Skip to content
Opens in a new window
Listen to this chapter • 8:18

[1] ನೀವು ಬರೆದ ಸಂಗತಿಗಳನ್ನು ಕುರಿತಾಗಿ ಹೇಳುವುದೇನೆಂದರೆ, “ಸ್ತ್ರೀಸಂಪರ್ಕವಿಲ್ಲದೆ ಇರುವುದು ಮನುಷ್ಯನಿಗೆ ಒಳ್ಳೆಯದು.”

[2] ಆದರೆ ಲೈಂಗಿಕ ಅನೈತಿಕತೆ ಹೆಚ್ಚಾಗಿರುವುದರಿಂದ, ಪ್ರತಿಯೊಬ್ಬನಿಗೆ ಸ್ವಂತ ಹೆಂಡತಿ ಇರಲಿ, ಪ್ರತಿಯೊಬ್ಬಳಿಗೆ ಸ್ವಂತ ಗಂಡನಿರಲಿ.

[3] ಗಂಡನು ಹೆಂಡತಿಗೆ, ಹೆಂಡತಿಯು ಗಂಡನಿಗೆ ದಾಂಪತ್ಯ ಧರ್ಮ ಪೂರೈಸಲಿ.

[4] ಹೆಂಡತಿಯ ಸ್ವಂತ ದೇಹದ ಮೇಲೆ ಆಕೆಗೆ ಅಧಿಕಾರವಿಲ್ಲ, ಅದು ಗಂಡನಿಗಿದೆ. ಹಾಗೆಯೇ, ಗಂಡನ ಸ್ವಂತ ದೇಹದ ಮೇಲೆ ಅವನಿಗೆ ಅಧಿಕಾರವಿಲ್ಲ, ಅದು ಅವನ ಹೆಂಡತಿಗಿದೆ.

[5] ಗಂಡ ಹೆಂಡತಿ ಪರಸ್ಪರ ಸಮ್ಮತಿಯಿಂದ ಸ್ವಲ್ಪಕಾಲ ಪ್ರಾರ್ಥನೆಗಾಗಿ ಅಗಲಿರಬಹುದಷ್ಟೇ. ಇಲ್ಲದಿದ್ದರೆ, ಸೈತಾನನು ನಿಮ್ಮ ಸಂಯಮ ಇಲ್ಲದಿರುವುದನ್ನು ನೋಡಿ ನಿಮ್ಮನ್ನು ಶೋಧಿಸದಂತೆ ಒಂದುಗೂಡಬೇಕು.

[6] ಹೀಗೆ ನಾನು ಹೇಳುವುದು ಸಲಹೆಯೇ ಹೊರತು ಆಜ್ಞೆಯಲ್ಲ.

[7] ನಾನಿರುವಂತೆಯೇ ಎಲ್ಲಾ ಮನುಷ್ಯರು ಇರಬೇಕೆಂಬುದು ನನ್ನ ಇಷ್ಟ. ಆದರೆ ಒಬ್ಬರು ಒಂದು ವಿಧವಾಗಿಯೂ ಮತ್ತೊಬ್ಬರು ಇನ್ನೊಂದು ವಿಧವಾಗಿಯೂ ಸ್ವಂತ ವರವನ್ನು ದೇವರಿಂದ ಪಡೆದುಕೊಂಡಿರುತ್ತಾರೆ.

[8] ಮದುವೆಯಾಗದವರಿಗೂ ವಿಧವೆಯರಿಗೂ ನಾನು ಹೇಳುವುದೇನೆಂದರೆ: ನಾನಿರುವಂತೆಯೇ ಮದುವೆಯಾಗದೇ ಇರುವುದು ಅವರಿಗೆ ಒಳ್ಳೆಯದು.

[9] ಅವರಿಗೆ ಸ್ವಯಂನಿಯಂತ್ರಣ ಇಲ್ಲದಿದ್ದರೆ, ಮದುವೆಮಾಡಿಕೊಳ್ಳಲಿ, ಕಾಮದಾಶೆ ಪಡುವುದಕ್ಕಿಂತ ಮದುವೆ ಮಾಡಿಕೊಳ್ಳುವುದು ಉತ್ತಮ.

[10] ಮದುವೆ ಮಾಡಿಕೊಂಡಿರುವವರಿಗೆ ನನ್ನ ಅಪ್ಪಣೆ ಅಲ್ಲ, ನಿಜವಾಗಿ ಕರ್ತದೇವರ ಅಪ್ಪಣೆಯಾಗಿದೆ: ಏನೆಂದರೆ, ಹೆಂಡತಿಯು ಗಂಡನನ್ನು ಬಿಟ್ಟು ಅಗಲಬಾರದು.

[11] ಒಂದು ವೇಳೆ ಅಗಲಿದರೆ ಆಕೆಯು ಮದುವೆಯಿಲ್ಲದೆ ಇರಬೇಕು. ಇಲ್ಲವೆ ಗಂಡನ ಸಂಗಡ ಸಂಧಾನವಾಗಬೇಕು ಮತ್ತು ಗಂಡನು ಹೆಂಡತಿಯನ್ನು ಬಿಟ್ಟುಬಿಡಬಾರದು.

[12] ಉಳಿದವರಿಗೆ ಕರ್ತ ದೇವರಿಂದ ಮಾತು ಇಲ್ಲವಾದರೂ ನಾನು ಹೇಳುವುದೇನೆಂದರೆ: ಒಬ್ಬ ಸಹೋದರನಿಗೆ ಕ್ರೈಸ್ತ ವಿಶ್ವಾಸಿಯಲ್ಲದ ಹೆಂಡತಿಯಿರಲಾಗಿ, ಆಕೆ ಅವನೊಂದಿಗೆ ಬಾಳುವುದಕ್ಕೆ ಸಮ್ಮತಿಸಿದರೆ, ಅವನು ಆಕೆಯನ್ನು ಬಿಡದಿರಲಿ.

[13] ಒಬ್ಬ ಸ್ತ್ರೀಗೆ ಅವಿಶ್ವಾಸಿಯಾದ ಗಂಡನಿರಲಾಗಿ ಅವನು ಆಕೆಯೊಂದಿಗೆ ಬಾಳುವುದಕ್ಕೆ ಸಮ್ಮತಿಸಿದರೆ, ಆಕೆಯು ಅವನನ್ನು ಬಿಡದಿರಲಿ.

[14] ಏಕೆಂದರೆ, ಅವಿಶ್ವಾಸಿಯಾದ ಗಂಡನು ವಿಶ್ವಾಸಿಯಾದ ತನ್ನ ಹೆಂಡತಿಯಿಂದ ಮತ್ತು ಅವಿಶ್ವಾಸಿಯಾದ ಹೆಂಡತಿಯು ವಿಶ್ವಾಸಿಯಾದ ತನ್ನ ಗಂಡನಿಂದ ದೇವಜನರೊಂದಿಗೆ ಸಂಬಂಧವುಳ್ಳವರಾಗಿದ್ದಾರೆ. ಹಾಗಲ್ಲದಿದ್ದರೆ, ನಿಮ್ಮ ಮಕ್ಕಳು ಅಪವಿತ್ರರಾಗುತ್ತಿದ್ದರು. ಈಗಲಾದರೋ ಅವರು ದೇವರಿಗಾಗಿ ಪವಿತ್ರರಾಗಿದ್ದಾರೆ.

[15] ಆದರೆ ಅವಿಶ್ವಾಸಿಯಾದವರು ಅಗಲಬೇಕೆಂದಿದ್ದರೆ ಅಗಲಿ ಹೋಗಲಿ. ಇಂಥಾ ವಿಷಯಗಳಲ್ಲಿ ವಿಶ್ವಾಸಿಯಾದ ಸಹೋದರನಾಗಲೀ, ಸಹೋದರಿಯಾಗಲೀ ಬದ್ಧರಲ್ಲ. ಸಮಾಧಾನದಲ್ಲಿ ಬಾಳುವುದಕ್ಕೆ ದೇವರು ನಮ್ಮನ್ನು ಕರೆದಿದ್ದಾರೆ.

[16] ಸ್ತ್ರೀಯೇ, ನಿನ್ನ ಗಂಡನನ್ನು ರಕ್ಷಿಸುವಿಯೋ ಏನೋ ನಿನಗೇನು ಗೊತ್ತು? ಪುರುಷನೇ, ನಿನ್ನ ಹೆಂಡತಿಯನ್ನು ರಕ್ಷಿಸುವೆಯೋ ಏನೋ ನಿನಗೇನು ಗೊತ್ತು?

[17] ಆದರೂ ಕರ್ತದೇವರು ಪ್ರತಿಯೊಬ್ಬನಿಗೆ ನೇಮಿಸಿದಂತೆಯೂ ದೇವರು ಪ್ರತಿಯೊಬ್ಬನನ್ನು ಕರೆದಂತೆಯೂ ನಡೆದುಕೊಳ್ಳಲಿ. ಎಲ್ಲಾ ಸಭೆಗಳಲ್ಲಿಯೂ ಇರಬೇಕೆಂದು ನಾನು ಕೊಡುವ ನಿಯಮವು ಇದೇ.

[18] ಸುನ್ನತಿ ಮಾಡಿಸಿಕೊಂಡವನು ದೇವರ ಕರೆಹೊಂದಿದ್ದರೆ, ಅವನು ಸುನ್ನತಿಯಿಲ್ಲದವನಂತೆ ಇರಬಾರದು. ಸುನ್ನತಿ ಮಾಡಿಸಿಕೊಳ್ಳದವನು ದೇವರ ಕರೆಹೊಂದಿದ್ದರೆ, ಅವನು ಸುನ್ನತಿ ಮಾಡಿಸಿಕೊಳ್ಳಬೇಕಾಗಿಲ್ಲ.

[19] ಸುನ್ನತಿಯಿದ್ದರೂ ಪ್ರಯೋಜನವಿಲ್ಲ, ಸುನ್ನತಿಯಿಲ್ಲದಿದ್ದರೂ ಪ್ರಯೋಜನವಿಲ್ಲ. ದೇವರ ಆಜ್ಞೆಗಳನ್ನು ಕೈಗೊಳ್ಳುವುದೇ ಪ್ರಯೋಜನಕರ.

[20] ಪ್ರತಿಯೊಬ್ಬನು ದೇವರು ಕರೆದಾಗ, ಯಾವ ಸ್ಥಿತಿಯಲ್ಲಿದ್ದನೋ ಆ ಸ್ಥಿತಿಯಲ್ಲಿಯೇ ಇರಲಿ.

[21] ದೇವರು ಕರೆದಾಗ ನೀನು ಮತ್ತೊಬ್ಬನ ದಾಸನಾಗಿದ್ದೀಯೋ? ಅದಕ್ಕೆ ಚಿಂತೆ ಮಾಡಬೇಡ. ಆದರೆ ಬಿಡುಗಡೆಯಾಗುವುದಕ್ಕೆ ನೀನು ಶಕ್ತನಾದರೆ ಅದನ್ನೇ ಮಾಡು.

[22] ದೇವರು ಕರೆದಾಗ ಒಬ್ಬನು ದಾಸನಾಗಿದ್ದರೂ, ಅವನು ಕರ್ತ ದೇವರಲ್ಲಿ ಸ್ವತಂತ್ರನು. ಅದೇ ಪ್ರಕಾರ, ಒಬ್ಬನು ಸ್ವತಂತ್ರನಾಗಿದ್ದಾಗ ಕರ್ತದೇವರ ಕರೆಹೊಂದಿದ್ದರೆ, ಅವನು ಕ್ರಿಸ್ತನಿಗೆ ದಾಸನು.

[23] ನಿಮ್ಮನ್ನು ಕ್ರಯಕ್ಕೆ ಕೊಳ್ಳಲಾಗಿದೆ. ಆದ್ದರಿಂದ ಮನುಷ್ಯರಿಗೆ ಗುಲಾಮರಾಗಬೇಡಿರಿ.

[24] ಪ್ರಿಯರೇ, ದೇವರು ಕರೆದಾಗ ಒಬ್ಬನು ಯಾವ ಸ್ಥಿತಿಯಲ್ಲಿ ಇದ್ದನೋ ಅದೇ ಸ್ಥಿತಿಯಲ್ಲಿ ದೇವರೊಂದಿಗೆ ನೆಲೆಸಿರಲಿ.

[25] ಕನ್ಯೆಯರನ್ನು ಕುರಿತು ಕರ್ತ ಯೇಸುವಿನಿಂದ ನನಗೆ ಯಾವ ಆಜ್ಞೆಯೂ ಇಲ್ಲ. ಆದರೂ ಕರ್ತ ಯೇಸುವಿನಿಂದ ಕರುಣೆಯನ್ನು ಪಡೆದು ನಂಬಿಗಸ್ತನಾಗಿರುವ ನಾನು ನನ್ನ ಅಭಿಪ್ರಾಯವನ್ನು ಕೊಡುತ್ತೇನೆ.

[26] ಇಂದಿನ ಕಷ್ಟಕಾಲದ ಪರಿಸ್ಥಿತಿಯಲ್ಲಿ ನೀವು ಇದ್ದ ಹಾಗೇ ಇರುವುದು ನಿಮಗೆ ಒಳ್ಳೆಯದೆಂದು ನಾನು ಭಾವಿಸುತ್ತೇನೆ.

[27] ನಿನಗೆ ಹೆಂಡತಿಯಿದ್ದರೆ? ವಿಚ್ಛೇದನಕ್ಕೆ ಯತ್ನಿಸಬೇಡ. ನೀನು ಹೆಂಡತಿಯಿಂದ ಬಿಡುಗಡೆಯಾಗಿದ್ದರೆ? ಹೆಂಡತಿಗಾಗಿ ಹುಡುಕಬೇಡ.

[28] ಒಂದು ವೇಳೆ ನೀನು ಮದುವೆ ಮಾಡಿಕೊಂಡರೆ, ಅದು ಪಾಪವಲ್ಲ. ಕನ್ಯೆಯು ಮದುವೆ ಮಾಡಿಕೊಂಡರೆ, ಅದು ಸಹ ಪಾಪವಲ್ಲ. ಆದರೆ ಮದುವೆ ಮಾಡಿಕೊಳ್ಳುವವರು ಈ ಜೀವನದಲ್ಲಿ ಅನೇಕ ತೊಂದರೆಗಳನ್ನು ಅನುಭವಿಸುವರು. ನಾನು ನಿಮ್ಮನ್ನು ಇದರಿಂದ ತಪ್ಪಿಸಬೇಕೆಂದು ಅಪೇಕ್ಷಿಸುತ್ತೇನೆ.

[29] ಪ್ರಿಯರೇ, ಸಮಯವು ಕೊಂಚವಾಗಿರುವುದರಿಂದ ಇನ್ನು ಮೇಲೆ, ಮದುವೆಯಾದವರು ಮದುವೆಯಾಗದವರಂತೆಯೂ

[30] ದುಃಖಪಡುವವರು ದುಃಖಪಡದವರಂತೆಯೂ ಆನಂದ ಪಡುವವರು ಆನಂದಪಡದವರಂತೆಯೂ ವಸ್ತುಗಳ್ನು ಕೊಂಡುಕೊಳ್ಳುವವರು ತಾವು ಕೊಂಡುಕೊಂಡದ್ದು ತಮ್ಮದಲ್ಲ ಎಂಬಂತೆಯೂ

[31] ಲೋಕದ ವಸ್ತುಗಳನ್ನು ಉಪಯೋಗಿಸುವವರು ಅದರಲ್ಲಿಯೇ ಮಗ್ನರಾಗದಿರಲಿ. ಏಕೆಂದರೆ ಈಗಿರುವ ಪ್ರಪಂಚ ಗತಿಸಿಹೋಗುತ್ತಿದೆ.

[32] ನೀವು ಚಿಂತೆ ಇಲ್ಲದೆ ಇರಬೇಕೆಂಬುದು ನನ್ನ ಇಷ್ಟ. ಮದುವೆ ಆಗದವನು ಕರ್ತ ಯೇಸುವನ್ನು ಹೇಗೆ ಮೆಚ್ಚಿಸಬೇಕೆಂದು ಕರ್ತ ಯೇಸುವಿನ ಕಾರ್ಯಗಳನ್ನು ಕುರಿತು ಚಿಂತಿಸುತ್ತಾನೆ.

[33] ಮದುವೆಯಾದವನು ತನ್ನ ಹೆಂಡತಿಯನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದ ಕಾರ್ಯಗಳನ್ನು ಕುರಿತು ಮಗ್ನನಾಗಿರುತ್ತಾನೆ.

[34] ಇದರಿಂದ ಅವನ ಆಸಕ್ತಿಗಳಲ್ಲಿ ಭಿನ್ನತೆಯಿರುತ್ತದೆ. ಮದುವೆಯಾಗದ ಮಹಿಳೆ ಅಥವಾ ಕನ್ಯೆ ದೇಹಾತ್ಮಗಳಲ್ಲಿ ಕರ್ತ ಯೇಸುವಿಗೆ ಸಮರ್ಪಿತರಾಗಿರುವ ಉದ್ದೇಶ ಹೊಂದಿದವರಾಗಿ, ಕರ್ತ ಯೇಸುವಿನ ಕಾರ್ಯಗಳಲ್ಲಿ ಆಸಕ್ತಳಾಗಿರುತ್ತಾರೆ. ಆದರೆ ಮದುವೆಯಾದವಳು, ತನ್ನ ಗಂಡನನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದ ಕಾರ್ಯಗಳನ್ನು ಕುರಿತು ಚಿಂತಿಸುತ್ತಾಳೆ.

[35] ನಾನು ನಿಮಗೆ ಬಂಧನ ಹಾಕಬೇಕೆಂದು ಇದನ್ನು ಹೇಳದೆ, ಗಮನ ಸೆಳೆಯದ ಭಕ್ತಿಯಿಂದ ಕರ್ತ ಯೇಸುವಿನ ಸೇವೆಯನ್ನು ಮಾಡುವವರಾಗಿ ನೀವು ಜೀವಿಸಬೇಕೆಂದು ನಿಮ್ಮ ಒಳ್ಳೆಯದಕ್ಕಾಗಿಯೇ ಹೇಳುತ್ತಿದ್ದೇನೆ.

[36] ಒಬ್ಬನು ತನ್ನ ಮಗಳಿಗೆ ಮದುವೆಯಿಲ್ಲದಿರುವುದು ಮರ್ಯಾದೆಯಿಲ್ಲವೆಂದು ಭಾವಿಸಿದರೆ, ಆಕೆಗೆ ಪ್ರಾಯ ಕಳೆದು ಹೋಗುತ್ತಿದ್ದರೆ, ಮದುವೆಯಾಗುವುದು ಅವಶ್ಯವೆಂದು ಅವನಿಗೆ ಕಂಡರೆ, ತನ್ನಿಷ್ಟದಂತೆ ಮಾಡಲಿ. ಇದರಿಂದ ಅವನು ಪಾಪಮಾಡುವುದಿಲ್ಲ, ಮದುವೆ ಮಾಡಿಕೊಡಲಿ.

[37] ಆದರೆ ಒಬ್ಬನು ದೃಢಚಿತ್ತನಾಗಿದ್ದು ಬಲವಂತವೇನೂ ಇಲ್ಲದೆ, ತನ್ನಿಷ್ಟವನ್ನು ನಡೆಸುವುದಕ್ಕೆ ಹಕ್ಕುಳ್ಳವನಾಗಿ ತನ್ನ ಮಗಳನ್ನು ಮದುವೆ ಮಾಡಿಕೊಡುವುದಿಲ್ಲವೆಂದು ತನ್ನೊಳಗೆ ನಿರ್ಣಯಿಸಿಕೊಂಡರೆ, ಅವನು ಹಾಗೆ ಮಾಡುವುದು ಒಳ್ಳೆಯದು.

[38] ಹಾಗಾದರೆ, ತನ್ನ ಮಗಳನ್ನು ಮದುವೆ ಮಾಡಿಕೊಡುವವನು ಒಳ್ಳೆಯದನ್ನು ಮಾಡುತ್ತಾನೆ. ಮದುವೆ ಮಾಡಿಕೊಡದೆ ಇರುವವನು ಉತ್ತಮವಾದುದನ್ನು ಮಾಡುತ್ತಾನೆ.

[39] ಹೆಂಡತಿಯು ತನ್ನ ಗಂಡನು ಜೀವದಿಂದಿರುವ ತನಕ ಅವನಿಗೆ ಬದ್ಧಳಾಗಿದ್ದಾಳೆ. ಗಂಡನು ಸತ್ತಿದ್ದರೆ, ಆಕೆಯು ತನಗೆ ಬೇಕಾದವನನ್ನು ಮದುವೆ ಮಾಡಿಕೊಳ್ಳುವುದಕ್ಕೆ ಸ್ವತಂತ್ರಳಾಗಿದ್ದಾಳೆ. ಆದರೆ ಆ ವ್ಯಕ್ತಿಯು ಕರ್ತ ದೇವರಲ್ಲಿ ವಿಶ್ವಾಸಿಯಾಗಿರಬೇಕು.

[40] ಆಕೆ ಮದುವೆ ಮಾಡಿಕೊಳ್ಳದೆ ಇರುವುದು ಬಹಳ ಸಂತೋಷಕರವಾದದ್ದೆಂದು ನನ್ನ ಅಭಿಪ್ರಾಯ. ನನಗೂ ದೇವರಾತ್ಮ ಇರುವುದಾಗಿ ಭಾವಿಸುತ್ತೇನೆ.

1 ಕೊರಿಂಥದವರಿಗೆ — Chapters