Skip to content
Opens in a new window
Listen to this chapter • 7:21

[1] ಇಸ್ರಾಯೇಲಿನ ಅರಸನಾಗಿರುವ ಯೆಹೋವಾಹಾಜನ ಮಗನಾದ ಯೋವಾಷನ ಆಳ್ವಿಕೆಯ ಎರಡನೆಯ ವರ್ಷದಲ್ಲಿ, ಯೆಹೂದದ ಅರಸನಾದ ಯೋವಾಷನ ಮಗ ಅಮಚ್ಯನು ಅರಸನಾದನು.

[2] ಅವನು ಆಳಲು ಆರಂಭಿಸಿದಾಗ, ಇಪ್ಪತ್ತೈದು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಇಪ್ಪತ್ತೊಂಬತ್ತು ವರ್ಷ ಆಳಿದನು. ಅವನ ತಾಯಿಯ ಹೆಸರು ಯೆಹೋವದ್ದಾನ್, ಅವಳು ಯೆರೂಸಲೇಮಿನವಳು.

[3] ಅವನು ಯೆಹೋವ ದೇವರ ದೃಷ್ಟಿಯಲ್ಲಿ ಸರಿಯಾದದ್ದನ್ನೇ ಮಾಡಿದನು, ಆದರೆ ತನ್ನ ಪಿತೃವಾದ ದಾವೀದನ ಹಾಗಲ್ಲ. ತನ್ನ ತಂದೆ ಯೋವಾಷನು ಮಾಡಿದ ಹಾಗೆ ಸಮಸ್ತವನ್ನು ಮಾಡಿದನು.

[4] ಆದರೂ ಪೂಜಾಸ್ಥಳಗಳನ್ನು ತೆಗೆದುಹಾಕಲಿಲ್ಲ ಆದ್ದರಿಂದ ಜನರು ಪೂಜಾಸ್ಥಳಗಳ ಮೇಲೆ ಬಲಿಗಳನ್ನೂ ಧೂಪಗಳನ್ನೂ ಅರ್ಪಿಸುವುದನ್ನು ಮುಂದುವರೆಸಿದ್ದರು.

[5] ಇವನು ರಾಜ್ಯವನ್ನು ಸ್ಥಿರಪಡಿಸಿಕೊಂಡ ತರುವಾಯ, ಅರಸನಾಗಿದ್ದ ತನ್ನ ತಂದೆಯನ್ನು ಕೊಂದ ಸೇವಕರಿಗೆ ಮರಣದಂಡನೆಯನ್ನು ವಿಧಿಸಿದನು.

[6] ಆದರೆ, “ಮಕ್ಕಳು ಮಾಡಿದ ಪಾಪಕ್ಕೆ ತಂದೆಗಾಗಲಿ, ತಂದೆಯ ಪಾಪಕ್ಕಾಗಿ ಮಕ್ಕಳಿಗಾಗಲಿ ಮರಣಶಿಕ್ಷೆಯಾಗಬಾರದು. ಪ್ರತಿಯೊಬ್ಬನೂ ತನ್ನ ಪಾಪದ ನಿಮಿತ್ತವೇ ಮರಣಶಿಕ್ಷೆಯನ್ನು ಹೊಂದಬೇಕು,” ಎಂದು ಯೆಹೋವ ದೇವರು ಆಜ್ಞಾಪಿಸಿದ ಮೋಶೆಯ ನಿಯಮ ಗ್ರಂಥದಲ್ಲಿ ಬರೆದಿರುವ ಪ್ರಕಾರ, ಅವನು ಕೊಲೆಗಾರರ ಮಕ್ಕಳನ್ನು ಕೊಂದುಹಾಕಲಿಲ್ಲ.

[7] ಅವನು ಉಪ್ಪಿನ ತಗ್ಗಿನಲ್ಲಿ ಎದೋಮ್ಯರಾದ ಹತ್ತು ಸಾವಿರ ಜನರನ್ನು ಸೋಲಿಸಿ, ಯುದ್ಧದಲ್ಲಿ ಸೆಲ ದುರ್ಗವನ್ನು ವಶಪಡಿಸಿಕೊಂಡು, ಅದಕ್ಕೆ ಯೊಕ್ತೆಯೇಲ್ ಎಂದು ಹೆಸರಿಟ್ಟನು. ಅದಕ್ಕೆ ಇಂದಿನವರೆಗೂ ಇದೇ ಹೆಸರಿರುತ್ತದೆ.

[8] ಆಗ ಅಮಚ್ಯನು, ಯೇಹುವಿನ ಮೊಮ್ಮಗನೂ ಯೆಹೋವಾಹಾಜನ ಮಗನೂ ಇಸ್ರಾಯೇಲರ ಅರಸನಾದ ಯೋವಾಷನಿಗೆ, “ನಾವು ಒಬ್ಬರನ್ನೊಬ್ಬರು ಎದುರಿಸೋಣ ಬಾ,” ಎಂದು ದೂತರ ಮುಖಾಂತರ ಹೇಳಿ ಕಳುಹಿಸಿದನು.

[9] ಆಗ ಇಸ್ರಾಯೇಲಿನ ಅರಸನಾದ ಯೋವಾಷನು ಯೆಹೂದದ ಅರಸನಾಗಿರುವ ಅಮಚ್ಯನಿಗೆ, “ಲೆಬನೋನಿನಲ್ಲಿದ್ದ ಮುಳ್ಳುಗಿಡವು ಲೆಬನೋನಿನಲ್ಲಿರುವ ದೇವದಾರು ಮರಕ್ಕೆ, ‘ನನ್ನ ಮಗನಿಗೆ ಹೆಂಡತಿಯಾಗಿರಲು ನೀನು ನಿನ್ನ ಮಗಳನ್ನು ಕೊಡು,’ ಎಂದು ಹೇಳಿ ಕಳುಹಿಸಿತು. ಆದರೆ ಲೆಬನೋನಿನಲ್ಲಿದ್ದ ಅಡವಿಯ ಮೃಗವು ಹಾದು ಹೋಗುತ್ತಿರುವಾಗ, ಆ ಮುಳ್ಳುಗಿಡವನ್ನು ತುಳಿಯಿತು.

[10] ನೀನು ಎದೋಮ್ಯರನ್ನು ಸೋಲಿಸಿದ್ದರಿಂದ ಗರ್ವಪಡುತ್ತಿರುವೆ, ನಿನ್ನ ಜಯದಲ್ಲಿ ಘನಪಡುತ್ತಾ, ಮನೆಯಲ್ಲಿ ಸುಮ್ಮನೆ ಕೂತಿರು. ನೀನೂ, ನಿನ್ನ ಸಂಗಡ ಯೆಹೂದವೂ ಬಿದ್ದುಹೋಗುವಂತೆ ನಿನ್ನ ಕೇಡಿಗೆ ನೀನೇ ಕೈ ಹಾಕುವುದೇಕೆ?” ಎಂದು ಹೇಳಿ ಕಳುಹಿಸಿದನು.

[11] ಆದರೆ ಅಮಚ್ಯನು ಕೇಳದೆ ಹೋದನು. ಆದ್ದರಿಂದ ಇಸ್ರಾಯೇಲಿನ ಅರಸನಾದ ಯೋವಾಷನು ಯುದ್ಧಕ್ಕೆ ಹೊರಟನು. ಅವನೂ ಯೆಹೂದದ ಅರಸನಾದ ಅಮಚ್ಯನೂ ಯೆಹೂದಕ್ಕೆ ಸೇರಿದ ಬೇತ್ ಷೆಮೆಷ್ ಊರಿನ ಬಳಿಯಲ್ಲಿ ಒಬ್ಬರನ್ನೊಬ್ಬರು ಎದುರಿಸಿದರು.

[12] ಯೆಹೂದದವರು ಇಸ್ರಾಯೇಲರ ಮುಂದೆ ಸೋತುಹೋದದ್ದರಿಂದ ಅವರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಓಡಿಹೋದರು.

[13] ಆಗ ಇಸ್ರಾಯೇಲಿನ ಅರಸನಾದ ಯೋವಾಷನು ಅಹಜ್ಯನ ಮೊಮ್ಮಗನೂ ಯೆಹೋವಾಷನ ಮಗನೂ ಯೆಹೂದದ ಅರಸನೂ ಆದ ಅಮಚ್ಯನನ್ನು ಬೇತ್ ಷೆಮೆಷ್ ಬಳಿಯಲ್ಲಿ ವಶಪಡಿಸಿಕೊಂಡನು. ಅನಂತರ ಅವನನ್ನು ಯೆರೂಸಲೇಮಿಗೆ ತೆಗೆದುಕೊಂಡು, ಎಫ್ರಾಯೀಮಿನ ಬಾಗಿಲು ಮೊದಲುಗೊಂಡು ಮೂಲೆಯ ಬಾಗಿಲವರೆಗೂ, ಆರುನೂರು ಅಡಿ ಉದ್ದದ ಯೆರೂಸಲೇಮಿನ ಗೋಡೆಯನ್ನು ಕೆಡವಿಬಿಟ್ಟನು.

[14] ಯೆಹೋವ ದೇವರ ಆಲಯದಲ್ಲಿ, ಅರಮನೆಯ ಬೊಕ್ಕಸಗಳಲ್ಲಿ ಸಿಕ್ಕಿದ ಸಕಲ ಬೆಳ್ಳಿಬಂಗಾರವನ್ನೂ ಎಲ್ಲಾ ಸಲಕರಣೆಗಳನ್ನೂ ಯುದ್ಧದಲ್ಲಿ ಬಂಧಿತರಾದವರನ್ನೂ ತೆಗೆದುಕೊಂಡು ಸಮಾರ್ಯಕ್ಕೆ ಹಿಂದಿರುಗಿದನು.

[15] ಯೋವಾಷನು ಮಾಡಿದ ಇತರ ಕ್ರಿಯೆಗಳೂ, ಅವನ ಪರಾಕ್ರಮವೂ, ಅವನು ಯೆಹೂದದ ಅರಸನಾದ ಅಮಚ್ಯನ ವಿರುದ್ಧ ಯುದ್ಧ ಮಾಡಿದ್ದೂ, ಇಸ್ರಾಯೇಲಿನ ಅರಸುಗಳ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.

[16] ಯೋವಾಷನು ಮೃತನಾಗಿ ತನ್ನ ಪಿತೃಗಳ ಸಂಗಡ ಸೇರಿದನು. ಅವನನ್ನು ಸಮಾರ್ಯದಲ್ಲಿ ಇಸ್ರಾಯೇಲಿನ ಅರಸುಗಳ ಬಳಿಯಲ್ಲಿ ಸಮಾಧಿಮಾಡಿದರು. ಅವನ ಮಗ ಯಾರೊಬ್ಬಾಮನು ಅವನ ಬದಲಿಗೆ ಅರಸನಾದನು.

[17] ಇಸ್ರಾಯೇಲಿನ ಅರಸನಾದ ಯೆಹೋವಾಹಾಜನ ಮಗನಾದ ಯೆಹೋವಾಷನ ಮರಣದ ತರುವಾಯ, ಯೆಹೂದದ ಅರಸನಾದ ಯೋವಾಷನ ಮಗನಾಗಿರುವ ಅಮಚ್ಯನು ಹದಿನೈದು ವರ್ಷ ಬದುಕಿದನು.

[18] ಅಮಚ್ಯನ ಆಳ್ವಿಕೆಯ ಇತರ ಕ್ರಿಯೆಗಳನ್ನು ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.

[19] ಯೆರೂಸಲೇಮಿನವರು ಅಮಚ್ಯನ ವಿರೋಧವಾಗಿ ಒಳಸಂಚು ಮಾಡಿದ್ದರಿಂದ, ಅವನು ಲಾಕೀಷಿಗೆ ಓಡಿಹೋದನು. ಆದರೆ ಅವರು ಅವನ ಹಿಂದೆ ಲಾಕೀಷಿಗೆ ಜನರನ್ನು ಕಳುಹಿಸಿ, ಅಲ್ಲಿ ಅವನನ್ನು ಕೊಂದುಹಾಕಿದರು.

[20] ಅವರು ಅವನ ಶವವನ್ನು ಕುದುರೆಗಳ ಮೇಲೆ ತೆಗೆದುಕೊಂಡು ಬಂದು, ದಾವೀದನ ಪಟ್ಟಣವಾದ ಯೆರೂಸಲೇಮಿನಲ್ಲಿ ಅವನ ಪಿತೃಗಳ ಬಳಿಯಲ್ಲಿ ಸಮಾಧಿಮಾಡಿದರು.

[21] ಆಗ ಯೆಹೂದದ ಎಲ್ಲಾ ಜನರು ಹದಿನಾರು ವರ್ಷದವನಾದ ಅಜರ್ಯನನ್ನು ತೆಗೆದುಕೊಂಡು, ಅವನನ್ನು ಅವನ ತಂದೆಯಾದ ಅಮಚ್ಯನಿಗೆ ಬದಲಾಗಿ ಅರಸನಾಗಿ ಮಾಡಿದರು.

[22] ಅಮಚ್ಯನು ಮೃತನಾಗಿ ತನ್ನ ಪಿತೃಗಳ ಸಂಗಡ ಸೇರಿದ ತರುವಾಯ, ಅಜರ್ಯನು ಏಲತನ್ನು ಪುನಃ ಕಟ್ಟಿಸಿ, ಅದನ್ನು ಯೆಹೂದಕ್ಕೆ ತಿರುಗಿ ಸೇರಿಸಿಕೊಂಡನು.

[23] ಯೆಹೂದದ ಅರಸನಾದ ಯೋವಾಷನ ಮಗನಾದ ಅಮಚ್ಯನ ಆಳ್ವಿಕೆಯ ಹದಿನೈದನೆಯ ವರ್ಷದಲ್ಲಿ ಇಸ್ರಾಯೇಲಿನ ಅರಸನಾದ ಯೋವಾಷನ ಮಗನಾದ ಯಾರೊಬ್ಬಾಮನು ಸಮಾರ್ಯದಲ್ಲಿ ಆಳಲು ಆರಂಭಿಸಿ, ನಾಲ್ವತ್ತೊಂದು ವರ್ಷ ಆಳಿದನು.

[24] ಆದರೆ ಅವನು ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಪಾಪಗಳನ್ನೆಲ್ಲಾ ಅವನು ತೊರೆದುಬಿಡಲಿಲ್ಲ.

[25] ಇದಲ್ಲದೆ ಇಸ್ರಾಯೇಲಿನ ದೇವರಾದ ಯೆಹೋವ ದೇವರು ಗತ್‌ಹೇಫೆರಿನ ಪ್ರವಾದಿಯಾದ ಅಮಿತ್ತೈಯನ ಮಗ ಯೋನನೆಂಬ ತನ್ನ ಸೇವಕನ ಮುಖಾಂತರ ಹೇಳಿದ ವಾಕ್ಯದಂತೆ ಅವನು ಹಮಾತಿನ ಪ್ರವೇಶ ಮೊದಲುಗೊಂಡು ಅರಾಬಾ ತಗ್ಗಿನ ಸಮುದ್ರದವರೆಗೂ ಇರುವ ಇಸ್ರಾಯೇಲಿನ ಮೇರೆಯನ್ನು ತಿರುಗಿ ತೆಗೆದುಕೊಂಡನು.

[26] ಇಸ್ರಾಯೇಲಿನಲ್ಲಿ ಪ್ರತಿಯೊಬ್ಬರೂ ಸ್ವತಂತ್ರನಾಗಿರಲಿ, ಗುಲಾಮನಾಗಿರಲಿ, ಎಲ್ಲರು ಎಷ್ಟು ಕಷ್ಟದಲ್ಲಿದ್ದಾರೆಂಬುದನ್ನು ಯೆಹೋವ ದೇವರು ನೋಡಿದರು. ಅವರಿಗೆ ಸಹಾಯ ಮಾಡುವವರು ಯಾರೂ ಇರಲಿಲ್ಲ.

[27] ಇಸ್ರಾಯೇಲಿನ ನಾಮವನ್ನು ಆಕಾಶದ ಕೆಳಗಿನಿಂದ ಅಳಿಸಿಬಿಡುವನೆಂದು ಯೆಹೋವ ದೇವರು ಹೇಳದೇ ಇದ್ದುದರಿಂದ, ಯೋವಾಷನ ಮಗ ಯಾರೊಬ್ಬಾಮನ ಕೈಯಿಂದ ಅವರನ್ನು ರಕ್ಷಿಸಿದರು.

[28] ಯಾರೊಬ್ಬಾಮನ ಇತರ ಕ್ರಿಯೆಗಳೂ, ಅವನು ಮಾಡಿದ ಸಮಸ್ತವೂ, ಅವನ ಪರಾಕ್ರಮವೂ, ಅವನ ಯುದ್ಧಗಳೂ, ಯೆಹೂದಕ್ಕೆ ಸೇರಿದ ದಮಸ್ಕವನ್ನೂ, ಹಮಾತನ್ನೂ ಇಸ್ರಾಯೇಲಿಗೋಸ್ಕರ ಹಿಂದಿರುಗಿ ತೆಗೆದುಕೊಂಡದ್ದೂ, ಇಸ್ರಾಯೇಲಿನ ಅರಸುಗಳ ದಿನಚರ್ಯೆಗಳ ಪುಸ್ತಕದಲ್ಲಿ ಬರೆದಿರುತ್ತವೆ.

[29] ಯಾರೊಬ್ಬಾಮನು ಮೃತನಾಗಿ ಇಸ್ರಾಯೇಲಿನ ಅರಸುಗಳಾದ ತನ್ನ ಪಿತೃಗಳ ಜೊತೆ ಸೇರಿದನು. ಅವನ ಮಗ ಜೆಕರ್ಯನು ಅವನಿಗೆ ಬದಲಾಗಿ ಅರಸನಾದನು.

2 ಅರಸುಗಳು — Chapters