[1] ಅರಸನಾದ ಹಿಜ್ಕೀಯನು ಅದನ್ನು ಕೇಳಿದಾಗ, ತನ್ನ ಬಟ್ಟೆಗಳನ್ನು ಹರಿದುಕೊಂಡು, ಗೋಣಿ ತಟ್ಟಿನಿಂದ ತನ್ನನ್ನು ಮುಚ್ಚಿಕೊಂಡು, ಯೆಹೋವ ದೇವರ ಆಲಯಕ್ಕೆ ಹೋದನು.
[2] ಇದಲ್ಲದೆ ಅವನು ಅರಮನೆಯ ಮೇಲ್ವಿಚಾರಕನಾಗಿದ್ದ ಎಲ್ಯಾಕೀಮ್, ಕಾರ್ಯದರ್ಶಿಯಾದ ಶೆಬ್ನ, ಹಿರಿಯ ಯಾಜಕರು ಇವರನ್ನು ಕರೆಸಿ, “ನೀವು ಗೋಣಿತಟ್ಟನ್ನು ಕಟ್ಟಿಕೊಂಡು ಆಮೋಚನ ಮಗನಾದ ಪ್ರವಾದಿ ಯೆಶಾಯನ ಬಳಿಗೆ ಹೋಗಿರಿ,” ಎಂದು ಹೇಳಿ ಕಳುಹಿಸಿದನು.
[3] ಆಗ ಅವರು ಯೆಶಾಯನಿಗೆ, “ಹಿಜ್ಕೀಯನು ಹೇಳುವುದೇನೆಂದರೆ: ‘ಈ ದಿವಸವು ಕಷ್ಟಕರವಾಗಿಯೂ ಗದರಿಕೆಯಾಗಿಯೂ ಅವಮಾನಕರವಾಗಿಯೂ ಇದೆ. ಏಕೆಂದರೆ ಹೆರಿಗೆಯ ಸಮಯವು ಬಂದಿದೆ ಆದರೆ ಹೆರುವುದಕ್ಕೆ ಶಕ್ತಿಯಿಲ್ಲ.
[4] ಜೀವಿಸುವ ದೇವರನ್ನು ನಿಂದಿಸಲು ಅಸ್ಸೀರಿಯದ ಅರಸನಿಂದ ಕಳುಹಿಸಲಾಗಿದ್ದ ಸೈನ್ಯಾಧಿಕಾರಿಯ ನಿಂದೆಯ ಮಾತುಗಳನ್ನು ನಿನ್ನ ದೇವರಾದ ಯೆಹೋವ ದೇವರು ಕೇಳಿದ್ದಾರೆ. ನಿನ್ನ ದೇವರಾದ ಯೆಹೋವ ದೇವರು ಅವನ ಮಾತುಗಳಿಗೋಸ್ಕರ ಅವನನ್ನು ಗದರಿಸುವರು. ಆದ್ದರಿಂದ ನೀನು ಉಳಿದಿರುವ ಜನರಿಗಾಗಿ ಅವರನ್ನು ಪ್ರಾರ್ಥಿಸು,’ ” ಎಂದರು.
[5] ಅರಸನಾದ ಹಿಜ್ಕೀಯನ ಸೇವಕರು ಯೆಶಾಯನ ಬಳಿಗೆ ಬಂದು ಹೇಳಿದಾಗ,
[6] ಯೆಶಾಯನು ಅವರಿಗೆ, “ನೀವು ನಿಮ್ಮ ಯಜಮಾನನಿಗೆ ಹೇಳಬೇಕಾದದ್ದೇನೆಂದರೆ, ‘ಯೆಹೋವ ದೇವರು ಹೀಗೆ ಹೇಳುತ್ತಾರೆ, ನೀನು ಕೇಳಿದಂಥ ಅಸ್ಸೀರಿಯದ ಅರಸನ ಸೇವಕರು ನನ್ನನ್ನು ದೂಷಿಸಿದಂಥ ಮಾತುಗಳನ್ನು ನೀವು ಕೇಳಿದ್ದಕ್ಕೋಸ್ಕರ ಭಯಪಡಬೇಡಿರಿ.
[7] ಇಗೋ, ನಾನು ಅವರ ಮೇಲೆ ಆತ್ಮವನ್ನು ಕಳುಹಿಸುವೆನು. ಅವನು ಒಂದು ಸುದ್ದಿಯನ್ನು ಕೇಳಿ ತನ್ನ ದೇಶಕ್ಕೆ ಹಿಂದಿರುಗುವನು. ಇದಲ್ಲದೆ ಅವನು ತನ್ನ ದೇಶದಲ್ಲಿ ಖಡ್ಗಕ್ಕೆ ತುತ್ತಾಗುವಂತೆ ಮಾಡುವೆನು,’ ” ಎಂದು ಹೇಳಿದನು.
[8] ಹೀಗೆ ಸೈನ್ಯಾಧಿಕಾರಿಯು ಅಸ್ಸೀರಿಯದ ಅರಸನು ಲಾಕೀಷನ್ನು ಬಿಟ್ಟು ಹೊರಟಿದ್ದಾನೆಂದು ಕೇಳಿದಾಗ, ಅವನು ಲಿಬ್ನಕ್ಕೆ ಹೋಗಿ, ಅಲ್ಲಿ ಅರಸನು ಲಿಬ್ನದವರೊಂದಿಗೆ ಯುದ್ಧಮಾಡುತ್ತಿರುವುದನ್ನು ಕಂಡನು.
[9] ಅಷ್ಟರಲ್ಲಿ ಕೂಷನ ಅರಸನಾದ ತಿರ್ಹಾಕನು ತನಗೆ ವಿರೋಧವಾಗಿ ಯುದ್ಧಮಾಡುವುದಕ್ಕೆ ಹೊರಟಿದ್ದಾನೆಂಬ ಸುದ್ದಿಯನ್ನು ಅಸ್ಸೀರಿಯದ ಅರಸನು ಕೇಳಿ, ಹಿಜ್ಕೀಯನ ಬಳಿಗೆ ತಿರಿಗಿ ದೂತರನ್ನು ಕಳುಹಿಸಿ ಅವರಿಗೆ,
[10] “ನೀವು ಯೆಹೂದದ ಅರಸನಾದ ಹಿಜ್ಕೀಯನಿಗೆ ಹೇಳಬೇಕಾದದ್ದೇನೆಂದರೆ: ನೀನು ನಂಬುವ ದೇವರು, ‘ಯೆರೂಸಲೇಮನ್ನು ಅಸ್ಸೀರಿಯದ ಅರಸನ ಕೈಯಲ್ಲಿ ಒಪ್ಪಿಸುವುದಿಲ್ಲ,’ ಎಂದು ಹೇಳಿ ನಿನ್ನನ್ನು ಮೋಸಗೊಳಿಸಾನು.
[11] ಇಗೋ, ಅಸ್ಸೀರಿಯದ ಅರಸರು ಸಮಸ್ತ ದೇಶಗಳನ್ನು ಸಂಪೂರ್ಣವಾಗಿ ನಾಶಮಾಡಿದರೆಂದು ನೀನು ಕೇಳಿದಿಯಲ್ಲಾ. ಹೀಗಿದ್ದ ಮೇಲೆ ನೀನು ಬಿಡುಗಡೆಯಾಗುವೆಯೋ?
[12] ನನ್ನ ಪಿತೃಗಳು ಹಾಳುಮಾಡಿದ ಗೋಜಾನ್, ಹಾರಾನ್, ರೆಜೆಫ್ ಮುಂತಾದ ದೇವರುಗಳು ಅವರನ್ನು ಬಿಡುಗಡೆ ಮಾಡಲಿಲ್ಲ. ತೆಲ್ ಅಸ್ಸಾರ್ ಎಂಬಲ್ಲಿದ್ದ ಏದೆನಿನ ಜನರನ್ನು ಈ ದೇವರುಗಳು ಅವರನ್ನು ರಕ್ಷಿಸಲು ಸಾಧ್ಯವಾಯಿತೇ?
[13] ಹಮಾತ್, ಅರ್ಪಾದ್, ಸೆಫರ್ವಯಿಮ್, ಹೇನ, ಇವ್ವಾ, ಎಂಬ ಪಟ್ಟಣಗಳ ಅರಸರು ಏನಾದರು ಎಂಬ ನನ್ನ ಮಾತನ್ನು ಯೆಹೂದದ ಅರಸನಾದ ಹಿಜ್ಕೀಯನಿಗೆ ಹೇಳಿರಿ,” ಎಂದು ಪತ್ರ ಬರೆದು ದೂತರ ಮುಖಾಂತರ ಕಳುಹಿಸಿದನು.
[14] ಹಿಜ್ಕೀಯನು ಆ ದೂತರ ಕೈಯಿಂದ ಪತ್ರವನ್ನು ತೆಗೆದುಕೊಂಡು ಓದಿದನು, ಅನಂತರ ಯೆಹೋವ ದೇವರ ಆಲಯಕ್ಕೆ ಹೋಗಿ ಅದನ್ನು ಯೆಹೋವ ದೇವರ ಮುಂದೆ ತೆರೆದಿಟ್ಟನು.
[15] ಇದಲ್ಲದೆ ಹಿಜ್ಕೀಯನು ಯೆಹೋವ ದೇವರ ಮುಂದೆ ಪ್ರಾರ್ಥನೆಮಾಡಿ ಹೇಳಿದ್ದೇನೆಂದರೆ, “ಕೆರೂಬಿಗಳ ಮಧ್ಯದಲ್ಲಿ ವಾಸವಾಗಿರುವ ಇಸ್ರಾಯೇಲಿನ ದೇವರಾದ ಯೆಹೋವ ದೇವರೇ, ನೀವೊಬ್ಬರೇ ಭೂಮಿಯ ಸಮಸ್ತ ರಾಜ್ಯಗಳಿಗೆ ದೇವರಾಗಿದ್ದೀರಿ. ನೀವೇ ಆಕಾಶವನ್ನೂ, ಭೂಮಿಯನ್ನೂ ಉಂಟುಮಾಡಿದ್ದೀರಿ.
[16] ಯೆಹೋವ ದೇವರೇ, ನಿಮ್ಮ ಕಿವಿಗೊಟ್ಟು ಕೇಳಿರಿ. ಯೆಹೋವ ದೇವರೇ, ನಿಮ್ಮ ಕಣ್ಣುಗಳನ್ನು ತೆರೆದು ನೋಡಿರಿ. ಸನ್ಹೇರೀಬನು ಜೀವವುಳ್ಳ ದೇವರನ್ನು ನಿಂದಿಸಿ ಕಳುಹಿಸಿದ ಮಾತುಗಳನ್ನು ಕೇಳಿರಿ.
[17] “ಯೆಹೋವ ದೇವರೇ, ಅಸ್ಸೀರಿಯದ ಅರಸರು ಜನಾಂಗಗಳನ್ನೂ ಅವರ ದೇಶಗಳನ್ನೂ ಹಾಳು ಮಾಡಿ, ಅವರ ದೇವತೆಗಳನ್ನು ಬೆಂಕಿಯಲ್ಲಿ ಹಾಕಿದ್ದು ನಿಜ.
[18] ಅವು ದೇವರುಗಳಲ್ಲ, ಕೇವಲ ಮನುಷ್ಯರು ಕೆತ್ತಿದ ಕಲ್ಲುಮರಗಳಷ್ಟೆ, ಆದ್ದರಿಂದಲೇ ಅವರು ಅವುಗಳನ್ನು ನಾಶಮಾಡಿದ್ದಾರೆ.
[19] ಹೀಗಿರುವುದರಿಂದ, ಈಗ ನಮ್ಮ ದೇವರಾದ ಯೆಹೋವ ದೇವರೇ, ‘ನೀವೊಬ್ಬರೇ ದೇವರಾದ ಯೆಹೋವ ದೇವರಾಗಿದ್ದೀರಿ,’ ಎಂದು ಭೂಮಿಯ ಸಮಸ್ತ ರಾಜ್ಯಗಳೂ ತಿಳಿಯುವ ಹಾಗೆ ನಮ್ಮನ್ನು ಅವನ ಕೈಯಿಂದ ತಪ್ಪಿಸಿ ರಕ್ಷಿಸಿರಿ,” ಎಂದು ಹಿಜ್ಕೀಯನು ಯೆಹೋವ ದೇವರಿಗೆ ಪ್ರಾರ್ಥಿಸಿದನು.
[20] ಆಗ ಆಮೋಚನ ಮಗನಾದ ಯೆಶಾಯನು ಹಿಜ್ಕೀಯನಿಗೆ ಹೇಳಿ ಕಳುಹಿಸಿದ್ದೇನೆಂದರೆ: “ಇಸ್ರಾಯೇಲಿನ ಯೆಹೋವ ದೇವರ ಮಾತಿದು: ನೀನು ಅಸ್ಸೀರಿಯದ ಅರಸನಾದ ಸನ್ಹೇರೀಬನನ್ನು ಕುರಿತು ಮಾಡಿದ ಪ್ರಾರ್ಥನೆಯನ್ನು ಕೇಳಿದ್ದೇನೆ.
[21] ಅವನನ್ನು ಕುರಿತು ಯೆಹೋವ ದೇವರು ಹೇಳುವುದೇನೆಂದರೆ: “ ‘ಕನ್ನಿಕೆಯಾದ ಚೀಯೋನ್ ಪುತ್ರಿಯು ನಿನ್ನನ್ನು ತಿರಸ್ಕರಿಸಿ, ನಿನಗೆ ಅಪಹಾಸ್ಯ ಮಾಡುತ್ತಾಳೆ. ಯೆರೂಸಲೇಮಿನ ಪುತ್ರಿಯು ನೀನು ಓಡಿ ಹೋಗುವಾಗ ತನ್ನ ತಲೆಯಾಡಿಸುತ್ತಾಳೆ.
[22] ನೀನು ಯಾರನ್ನು ನಿಂದಿಸಿ, ಯಾರನ್ನು ದೂಷಿಸಿದೆ? ಯಾರಿಗೆ ವಿರೋಧವಾಗಿ ನಿನ್ನ ಧ್ವನಿಯನ್ನು ಎತ್ತಿದ್ದೀ? ನಿನ್ನ ಕಣ್ಣುಗಳು ಗರ್ವದಿಂದ ನೋಡಿದ್ದು ಯಾರನ್ನು? ಇಸ್ರಾಯೇಲಿನ ಪರಿಶುದ್ಧ ದೇವರಿಗೆ ವಿರೋಧವಾಗಿಯಲ್ಲವೇ?
[23] ನೀನು ನಿನ್ನ ದೂತರ ಮುಖಾಂತರ ಯೆಹೋವ ದೇವರನ್ನು ನಿಂದಿಸಿರುವೆ. ಇದಲ್ಲದೆ ನೀನು ಈ ಮಾತುಗಳನ್ನಾಡಿ ಜಂಬಕೊಚ್ಚಿಕೊಂಡಿದ್ದೀ, “ನಾನು ನನ್ನ ರಥಸಮೂಹದೊಡನೆ ಪರ್ವತಗಳ ಶಿಖರಗಳನ್ನು ಹತ್ತಿದ್ದೇನೆ, ಲೆಬನೋನಿನ ಎತ್ತರಗಳಿಗೆ ಹೋಗಿದ್ದೇನೆ. ಅದರ ಉನ್ನತವಾದ ದೇವದಾರುಗಳನ್ನೂ, ಅತ್ಯುತ್ತಮ ತುರಾಯಿ ಮರಗಳನ್ನೂ ಕಡಿದುಹಾಕಿದ್ದೇನೆ. ಅದರ ಅಂಚಿನ ಗಡಿಸ್ಥಳಗಳಲ್ಲಿಯೂ, ಅದರ ಫಲಭರಿತ ಅಡವಿಯಲ್ಲಿಯೂ ಪ್ರವೇಶಿಸಿದ್ದೇನೆ.
[24] ಪರದೇಶಗಳಲ್ಲಿ ನಾನು ಬಾವಿಗಳನ್ನು ಅಗೆದು, ನೀರು ಕುಡಿದಿದ್ದೇನೆ. ನನ್ನ ಅಂಗಾಲುಗಳಿಂದ ಈಜಿಪ್ಟಿನವರ ಎಲ್ಲಾ ನದಿಗಳನ್ನು ಬತ್ತಿಹೋಗುವಂತೆ ಮಾಡಿದ್ದೇನೆ.”
[25] “ ‘ಹೀಗಾಗಬೇಕೆಂದು ಬಹಳ ದಿನಗಳ ಹಿಂದೆಯೇ ನಿರ್ಣಯಿಸಿದ್ದನ್ನು ನೀನು ಕೇಳಲಿಲ್ಲವೋ? ಪುರಾತನ ದಿನಗಳಲ್ಲಿ ನಾನು ಯೋಚಿಸಿದ್ದನ್ನು, ಈಗ ನಾನು ಅದನ್ನು ನೆರವೇರಿಸಿದ್ದೇನೆ. ಆದ್ದರಿಂದಲೇ ನೀನು ಕೋಟೆಗಳುಳ್ಳ ಪಟ್ಟಣಗಳನ್ನು ಹಾಳಾದ ದಿಬ್ಬಗಳಾಗಿ ಮಾಡಿಬಿಟ್ಟಿರುವೆ.
[26] ಆದ್ದರಿಂದ ಅವುಗಳ ನಿವಾಸಿಗಳು ಬಲಹೀನರಾಗಿ ಹೆದರಿ ಆಶಾಭಂಗಹೊಂದಿ ನಾಚಿಕೆಪಟ್ಟರು. ಅವರು ಹೊಲದ ಹುಲ್ಲಿನಂತೆಯೂ, ಹಸಿರು ಸಸಿಗಳಂತೆಯೂ, ಮಾಳಿಗೆಯ ಮೇಲಿನ ಹುಲ್ಲಿನಂತೆಯೂ, ಬೆಳೆಯುವುದಕ್ಕಿಂತ ಮುಂಚೆಯೇ ಬಾಡಿಹೋಗುವ ಪೈರಿನಂತೆಯೂ ಅವರಿದ್ದಾರೆ.
[27] “ ‘ಆದರೆ ನೀನು ಎಲ್ಲಿ ವಾಸಿಸುವೆಯೆಂಬುದನ್ನು ನೀನು ಯಾವಾಗ ಬರುವೆ ಹೋಗುವೆ ಎಂಬುದನ್ನು ನೀನು ನನ್ನ ಮೇಲೆ ಹೇಗೆ ಕೋಪಿಸಿಕೊಳ್ಳುವೆ? ಎಂಬುದನ್ನು ನಾನು ಬಲ್ಲೆನು.
[28] ನೀನು ನನಗೆ ವಿರೋಧವಾಗಿ ಮಾಡುವ ನಿನ್ನ ರೌದ್ರವೂ, ನಿನ್ನ ಅಹಂಕಾರವೂ ನನ್ನ ಕಿವಿಗಳಿಗೆ ತಲುಪಿದೆ. ಆದ್ದರಿಂದ ನಾನು ನನ್ನ ಕೊಂಡಿಯನ್ನು ನಿನ್ನ ಮೂಗಿನಲ್ಲಿಯೂ, ನನ್ನ ಕಡಿವಾಣವನ್ನು ನಿನ್ನ ಬಾಯಲ್ಲಿಯೂ ಹಾಕಿ, ನೀನು ಬಂದ ದಾರಿಯಿಂದಲೇ ನಿನ್ನನ್ನು ಹಿಂದಿರುಗಿಸುವೆನು.’
[29] “ಹಿಜ್ಕೀಯನೇ, ಇದು ನಿಮಗೆ ಸಂಕೇತವಾಗಿರುವದು, “ಈ ವರ್ಷದಲ್ಲಿ ತನ್ನಷ್ಟಕ್ಕೆ ತಾನೇ ಬೆಳೆದದ್ದನ್ನೂ, ಎರಡನೆಯ ವರ್ಷದಲ್ಲಿ ಅದರಿಂದ ಮೊಳೆತದ್ದನ್ನೂ ತಿನ್ನುವಿರಿ. ಆದರೆ ಮೂರನೆಯ ವರ್ಷದಲ್ಲಿ ನೀವು ಬೀಜವನ್ನು ಬಿತ್ತಿ ಕೊಯ್ಯುವಿರಿ. ದ್ರಾಕ್ಷಿತೋಟಗಳಲ್ಲಿ ವ್ಯವಸಾಯಮಾಡಿ, ಅವುಗಳ ಫಲಗಳನ್ನು ತಿನ್ನುವಿರಿ.
[30] ಯೆಹೂದದ ಮನೆತನದಲ್ಲಿ ತಪ್ಪಿಸಿಕೊಂಡು ಉಳಿದವರು ತಿರುಗಿ ದೇಶದಲ್ಲಿ ಬೇರೂರಿ ನೆಲೆಗೊಂಡು ಅಭಿವೃದ್ಧಿಯಾಗುವರು.
[31] ಏಕೆಂದರೆ ಯೆರೂಸಲೇಮಿನಿಂದ ಉಳಿದವರೂ, ಚೀಯೋನ್ ಪರ್ವತದಿಂದ ತಪ್ಪಿಸಿಕೊಂಡವರೂ ಹೊರಡುವರು. ಸೇನಾಧೀಶ್ವರ ಯೆಹೋವ ದೇವರ ಆಸಕ್ತಿಯು ಇದನ್ನು ನೆರವೇರಿಸುವುದು.
[32] “ಆದ್ದರಿಂದ ಯೆಹೋವ ದೇವರು ಅಸ್ಸೀರಿಯದ ಅರಸನನ್ನು ಕುರಿತು ಹೀಗೆ ಹೇಳುತ್ತಾರೆ: “ ‘ಅವನು ಈ ಪಟ್ಟಣದೊಳಗೆ ಬರುವುದಿಲ್ಲ; ಅಲ್ಲಿ ಬಾಣವನ್ನು ಎಸೆಯುವುದಿಲ್ಲ; ಗುರಾಣಿಯೊಂದಿಗೆ ಅದರ ಮುಂದೆ ಬರಲಾರನು; ಅದಕ್ಕೆ ವಿರೋಧವಾಗಿ ಮುತ್ತಿಗೆ ಹಾಕಲು ದಿಬ್ಬವನ್ನು ನಿರ್ಮಿಸುವುದಿಲ್ಲ.
[33] ಅವನು ಬಂದ ದಾರಿಯಿಂದಲೇ ಹಿಂದಿರುಗಿ ಹೋಗುವನು, ಈ ಪಟ್ಟಣದೊಳಗೆ ಬರುವುದೇ ಇಲ್ಲ, ಎಂದು ಯೆಹೋವ ದೇವರು ಹೇಳುತ್ತಾರೆ.
[34] ಈ ಪಟ್ಟಣವನ್ನು ನನಗೋಸ್ಕರವೂ ನನ್ನ ಸೇವಕನಾದ ದಾವೀದನಿಗೋಸ್ಕರವೂ ಕಾಪಾಡಿ ಅದನ್ನು ರಕ್ಷಿಸುವೆನು.’ ”
[35] ಅದೇ ರಾತ್ರಿಯಲ್ಲಿ ಯೆಹೋವ ದೇವರ ದೂತನು ಹೊರಟುಬಂದು ಅಸ್ಸೀರಿಯದ ದಂಡಿನಲ್ಲಿದ್ದ 1,85,000 ಜನರನ್ನು ಸಂಹರಿಸಿದನು. ಉದಯದಲ್ಲಿ ಜನರು ಎದ್ದಾಗ, ಇಗೋ, ಅವರೆಲ್ಲರು ಸತ್ತು ಹೆಣಗಳಾಗಿದ್ದರು.
[36] ಆಗ ಅಸ್ಸೀರಿಯದ ಅರಸನಾದ ಸನ್ಹೇರೀಬನು ಹಿಂದಿರುಗಿ ನಿನೆವೆ ಪಟ್ಟಣಕ್ಕೆ ಹೋಗಿ ಅಲ್ಲಿ ವಾಸಿಸಿದನು.
[37] ಒಂದು ದಿನ ಅವನು ತನ್ನ ದೇವರಾದ ನಿಸ್ರೋಕನ ಆಲಯದಲ್ಲಿ ಆರಾಧನೆ ಮಾಡುತ್ತಿರುವಾಗ, ಅವನ ಮಕ್ಕಳಾದ ಅದ್ರಮ್ಮೆಲೆಕ್, ಸರೆಚೆರ್ ಎಂಬವರು ಅವನನ್ನು ಖಡ್ಗದಿಂದ ಕೊಂದು, ಅರಾರಾಟ್ ದೇಶಕ್ಕೆ ತಪ್ಪಿಸಿಕೊಂಡು ಹೋದರು. ಅವನ ಮಗ ಏಸರ್‌ಹದ್ದೋನನು ಅವನಿಗೆ ಬದಲಾಗಿ ಅರಸನಾದನು.