[1] ಪ್ರಿಯರೇ, ಈಗ ಆತ್ಮಿಕ ವರಗಳನ್ನು ಕುರಿತು ನೀವು ಅಜ್ಞಾನಿಗಳಾಗಿರಬಾರದೆಂದು ಅಪೇಕ್ಷಿಸುತ್ತೇನೆ.
[2] ನೀವು ಕ್ರಿಸ್ತನನ್ನು ನಂಬದಿದ್ದಾಗ, ಹೇಗೆ ಮೂಕ ವಿಗ್ರಹಗಳ ಕಡೆಗೆ ಪ್ರಭಾವಗೊಂಡು ದಾರಿತಪ್ಪಿ ಹೋಗಿದ್ದಿರಿ ಎಂಬುದನ್ನು ಬಲ್ಲಿರಿ.
[3] ಹೀಗಿರುವುದರಿಂದ ನಾನು ನಿಮಗೆ ತಿಳಿಸುವುದನ್ನು ಕೇಳಿರಿ: ದೇವರಾತ್ಮರಿಂದ ಮಾತನಾಡುವ ಯಾವನೂ, “ಯೇಸು ಶಾಪಗ್ರಸ್ತನು,” ಎಂದು ಹೇಳುವುದಿಲ್ಲ. ಪವಿತ್ರಾತ್ಮರಿಂದಲೇ ಹೊರತು, ಯಾವನೂ, “ಯೇಸು ಕರ್ತದೇವರು,” ಎಂದು ಹೇಳಲಾರನು.
[4] ಆತ್ಮಿಕ ವರಗಳಲ್ಲಿ ಬೇರೆ ಬೇರೆ ವಿಧಗಳಿವೆ, ಆದರೆ ಪವಿತ್ರಾತ್ಮರು ಒಬ್ಬರೇ.
[5] ಸೇವೆಗಳಲ್ಲಿ ಬೇರೆ ಬೇರೆ ವಿಧಗಳಿವೆ, ಆದರೆ ಕರ್ತ ಆಗಿರುವವರು ಒಬ್ಬರೇ.
[6] ಕಾರ್ಯರೀತಿಗಳಲ್ಲಿ ಬೇರೆ ಬೇರೆ ವಿಧಗಳಿವೆ, ಎಲ್ಲರಲ್ಲಿಯೂ ಎಲ್ಲಾ ಕಾರ್ಯಗಳನ್ನು ಸಾಧಿಸುವ ದೇವರು ಒಬ್ಬರೇ.
[7] ಸರ್ವರ ಪ್ರಯೋಜನಕ್ಕಾಗಿ ಪವಿತ್ರಾತ್ಮರ ವರಗಳನ್ನು ಪ್ರತಿಯೊಬ್ಬರಿಗೆ ಕೊಡಲಾಗಿದೆ.
[8] ಹೇಗೆಂದರೆ, ಪವಿತ್ರಾತ್ಮ ದೇವರ ಮೂಲಕ ಒಬ್ಬನಿಗೆ ಜ್ಞಾನ ವಾಕ್ಯವು, ಒಬ್ಬನಿಗೆ ಆ ಆತ್ಮರ ಅನುಸಾರವಾಗಿ ವಿದ್ಯಾವಾಕ್ಯವು,
[9] ಒಬ್ಬನಿಗೆ ಅದೇ ಆತ್ಮನಿಂದ ನಂಬಿಕೆಯು, ಮತ್ತೊಬ್ಬನಿಗೆ ಅದೇ ಆತ್ಮನಿಂದ ರೋಗ ವಾಸಿಮಾಡುವ ವರಗಳು ಕೊಡಲಾಗಿವೆ.
[10] ಒಬ್ಬನಿಗೆ ಅದ್ಭುತಕಾರ್ಯಗಳ ಶಕ್ತಿಯೂ ಒಬ್ಬನಿಗೆ ಪ್ರವಾದನೆಯೂ ಒಬ್ಬನಿಗೆ ಆತ್ಮಗಳನ್ನು ವಿವೇಚಿಸುವ ವರವೂ ಒಬ್ಬನಿಗೆ ವಿವಿಧ ಭಾಷೆಗಳನ್ನಾಡುವ ಶಕ್ತಿಯೂ ಮತ್ತೊಬ್ಬನಿಗೆ ಅನ್ಯಭಾಷೆಗಳ ಅರ್ಥವನ್ನು ಹೇಳುವ ವರವೂ ಕೊಡಲಾಗುತ್ತದೆ.
[11] ಈ ವರಗಳನ್ನೆಲ್ಲ ಆ ಪವಿತ್ರಾತ್ಮ ಒಬ್ಬರೇ ತಮ್ಮ ಚಿತ್ತಾನುಸಾರ ಪ್ರತಿಯೊಬ್ಬನಿಗೂ ಹಂಚಿಕೊಡುತ್ತಾರೆ.
[12] ದೇಹವು ಅನೇಕ ಅಂಗಗಳುಳ್ಳದ್ದಾಗಿದ್ದರೂ ಒಂದಾಗಿರುವಂತೆಯೂ, ಅನೇಕ ಅಂಗಗಳೆಲ್ಲವು ಒಂದೇ ದೇಹವನ್ನು ರೂಪಿಸುವಂತೆಯೂ, ಕ್ರಿಸ್ತನ ದೇಹವು ಸಹ ಇರುತ್ತದೆ.
[13] ಯೆಹೂದ್ಯರಾಗಲಿ, ಗ್ರೀಕರಾಗಲಿ, ದಾಸರಾಗಲಿ, ಸ್ವತಂತ್ರರಾಗಲಿ ಒಂದೇ ದೇಹವಾಗುವಂತೆ, ನಾವೆಲ್ಲರೂ ಒಬ್ಬರೇ ಆತ್ಮದಿಂದ ಸ್ನಾನ ಮಾಡಿಸಿಕೊಂಡೆವು. ನಮ್ಮೆಲ್ಲರಿಗೂ ಒಬ್ಬ ಆತ್ಮವನ್ನು ಪಾನವಾಗಿ ಕೊಡಲಾಗಿದೆ.
[14] ದೇಹವು ಒಂದೇ ಅಂಗವಾಗಿರದೆ, ಅನೇಕ ಅಂಗಗಳುಳ್ಳದ್ದಾಗಿದೆ.
[15] ಒಂದು ವೇಳೆ ಕಾಲು, “ನಾನು ಕೈಯಲ್ಲದ ಕಾರಣ, ದೇಹಕ್ಕೆ ಸೇರಿಲ್ಲ,” ಎಂದು ಹೇಳಿದರೂ, ಅದು ದೇಹಕ್ಕೆ ಅಂಗವಾಗಿ ಸೇರದಿರುವುದೇ?
[16] ಒಂದು ವೇಳೆ ಕಿವಿ, “ನಾನು ಕಣ್ಣಲ್ಲದ ಕಾರಣ, ದೇಹಕ್ಕೆ ಸೇರಿಲ್ಲ,” ಎಂದು ಹೇಳಿದರೂ ಅದು ದೇಹಕ್ಕೆ ಅಂಗವಾಗಿ ಸೇರದಿರುವುದೇ?
[17] ದೇಹವೆಲ್ಲಾ ಕಣ್ಣಾದರೆ ನಾವು ಕೇಳುವುದೆಲ್ಲಿ? ಅಥವಾ ಅದೆಲ್ಲಾ ಕಿವಿಯಾದರೆ, ಮೂಸಿ ನೋಡುವುದೆಲ್ಲಿ?
[18] ಆದರೆ ದೇವರು ಆ ಅಂಗಗಳಲ್ಲಿ ಪ್ರತಿಯೊಂದನ್ನು ತಮ್ಮ ಇಷ್ಟದ ಪ್ರಕಾರ ದೇಹದಲ್ಲಿ ಇಟ್ಟಿದ್ದಾರೆ.
[19] ಅವೆಲ್ಲವೂ ಒಂದೇ ಅಂಗವಾಗಿದ್ದರೆ, ಆಗ ದೇಹವೆಲ್ಲಿ?
[20] ಹೀಗೆ ಅಂಗಗಳು ಅನೇಕವಾಗಿದ್ದರೂ, ದೇಹ ಮಾತ್ರ ಒಂದೇ.
[21] ಕಣ್ಣು ಕೈಗೆ, “ನೀನು ನನಗೆ ಅವಶ್ಯವಿಲ್ಲ!” ಎಂದು ಹೇಳಲಾಗದು. ತಲೆಯು ಕಾಲುಗಳಿಗೆ, “ನೀನು ನನಗೆ ಅವಶ್ಯವಿಲ್ಲ!” ಎಂದು ಹೇಳಲಾಗದು.
[22] ಆದರೆ ದೇಹದಲ್ಲಿ ಬಲಹೀನವಾದವುಗಳೆಂದು ತೋರುವ ಅಂಗಗಳೇ ನಮಗೆ ಎಷ್ಟೋ ಹೆಚ್ಚಾಗಿ ಅವಶ್ಯವಾಗಿವೆ.
[23] ಕಡಿಮೆ ಗೌರವವುಳ್ಳವುಗಳೆಂದು ಯೋಚಿಸುವವುಗಳನ್ನು ವಿಶೇಷ ಗೌರವದಿಂದ ನೋಡುತ್ತೇವೆ. ಬಹಿರಂಗಪಡಿಸದ ಅಂಗಗಳನ್ನು ವಿಶೇಷ ಮರ್ಯಾದೆಯಿಂದ ಸಂರಕ್ಷಿಸುತ್ತೇವೆ.
[24] ನಾವು ಬಾಹ್ಯ ಅಂಗಗಳಿಗೆ ಹೆಚ್ಚಿನ ವಿಶೇಷತೆಯನ್ನು ಕೊಡುವುದಿಲ್ಲ. ಆದರೆ ಗೌರವ ಕಡಿಮೆಯಿರುವ ಅಂಗಗಳಿಗೆ, ದೇವರು ಹೆಚ್ಚು ಗೌರವವನ್ನು ಕೊಡುವಂತೆ, ಎಲ್ಲಾ ಅಂಗಗಳನ್ನು ಒಟ್ಟಾಗಿ ದೇಹದಲ್ಲಿಟ್ಟಿದ್ದಾರೆ.
[25] ಹೀಗೆ ದೇವರು ದೇಹದಲ್ಲಿ ಭಿನ್ನಭೇದವಿಲ್ಲದೇ, ಎಲ್ಲವೂ ಒಂದಕ್ಕೊಂದು ಪರಸ್ಪರ ಚಿಂತಿಸುವುದಾಗಿ ಕೂಡಿ ಹೋಗುವಂತೆ ಸಮಾನವಾಗಿ ಮಾಡಿದ್ದಾರೆ.
[26] ದೇಹದ ಒಂದು ಅಂಗ ಬಾಧೆಪಟ್ಟರೆ, ಎಲ್ಲಾ ಅಂಗಗಳು ಬಾಧೆಪಡುತ್ತದೆ. ಒಂದು ಅಂಗಕ್ಕೆ ಗೌರವ ದೊರೆತರೆ, ಅದರೊಂದಿಗೆ ಪ್ರತಿಯೊಂದು ಅಂಗವೂ ಆನಂದಪಡುತ್ತವೆ.
[27] ಈಗ ನೀವು ಕ್ರಿಸ್ತನ ದೇಹವಾಗಿದ್ದೀರಿ. ನಿಮ್ಮಲ್ಲಿ ಪ್ರತಿಯೊಬ್ಬರೂ ಆ ದೇಹದ ಅಂಗಗಳಾಗಿದ್ದೀರಿ.
[28] ದೇವರು ತಮ್ಮ ಸಭೆಯಲ್ಲಿ ಮೊದಲನೆಯದಾಗಿ ಅಪೊಸ್ತಲರನ್ನು, ಎರಡನೆಯದಾಗಿ ಪ್ರವಾದಿಗಳನ್ನು, ಮೂರನೆಯದಾಗಿ ಬೋಧಕರನ್ನು ನೇಮಿಸಿದ್ದಾರೆ. ಅನಂತರ ಅದ್ಭುತಕಾರ್ಯಗಳನ್ನು ಮಾಡುವವರನ್ನು, ರೋಗಗಳನ್ನು ಗುಣಪಡಿಸುವ ವರವನ್ನು, ಪರೋಪಕಾರಿಗಳನ್ನು, ಆಡಳಿತಗಾರರನ್ನು, ವಿವಿಧ ವಾಣಿಗಳನ್ನಾಡುವವರನ್ನು ನೇಮಿಸಿದ್ದಾರೆ.
[29] ಎಲ್ಲರೂ ಅಪೊಸ್ತಲರೋ? ಎಲ್ಲರೂ ಪ್ರವಾದಿಗಳೋ? ಎಲ್ಲರೂ ಬೋಧಕರೋ? ಎಲ್ಲರೂ ಅದ್ಭುತ ಮಾಡುವವರೋ?
[30] ಎಲ್ಲರೂ ರೋಗಗಳನ್ನು ಗುಣಪಡಿಸುವ ವರವನ್ನು ಹೊಂದಿದವರೋ? ಎಲ್ಲರೂ ಪರೋಪಕಾರಿಗಳೋ? ಎಲ್ಲರೂ ಆಡಳಿತಗಾರರೋ? ಎಲ್ಲರೂ ಅನ್ಯಭಾಷೆಗಳನ್ನಾಡುವವರೋ? ಅಥವಾ ಅನ್ಯಭಾಷೆಗಳ ವ್ಯಾಖ್ಯಾನ ಮಾಡುವವರೋ?
[31] ಆದರೆ ನೀವು ಆಸಕ್ತಿಯಿಂದ ಶ್ರೇಷ್ಠ ವರಗಳನ್ನು ಅಪೇಕ್ಷಿಸಿರಿ. ನಾನು ನಿಮಗೆ ಇನ್ನೂ ಸರ್ವೋತ್ತಮವಾದ ಮಾರ್ಗವನ್ನು ತೋರಿಸುತ್ತೇನೆ.