[1] ಪ್ರಿಯರೇ, ನೀವು ದೇವರಾತ್ಮರಿಗೆ ತಕ್ಕಂತೆ ಬಾಳುವವರಾಗಿ ನಾನು ನಿಮ್ಮ ಸಂಗಡ ಮಾತನಾಡುತ್ತಾ ಇಲ್ಲ. ನೀವು ಇನ್ನೂ ಕ್ರಿಸ್ತ ಯೇಸುವಿನಲ್ಲಿ ಕೂಸುಗಳೂ ಪ್ರಾಪಂಚಿಕರೂ ಆಗಿರುವಿರೆಂದು ಭಾವಿಸಿ ನಿಮ್ಮ ಸಂಗಡ ಮಾತನಾಡಬೇಕಾಯಿತು.
[2] ನಾನು ನಿಮಗೆ ಹಾಲು ಕೊಟ್ಟೆನು. ಗಟ್ಟಿ ಆಹಾರವನ್ನು ಕೊಡಲಿಲ್ಲ, ಏಕೆಂದರೆ ನಿಮಗೆ ಶಕ್ತಿ ಇರಲಿಲ್ಲ, ಈಗಲಾದರೂ ನಿಮಗೆ ಶಕ್ತಿಯಿಲ್ಲ.
[3] ಏಕೆಂದರೆ ನೀವು ಇನ್ನೂ ಪ್ರಾಪಂಚಿಕರಾಗಿದ್ದೀರಿ. ಹೇಗೆಂದರೆ, ನಿಮ್ಮೊಳಗೆ ಅಸೂಯೆ, ಜಗಳಗಳು ಇರುವಲ್ಲಿ ನೀವು ಪ್ರಾಪಂಚಿಕರಾಗಿದ್ದೀರಲ್ಲದೆ ಕೇವಲ ಮಾನವರಂತೆ ನಡೆಯುತ್ತೀರಲ್ಲವೇ?
[4] ಒಬ್ಬನು, “ನಾನು ಪೌಲನವನು,” ಎಂದು ಮತ್ತೊಬ್ಬನು, “ನಾನು ಅಪೊಲ್ಲೋಸನವನು,” ಎಂದೂ ಹೇಳುತ್ತಿರುವಾಗ, ನೀವು ಕೇವಲ ಮಾನವರಂತೆ ಆಗಿದ್ದೀರಲ್ಲವೇ?
[5] ಹಾಗಾದರೆ, ಅಪೊಲ್ಲೋಸನು ಯಾರು? ಪೌಲನು ಯಾರು? ಅವನವನಿಗೆ ಕರ್ತದೇವರು ನೇಮಿಸಿದ ಕಾರ್ಯದ ಪ್ರಕಾರ ಅವರವರ ಮುಖಾಂತರ ನೀವು ನಂಬಿದ್ದೀರಿ. ಅವರು ಕೇವಲ ಸೇವಕರಾಗಿದ್ದಾರೆ.
[6] ನಾನು ಬೀಜವನ್ನು ಬಿತ್ತಿದೆನು, ಅಪೊಲ್ಲೋಸನು ನೀರು ಹಾಕಿದನು, ಆದರೆ ಬೆಳೆಸಿದವರು ದೇವರೇ.
[7] ಹೀಗಿರಲಾಗಿ ನೆಡುವವನಾಗಲಿ, ನೀರು ಹಾಕುವವನಾಗಲಿ ಪ್ರಾಮುಖ್ಯರಾಗಿರದೆ, ಬೆಳೆಸುವ ದೇವರೇ ಬಹು ಪ್ರಾಮುಖ್ಯವಾದವರು.
[8] ನೆಡುವವನೂ ನೀರು ಹಾಕುವವನೂ ಒಂದೇ ಉದ್ದೇಶವುಳ್ಳವರಾಗಿರುತ್ತಾರೆ. ಪ್ರತಿಯೊಬ್ಬನಿಗೆ ಅವನವನ ಶ್ರಮಕ್ಕೆ ತಕ್ಕಂತೆ ಪ್ರತಿಫಲ ದೊರೆಯುವುದು.
[9] ನಾವು ದೇವರ ಜೊತೆಕೆಲಸದವರು. ನೀವು ದೇವರ ಹೊಲವೂ ದೇವರ ಕಟ್ಟಡವೂ ಆಗಿದ್ದೀರಿ.
[10] ದೇವರು ನನಗೆ ಕೊಟ್ಟ ಕೃಪೆಗೆ ಅನುಸಾರವಾಗಿ, ನಾನು ಜ್ಞಾನಿಯಾದ ಶಿಲ್ಪಿಯಂತೆ ಅಸ್ತಿವಾರ ಹಾಕಿದೆನು. ಮತ್ತೊಬ್ಬನು ಅದರ ಮೇಲೆ ಕಟ್ಟುತ್ತಾನೆ. ಆದರೆ ಪ್ರತಿಯೊಬ್ಬನೂ ತಾನು ಅದರ ಮೇಲೆ ಎಷ್ಟು ಶ್ರದ್ಧೆಯಿಂದ ಕಟ್ಟುತ್ತಾನೆಂದು ನೋಡಿಕೊಳ್ಳಬೇಕು.
[11] ಕ್ರಿಸ್ತ ಯೇಸುವೆಂಬ ಆ ಅಸ್ತಿವಾರವನ್ನಲ್ಲದೆ ಮತ್ತೊಂದು ಅಸ್ತಿವಾರವನ್ನು ಯಾರೂ ಹಾಕಲಾರರಷ್ಟೆ.
[12] ಯಾವನಾದರೂ ಆ ಅಸ್ತಿವಾರದ ಮೇಲೆ ಚಿನ್ನ, ಬೆಳ್ಳಿ, ರತ್ನ, ಕಟ್ಟಿಗೆ, ಹುಲ್ಲು ಅಥವಾ ಜೊಂಡು ಮುಂತಾದವುಗಳಿಂದ ಕಟ್ಟಿದರೆ,
[13] ಕ್ರಿಸ್ತ ಯೇಸುವಿನ ದಿನವು ಇದನ್ನು ಬಹಿರಂಗಕ್ಕೆ ತರುವಾಗ, ಅವನವನ ಕೆಲಸವು ಏನಾಗಿರುವುದೆಂಬುದು ವ್ಯಕ್ತವಾಗುವುದು. ಏಕೆಂದರೆ ಅದು ಬೆಂಕಿಯಿಂದ ಪ್ರಕಟವಾಗುವುದು. ಪ್ರತಿಯೊಬ್ಬನ ಕೆಲಸದ ಯೋಗ್ಯತೆಯನ್ನು ಬೆಂಕಿಯೇ ಪರೀಕ್ಷಿಸುವುದು.
[14] ಒಬ್ಬನು ಆ ಅಸ್ತಿವಾರದ ಮೇಲೆ ಕಟ್ಟಿದ್ದು ಬೆಂಕಿಯಿಂದ ತಪ್ಪಿಸಿಕೊಂಡು ಉಳಿದರೆ, ಅವನಿಗೆ ಪ್ರತಿಫಲ ಸಿಕ್ಕುವುದು.
[15] ಒಬ್ಬನು ಕಟ್ಟಿದ್ದು ಸುಟ್ಟು ಹೋದರೆ, ಅವನಿಗೆ ನಷ್ಟವಾಗುವುದು, ಅವನಾದರೋ ರಕ್ಷಣೆಹೊಂದುವನು. ಆದರೆ ಬೆಂಕಿಯ ಜ್ವಾಲೆಗಳಿಂದ ತಪ್ಪಿಸಿಕೊಂಡವನ ಹಾಗಿರುವನು.
[16] ನೀವು ದೇವರ ಆಲಯವಾಗಿದ್ದೀರೆಂಬುದೂ ದೇವರ ಆತ್ಮ ನಿಮ್ಮಲ್ಲಿ ವಾಸ ಮಾಡುತ್ತಾರೆಂಬುದೂ ನಿಮಗೆ ಗೊತ್ತಿಲ್ಲವೋ?
[17] ಯಾರಾದರೂ ದೇವರ ಆಲಯವನ್ನು ನಾಶಪಡಿಸಿದರೆ, ದೇವರು ಅವರನ್ನು ನಾಶಪಡಿಸುವರು. ಏಕೆಂದರೆ ದೇವರ ಆಲಯವು ಪವಿತ್ರವಾದದ್ದು, ಆ ಆಲಯವು ನೀವೇ.
[18] ನಿಮ್ಮನ್ನು ನೀವೇ ಮೋಸಪಡಿಸಿಕೊಳ್ಳಬೇಡಿರಿ. ನಿಮ್ಮಲ್ಲಿ ಯಾರಾದರೂ ಇಹಲೋಕ ದೃಷ್ಟಿಯಲ್ಲಿ ತಾನು ಜಾಣನೆಂದು ಭಾವಿಸಿಕೊಂಡರೆ, ಅಂಥವನು ಜ್ಞಾನಿಯಾಗುವಂತೆ ಮೂರ್ಖನಾಗಲಿ.
[19] ಏಕೆಂದರೆ ಇಹಲೋಕ ಜ್ಞಾನವು ದೇವರ ದೃಷ್ಟಿಯಲ್ಲಿ ಮೂರ್ಖತನವಾಗಿದೆ, ಪವಿತ್ರ ವೇದದಲ್ಲಿ ಬರೆದಿರುವ ಪ್ರಕಾರ, “ದೇವರು ಜ್ಞಾನಿಗಳನ್ನು ಅವರ ಯುಕ್ತಿಯಲ್ಲಿಯೇ ಹಿಡಿಯುವರು,” ಎಂದೂ
[20] “ಜ್ಞಾನಿಗಳ ಯೋಚನೆಗಳು ವ್ಯರ್ಥವಾದವುಗಳೆಂದು ಕರ್ತದೇವರು ತಿಳಿದುಕೊಳ್ಳುತ್ತಾರೆ,” ಎಂದೂ ಬರೆದಿದೆಯಲ್ಲಾ.
[21] ಆದಕಾರಣ ಇನ್ನು ಮೇಲೆ ನಾಯಕರ ಬಗ್ಗೆ ಯಾರೂ ಹೊಗಳುವುದು ಬೇಡ! ಏಕೆಂದರೆ ಸಮಸ್ತವೂ ನಿಮ್ಮದು.
[22] ಪೌಲನಾಗಲಿ, ಅಪೊಲ್ಲೋಸನಾಗಲಿ, ಕೇಫನಾಗಲಿ, ಲೋಕವಾಗಲಿ, ಜೀವವಾಗಲಿ, ಮರಣವಾಗಲಿ, ವರ್ತಮಾನದ ಸಂಗತಿಗಳಾಗಲಿ, ಭವಿಷ್ಯತ್ಕಾಲದ ಸಂಗತಿಗಳಾಗಲಿ ಸಮಸ್ತವೂ ನಿಮ್ಮವೇ.
[23] ನೀವು ಕ್ರಿಸ್ತ ಯೇಸುವಿನವರು, ಕ್ರಿಸ್ತ ಯೇಸು ದೇವರವರು.