Skip to content
Opens in a new window
Listen to this chapter • 2:24

[1] ನಾನು ಮನುಷ್ಯರ ಭಾಷೆಗಳನ್ನೂ, ದೇವದೂತರ ಭಾಷೆಗಳನ್ನೂ ಮಾತನಾಡುವವನಾದರೂ ನನಗೆ ಪ್ರೀತಿಯಿಲ್ಲದಿದ್ದರೆ, ನಾದ ಕೊಡುವ ಕಂಚೂ ಗಣಗಣಿಸುವ ತಾಳವೂ ಆಗಿದ್ದೇನೆ.

[2] ನನಗೆ ಪ್ರವಾದನ ವರವಿದ್ದರೂ ನಾನು ಎಲ್ಲಾ ರಹಸ್ಯಗಳನ್ನೂ, ಸಕಲ ವಿದ್ಯೆಯನ್ನು ತಿಳಿದಿದ್ದರೂ ಬೆಟ್ಟಗಳನ್ನು ಕದಲಿಸುವಷ್ಟು ನಂಬಿಕೆಯಿದ್ದರೂ ನನಗೆ ಪ್ರೀತಿಯಿಲ್ಲದಿದ್ದರೆ, ಶೂನ್ಯನಾಗಿದ್ದೇನೆ.

[3] ನಾನು ನನ್ನ ಎಲ್ಲಾ ಆಸ್ತಿಯನ್ನು ದಾನಮಾಡಿದರೂ, ನಾನು ಹೊಗಳಿಕೊಳ್ಳುವಂತೆ ನನ್ನ ದೇಹವನ್ನು ಸುಡುವುದಕ್ಕಾಗಿ ಒಪ್ಪಿಸಿಕೊಟ್ಟರೂ ಪ್ರೀತಿಯು ನನಗಿಲ್ಲದಿದ್ದರೆ, ನನಗೇನೂ ಪ್ರಯೋಜನವಾಗುವುದಿಲ್ಲ.

[4] ಪ್ರೀತಿ ತಾಳ್ಮೆಯುಳ್ಳದ್ದು, ಪ್ರೀತಿ ದಯೆಯುಳ್ಳದ್ದು, ಪ್ರೀತಿ ಅಸೂಯೆಪಡುವುದಿಲ್ಲ, ಪ್ರೀತಿ ಹೊಗಳಿಕೊಳ್ಳುವುದಿಲ್ಲ, ಗರ್ವಪಡುವುದಿಲ್ಲ,

[5] ಪ್ರೀತಿಯು ಇತರರನ್ನು ಅವಮಾನಪಡಿಸುವುದಿಲ್ಲ, ಸ್ವಹಿತವನ್ನೇ ಹುಡುಕುವುದಿಲ್ಲ, ಸುಲಭವಾಗಿ ಸಿಟ್ಟುಗೊಳ್ಳುವುದಿಲ್ಲ, ಅಪಕಾರವನ್ನು ಎಣಿಸುವುದಿಲ್ಲ,

[6] ಪ್ರೀತಿ ಕೆಟ್ಟದ್ದರಲ್ಲಿ ಸಂತೋಷಪಡುವುದಿಲ್ಲ, ಸತ್ಯದೊಂದಿಗೆ ಸಂತೋಷ ಪಡುತ್ತದೆ.

[7] ಯಾವಾಗಲೂ ಸಂರಕ್ಷಿಸುತ್ತದೆ, ಯಾವಾಗಲೂ ನಂಬುತ್ತದೆ, ಯಾವಾಗಲೂ ನಿರೀಕ್ಷಿಸುತ್ತದೆ, ಯಾವಾಗಲೂ ಸಹಿಸಿಕೊಳ್ಳುತ್ತದೆ.

[8] ಪ್ರೀತಿಯು ಎಂದಿಗೂ ಅಳಿದುಹೋಗುವುದಿಲ್ಲ, ಪ್ರವಾದನೆಗಳಾದರೋ ಇಲ್ಲದಂತಾಗುವುವು, ಅನ್ಯ ಭಾಷೆಗಳು ಗತಿಸಿ ಹೋಗುವುವು, ವಿದ್ಯೆಯೋ ಇಲ್ಲದಂತಾಗುವುವು.

[9] ನಾವು ಅಪೂರ್ಣವಾಗಿ ತಿಳಿದುಕೊಂಡಿದ್ದೇವೆ, ಅಪೂರ್ಣವಾಗಿ ಪ್ರವಾದಿಸುತ್ತೇವೆ.

[10] ಆದರೆ ಸಂಪೂರ್ಣವಾದದ್ದು ಬಂದಾಗ, ಭಾಗವಾದದ್ದು ಅಳಿದುಹೋಗುವುದು.

[11] ನಾನು ಬಾಲಕನಾಗಿದ್ದಾಗ, ಬಾಲಕನ ಮಾತುಗಳನ್ನಾಡಿದೆನು, ಬಾಲಕನಂತೆ ಯೋಚಿಸಿದೆನು, ಬಾಲಕನಂತೆಯೇ ತರ್ಕಿಸಿದೆನು. ಪ್ರೌಢನಾದಾಗ ಬಾಲ್ಯದವುಗಳನ್ನು ಬಿಟ್ಟುಬಿಟ್ಟೆನು.

[12] ಈಗ ನಾವು ಕನ್ನಡಿಯಲ್ಲಿ ಮೊಬ್ಬಾಗಿ ನೋಡುತ್ತೇವೆ. ಆಗ ಮುಖಾಮುಖಿಯಾಗಿ ನೋಡುವೆವು. ಈಗ ಸ್ವಲ್ಪ ಮಾತ್ರ ನನಗೆ ತಿಳಿದಿದೆ. ಆಗ ದೇವರು ನನ್ನನ್ನು ಸಂಪೂರ್ಣವಾಗಿ ತಿಳಿದುಕೊಂಡಂತೆ, ನಾನು ಸಂಪೂರ್ಣವಾಗಿ ತಿಳಿದುಕೊಳ್ಳುವೆನು.

[13] ಆದರೆ ಈಗ ನಂಬಿಕೆ, ನಿರೀಕ್ಷೆ, ಪ್ರೀತಿ, ಈ ಮೂರೇ ಉಳಿದಿರುತ್ತವೆ. ಇವುಗಳಲ್ಲಿ ಮಹತ್ತಾದದ್ದು ಪ್ರೀತಿಯೇ.

1 ಕೊರಿಂಥದವರಿಗೆ — Chapters