Skip to content
Opens in a new window
Listen to this chapter • 6:15

[1] ಯೆಹೂದದ ಅರಸನಾದ ಅಹಜ್ಯನ ಮಗ ಯೋವಾಷನ ಆಳ್ವಿಕೆಯ ಇಪ್ಪತ್ತಮೂರನೆಯ ವರ್ಷದಲ್ಲಿ, ಯೇಹುವಿನ ಮಗ ಯೆಹೋವಾಹಾಜನು ಸಮಾರ್ಯದಲ್ಲಿ ಇಸ್ರಾಯೇಲಿನ ಅರಸನಾದನು. ಅವನು ಹದಿನೇಳು ವರ್ಷ ಆಳಿದನು.

[2] ಅವನು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ, ಇಸ್ರಾಯೇಲರನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಪಾಪಗಳನ್ನು ಬಿಟ್ಟುಬಿಡದೆ, ಅವುಗಳನ್ನು ಹಿಂಬಾಲಿಸಿದನು.

[3] ಆದ್ದರಿಂದ ಯೆಹೋವ ದೇವರು ಇಸ್ರಾಯೇಲಿನ ಮೇಲೆ ಕೋಪಿಸಿಕೊಂಡು, ಅವರನ್ನು ಅರಾಮ್ಯರ ಅರಸನಾದ ಹಜಾಯೇಲನ ಕೈಯಲ್ಲಿಯೂ, ಹಜಾಯೇಲನ ಮಗ ಬೆನ್ಹದದನ ಕೈಯಲ್ಲಿಯೂ ಬಹುಕಾಲ ಒಪ್ಪಿಸಿದರು.

[4] ಆಗ ಯೆಹೋವಾಹಾಜನು ಯೆಹೋವ ದೇವರನ್ನು ಬೇಡಿಕೊಂಡದ್ದರಿಂದ ಯೆಹೋವ ದೇವರು ಅವನ ಮೊರೆಯನ್ನು ಕೇಳಿದರು. ಅರಾಮ್ಯರ ಅರಸನು ಇಸ್ರಾಯೇಲರನ್ನು ಬಾಧೆಪಡಿಸಿದ್ದನ್ನು ಅವರು ಕಂಡು,

[5] ಯೆಹೋವ ದೇವರು ಇಸ್ರಾಯೇಲರಿಗೆ ಒಬ್ಬ ವಿಮೋಚಕನನ್ನು ಕೊಟ್ಟಿದ್ದರಿಂದ, ಅವರು ಅರಾಮ್ಯರ ಕೈಯಿಂದ ತಪ್ಪಿಸಿಕೊಂಡು ಹೋದರು. ಆಗ ಇಸ್ರಾಯೇಲರು ಮುಂಚಿನ ಹಾಗೆ ತಮ್ಮ ಮನೆಗಳಲ್ಲಿ ವಾಸವಾಗಿದ್ದರು.

[6] ಆದರೆ ಅವರು ಇಸ್ರಾಯೇಲರನ್ನು ಪಾಪಮಾಡಲು ಪ್ರೇರೇಪಿಸಿದ ಯಾರೊಬ್ಬಾಮನ ಮನೆಯ ಪಾಪಗಳನ್ನು ಬಿಟ್ಟುಬಿಡದೆ ಅವುಗಳಲ್ಲಿ ಮುಂದುವರಿದರು. ಇದಲ್ಲದೆ ಸಮಾರ್ಯದಲ್ಲಿ ಅಶೇರ ಸ್ತಂಭ ಇನ್ನೂ ಉಳಿದಿತ್ತು.

[7] ಯೆಹೋವಾಹಾಜನ ಸೈನ್ಯದಲ್ಲಿ ಐವತ್ತು ಕುದುರೆ ರಾಹುತರು, ಹತ್ತು ರಥಗಳು, ಹತ್ತು ಸಾವಿರ ಜನ ಕಾಲಾಳುಗಳ ಹೊರತು ಏನೂ ಉಳಿಯಲಿಲ್ಲ. ಏಕೆಂದರೆ ಅರಾಮಿನ ಅರಸನು ಉಳಿದವರನ್ನು ಸಂಹರಿಸಿ, ತುಳಿದು, ಧೂಳಿನ ಹಾಗೆ ಮಾಡಿದನು.

[8] ಯೆಹೋವಾಹಾಜನ ಇತರ ಕಾರ್ಯಗಳೂ ಅವನು ಮಾಡಿದ್ದೆಲ್ಲವೂ ಅವನ ಪರಾಕ್ರಮವೂ ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.

[9] ಯೆಹೋವಾಹಾಜನು ಮೃತನಾಗಿ ತನ್ನ ಪಿತೃಗಳ ಸಂಗಡ ಸೇರಿದನು. ಅವನ ಶವವನ್ನು ಸಮಾರ್ಯದಲ್ಲಿ ಹೂಳಿಟ್ಟರು. ಅವನ ಮಗ ಯೋವಾಷನು ಅವನಿಗೆ ಬದಲಾಗಿ ಅರಸನಾದನು.

[10] ಯೆಹೂದದ ಅರಸನಾದ ಯೋವಾಷನ ಆಳ್ವಿಕೆಯ ಮೂವತ್ತೇಳನೆಯ ವರ್ಷದಲ್ಲಿ ಯೆಹೋವಾಹಾಜನ ಮಗ ಯೋವಾಷನು ಸಮಾರ್ಯದಲ್ಲಿ ಇಸ್ರಾಯೇಲಿನ ಅರಸನಾದನು. ಅವನು ಹದಿನಾರು ವರ್ಷ ಆಳಿದನು.

[11] ಅವನು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ, ಇಸ್ರಾಯೇಲರನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಸಮಸ್ತ ಪಾಪಗಳನ್ನು ತೊರೆದುಬಿಡದೆ, ಅವುಗಳಲ್ಲಿ ಮುಂದುವರೆದನು.

[12] ಯೋವಾಷನ ಇತರ ಕ್ರಿಯೆಗಳೂ, ಅವನು ಮಾಡಿದ್ದೆಲ್ಲವೂ, ಅವನು ಯೆಹೂದದ ಅರಸನಾದ ಅಮಚ್ಯನ ವಿರುದ್ಧ ಯುದ್ಧ ಮಾಡಿದ ಅವನ ಪರಾಕ್ರಮವೂ ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.

[13] ಯೋವಾಷನು ಮೃತನಾಗಿ ತನ್ನ ಪಿತೃಗಳ ಜೊತೆ ಸೇರಿದನು, ಇವನ ಶವವನ್ನು ಸಮಾರ್ಯದಲ್ಲಿ ಇಸ್ರಾಯೇಲಿನ ಅರಸರ ಸ್ಮಶಾನದಲ್ಲಿ ಸಮಾಧಿಮಾಡಿದರು. ಯಾರೊಬ್ಬಾಮನು ಅವನ ಸಿಂಹಾಸನ ಮೇಲೆ ಕುಳಿತುಕೊಂಡನು.

[14] ಆಗ ಎಲೀಷನು ಮರಣಕರ ವ್ಯಾಧಿಯಿಂದ ಬಳಲುತ್ತಿದ್ದಾಗ, ಇಸ್ರಾಯೇಲಿನ ಅರಸನಾದ ಯೋವಾಷನು ಅವನ ಬಳಿಗೆ ಬಂದು, ಅವನ ಮೇಲೆ ಬಿದ್ದು, “ನನ್ನ ತಂದೆಯೇ, ನನ್ನ ತಂದೆಯೇ, ಇಸ್ರಾಯೇಲಿನ ರಥಗಳೂ ಕುದುರೆ ಸವಾರರು ಆಗಿದ್ದವನೇ!” ಎಂದು ಹೇಳುತ್ತಾ ಅತ್ತನು.

[15] ಎಲೀಷನು ಅವನಿಗೆ, “ಒಂದು ಬಿಲ್ಲನ್ನೂ ಬಾಣಗಳನ್ನೂ ತೆಗೆದುಕೋ,” ಎಂದನು. ಅವನು ತೆಗೆದುಕೊಂಡನು.

[16] ಅವನು ಇಸ್ರಾಯೇಲಿನ ಅರಸನಿಗೆ, “ನಿನ್ನ ಕೈಯಲ್ಲಿ ಬಿಲ್ಲನ್ನು ತೆಗೆದುಕೋ,” ಅವನು ಅದನ್ನು ತೆಗೆದುಕೊಂಡಾಗ ಎಲೀಷನು ತನ್ನ ಕೈಗಳನ್ನು ಅರಸನ ಕೈಗಳ ಮೇಲೆ ಇಟ್ಟನು.

[17] “ಪೂರ್ವದಲ್ಲಿರುವ ಕಿಟಕಿಯನ್ನು ತೆರೆ,” ಎಂದನು. ಅವನು ತೆರೆದನು. ಎಲೀಷನು, “ಎಸೆ,” ಅನ್ನಲು, ಅವನು ಎಸೆದನು. “ಯೆಹೋವ ದೇವರ ವಿಜಯದ ಬಾಣವೇ, ಅರಾಮಿನಿಂದ ತಪ್ಪಿಸುವ ವಿಜಯದ ಬಾಣವೇ, ಅಫೇಕಿನಲ್ಲಿ ಅರಾಮ್ಯರನ್ನು ನಾಶಮಾಡುವವರೆಗೂ ನೀನು ಅವರನ್ನು ಹೊಡೆಯುವೆ,” ಎಂದು ಎಲೀಷನು ಹೇಳಿದನು.

[18] ಅವನು, “ಬಾಣಗಳನ್ನು ತೆಗೆದುಕೋ,” ಎಂದನು. ಅರಸನು ತೆಗೆದುಕೊಂಡನು. ಎಲೀಷನು ಇಸ್ರಾಯೇಲಿನ ಅರಸನಿಗೆ, “ನೆಲದ ಮೇಲೆ ಹೊಡೆ,” ಎಂದನು. ಆಗ ಅವನು ಮೂರು ಸಾರಿ ಮಾತ್ರ ಹೊಡೆದು ನಿಂತನು.

[19] ಆದರೆ ದೇವರ ಮನುಷ್ಯನು ಅವನ ಮೇಲೆ ಕೋಪಗೊಂಡು, “ನೀನು ಐದಾರು ಸಾರಿ ಹೊಡೆಯಬೇಕಾಗಿತ್ತು. ಆಗ ಅರಾಮ್ಯರನ್ನು ನಾಶಮಾಡುವವರೆಗೂ ಹೊಡೆಯುತ್ತಿದ್ದೆ. ಆದರೆ ಈಗ ಅರಾಮ್ಯರನ್ನು ಮೂರು ಸಾರಿ ಮಾತ್ರ ಹೊಡೆಯುವೆ,” ಎಂದನು.

[20] ಅನಂತರ ಎಲೀಷನು ಮೃತನಾದನು. ಅವನ ಶವವನ್ನು ಸಮಾಧಿಮಾಡಿದರು. ವರ್ಷದ ಆರಂಭದಲ್ಲಿ ಮೋವಾಬ್ಯರ ದಂಡುಗಳು ದೇಶದಲ್ಲಿ ಪ್ರವೇಶಿಸಿದವು.

[21] ಒಂದು ದಿನ ಕೆಲವು ಇಸ್ರಾಯೇಲರು ಒಬ್ಬ ಮನುಷ್ಯನನ್ನು ಸಮಾಧಿಮಾಡಲು ಹೋಗುತ್ತಿದ್ದರು. ಆಗ, ಮೋವಾಬ್ಯರ ದಂಡು ಬರುತ್ತಿರುವುದನ್ನು ಕಂಡು, ಆ ಶವವನ್ನು ಎಲೀಷನ ಸಮಾಧಿಯಲ್ಲಿ ಬಿಸಾಡಿ ಓಡಿಹೋದರು. ಆ ಶವ ಸಮಾಧಿಯ ಮೇಲೆಬಿದ್ದಾಗ, ಅದು ಎಲೀಷನ ಎಲುಬುಗಳಿಗೆ ತಗಲಿ ಜೀವ ಬಂದು ಎದ್ದು ನಿಂತನು.

[22] ಯೆಹೋವಾಹಾಜನ ದಿವಸಗಳೆಲ್ಲಾ ಅರಾಮಿನ ಅರಸನಾದ ಹಜಾಯೇಲನು ಇಸ್ರಾಯೇಲರನ್ನು ಬಾಧೆಪಡಿಸಿದನು.

[23] ಆದರೆ ಯೆಹೋವ ದೇವರು ಅಬ್ರಹಾಮನ, ಇಸಾಕನ, ಯಾಕೋಬನ ಸಂಗಡ ಒಡಂಬಡಿಕೆಯನ್ನು ಮಾಡಿದ್ದರಿಂದ ಇಸ್ರಾಯೇಲರಿಗೆ ಕೃಪೆತೋರಿಸಿ ಅವರ ಮೇಲೆ ಅನುಕಂಪಗೊಂಡರು. ಅವರನ್ನು ನಾಶಮಾಡಲು, ಆತನು ಅವರನ್ನು ತನ್ನಿಂದ ತೊರೆದುಬಿಡಲು ಅವರನ್ನು ತನ್ನ ಸಮ್ಮುಖದಿಂದ ಹೊರಡಿಸಲು ಮನಸ್ಸು ಮಾಡಲಿಲ್ಲ.

[24] ಅರಾಮಿನ ಅರಸನಾದ ಹಜಾಯೇಲನು ಮರಣಹೊಂದಿದನು. ಅವನ ಮಗ ಬೆನ್ಹದದನು ಅವನಿಗೆ ಬದಲಾಗಿ ಅರಸನಾದನು.

[25] ಆಗ ಯೆಹೋವಾಹಾಜನ ಮಗ ಯೋವಾಷನು ಯುದ್ಧದಲ್ಲಿ ತನ್ನ ತಂದೆ ಯೆಹೋವಾಹಾಜನ ಕೈಯಿಂದ ಹಜಾಯೇಲನು ತೆಗೆದುಕೊಂಡಿದ್ದ ಪಟ್ಟಣಗಳನ್ನು ಅವನ ಮಗ ಬೆನ್ಹದದನ ಕೈಯಿಂದ ತಿರುಗಿ ತೆಗೆದುಕೊಂಡನು. ಯೋವಾಷನು ಅವನನ್ನು ಮೂರು ಸಾರಿ ಸೋಲಿಸಿ, ಇಸ್ರಾಯೇಲಿನ ಪಟ್ಟಣಗಳನ್ನು ತಿರುಗಿ ತೆಗೆದುಕೊಂಡನು.

2 ಅರಸುಗಳು — Chapters