[1] ಯೆಹೂದ್ಯರಲ್ಲದವರಲ್ಲಿ ನಡೆಯದೇ ಇರುವಂಥ ಅನೈತಿಕತೆ ನಿಮ್ಮಲ್ಲಿದೆಯೆಂದು ವಾಸ್ತವವಾಗಿ ವರದಿ ಬಂದಿದೆ: ಒಬ್ಬನು ತನ್ನ ತಂದೆಯ ಹೆಂಡತಿಯನ್ನು ಇಟ್ಟುಕೊಂಡಿದ್ದಾನಂತೆ.
[2] ಹೀಗಿದ್ದರೂ ಗರ್ವಪಡುತ್ತಿದ್ದೀರಲ್ಲಾ! ನೀವು ದುಃಖಪಟ್ಟು, ಈ ಕಾರ್ಯ ಮಾಡಿದವನನ್ನು ನಿಮ್ಮೊಳಗಿಂದ ಬಹಿಷ್ಕರಿಸಬೇಕಲ್ಲವೇ?
[3] ನಾನು ಸ್ವತಃ ನಿಮ್ಮ ಮಧ್ಯದಲ್ಲಿ ಇರದಿದ್ದರೂ ಆತ್ಮದಲ್ಲಿ ನಿಮ್ಮೊಂದಿಗಿದ್ದೇನೆ. ಈ ಕಾರ್ಯಮಾಡಿದವನ ಮೇಲೆ ಆಗಲೇ ಹತ್ತಿರವಿದ್ದವನಂತೆ ನಮಗೆ ಕರ್ತ ಆಗಿರುವ ಯೇಸುವಿನ ಹೆಸರಿನಲ್ಲಿ ತೀರ್ಪುಮಾಡಿದ್ದೇನೆ.
[4] ನೀವು ಕರ್ತ ಯೇಸುವಿನ ಹೆಸರಿನಲ್ಲಿ ಸಭೆಯಾಗಿ ಬಂದು ಸೇರಿದಾಗ, ನಾನೂ ಆತ್ಮದಲ್ಲಿ ನಿಮ್ಮೊಂದಿಗಿದ್ದು ನಮಗೆ ಕರ್ತ ಆಗಿರುವ ಯೇಸುವಿನ ಸಾನಿಧ್ಯ ಶಕ್ತಿಯೊಂದಿರುವಾಗ,
[5] ಕರ್ತ ಯೇಸುವಿನ ಪುನರಾಗಮನ ದಿನದಲ್ಲಿ ಆ ಮನುಷ್ಯನ ಆತ್ಮವು ರಕ್ಷಣೆ ಹೊಂದುವಂತೆಯೂ ಅವನ ಪಾಪಭರಿತ ಶರೀರವು ನಾಶವಾಗುವಂತೆಯೂ ಅವನನ್ನು ಸೈತಾನನಿಗೆ ಒಪ್ಪಿಸಿ ಬಿಡುತ್ತೇನೆ.
[6] ನೀವು ಜಂಬ ಕೊಚ್ಚಿಕೊಳ್ಳುವುದು ಸರಿಯಲ್ಲ. ಸ್ವಲ್ಪ ಹುಳಿ ಕಲಸಿದರೆ ಕಣಕವೆಲ್ಲಾ ಹುಳಿಯಾಗುತ್ತದೆಂಬುದು ನಿಮಗೆ ತಿಳಿಯದೋ?
[7] ಹೊಸ ಕಣಕವಾಗುವಂತೆ ಹುಳಿಯನ್ನು ತೆಗೆದುಹಾಕಿರಿ. ನೀವು ಹುಳಿಯಿಲ್ಲದವರಾಗಿದ್ದೀರಲ್ಲ. ಏಕೆಂದರೆ ನಮ್ಮ ಪಸ್ಕದ ಕುರಿಯಾದ ಕ್ರಿಸ್ತ ಯೇಸು ಯಜ್ಞಾರ್ಪಿತನಾಗಿದ್ದಾರೆ.
[8] ಆದಕಾರಣ ಹಗೆತನ, ದುಷ್ಟತನ, ಎಂಬ ಹಳೇ ಹುಳಿಯಿಂದಲ್ಲ, ಯಥಾರ್ಥತೆ ಹಾಗೂ ಸತ್ಯ ಎಂಬ ಹುಳಿಯಿಲ್ಲದ ರೊಟ್ಟಿಯಿಂದಲೇ ಹಬ್ಬವನ್ನು ಆಚರಿಸೋಣ.
[9] ಅನೈತಿಕರೊಡನೆ ಸಹವಾಸ ಮಾಡಬಾರದೆಂದು ನಾನು ಪತ್ರದಲ್ಲಿ ಬರೆದಿದ್ದೆನಷ್ಟೆ.
[10] ಈ ಲೋಕದಲ್ಲಿರುವ ಎಲ್ಲಾ ಅನೈತಿಕರು, ಲೋಭಿಗಳು, ಸುಲಿಗೆ ಮಾಡುವವರು, ವಿಗ್ರಹಾರಾಧಕರು ಇಂಥವರ ಸಹವಾಸವನ್ನು ನೀವು ಬಿಟ್ಟು ಇರಬೇಕೆಂಬುದು ನನ್ನ ಅರ್ಥವಲ್ಲ. ಹಾಗಿದ್ದರೆ, ನೀವು ಈ ಲೋಕವನ್ನೇ ಬಿಟ್ಟು ಹೋಗಬೇಕಾಗುವುದು.
[11] ಆದರೆ ಸಹೋದರಿ ಅಥವಾ ಸಹೋದರನೆನಿಸಿಕೊಂಡವನು ಜಾರನಾದರೂ ಲೋಭಿಯಾದರೂ ವಿಗ್ರಹಾರಾಧಕನಾದರೂ ಪರನಿಂದಕನಾದರೂ ಕುಡುಕನಾದರೂ ಸುಲಿಗೆ ಮಾಡುವವನಾದರೂ ಆಗಿದ್ದರೆ, ಅಂಥವರ ಸಹವಾಸ ಮಾಡಬೇಡಿರಿ. ಅಂಥವರ ಸಂಗಡ ಊಟ ಮಾಡಲೂ ಬೇಡಿರಿ ಎಂದು ಈಗ ಬರೆಯುತ್ತಿದ್ದೇನೆ.
[12] ಸಭೆಗೆ ಸೇರದಿರುವ ಹೊರಗಿನವರನ್ನು ತೀರ್ಪುಮಾಡುವುದಕ್ಕೆ ನಾನು ಯಾರು? ಸಭೆಯ ಒಳಗಿನವರನ್ನು ತೀರ್ಪುಮಾಡಬೇಕಾದವರು ನೀವಲ್ಲವೇ?
[13] ಆದರೆ ಹೊರಗಿನವರನ್ನು ತೀರ್ಪುಮಾಡುವವರು ದೇವರೇ. “ಆ ದುಷ್ಟನನ್ನು ನಿಮ್ಮಿಂದ ತೆಗೆದು ಹೊರಗೆ ಹಾಕಿರಿ.”