Skip to content
Opens in a new window
Listen to this chapter • 5:15

[1] ಅಹಾಬನ ಮರಣದ ನಂತರ ಮೋವಾಬ್ಯರು ಇಸ್ರಾಯೇಲರ ವಿರುದ್ಧ ದಂಗೆ ಎದ್ದರು.

[2] ಅಹಜ್ಯನು ಸಮಾರ್ಯದಲ್ಲಿದ್ದ ತನ್ನ ಮೇಲುಪ್ಪರಿಗೆಯ ಕಿಟಕಿಯೊಂದರಿಂದ ಬಿದ್ದು ಅಸ್ವಸ್ಥನಾಗಿದ್ದನು. ಅವನು ತನ್ನ ಸೇವಕರನ್ನು ಕರೆದು, “ಎಕ್ರೋನಿನ ದೇವರಾದ ‘ಬಾಳ್ ಜೆಬೂಬನ’ ಸನ್ನಿಧಿಗೆ ಹೋಗಿ, ನಾನು ಈ ಅಸ್ವಸ್ಥತೆಯಿಂದ ಗುಣವಾಗುವೆನೋ ಇಲ್ಲವೋ? ಎಂದು ವಿಚಾರಿಸಿ ಬನ್ನಿ,” ಎಂದು ಹೇಳಿ ಕಳುಹಿಸಿದನು.

[3] ಆದರೆ ಯೆಹೋವ ದೇವರ ದೂತನು ತಿಷ್ಬೀಯನಾದ ಎಲೀಯನಿಗೆ, “ನೀನೆದ್ದು ಸಮಾರ್ಯದ ಅರಸನ ಸೇವಕರಿಗೆ ಎದುರಾಗಿ ಹೋಗಿ ಅವರಿಗೆ, ‘ಇಸ್ರಾಯೇಲಿನಲ್ಲಿ ದೇವರು ಇಲ್ಲವೆ? ನೀವು ಎಕ್ರೋನಿನ ದೇವರಾದ ಬಾಳ್ ಜೆಬೂಬನನ್ನು ವಿಚಾರಿಸಲು ಹೋಗುತ್ತಿರುವುದೇಕೆ?

[4] ಇದರ ನಿಮಿತ್ತ ನೀನು ಏರಿದ ಮಂಚದಿಂದ ಇಳಿಯದೆ, ನಿಶ್ಚಯವಾಗಿ ಸಾಯುವೆ,’ ಎಂದು ಯೆಹೋವ ದೇವರು ಹೇಳುತ್ತಾರೆ ಎಂದು ಹೇಳು,” ಎಂದರು. ಆಗ ಎಲೀಯನು ಹೊರಟುಹೋಗಿ ಅದರಂತೆ ಹೇಳಿದನು.

[5] ಸೇವಕರು ಅರಸನ ಬಳಿಗೆ ಹಿಂದಿರುಗಿ ಬಂದಾಗ, ಅವನು ಅವರಿಗೆ, “ನೀವು ಹಿಂದಿರುಗಿ ಬಂದದ್ದೇಕೆ?” ಎಂದನು.

[6] ಅವರು ಅರಸನಿಗೆ, “ಒಬ್ಬ ಮನುಷ್ಯನು ನಮಗೆ ಎದುರಾಗಿ ಬಂದು, ‘ನೀವು ನಿಮ್ಮನ್ನು ಕಳುಹಿಸಿದ ಅರಸನ ಬಳಿಗೆ ಹಿಂದಿರುಗಿ ಹೋಗಿ, ಯೆಹೋವ ದೇವರು ಹೇಳುವುದು ಏನೆಂದರೆ: ಇಸ್ರಾಯೇಲಿನಲ್ಲಿ ದೇವರು ಇಲ್ಲವೆ? ನೀನು ಎಕ್ರೋನಿನ ದೇವರಾದ ಬಾಳ್ ಜೆಬೂಬನನ್ನು ವಿಚಾರಿಸಲು ಜನರನ್ನು ಕಳುಹಿಸಿರುತ್ತೀ? ಇದರ ನಿಮಿತ್ತ, ನೀನು ಏರಿದ ಮಂಚದಿಂದ ಇಳಿಯದೆ, ನಿಶ್ಚಯವಾಗಿ ಸಾಯುವೆ,’ ಎಂಬುದಾಗಿ ಅವನಿಗೆ ಹೇಳಿರಿ, ಎಂದು ತಿಳಿಸಿದನು,” ಎಂದರು.

[7] ಅರಸನು ಅವರಿಗೆ, “ನಿಮಗೆದುರಾಗಿ ಬಂದು ಈ ಮಾತುಗಳನ್ನು ನಿಮಗೆ ಹೇಳಿದ ಆ ಮನುಷ್ಯನು ಹೇಗಿದ್ದನು?” ಎಂದು ಕೇಳಿದನು.

[8] ಅದಕ್ಕವರು, “ಅವನು ಕಂಬಳಿಯನ್ನು ಹೊದ್ದುಕೊಂಡಿದ್ದನು; ಅವನ ಸೊಂಟಕ್ಕೆ ಸುತ್ತಲೂ ತೊಗಲಿನ ನಡುಕಟ್ಟು ಇತ್ತು,” ಎಂದರು. ಆಗ ಅರಸನು, “ಅವನು ತಿಷ್ಬೀಯನಾದ ಎಲೀಯನೇ ಆಗಿರಬೇಕು,” ಎಂದು ಹೇಳಿದನು.

[9] ಆಗ ಅರಸನು ಒಬ್ಬ ಪ್ರಧಾನನನ್ನು, ಅವನ ಐವತ್ತು ಮಂದಿ ಸಿಪಾಯಿಗಳೊಡನೆ ಎಲೀಯನ ಬಳಿಗೆ ಕಳುಹಿಸಿದನು. ಪ್ರಧಾನನು ಅವನ ಬಳಿಗೆ ಹೋದಾಗ, ಇಗೋ, ಎಲೀಯನು ಬೆಟ್ಟದ ತುದಿಯಲ್ಲಿ ಕುಳಿತಿದ್ದನು. ಆಗ ಅವನು ಎಲೀಯನಿಗೆ, “ದೇವರ ಮನುಷ್ಯನೇ, ‘ಇಳಿದು ಬಾ,’ ಎಂದು ಅರಸನು ಹೇಳುತ್ತಾನೆ,” ಎಂದನು.

[10] ಅದಕ್ಕೆ ಎಲೀಯನು ಪ್ರಧಾನನಿಗೆ ಉತ್ತರವಾಗಿ, “ನಾನು ದೇವರ ಮನುಷ್ಯನಾಗಿದ್ದರೆ, ಬೆಂಕಿಯು ಆಕಾಶದಿಂದ ಇಳಿದು ನಿನ್ನನ್ನೂ ನಿನ್ನ ಐವತ್ತು ಮಂದಿಯನ್ನೂ ದಹಿಸಿಬಿಡಲಿ,” ಎಂದನು. ಆಗ ಬೆಂಕಿಯು ಆಕಾಶದಿಂದ ಇಳಿದು ಅವನನ್ನೂ ಅವನ ಐವತ್ತು ಮಂದಿಯನ್ನೂ ದಹಿಸಿಬಿಟ್ಟಿತು.

[11] ತಿರುಗಿ ಅರಸನು ಎಲೀಯನ ಬಳಿಗೆ ಐವತ್ತು ಮಂದಿಯ ಪ್ರಧಾನನನ್ನೂ ಅವನ ಐವತ್ತು ಮಂದಿಯನ್ನೂ ಕಳುಹಿಸಿದನು. ಅವನು ಬಂದು ಇವನಿಗೆ, “ದೇವರ ಮನುಷ್ಯನೇ, ‘ಬೇಗನೆ ಇಳಿದು ಬಾ,’ ಎಂದು ಅರಸನು ಹೇಳುತ್ತಾನೆ,” ಎಂದನು.

[12] ಎಲೀಯನು ಅವರಿಗೆ ಉತ್ತರವಾಗಿ, “ನಾನು ದೇವರ ಮನುಷ್ಯನಾಗಿದ್ದರೆ, ಬೆಂಕಿಯು ಆಕಾಶದಿಂದ ಇಳಿದು ನಿನ್ನನ್ನೂ ನಿನ್ನ ಐವತ್ತು ಮಂದಿಯನ್ನೂ ದಹಿಸಿಬಿಡಲಿ,” ಎಂದನು. ಆಗ ದೇವರ ಬೆಂಕಿಯು ಆಕಾಶದಿಂದ ಇಳಿದು ಅವನನ್ನೂ ಅವನ ಐವತ್ತು ಮಂದಿಯನ್ನೂ ಸುಟ್ಟುಬಿಟ್ಟಿತು.

[13] ತಿರುಗಿ ಅರಸನು ಐವತ್ತು ಮಂದಿಯ ಪ್ರಧಾನನಾದ ಮೂರನೆಯವನನ್ನೂ, ಅವನ ಐವತ್ತು ಮಂದಿಯನ್ನೂ ಕಳುಹಿಸಿದನು. ಈ ಐವತ್ತು ಮಂದಿಗೆ ಪ್ರಧಾನನಾದ ಮೂರನೆಯವನು ಬಂದು ಎಲೀಯನ ಮುಂದೆ ತನ್ನ ಮೊಣಕಾಲೂರಿಕೊಂಡು ಅವನಿಗೆ, “ದೇವರ ಮನುಷ್ಯನೇ, ನೀನು ದಯಮಾಡು, ನನ್ನ ಪ್ರಾಣವೂ, ನಿನ್ನ ಸೇವಕರಾದ ಈ ಐವತ್ತು ಮಂದಿಯ ಪ್ರಾಣಗಳೂ ನಿನ್ನ ಸಮ್ಮುಖದಲ್ಲಿ ಮೌಲ್ಯವುಳ್ಳದ್ದಾಗಿರಲಿ.

[14] ಇಗೋ, ಬೆಂಕಿಯು ಆಕಾಶದಿಂದ ಇಳಿದು ಮೊದಲಿನ ಇಬ್ಬರು ಪ್ರಧಾನರನ್ನೂ, ಅವರ ಐವತ್ತು ಮಂದಿಯನ್ನೂ ದಹಿಸಿಬಿಟ್ಟಿತು. ಆದರೆ ಈಗ ನನ್ನ ಪ್ರಾಣವು ನಿನ್ನ ಸಮ್ಮುಖದಲ್ಲಿ ಮೌಲ್ಯವುಳ್ಳದ್ದಾಗಿರಲಿ,” ಎಂದು ಹೇಳಿ ಅವನನ್ನು ಬೇಡಿಕೊಂಡನು.

[15] ಆಗ ಯೆಹೋವ ದೇವರ ದೂತನು ಎಲೀಯನಿಗೆ, “ಅವನ ಸಂಗಡ ಇಳಿದು ಹೋಗು, ಅವನಿಗೆ ಭಯಪಡಬೇಡ,” ಎಂದನು. ಆದ್ದರಿಂದ ಎಲೀಯನು ಎದ್ದು ಅವನ ಸಂಗಡ ಅರಸನ ಬಳಿಗೆ ಇಳಿದು ಹೋದನು.

[16] ಅರಸನಿಗೆ, “ಯೆಹೋವ ದೇವರ ವಾಕ್ಯವನ್ನು ವಿಚಾರಿಸಲು ಇಸ್ರಾಯೇಲಿನಲ್ಲಿ ದೇವರಿಲ್ಲವೆಂಬ ಹಾಗೆ ನೀನು ಎಕ್ರೋನಿನ ದೇವರಾದ ಬಾಳ್ ಜೆಬೂಬನ್ನು ವಿಚಾರಿಸಲು ದೂತರನ್ನು ಕಳುಹಿಸಿದ ಕಾರಣ, ‘ನೀನು ಏರಿದ ಮಂಚದಿಂದ ಇಳಿಯದೆ ನಿಶ್ಚಯವಾಗಿ ಸಾಯುವೆ,’ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದನು.

[17] ಹಾಗೆಯೇ ಅವನು ಎಲೀಯನು ಹೇಳಿದ ಯೆಹೋವ ದೇವರ ವಾಕ್ಯದ ಪ್ರಕಾರವೇ ಸತ್ತುಹೋದನು. ಅಹಜ್ಯನಿಗೆ ಮಗನಿಲ್ಲದ್ದರಿಂದ ಯೆಹೂದದ ಅರಸನಾದ ಯೆಹೋಷಾಫಾಟನ ಮಗ ಯೆಹೋರಾಮನ ಎರಡನೆಯ ವರ್ಷದಲ್ಲಿ ಯೋರಾಮನು ಅವನಿಗೆ ಬದಲಾಗಿ ಅರಸನಾದನು.

[18] ಅಹಜ್ಯನು ಮಾಡಿದ ಇತರ ಕ್ರಿಯೆಗಳು ಇಸ್ರಾಯೇಲಿನ ಅರಸುಗಳ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.

2 ಅರಸುಗಳು — Chapters