[1] ಪ್ರಿಯರೇ, ನಾನು ನಿಮ್ಮ ಬಳಿಗೆ ಬಂದಾಗ ವಾಕ್ಚಾತುರ್ಯದಿಂದಾಗಲಿ, ಮಾನವೀಯ ಜ್ಞಾನದಿಂದಾಗಲಿ ದೇವರ ವಾಕ್ಯವನ್ನು ಸಾರುವವನಾಗಿ ಬರಲಿಲ್ಲ.
[2] ಶಿಲುಬೆಗೆ ಹಾಕಲಾದ ಯೇಸು ಕ್ರಿಸ್ತನನ್ನೇ ಹೊರತು ನಿಮ್ಮಲ್ಲಿ ಬೇರೆ ಯಾವುದನ್ನೂ ತಿಳಿಯದವನಾಗಿರುವೆನೆಂದು ತೀರ್ಮಾನಿಸಿಕೊಂಡೆನು.
[3] ನಾನು ನಿಮ್ಮ ಬಳಿಗೆ ಬಂದಾಗ ಬಲಹೀನನೂ ಬಹಳವಾಗಿ ಭಯಪಟ್ಟು ನಡುಗುವವನೂ ಆಗಿದ್ದೆನು.
[4] ನನ್ನ ಬೋಧನೆಯಲ್ಲಿಯೂ ಪ್ರಸಂಗದಲ್ಲಿಯೂ ಜ್ಞಾನ ಹಾಗೂ ಮನವೊಲಿಸುವ ವಾಕ್ಯಗಳನ್ನು ಪ್ರಯೋಗಿಸದೆ, ದೇವರಾತ್ಮನ ಶಕ್ತಿಯನ್ನೇ ಪ್ರಯೋಗಿಸಿದೆನು.
[5] ನಿಮ್ಮ ನಂಬಿಕೆಯು ಮನುಷ್ಯ ಜ್ಞಾನದ ಮೇಲೆ ಅವಲಂಬಿಸದೆ ದೇವರ ಶಕ್ತಿಯ ಮೇಲೆ ಅವಲಂಬಿಸಬೇಕೆಂದು ನಾನು ಹೀಗೆ ಮಾಡಿದೆನು.
[6] ಹೀಗಿದ್ದರೂ ಪರಿಪೂರ್ಣರಲ್ಲಿ ಜ್ಞಾನದ ಬಗ್ಗೆ ಮಾತನಾಡುತ್ತೇವೆ. ಅದು ಇಹಲೋಕದ ಜ್ಞಾನವಲ್ಲ. ಅಳಿದು ಹೋಗುವ ಇಹಲೋಕದ ಅಧಿಕಾರಿಗಳ ಜ್ಞಾನವೂ ಅಲ್ಲ.
[7] ನಾವು ದೇವರ ರಹಸ್ಯ ಜ್ಞಾನವನ್ನು ಕುರಿತು ಮಾತನಾಡುತ್ತೇವೆ. ಅದು ದೇವರು ನಮ್ಮ ಮಹಿಮೆಗಾಗಿ ಯುಗಗಳ ಮುಂಚೆಯೇ ನೇಮಿಸಿ, ಮರೆಮಾಡಿದ ಜ್ಞಾನವೇ ಆಗಿರುತ್ತದೆ.
[8] ಇದನ್ನು ಇಹಲೋಕದ ಅಧಿಕಾರಿಗಳಲ್ಲಿ ಒಬ್ಬರಾದರೂ ಅರಿಯಲಿಲ್ಲ. ಅರಿತಿದ್ದರೆ, ಅವರು ಮಹಿಮೆಯುಳ್ಳ ಕರ್ತದೇವರನ್ನು ಶಿಲುಬೆಗೇರಿಸುತ್ತಿರಲಿಲ್ಲ.
[9] ಪವಿತ್ರ ವೇದದಲ್ಲಿ ಬರೆದಿರುವ ಪ್ರಕಾರ: “ದೇವರು ತಮ್ಮನ್ನು ಪ್ರೀತಿಸುವವರಿಗಾಗಿ ಸಿದ್ಧ ಮಾಡಿರುವಂಥದ್ದನ್ನು ಯಾವ ಕಣ್ಣೂ ಕಾಣಲಿಲ್ಲ, ಯಾವ ಕಿವಿಯೂ ಕೇಳಲಿಲ್ಲ, ಅದು ಮನುಷ್ಯನ ಹೃದಯದಲ್ಲಿಯೂ ಹುಟ್ಟಲಿಲ್ಲ.”
[10] ನಮಗಾದರೋ ದೇವರು ತಮ್ಮ ಪವಿತ್ರಾತ್ಮರ ಮೂಲಕ ಇವುಗಳನ್ನು ಪ್ರಕಟಿಸಿದ್ದಾರೆ. ಪವಿತ್ರಾತ್ಮರು ಎಲ್ಲಾ ವಿಷಯಗಳನ್ನು ಹಾಗೂ ದೇವರ ಆಳವಾದ ರಹಸ್ಯಗಳನ್ನು ಪರಿಶೋಧಿಸುವವರಾಗಿದ್ದಾರೆ.
[11] ಮನುಷ್ಯನ ಆಲೋಚನೆಗಳು ಅವನಲ್ಲಿರುವ ಆತ್ಮಕ್ಕೆ ಹೊರತು ಮತ್ತಾರಿಗೆ ತಿಳಿಯುವುದು? ಹಾಗೆಯೇ, ದೇವರ ಆಲೋಚನೆಗಳನ್ನು ಪವಿತ್ರಾತ್ಮರಲ್ಲದೆ ಬೇರೆ ಯಾರೂ ಗ್ರಹಿಸಲಾರರು.
[12] ನಾವು ಪ್ರಾಪಂಚಿಕ ಆತ್ಮವನ್ನು ಹೊಂದದೆ ದೇವರು ನಮಗೆ ಉಚಿತವಾಗಿ ದಯಪಾಲಿಸಿರುವಂಥವುಗಳನ್ನು ತಿಳಿದುಕೊಳ್ಳುವುದಕ್ಕಾಗಿ ದೇವರಿಂದ ಬಂದ ಆತ್ಮರನ್ನು ಹೊಂದಿದ್ದೇವೆ.
[13] ನಾವು ಮನುಷ್ಯ ಜ್ಞಾನವು ಕಲಿಸಿದ ಮಾತುಗಳಿಂದ ಮಾತನಾಡದೆ, ದೇವರ ಆತ್ಮರು ಕಲಿಸಿಕೊಟ್ಟ ಮಾತುಗಳಿಂದ ಇವುಗಳನ್ನು ಮಾತಾಡುತ್ತೇವೆ. ಹೀಗೆ ನಾವು ಆತ್ಮಿಕ ಸತ್ಯಗಳನ್ನು ದೇವರ ಆತ್ಮರ ಮಾತುಗಳಿಂದಲೇ ಸ್ಪಷ್ಟಪಡಿಸುತ್ತೇವೆ.
[14] ಆದರೆ ಭೌತಿಕ ಮನುಷ್ಯನು ದೇವರಾತ್ಮರ ವಿಷಯಗಳನ್ನು ಸ್ವೀಕರಿಸುವುದಿಲ್ಲ. ಅವು ಅವನಿಗೆ ಬುದ್ಧಿಹೀನವಾಗಿ ತೋರುತ್ತವೆ. ಏಕೆಂದರೆ ಆತ್ಮಿಕ ವಿವೇಚನೆಯಿಂದ ತಿಳಿಯಬೇಕಾಗಿದ್ದ ಕಾರಣ ಅವನು ಅವುಗಳನ್ನು ತಿಳಿದುಕೊಳ್ಳಲಾರನು.
[15] ಆದರೆ ಆತ್ಮಿಕ ಮನುಷ್ಯನು ಎಲ್ಲವನ್ನೂ ವಿವೇಚಿಸಿಕೊಳ್ಳುತ್ತಾನೆ. ಆದರೆ ಅವನಿಗೆ ಬೇರೆ ಯಾರೂ ತೀರ್ಪುಮಾಡಲಾಗದು.
[16] ಏಕೆಂದರೆ, “ಕರ್ತದೇವರ ಮನಸ್ಸನ್ನು ತಿಳಿದುಕೊಂಡು, ಅವರಿಗೆ ಉಪದೇಶಿಸುವವನಾರು?” ಆದರೆ ನಮಗೆ ಕ್ರಿಸ್ತ ಯೇಸುವಿನ ಮನಸ್ಸು ಇದೆ.