Skip to content
Opens in a new window
Listen to this chapter • 9:50

[1] ಪ್ರಿಯರೇ, ನಾನು ನಿಮಗೆ ಸಾರಿದ ಸುವಾರ್ತೆಯನ್ನೂ, ನೀವು ಅದನ್ನು ಸ್ವೀಕರಿಸಿದ್ದನ್ನೂ, ಅದರಲ್ಲಿ ನಿಂತಿರುವುದನ್ನೂ, ಈಗ ನಿಮಗೆ ನೆನಪಿಸುತ್ತೇನೆ.

[2] ನಾನು ಸಾರಿದ ಈ ಸುವಾರ್ತೆಯ ವಾಕ್ಯವನ್ನು ನೀವು ಬಿಗಿಯಾಗಿ ಹಿಡಿದುಕೊಂಡರೆ, ನಿಮಗೆ ರಕ್ಷಣೆಯಾಗುತ್ತದೆ. ಇಲ್ಲದಿದ್ದರೆ, ನಿಮ್ಮ ನಂಬಿಕೆ ವ್ಯರ್ಥವಾಗಿ ಹೋಗುತ್ತದೆ.

[3] ಏಕೆಂದರೆ ನಾನು ಪಡೆದುಕೊಂಡಿದ್ದರಲ್ಲಿ ಬಹು ಪ್ರಾಮುಖ್ಯವಾದದ್ದನ್ನೇ ನಿಮಗೆ ಕೊಟ್ಟಿದ್ದೇನೆ. ಅದೇನೆಂದರೆ, ಪವಿತ್ರ ವೇದದ ಪ್ರಕಾರ ಕ್ರಿಸ್ತನು ನಮ್ಮ ಪಾಪಗಳಿಗಾಗಿ ಸತ್ತರು,

[4] ಹೂಣಿಡಲಾದರು, ಪವಿತ್ರ ವೇದದ ಪ್ರಕಾರವೇ ಮೂರನೆಯ ದಿನದಲ್ಲಿ ಎದ್ದು ಬಂದರು.

[5] ಕೇಫನಿಗೂ ಆಮೇಲೆ ಹನ್ನೆರಡು ಮಂದಿಗೂ ಕಾಣಿಸಿಕೊಂಡರು.

[6] ತರುವಾಯ ಒಂದೇ ಸಮಯದಲ್ಲಿ ಐನೂರಕ್ಕೂ ಹೆಚ್ಚು ಮಂದಿ ಹಿಂಬಾಲಕರಿಗೆ ಕ್ರಿಸ್ತ ಯೇಸು ಕಾಣಿಸಿಕೊಂಡರು. ಅವರಲ್ಲಿ ಕೆಲವರು ಸತ್ತು ಹೋಗಿದ್ದರೂ ಬಹುಜನರು ಇಂದಿಗೂ ಬದುಕಿದ್ದಾರೆ.

[7] ತರುವಾಯ ಕ್ರಿಸ್ತ ಯೇಸು ಯಾಕೋಬನಿಗೂ ಆಮೇಲೆ ಅಪೊಸ್ತಲರೆಲ್ಲರಿಗೂ ಕಾಣಿಸಿಕೊಂಡರು.

[8] ಕಟ್ಟಕಡೆಗೆ, ದಿನತುಂಬುವ ಮೊದಲೇ ಹುಟ್ಟಿದವನಂತಿರುವ ನನಗೂ ಕಾಣಿಸಿಕೊಂಡರು.

[9] ನಾನಾದರೋ ಅಪೊಸ್ತಲರಲ್ಲಿ ಕನಿಷ್ಠನು, ಅಪೊಸ್ತಲನೆನಿಸಿಕೊಳ್ಳುವುದಕ್ಕೆ ನಾನು ಯೋಗ್ಯನಲ್ಲ, ಏಕೆಂದರೆ ನಾನು ದೇವರ ಸಭೆಯನ್ನು ಹಿಂಸೆಪಡಿಸಿದೆನು.

[10] ಆದರೆ ನಾನು ಎಂಥವನಾಗಿದ್ದೇನೋ, ಅದು ದೇವರ ಕೃಪೆಯಿಂದಲೇ ಆಗಿರುತ್ತದೆ. ನನಗುಂಟಾದ ದೇವರ ಕೃಪೆಯು ನಿಷ್ಫಲವಾಗಲಿಲ್ಲ. ನಾನು ಅವರೆಲ್ಲರಿಗಿಂತಲೂ ಎಷ್ಟೋ ಹೆಚ್ಚಾಗಿ ಪ್ರಯಾಸಪಟ್ಟೆನು. ಆದರೆ ಪ್ರಯಾಸಪಟ್ಟವನು ನಾನಲ್ಲ, ನನ್ನೊಂದಿಗಿದ್ದ ದೇವರ ಕೃಪೆಯೇ.

[11] ಆದ್ದರಿಂದ ನಾನಾದರೇನು, ಅವರಾದರೇನು ಇದನ್ನೇ ನಾವು ಸಾರುವುದು, ಇದನ್ನೇ ನೀವು ನಂಬಿದ್ದೀರಿ.

[12] ಆದರೆ ಕ್ರಿಸ್ತ ಯೇಸು ಸತ್ತವರೊಳಗಿಂದ ಎದ್ದು ಬಂದಿರುತ್ತಾರೆಂದು ಸಾರುತ್ತಿರುವಲ್ಲಿ ನಿಮ್ಮೊಳಗೆ ಕೆಲವರು ಸತ್ತವರಿಗೆ ಪುನರುತ್ಥಾನ ಇಲ್ಲ ಎಂದು ಹೇಳುವುದು ಹೇಗೆ?

[13] ಈಗ ಸತ್ತವರಿಗೆ ಪುನರುತ್ಥಾನವಿಲ್ಲವಾದರೆ, ಕ್ರಿಸ್ತಯೇಸುವಾದರೂ ಎದ್ದು ಬರಲಿಲ್ಲ.

[14] ಕ್ರಿಸ್ತ ಯೇಸು ಎದ್ದು ಬರಲಿಲ್ಲವಾದರೆ, ನಮ್ಮ ಪ್ರಸಂಗವೂ ನಿಮ್ಮ ವಿಶ್ವಾಸವೂ ನಿಷ್ಪ್ರಯೋಜನವಾದದ್ದು.

[15] ಅದು ಮಾತ್ರವಲ್ಲ, ದೇವರು ಕ್ರಿಸ್ತ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದರೆಂದು ದೇವರ ಬಗ್ಗೆ ಸಾಕ್ಷಿಕೊಟ್ಟ ನಾವೂ ಸುಳ್ಳುಸಾಕ್ಷಿಗಳಾಗಿ ಕಂಡುಬರುವೆವು. ದೇವರು ಕ್ರಿಸ್ತನನ್ನು ಎಬ್ಬಿಸದಿದ್ದರೆ ಸತ್ತವರನ್ನೂ ದೇವರು ಎಬ್ಬಿಸುವುದಿಲ್ಲ.

[16] ಸತ್ತವರು ಎದ್ದುಬರುವುದಿಲ್ಲವಾದರೆ, ಕ್ರಿಸ್ತ ಯೇಸುವೂ ಎದ್ದುಬಂದಿಲ್ಲ.

[17] ಕ್ರಿಸ್ತ ಯೇಸುವು ಎದ್ದುಬಂದಿಲ್ಲವಾದರೆ, ನಿಮ್ಮ ವಿಶ್ವಾಸವೂ ವ್ಯರ್ಥವಾಗಿದೆ, ನೀವು ಇನ್ನೂ ನಿಮ್ಮ ಪಾಪಗಳಲ್ಲಿಯೇ ಇದ್ದೀರಿ.

[18] ಅಲ್ಲದೆ, ಕ್ರಿಸ್ತ ಯೇಸುವಿನಲ್ಲಿ ವಿಶ್ವಾಸವಿಟ್ಟು ನಿದ್ರೆ ಹೋದವರು ಸಹ ನಾಶವಾದರು.

[19] ನಾವು ಈ ಜೀವನದಲ್ಲಿ ಮಾತ್ರ ಕ್ರಿಸ್ತ ಯೇಸುವಿನಲ್ಲಿ ನಿರೀಕ್ಷೆಯಿಟ್ಟು ಕೊಂಡಿರುವವರಾಗಿದ್ದರೆ, ನಾವು ಎಲ್ಲಾ ಮನುಷ್ಯರಲ್ಲಿಯೂ ಕನಿಕರಪಡತಕ್ಕವರೇ ಆಗುತ್ತೇವೆ.

[20] ಆದರೆ ಈಗ ಕ್ರಿಸ್ತ ಯೇಸು ಸತ್ತವರೊಳಗಿಂದ ಎದ್ದು ಬಂದೇ ಇದ್ದಾರೆ. ನಿದ್ರೆ ಹೋದವರಲ್ಲಿ ಪ್ರಥಮಫಲವಾಗಿದ್ದಾರೆ.

[21] ಏಕೆಂದರೆ ಒಬ್ಬ ಮನುಷ್ಯನ ಮೂಲಕ ಮರಣವು ಬಂದಂತೆಯೇ, ಒಬ್ಬ ಮನುಷ್ಯನ ಮೂಲಕ ಸತ್ತವರಿಗೆ ಪುನರುತ್ಥಾನವು ಸಹ ಬರುವುದು.

[22] ಏಕೆಂದರೆ, ಆದಾಮನಲ್ಲಿ ಎಲ್ಲರೂ ಸತ್ತಂತೆಯೇ, ಕ್ರಿಸ್ತನಲ್ಲಿ ಎಲ್ಲರೂ ಜೀವಂತರಾಗುವರು.

[23] ಆದರೆ ಒಬ್ಬೊಬ್ಬರು ತಮ್ಮ ತಮ್ಮ ಕ್ರಮದ ಅನುಸಾರವಾಗಿ ಎದ್ದು ಬರುವರು. ಪ್ರಥಮಫಲವಾಗಿ ಕ್ರಿಸ್ತನು, ತರುವಾಯ ಕ್ರಿಸ್ತನ ಪುನರಾಗಮನದಲ್ಲಿ ಕ್ರಿಸ್ತನಿಗೆ ಸೇರಿದವರು ಎದ್ದು ಬರುವರು.

[24] ಆಮೇಲೆ ಕ್ರಿಸ್ತನು ಎಲ್ಲಾ ಆಧಿಪತ್ಯವನ್ನೂ ಎಲ್ಲಾ ಅಧಿಕಾರವನ್ನೂ ಎಲ್ಲಾ ಶಕ್ತಿಯನ್ನೂ ತೆಗೆದುಹಾಕಿ, ರಾಜ್ಯವನ್ನು ತಂದೆ ದೇವರಿಗೆ ಒಪ್ಪಿಸಿಕೊಡುವಾಗ ಸಮಾಪ್ತಿಯಾಗುವುದು.

[25] ಏಕೆಂದರೆ, ಕ್ರಿಸ್ತನು ಎಲ್ಲಾ ಶತ್ರುಗಳನ್ನು ತನ್ನ ಪಾದಗಳ ಕೆಳಗೆ ಹಾಕಿಕೊಳ್ಳುವ ತನಕ ಆಳುವುದು ಅವಶ್ಯ.

[26] ಕೊನೆಯದಾಗಿ, ನಿರ್ಮೂಲವಾಗುವ ವೈರಿ ಮರಣವೇ.

[27] ದೇವರು ಸಮಸ್ತವನ್ನೂ ಕ್ರಿಸ್ತನ ಪಾದಗಳ ಕೆಳಗೆ ಹಾಕಿ ಅವರಿಗೆ ಅಧೀನಮಾಡಿದ್ದಾರೆ. “ಸಮಸ್ತವೂ ಅವರಿಗೆ ಅಧೀನ ಮಾಡಲಾಗಿದೆ” ಎಂದು ಹೇಳುವಾಗ, ಸಮಸ್ತವನ್ನೂ ಕ್ರಿಸ್ತನಿಗೆ ಅಧೀನಮಾಡಿಕೊಟ್ಟ ದೇವರು ಇದರಲ್ಲಿ ಒಳಪಡಲಿಲ್ಲ ಎಂಬುದು ಸ್ಪಷ್ಟವಾಗಿದೆ.

[28] ಸಮಸ್ತವೂ ಅವರಿಗೆ ಅಧೀನವಾದ ಮೇಲೆ, ಮಗನೂ ಸಹ ಸಮಸ್ತವನ್ನೂ ತನಗೆ ಅಧೀನಮಾಡಿಕೊಟ್ಟ ದೇವರಿಗೆ ತಾವೇ ಅಧೀನರಾಗುವರು. ಹೀಗೆ ದೇವರು ಸಮಸ್ತರಲ್ಲಿಯೂ ಸಮಸ್ತವೂ ಆಗಿದ್ದಾರೆ.

[29] ಸತ್ತವರಿಗೆ ಪುನರುತ್ಥಾನವಿಲ್ಲದಿದ್ದರೆ, ಸತ್ತವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುವವರು ಏನು ಮಾಡುವರು? ಸತ್ತವರು ನಿಜವಾಗಿಯೂ ಎದ್ದುಬರುವುದಿಲ್ಲವಾದರೆ, ಅವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದು ಏಕೆ?

[30] ನಾವು ಸಹ ಪ್ರತಿ ಗಳಿಗೆಯಲ್ಲಿಯೂ ಅಪಾಯದಲ್ಲಿರುವುದೇಕೆ?

[31] ಸಹೋದರರೇ ನಮ್ಮ ಕರ್ತ ಆಗಿರುವ ಕ್ರಿಸ್ತ ಯೇಸುವಿನಲ್ಲಿ ನನಗೆ ನಿಮ್ಮ ಬಗ್ಗೆ ನಿಶ್ಚಯವಾಗಿರುವ ಹೆಮ್ಮೆಯಿಂದ ನಾನು ದಿನದಿನವು ಸಾಯುತ್ತಲಿದ್ದೇನೆ.

[32] ನಾನು ಎಫೆಸದಲ್ಲಿ ಕಾಡು ಮೃಗಗಳೊಂದಿಗೆ ಹೋರಾಟ ಮಾಡಿದ್ದು ಕೇವಲ ಮಾನವ ಕಾರಣಗಳಿಂದ ಮಾತ್ರವಾಗಿದ್ದರೆ, ಅದರಿಂದ ನನಗೇನು ಪ್ರಯೋಜನ? ಸತ್ತವರು ಎದ್ದುಬರುವುದಿಲ್ಲವಾದರೆ, “ತಿನ್ನೋಣ, ಕುಡಿಯೋಣ, ನಾಳೆ ಮರಣ ಹೊಂದೋಣ.”

[33] ಮೋಸಹೋಗಬೇಡಿರಿ. ಏಕೆಂದರೆ, “ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ.”

[34] ಸ್ವಸ್ಥಚಿತ್ತರಾಗಿರಿ, ಪಾಪಮಾಡುವುದನ್ನು ನಿಲ್ಲಿಸಿರಿ. ಕೆಲವರಂತೂ ದೇವರನ್ನೇ ಅಲಕ್ಷ್ಯಮಾಡುವವರಾಗಿದ್ದಾರೆ. ನಿಮಗೆ ನಾಚಿಕೆಯಾಗಬೇಕೆಂದು ನಾನು ಇದನ್ನು ಹೇಳುತ್ತೇನೆ.

[35] “ಸತ್ತವರು ಎದ್ದೇಳುವುದು ಹೇಗೆ? ಎಂಥ ದೇಹದಿಂದ ಎದ್ದು ಬರುತ್ತಾರೆ?” ಎಂದು ಯಾರಾದರೂ ಕೇಳಬಹುದು.

[36] ಮತಿಹೀನ ಮನುಷ್ಯನೇ! ನೀನು ಬಿತ್ತುವ ಬೀಜವು ಸಾಯದಿದ್ದರೆ, ಅದು ಜೀವಂತವಾಗುವುದಿಲ್ಲ.

[37] ನೀನು ಒಂದು ವೇಳೆ ಗೋಧಿಯನ್ನಾಗಲಿ, ಬೇರೆ ಯಾವುದೇ ಬೀಜವನ್ನಾಗಲಿ ಬಿತ್ತುವಾಗ, ಬರೀ ಕಾಳನ್ನೇ ಹೊರತು ಮುಂದೆ ಆಗಬೇಕಾದ ದೇಹವನ್ನು ಬಿತ್ತುವುದಿಲ್ಲ.

[38] ಆದರೆ ದೇವರು ತಾನು ನಿರ್ಣಯಿಸಿದಂತೆ ಅದಕ್ಕೆ ದೇಹವನ್ನು ಕೊಡುತ್ತಾರೆ ಮತ್ತು ಒಂದೊಂದು ಬೀಜಕ್ಕೂ ಅದರದರ ದೇಹವನ್ನು ಕೊಡುತ್ತಾರೆ.

[39] ಎಲ್ಲಾ ದೇಹಗಳು ಒಂದೇ ವಿಧವಾಗಿಲ್ಲ. ಮನುಷ್ಯನ ದೇಹ ಬೇರೆ, ಪಶುಗಳ ದೇಹ ಬೇರೆ, ಪಕ್ಷಿಗಳ ದೇಹ ಬೇರೆ, ಮೀನುಗಳದೇ ಬೇರೆ.

[40] ಪರಲೋಕದ ದೇಹಗಳಿವೆ, ಭೂಲೋಕದ ದೇಹಗಳಿವೆ. ಆದರೆ ಪರಲೋಕದ ದೇಹಗಳ ಮಹಿಮೆಯೇ ಬೇರೆ, ಭೂಲೋಕದ ದೇಹಗಳ ಮಹಿಮೆಯೇ ಬೇರೆ.

[41] ಸೂರ್ಯನ ಮಹಿಮೆ ಬೇರೆ, ಚಂದ್ರನ ಮಹಿಮೆಯೇ ಬೇರೆ ವಿಧ, ನಕ್ಷತ್ರಗಳ ಮಹಿಮೆ ಇನ್ನೊಂದು ವಿಧ. ಏಕೆಂದರೆ, ನಕ್ಷತ್ರ ನಕ್ಷತ್ರಕ್ಕೆ ಮಹಿಮೆಯಲ್ಲಿ ವ್ಯತ್ಯಾಸವಾಗಿರುವುದು.

[42] ಸತ್ತವರಿಗಾಗುವ ಪುನರುತ್ಥಾನವು ಸಹ ಹಾಗೆಯೇ ಇರುವುದು. ದೇಹವು ಅಳಿಯುವ ಅವಸ್ಥೆಯಲ್ಲಿ ಬಿತ್ತಲಾಗುತ್ತದೆ. ಅಮರತ್ವ ಅವಸ್ಥೆಯಲ್ಲಿ ಎದ್ದು ಬರುವುದು.

[43] ದೇಹವು ಹೀನಾವಸ್ಥೆಯಲ್ಲಿ ಬಿತ್ತಲಾಗುತ್ತದೆ. ಮಹಿಮೆಯಲ್ಲಿ ಎದ್ದು ಬರುವುದು. ಬಲಹೀನತೆಯಲ್ಲಿ ಬಿತ್ತಲಾಗುತ್ತದೆ, ಶಕ್ತಿಯಲ್ಲಿ ಎದ್ದು ಬರುವುದು.

[44] ಪ್ರಾಕೃತ ದೇಹವಾಗಿ ಬಿತ್ತಲಾಗುತ್ತದೆ, ಆತ್ಮಿಕ ದೇಹವಾಗಿ ಎದ್ದು ಬರುವುದು. ಪ್ರಾಕೃತ ದೇಹವಿರುವುದಾದರೆ, ಆತ್ಮಿಕ ದೇಹವೂ ಇರುವುದು.

[45] “ಮೊದಲನೆಯ ಮನುಷ್ಯನಾದ ಆದಾಮನು ಜೀವಿಸುವ ವ್ಯಕ್ತಿಯಾದನು,” ಎಂದು ಬರೆದಿದೆಯಲ್ಲವೇ? ಕಡೇ ಆದಾಮನು ಜೀವಕೊಡುವ ಆತ್ಮನಾದನು.

[46] ಆತ್ಮಿಕವಾದದ್ದು ಮೊದಲು ಬರಲಿಲ್ಲ, ಪ್ರಾಕೃತವಾದದ್ದೇ ಮೊದಲನೆಯದು, ಅನಂತರ ಆತ್ಮಿಕವಾದದ್ದು.

[47] ಮೊದಲನೆಯ ಮನುಷ್ಯ, ಭೂಮಿಯ ಮಣ್ಣಿನವನಾಗಿದ್ದಾನೆ, ಎರಡನೆಯ ಮನುಷ್ಯನು ಪರಲೋಕದಿಂದ ಬಂದವನು.

[48] ಮಣ್ಣಿನ ಮನುಷ್ಯನು ಎಂಥವನೋ, ಮಣ್ಣಿಗೆ ಸೇರಿದವರೂ ಅಂಥವರೇ. ಪರಲೋಕದ ಮನುಷ್ಯನು ಎಂಥವನೋ, ಪರಲೋಕಕ್ಕೆ ಸಂಬಂಧಿಸಿದವರೂ ಅಂಥವರಾಗಿರುವರು.

[49] ನಾವು ಮಣ್ಣಿನ ಮನುಷ್ಯನ ಸಾರೂಪ್ಯವನ್ನು ಧರಿಸಿಕೊಂಡಿರುವ ಪ್ರಕಾರ, ಪರಲೋಕದ ಮನುಷ್ಯನ ಸಾರೂಪ್ಯವನ್ನೂ ಧರಿಸಿಕೊಳ್ಳುವೆವು.

[50] ಪ್ರಿಯರೇ, ನಾನು ಹೇಳುವುದೇನೆಂದರೆ, ರಕ್ತಮಾಂಸವು ದೇವರ ರಾಜ್ಯಕ್ಕೆ ಬಾಧ್ಯವಾಗಲಾರವು. ಅಳಿಯುವಂಥದ್ದು ಅಮರತ್ವಕ್ಕೆ ಬಾಧ್ಯವಾಗಲಾರದು.

[51] ನಾನು ರಹಸ್ಯವಾಗಿದ್ದ ಸಂಗತಿಯನ್ನು ನಿಮಗೆ ಹೇಳುತ್ತೇನೆ ಕೇಳಿರಿ: ನಾವೆಲ್ಲರೂ ನಿದ್ರೆ ಹೋಗುವುದಿಲ್ಲ, ನಾವೆಲ್ಲರೂ ರೂಪಾಂತರವಾಗುವೆವು.

[52] ಆದರೆ ಒಂದು ಕ್ಷಣದಲ್ಲೇ, ರೆಪ್ಪೆ ಬಡಿಯುವಷ್ಟರಲ್ಲಿ, ಕಡೇ ತುತೂರಿಯು ಊದಲಾಗುವುದು. ತುತೂರಿ ಧ್ವನಿಯಾಗುವಾಗ, ಸತ್ತವರು ಅಮರತ್ವಪಡೆದು ಎಬ್ಬಿಸಲಾಗುವರು, ನಾವು ರೂಪಾಂತರವಾಗುವೆವು.

[53] ಅಳಿಯುವ ಈ ದೇಹವು ಅಮರತ್ವವನ್ನು ಧರಿಸಿಕೊಳ್ಳುವುದು, ಮರಣಾಧೀನವಾಗಿರುವ ಈ ದೇಹವು ಅಮರತ್ವವನ್ನು ಧರಿಸಿಕೊಳ್ಳುವುದು.

[54] ನಶಿಸಿಹೋಗುವಂಥದ್ದು ನಶಿಸಿಹೋಗದಂಥದ್ದನ್ನೂ, ಮರಣಾಧೀನವಾದ ಈ ದೇಹವು ಅಮರತ್ವವನ್ನೂ ಧರಿಸಿಕೊಳ್ಳುವಾಗ, ಬರೆದಿರುವ ಈ ಮಾತುಗಳು ನೆರವೇರುವುದು: “ಮರಣವು ನುಂಗಿಯೇ ಹೋಯಿತು, ಜಯವಾಯಿತು.”

[55] “ಓ ಮರಣವೇ, ನಿನ್ನ ಜಯವು ಎಲ್ಲಿ? ಓ ಮರಣವೇ, ನಿನ್ನ ವಿಷದ ಕೊಂಡಿ ಎಲ್ಲಿ?”

[56] ಮರಣದ ಕೊಂಡಿ ಪಾಪವೇ ಮತ್ತು ಪಾಪದ ಶಕ್ತಿಯು ನಿಯಮವೇ.

[57] ಆದರೆ ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಮೂಲಕ ನಮಗೆ ಜಯವನ್ನು ಕೊಡುವ ದೇವರಿಗೆ ಸ್ತೋತ್ರ.

[58] ಆದ್ದರಿಂದ, ನನ್ನ ಪ್ರಿಯ ಸಹೋದರರೇ, ಸ್ಥಿರವಾಗಿ ನಿಲ್ಲಿರಿ. ಯಾವುದೂ ನಿಮ್ಮನ್ನು ಕದಲಿಸದಿರಲಿ. ಕರ್ತನಲ್ಲಿ ನಿಮ್ಮ ಪ್ರಯಾಸವು ನಿಷ್ಫಲವಾಗುವುದಿಲ್ಲವೆಂದು ತಿಳಿದು, ಕರ್ತನ ಕೆಲಸಕ್ಕೆ ಯಾವಾಗಲೂ ನಿಮ್ಮನ್ನು ಸಂಪೂರ್ಣವಾಗಿ ಒಪ್ಪಿಸಿಕೊಡಿರಿ.

1 ಕೊರಿಂಥದವರಿಗೆ — Chapters