Skip to content
Opens in a new window
Listen to this chapter • 7:07

[1] ಪ್ರೀತಿಯ ಮಾರ್ಗ ಅನುಸರಿಸಿರಿ, ಆತ್ಮಿಕ ವರಗಳನ್ನು, ವಿಶೇಷವಾಗಿ ಪ್ರವಾದಿಸುವ ವರವನ್ನು ಆಸಕ್ತಿಯಿಂದ ಅಪೇಕ್ಷಿಸಿರಿ.

[2] ಅನ್ಯಭಾಷೆಗಳನ್ನು ಆಡುವವನು ಮನುಷ್ಯರ ಸಂಗಡವಲ್ಲ, ದೇವರೊಂದಿಗೆ ಮಾತನಾಡುತ್ತಾನೆ. ಅವನು ಮಾತನಾಡುವುದನ್ನು ಯಾರೂ ಅರ್ಥಮಾಡಿಕೊಳ್ಳುವುದಿಲ್ಲ. ಏಕೆಂದರೆ ಅವನು ಆತ್ಮದಲ್ಲಿ ರಹಸ್ಯಗಳನ್ನು ಮಾತನಾಡುವವನಾಗಿದ್ದಾನೆ.

[3] ಪ್ರವಾದಿಸುವವನಾದರೋ, ಜನರ ಭಕ್ತಿವೃದ್ಧಿಗಾಗಿ, ಪ್ರೋತ್ಸಾಹಕ್ಕಾಗಿ, ಸಂತೈಸುವಿಕೆಗಾಗಿ ಮಾತನಾಡುತ್ತಾನೆ.

[4] ಅನ್ಯಭಾಷೆಗಳನ್ನಾಡುವವನು ತನಗೆ ಭಕ್ತಿವೃದ್ಧಿಯನ್ನುಂಟುಮಾಡಿಕೊಳ್ಳುವನು. ಆದರೆ ಪ್ರವಾದಿಸುವವನು ಸಭೆಗೆ ಭಕ್ತಿವೃದ್ಧಿಯನ್ನುಂಟುಮಾಡಿಕೊಳ್ಳುತ್ತಾನೆ.

[5] ನೀವೆಲ್ಲರೂ ಅನ್ಯಭಾಷೆಗಳನ್ನಾಡಬೇಕೆಂದು ಈಗ ನಾನು ಅಪೇಕ್ಷಿಸಿದರೂ, ಅದಕ್ಕಿಂತ ಹೆಚ್ಚಾಗಿ ನೀವು ಪ್ರವಾದಿಸಬೇಕೆಂದು ಅಪೇಕ್ಷಿಸುತ್ತೇನೆ. ಅನ್ಯಭಾಷೆಗಳನ್ನಾಡುವವನು ಸಭೆಗೆ ಭಕ್ತಿವೃದ್ಧಿಯಾಗುವಂತೆ ಅದರ ಅರ್ಥವನ್ನು ಹೇಳದೆ ಹೋದರೆ, ಅವನಿಗಿಂತ ಪ್ರವಾದಿಸುವವನೇ ಶ್ರೇಷ್ಠನು.

[6] ಹೀಗಿರುವುದರಿಂದ ಪ್ರಿಯರೇ, ನಾನು ನಿಮ್ಮ ಬಳಿಗೆ ಬಂದು ಪ್ರಕಟನೆಯಿಂದಾಗಲಿ, ವಿದ್ಯೆಯಿಂದಾಗಲಿ, ಪ್ರವಾದನೆಯಿಂದಾಗಲಿ, ಉಪದೇಶದಿಂದಾಗಲಿ ಮಾತನಾಡದೆ, ಅನ್ಯಭಾಷೆಗಳಿಂದ ಮಾತನಾಡುವವನಾಗಿದ್ದರೆ, ನನ್ನಿಂದ ನಿಮಗೇನು ಪ್ರಯೋಜನ?

[7] ಕೊಳಲು, ವೀಣೆ ಮೊದಲಾದ ನಿರ್ಜೀವ ವಾದ್ಯಗಳ ಸ್ವರಗಳ ಹಾಗೆ, ವಿವಿಧ ಶೃತಿಗಳು ಕಂಡುಬರದಿದ್ದರೆ, ಊದಿದ್ದು ಕೊಳಲೋ ಅಥವಾ ಬಾರಿಸಿದ್ದು ವೀಣೆಯೋ ಎಂದು ತಿಳಿಯುವುದು ಹೇಗೆ?

[8] ತುತೂರಿಯನ್ನು ಸ್ಪಷ್ಟವಾಗಿ ಊದದಿದ್ದರೆ, ಯಾರು ತಾನೇ ಯುದ್ಧಕ್ಕೆ ಸನ್ನದ್ಧರಾಗುವರು?

[9] ಅದರಂತೆಯೇ, ನೀವೂ ಸ್ಪಷ್ಟವಾದ ಭಾಷೆಯಿಂದ ಮಾತನಾಡದೆ ಹೋದರೆ, ಮಾತನಾಡಿದ್ದು ಏನೆಂದು ತಿಳಿಯುವುದು ಹೇಗೆ? ನೀವು ಗಾಳಿಯ ಸಂಗಡ ಮಾತನಾಡಿದ ಹಾಗಿರುವುದಷ್ಟೆ.

[10] ಲೋಕದಲ್ಲಿ ಎಷ್ಟು ವಿಧವಾದ ಭಾಷೆಗಳಿದ್ದರೂ, ಅವುಗಳಲ್ಲಿ ಒಂದಾದರೂ ಅರ್ಥರಹಿತವಾದುದಲ್ಲ.

[11] ನಾನು ಭಾಷೆಯ ಅರ್ಥವನ್ನು ಗ್ರಹಿಸದಿದ್ದರೆ, ಮಾತಾಡುವವನಿಗೆ ನಾನು ಅನ್ಯದೇಶದವನಂತಿರುವೆನು, ಮಾತನಾಡುವವನು ನನಗೆ ಅನ್ಯದೇಶದವನಂತಿರುವನು.

[12] ಅದರಂತೆಯೇ, ನೀವು ಸಹ ಆತ್ಮಿಕ ವರಗಳನ್ನು ಬಯಸುವುದರಿಂದ, ಸಭೆಗೆ ಭಕ್ತಿವೃದ್ಧಿ ಉಂಟುಮಾಡುವ ವರಗಳನ್ನೇ ಸಮೃದ್ಧವಾಗಿ ಪ್ರಯತ್ನಿಸಿರಿ.

[13] ಆದ್ದರಿಂದ, ಅನ್ಯಭಾಷೆಗಳನ್ನಾಡುವವನು ತಾನಾಡುವ ಮಾತಿನ ಅರ್ಥವನ್ನು ಹೇಳುವುದಕ್ಕೆ ದೇವರನ್ನು ಪ್ರಾರ್ಥಿಸಲಿ.

[14] ಏಕೆಂದರೆ ನಾನು ಅನ್ಯಭಾಷೆಗಳಲ್ಲಿ ಪ್ರಾರ್ಥಿಸಿದರೆ, ನನ್ನ ಆತ್ಮವು ಪ್ರಾರ್ಥಿಸುವುದು. ಆದರೆ ನನ್ನ ಬುದ್ಧಿ ನಿಷ್ಫಲವಾಗಿರುವುದು.

[15] ಹಾಗಾದರೇನು? ನಾನು ಆತ್ಮದಿಂದ ಪ್ರಾರ್ಥಿಸುವೆನು, ಬುದ್ಧಿಯಿಂದಲೂ ಪ್ರಾರ್ಥಿಸುವೆನು. ಆತ್ಮದಿಂದ ಹಾಡುವೆನು, ಬುದ್ಧಿಯಿಂದಲೂ ಹಾಡುವೆನು.

[16] ನೀನು ಆತ್ಮದಲ್ಲಿ ಮಾತ್ರ ಸ್ತೋತ್ರ ಮಾಡಿದರೆ, ತಿಳುವಳಿಕೆ ಇಲ್ಲದೆ ಕುಳಿತಿರುವವನು ನಿನ್ನ ಕೃತಜ್ಞತಾಸ್ತುತಿಗೆ, “ಆಮೆನ್” ಎಂದು ಹೇಳುವುದು ಹೇಗೆ?

[17] ನೀನು ಚೆನ್ನಾಗಿ ಕೃತಜ್ಞತಾಸ್ತುತಿ ಮಾಡುತ್ತೀ ನಿಜವೇ. ಆದರೆ, ಮತ್ತೊಬ್ಬನಿಗೆ ಭಕ್ತಿವೃದ್ಧಿಯಾಗಲಿಲ್ಲ.

[18] ನಾನು ನಿಮ್ಮೆಲ್ಲರಿಗಿಂತಲೂ ಹೆಚ್ಚಾಗಿ ಅನ್ಯಭಾಷೆಗಳನ್ನಾಡುತ್ತೇನೆಂದು ದೇವರಿಗೆ ಕೃತಜ್ಞತೆ ಮಾಡುತ್ತೇನೆ.

[19] ಆದರೂ ಸಭೆಯಲ್ಲಿ ಅನ್ಯಭಾಷೆಗಳಿಂದ ಹತ್ತು ಸಾವಿರ ಮಾತುಗಳನ್ನಾಡುವುದಕ್ಕಿಂತ, ನನ್ನ ಬುದ್ಧಿಯಿಂದ ಐದೇ ಮಾತುಗಳನ್ನಾಡಿ, ಇತರರಿಗೆ ಉಪದೇಶ ಮಾಡುವುದನ್ನೇ ನಾನು ಇಷ್ಟಪಡುತ್ತೇನೆ.

[20] ಸಹೋದರರೇ, ಮಕ್ಕಳಂತೆ ಯೋಚಿಸುವುದನ್ನು ಬಿಟ್ಟುಬಿಡಿರಿ. ಕೇಡಿನ ವಿಷಯದಲ್ಲಿ ಶಿಶುಗಳಂತೆ ಇದ್ದರೂ, ನಿಮ್ಮ ಯೋಚನೆಯಲ್ಲಿ ಪ್ರಾಯಸ್ಥರಾಗಿರಿ.

[21] “ಬೇರೆಭಾಷೆಯವರ ಮೂಲಕವಾಗಿಯೂ ವಿದೇಶದವರ ತುಟಿಗಳಿಂದಲೂ ನಾನು ಈ ಜನರೊಡನೆ ಮಾತಾಡುವೆನು, ಆದರೂ ಅವರು ನನಗೆ ಕಿವಿಗೊಡುವುದಿಲ್ಲವೆಂದು ಕರ್ತದೇವರು ಹೇಳುತ್ತಾರೆ,” ಎಂದು ನಿಯಮದಲ್ಲಿ ಬರೆದಿದೆ.

[22] ಆದ್ದರಿಂದ, ಅನ್ಯಭಾಷೆಗಳನ್ನಾಡುವುದು ವಿಶ್ವಾಸಿಗಳಿಗೆ ಅಲ್ಲ, ಅವಿಶ್ವಾಸಿಗಳಿಗೆ ಸೂಚನೆಯಾಗಿದೆ. ಆದರೆ ಪ್ರವಾದಿಸುವುದು ಅವಿಶ್ವಾಸಿಗಳಿಗಲ್ಲ, ವಿಶ್ವಾಸಿಗಳಿಗೆ ಸೂಚನೆಯಾಗಿದೆ.

[23] ಆದಕಾರಣ ಸಭೆಯೆಲ್ಲವೂ ಕೂಡಿಬಂದಾಗ ಎಲ್ಲರೂ ಅನ್ಯಭಾಷೆಗಳನ್ನಾಡಿದರೆ, ಅಜ್ಞಾನಿಗಳು ಇಲ್ಲವೆ ಅವಿಶ್ವಾಸಿಗಳು ಒಳಗೆ ಬಂದು, ನೀವು ಹುಚ್ಚರೆಂದು ಹೇಳುವುದಿಲ್ಲವೇ?

[24] ಆದರೆ ನೀವೆಲ್ಲರೂ ಪ್ರವಾದಿಸುತ್ತಿರಲು, ಅವಿಶ್ವಾಸಿಯಾಗಲಿ, ಅನ್ವೇಷಕನಾಗಲಿ ಒಳಗೆ ಬಂದರೆ, ಅವನು ತಾನು ಪಾಪಿಯೆಂಬ ಮನವರಿಕೆಯನ್ನು ಹೊಂದುವನು. ಅವನು ಎಲ್ಲರ ಮಾತಿನಿಂದ ಪರಿಶೋಧಿತನಾಗುವನು.

[25] ಅವನ ಹೃದಯದ ರಹಸ್ಯಗಳು ಬಯಲಾಗುವುವು. ಅವನು ಅಡ್ಡಬಿದ್ದು ದೇವರನ್ನು ಆರಾಧಿಸಿ, “ದೇವರು ನಿಜವಾಗಿಯೂ ನಿಮ್ಮ ಮಧ್ಯದಲ್ಲಿ ಇದ್ದಾರೆ!” ಎಂದು ಪ್ರಕಟಪಡಿಸುವನು.

[26] ಹಾಗಾದರೇನು ಪ್ರಿಯರೇ? ನೀವು ಸಭೆಯಾಗಿ ಕೂಡಿಬರುವಾಗ ಪ್ರತಿಯೊಬ್ಬನಿಗೆ ಕೀರ್ತನೆಯಾಗಲಿ, ಸಂದೇಶವಾಗಲಿ, ಪ್ರಕಟನೆಯಾಗಲಿ, ಅನ್ಯಭಾಷೆಯನ್ನಾಡುವುದಾಗಲಿ, ಅನ್ಯಭಾಷೆಗಳ ಅರ್ಥವನ್ನು ಹೇಳುವ ವರವಾಗಲಿ ಇರುತ್ತದಷ್ಟೆ. ಇವೆಲ್ಲವೂ ಸಭೆಗೆ ಭಕ್ತಿವೃದ್ಧಿಗಾಗಿಯೇ ಇರಲಿ.

[27] ಯಾವನಾದರೂ ಅನ್ಯಭಾಷೆಗಳನ್ನಾಡುವುದಾದರೆ, ಇಬ್ಬರು ಅಥವಾ ಹೆಚ್ಚೆಂದರೆ ಮೂವರು ಒಬ್ಬೊಬ್ಬರಾಗಿ ಮಾತನಾಡಬೇಕು, ಒಬ್ಬನು ಅರ್ಥವನ್ನು ಹೇಳಲಿ.

[28] ಅರ್ಥವನ್ನು ಹೇಳುವವನಿಲ್ಲದಿದ್ದರೆ, ಅನ್ಯಭಾಷೆಗಳನ್ನಾಡುವವನು ಸಭೆಯಲ್ಲಿ ಮೌನವಾಗಿರಲಿ. ಅವನು ತನ್ನೊಂದಿಗೂ ದೇವರೊಂದಿಗೂ ಮಾತನಾಡಿಕೊಳ್ಳಲಿ.

[29] ಪ್ರವಾದಿಗಳು ಇಬ್ಬರಾಗಲಿ, ಮೂವರಾಗಲಿ ಮಾತಾಡಲಿ, ಇತರರರು ವಿವೇಚನೆ ಮಾಡಲಿ.

[30] ಕುಳಿತಿರುವ ಮತ್ತೊಬ್ಬನಿಗೆ ಏನಾದರೂ ಪ್ರಕಟನೆಯಾದರೆ, ಮೊದಲಿನವನು ಮೌನವಾಗಿರಲಿ.

[31] ಎಲ್ಲರೂ ಕಲಿತುಕೊಳ್ಳುವಂತೆಯೂ, ಎಲ್ಲರೂ ಪ್ರೋತ್ಸಾಹ ಹೊಂದುವಂತೆಯೂ, ನೀವೆಲ್ಲರು ಒಬ್ಬೊಬ್ಬರಾಗಿ ಪ್ರವಾದಿಸಿರಿ.

[32] ಪ್ರವಾದಿಗಳ ಆತ್ಮಗಳು ಪ್ರವಾದಿಗಳ ಸ್ವಾಧೀನದಲ್ಲಿವೆ.

[33] ದೇವಜನರ ಎಲ್ಲಾ ಸಭೆಗಳಲ್ಲಿರುವಂತೆ, ದೇವರು ಗಲಿಬಿಲಿಯ ದೇವರಲ್ಲ, ಸಮಾಧಾನದ ದೇವರಾಗಿದ್ದಾರೆ.

[34] ದೇವಜನರ ಎಲ್ಲಾ ಸಭೆಗಳಲ್ಲಿರುವಂತೆ ಸ್ತ್ರೀಯರು ಸಭೆಯ ಕೂಟಗಳಲ್ಲಿ ಮೌನವಾಗಿರಲಿ. ಏಕೆಂದರೆ ಮಾತನಾಡಲು ಅವರಿಗೆ ಅನುಮತಿಯಿಲ್ಲ, ನಿಯಮವು ಸಹ ಹೇಳಿರುವಂತೆ ಅವರು ಅಧೀನರಾಗಿರಬೇಕು.

[35] ಅವರು ಏನಾದರೂ ಕಲಿಯಬಯಸಿದರೆ, ಮನೆಯಲ್ಲಿ ಗಂಡಂದಿರನ್ನು ಕೇಳಲಿ. ಸ್ತ್ರೀಯರು ಸಭೆಯಲ್ಲಿ ಮಾತನಾಡುವುದು ನಾಚಿಕೆಪಡುವಂಥದಾಗಿದೆ.

[36] ದೇವರ ವಾಕ್ಯವು ನಿಮ್ಮಿಂದ ಹೊರಟಿತೋ? ಅಥವಾ ಅದು ತಲುಪಿದ್ದು ನಿಮಗೆ ಮಾತ್ರವೋ?

[37] ಯಾವನಾದರೂ ತನ್ನನ್ನು ಪ್ರವಾದಿಯೆಂದಾಗಲಿ, ಆತ್ಮನ ವರಗಳನ್ನು ಹೊದಿದವನೆಂದಾಗಲಿ ಭಾವಿಸುವುದಾದರೆ, ನಾನು ನಿಮಗೆ ಬರೆದಿರುವ ಸಂಗತಿಗಳು ಕರ್ತದೇವರ ಆಜ್ಞೆಗಳೆಂದು ಸ್ಪಷ್ಟವಾಗಿ ತಿಳಿದುಕೊಳ್ಳಲಿ.

[38] ಆದರೆ ಯಾರಾದರೂ ಇದನ್ನು ತಿರಸ್ಕಸಿದರೆ, ಅವರೂ ತಿರಸ್ಕಾರಕ್ಕೆ ಗುರಿಯಾಗುವರು.

[39] ಆದಕಾರಣ ನನ್ನ ಪ್ರಿಯರೇ, ಪ್ರವಾದಿಸುವ ವರಕ್ಕಾಗಿ ಆಸಕ್ತರಾಗಿರಿ. ಅನ್ಯಭಾಷೆಯನ್ನಾಡುವುದಕ್ಕೆ ಅಡ್ಡಿಮಾಡಬೇಡಿರಿ.

[40] ಆದರೆ ಎಲ್ಲವನ್ನೂ ಯೋಗ್ಯವಾಗಿಯೂ ಕ್ರಮವಾಗಿಯೂ ಮಾಡಿರಿ.

1 ಕೊರಿಂಥದವರಿಗೆ — Chapters