೆಯಾಗಿ ಒಯ್ದನು.
[17] ಬಾಬಿಲೋನಿನ ಅರಸನು ಯೆಹೋಯಾಖೀನನ ಚಿಕ್ಕಪ್ಪನಾದ ಮತ್ತನ್ಯನನ್ನು ಅವನಿಗೆ ಬದಲಾಗಿ ಅರಸನನ್ನಾಗಿ ಮಾಡಿ, ಅವನಿಗೆ ಚಿದ್ಕೀಯನೆಂದು ಬೇರೆ ಹೆಸರನ್ನಿಟ್ಟನು.
[18] ಚಿದ್ಕೀಯನು ಅರಸನಾದಾಗ ಇಪ್ಪತ್ತೊಂದು ವರ್ಷದವನಾಗಿದ್ದು, ಅವನು ಯೆರೂಸಲೇಮಿನಲ್ಲಿ ಹನ್ನೊಂದು ವರ್ಷ ಆಳಿದನು. ಅವನ ತಾಯಿ ಲಿಬ್ನದ ಯೆರೆಮೀಯನ ಮಗಳಾದ ಹಮೂಟಲ್.
[19] ಅವನು ಯೆಹೋಯಾಕೀಮನು ಮಾಡಿದಂತೆ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು.
[20] ಯೆಹೋವ ದೇವರ ಕೋಪದಿಂದ ಯೆರೂಸಲೇಮಿನ ಮತ್ತು ಯೆಹೂದದ ಮೇಲೆ ಇವೆಲ್ಲ ಉಂಟಾದವು. ಹೀಗೆ ಯೆಹೋವ ದೇವರು ಅವರನ್ನು ತಮ್ಮ ಸಮ್ಮುಖದಿಂದ ತಳ್ಳಿಬಿಟ್ಟರು. ಅನಂತರ ಚಿದ್ಕೀಯನು ಬಾಬಿಲೋನಿನ ಅರಸನಿಗೆ ವಿರೋಧವಾಗಿ ತಿರುಗಿಬಿದ್ದನು.