Skip to content
Opens in a new window
Listen to this chapter • 8:02

[1] ಮತ್ತೊಂದು ದಿನದಲ್ಲಿ, ಯೇಸು ಸಭಾಮಂದಿರದೊಳಕ್ಕೆ ಹೋದನು. ಅಲ್ಲಿ ಕೈಬತ್ತಿದ್ದ ಒಬ್ಬ ಮನುಷ್ಯನಿದ್ದನು.

[2] ಅಲ್ಲಿದ್ದ ಕೆಲವು ಯೆಹೂದ್ಯರು, ಯೇಸುವನ್ನು ದೂಷಿಸುವುದಕ್ಕಾಗಿ ಆತನಲ್ಲಿ ಏನಾದರೂ ತಪ್ಪನ್ನು ಕಂಡುಹಿಡಿಯಲು ಎದುರು ನೋಡುತ್ತಿದ್ದರು. ಸಬ್ಬತ್‌ದಿನದಂದು ಆ ಮನುಷ್ಯನನ್ನು ಯೇಸು ಗುಣಪಡಿಸಬಹುದೆಂದು ಅವರು ಆತನ ಸಮೀಪದಲ್ಲಿಯೇ ಇದ್ದರು.

[3] ಯೇಸು ಕೈಬತ್ತಿದ್ದ ಆ ಮನುಷ್ಯನಿಗೆ, “ಎದ್ದುನಿಲ್ಲು, ಜನರೆಲ್ಲರೂ ನಿನ್ನನ್ನು ನೋಡಲಿ” ಎಂದು ಹೇಳಿದನು.

[4] ನಂತರ ಯೇಸು ಜನರಿಗೆ, “ಸಬ್ಬತ್‌ದಿನದಂದು ಯಾವ ಕಾರ್ಯಗಳನ್ನು ಮಾಡಬೇಕು? ಒಳ್ಳೆಯ ಕಾರ್ಯವನ್ನೇ? ಕೆಟ್ಟಕಾರ್ಯವನ್ನೇ? ಒಂದು ಜೀವವನ್ನು ರಕ್ಷಿಸಬೇಕೇ? ಅಥವಾ ನಾಶಪಡಿಸಬೇಕೇ?” ಎಂದು ಕೇಳಿದನು. ಆಗ ಅವರು ಏನೂ ಉತ್ತರ ಕೊಡಲಾರದೆ ಮೌನವಾಗಿದ್ದರು.

[5] ಯೇಸು ಕೋಪಗೊಂಡು ಜನರ ಕಡೆಗೆ ನೋಡಿದನು. ಅವರ ಮೊಂಡುತನವನ್ನು ಕಂಡು ಆತನಿಗೆ ದುಃಖವಾಯಿತು. ಯೇಸು ಆ ಮನುಷ್ಯನಿಗೆ, “ನಿನ್ನ ಕೈ ಚಾಚು” ಎಂದು ಹೇಳಿದನು. ಅವನು ತನ್ನ ಕೈಯನ್ನು ಯೇಸುವಿನತ್ತ ಚಾಚಿದನು. ಕೂಡಲೇ ಅವನ ಕೈ ವಾಸಿಯಾಯಿತು.

[6] ಆಗ ಫರಿಸಾಯರು ಹೊರಗೆ ಹೋಗಿ, ಹೆರೋದ್ಯರನ್ನು ಕೂಡಿಕೊಂಡು ಯೇಸುವನ್ನು ಯಾವ ರೀತಿ ಕೊಲ್ಲಬೇಕೆಂದು ಆಲೋಚಿಸಿದರು.

[7] ಯೇಸು ತನ್ನ ಶಿಷ್ಯರೊಂದಿಗೆ ಸರೋವರಕ್ಕೆ ಹೊರಟುಹೋದನು. ಗಲಿಲಾಯದ ಅನೇಕ ಜನರು ಆತನನ್ನು ಹಿಂಬಾಲಿಸಿದರು.

[8] ಅನೇಕಾನೇಕ ಜನರು ಜುದೇಯದಿಂದ, ಜೆರುಸಲೇಮಿನಿಂದ, ಇದೂಮಾಯದಿಂದ, ಜೋರ್ಡನ್ ನದಿಯ ಆಚೆಗಿರುವ ಪ್ರದೇಶದಿಂದ ಮತ್ತು ಟೈರ್, ಸೀದೋನ್‌ಗಳ ಸುತ್ತಲಿನ ಪ್ರದೇಶಗಳಿಂದ ಬಂದರು. ಯೇಸುವು ಮಾಡುತ್ತಿದ್ದ ಕಾರ್ಯಗಳ ಬಗ್ಗೆ ಅವರು ಕೇಳಿ ಬಂದಿದ್ದರು.

[9] ಯೇಸು ಈ ಜನಸಮೂಹವನ್ನು ನೋಡಿ ಅವರು ತನ್ನ ಮೈಮೇಲೆ ಬಿದ್ದು ನೂಕಬಹುದೆಂದು ತನಗಾಗಿ ಒಂದು ಚಿಕ್ಕ ದೋಣಿಯನ್ನು ತಂದು ಅದನ್ನು ಸಿದ್ದಪಡಿಸುವಂತೆ ತನ್ನ ಶಿಷ್ಯರಿಗೆ ಹೇಳಿದನು.

[10] ಯೇಸು ಅನೇಕ ಜನರನ್ನು ಗುಣಪಡಿಸಿದನು. ಆದ್ದರಿಂದ ಕಾಯಿಲೆಯಾಗಿದ್ದ ಜನರೆಲ್ಲರೂ ಆತನನ್ನು ಮುಟ್ಟುವುದಕ್ಕಾಗಿ ಆತನ ಮೇಲೆ ಬೀಳುತ್ತಿದ್ದರು. ದೆವ್ವಗಳಿಂದ ಪೀಡಿತರಾಗಿದ್ದ ಕೆಲವು ಜನರು ಅಲ್ಲಿದ್ದರು.

[11] ದೆವ್ವಗಳು ಯೇಸುವನ್ನು ನೋಡಿ, ಆತನ ಮುಂದೆ ಅಡ್ಡಬಿದ್ದು ನಮಸ್ಕರಿಸಿ, “ನೀನು ದೇವಕುಮಾರ” ಎಂದು ಜೋರಾಗಿ ಕೂಗುತ್ತಿದ್ದವು.

[12] ಆದರೆ ಯೇಸು ತಾನು ಯಾರೆಂಬುದನ್ನು ಜನರಿಗೆ ತಿಳಿಸಬಾರದೆಂದು ಅವುಗಳಿಗೆ ಖಂಡಿತವಾಗಿ ಆಜ್ಞಾಪಿಸಿದನು.

[13] ನಂತರ ಯೇಸು ಒಂದು ಬೆಟ್ಟದ ಮೇಲಕ್ಕೆ ಹೋದನು. ಯೇಸು ಕೆಲವು ಜನರಿಗೆ ತನ್ನೊಂದಿಗೆ ಬರಲು ಹೇಳಿದನು. ಯೇಸು ಅಪೇಕ್ಷಿಸಿದ ಜನರು ಇವರೇ. ಈ ಜನರು ಯೇಸುವಿನೊಂದಿಗೆ ಮೇಲಕ್ಕೆ ಹೋದರು.

[14] ಆತನು ಅವರಲ್ಲಿ ಹನ್ನೆರಡು ಮಂದಿಯನ್ನು ತನ್ನ ಅಪೊಸ್ತಲರನ್ನಾಗಿ ಆರಿಸಿಕೊಂಡನು. ಈ ಹನ್ನೆರಡು ಮಂದಿ ತನ್ನೊಂದಿಗಿರಬೇಕೆಂಬುದು ಮತ್ತು ಉಪದೇಶ ಮಾಡುವುದಕ್ಕಾಗಿ ಅವರನ್ನು ಬೇರೆ ಸ್ಥಳಗಳಿಗೆ ಕಳುಹಿಸಬೇಕೆಂಬುದು

[15] ಅಲ್ಲದೆ ದೆವ್ವಗಳಿಂದ ಪೀಡಿತರಾಗಿರುವ ಜನರನ್ನು ಅವುಗಳಿಂದ ಬಿಡಿಸುವುದಕ್ಕೆ ಅವರಿಗೆ ಅಧಿಕಾರ ಕೊಡಬೇಕೆಂಬುದು ಆತನ ಅಪೇಕ್ಷೆಯಾಗಿತ್ತು.

[16] ಯೇಸುವು ಈ ಹನ್ನೆರಡು ಮಂದಿಯನ್ನು ಆರಿಸಿಕೊಂಡನು: ಸೀಮೋನ (ಯೇಸು ಅವನಿಗೆ ಪೇತ್ರನೆಂದು ಹೆಸರನ್ನಿತ್ತನು),

[17] ಜಿಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನ (ಯೇಸು ಅವರಿಗೆ ಬೊವನೆರ್ಗೆಸ್ ಎಂಬ ಹೆಸರನ್ನಿತ್ತನು. ಈ ಹೆಸರಿಗೆ “ಸಿಡಿಲಿನ ಜನರು” ಎಂದರ್ಥ.)

[18] ಅಂದ್ರೆಯ, ಫಿಲಿಪ್ಪ, ಬಾರ್ತೊಲೊಮಾಯ, ಮತ್ತಾಯ, ತೋಮ, ಅಲ್ಫಾಯನ ಮಗನಾದ ಯಾಕೋಬ, ತದ್ದಾಯ, ದೇಶಾಭಿಮಾನಿಯಾದ ಸೀಮೋನ

[19] ಮತ್ತು ಇಸ್ಕರಿಯೋತ ಯೂದ. ಯೇಸುವನ್ನು ಆತನ ವೈರಿಗಳಿಗೆ ಒಪ್ಪಿಸಿದವನೇ ಯೂದ.

[20] ನಂತರ ಯೇಸು ಮನೆಗೆ ಹೋದನು. ಮತ್ತೆ ಅನೇಕ ಜನರು ಅಲ್ಲಿಗೆ ಸೇರಿಬಂದರು. ಆದ್ದರಿಂದ ಯೇಸು ಮತ್ತು ಅವನ ಶಿಷ್ಯರಿಗೆ ಊಟಮಾಡಲೂ ಸಾಧ್ಯವಾಗಲಿಲ್ಲ.

[21] ಯೇಸುವಿನ ಕುಟುಂಬದವರಿಗೆ ಈ ವಿಷಯಗಳೆಲ್ಲ ತಿಳಿದವು. ಯೇಸುವಿಗೆ ಹುಚ್ಚು ಹಿಡಿದಿದೆಯೆಂದು ಕೆಲವರು ಹೇಳಿದ್ದರಿಂದ ಆತನ ಕುಟುಂಬದವರು ಆತನನ್ನು ಕರೆದೊಯ್ಯಲು ಅಲ್ಲಿಗೆ ಬಂದರು.

[22] ಜೆರುಸಲೇಮಿನ ಧರ್ಮೋಪದೇಶಕರು, “ಇವನೊಳಗೆ ದೆವ್ವಗಳ ಒಡೆಯನಾದ ಬೆಲ್ಜೆಬೂಲನು ವಾಸಿಸುತ್ತಿದ್ದಾನೆ. ದೆವ್ವಗಳಿಂದ ಪೀಡಿತರಾಗಿರುವವರನ್ನು ಇವನು ಬಿಡಿಸುವುದು ದೆವ್ವಗಳ ಒಡೆಯನ ಸಹಾಯದಿಂದಲೇ” ಎಂದು ಹೇಳಿದರು.

[23] ಆದ್ದರಿಂದ ಯೇಸು ಜನರನ್ನು ಒಟ್ಟಿಗೆ ಕರೆದು, ಅವರಿಗೆ ಸಾಮ್ಯಗಳ ಮೂಲಕ ಬೋಧಿಸಿ, “ಸೈತಾನನು ತನ್ನ ದೆವ್ವಗಳನ್ನು ಜನರಿಂದ ಬಲವಂತವಾಗಿ ಹೊರಡಿಸುವುದಿಲ್ಲ.

[24] ತನ್ನ ವಿರುದ್ಧವಾಗಿ ತಾನೇ ಹೋರಾಡುವ ರಾಜ್ಯ ಉಳಿಯುವುದಿಲ್ಲ.

[25] ಭೇದ ಹುಟ್ಟಿದ ಕುಟುಂಬ ಏಳಿಗೆ ಹೊಂದುವುದಿಲ್ಲ.

[26] ಸೈತಾನನು ತನ್ನ ವಿರುದ್ಧವಾಗಿಯೂ ತನ್ನ ಜನರ ವಿರುದ್ಧವಾಗಿಯೂ ತಾನೇ ಹೋರಾಟ ಮಾಡಿದರೆ ಅವನು ಅಂತ್ಯಗೊಳ್ಳುತ್ತಾನೆ.

[27] “ಒಬ್ಬ ವ್ಯಕ್ತಿಯು ಬಲಾಢ್ಯನ ಮನೆಗೆ ಪ್ರವೇಶಿಸಿ ಅವನ ವಸ್ತುಗಳನ್ನು ಕದಿಯಲು ಇಚ್ಛಿಸಿದರೆ, ಮೊದಲು ಅವನು ಬಲಾಢ್ಯನನ್ನು ಕಟ್ಟಿಹಾಕಬೇಕು. ಆಗ ಅವನು ಬಲಾಢ್ಯನ ಮನೆಯಿಂದ ವಸ್ತುಗಳನ್ನು ಕದಿಯಲು ಸಾಧ್ಯವಾಗುವುದು.

[28] “ನಾನು ನಿಮಗೆ ಸತ್ಯವನ್ನು ಹೇಳುತ್ತಿದ್ದೇನೆ, ಜನರು ಮಾಡುವ ಎಲ್ಲಾ ಪಾಪಗಳಿಗೂ ದೇವದೂಷಣೆಗಳಿಗೂ ಕ್ಷಮೆ ದೊರೆಯಲು ಸಾಧ್ಯ.

[29] ಆದರೆ ಪವಿತ್ರಾತ್ಮನನ್ನು ದೂಷಿಸುವವನಿಗೆ ಕ್ಷಮೆ ಇಲ್ಲವೇ ಇಲ್ಲ. ಅವರ ಪಾಪ ಶಾಶ್ವತವಾದದ್ದು” ಎಂದು ಹೇಳಿದನು.

[30] “ಇವನಿಗೆ ದೆವ್ವಹಿಡಿದಿದೆ” ಎಂದು ಧರ್ಮೋಪದೇಶಕರು ಆರೋಪಿಸಿದ್ದರಿಂದ ಯೇಸು ಹೀಗೆ ಹೇಳಬೇಕಾಯಿತು.

[31] ನಂತರ ಯೇಸುವಿನ ತಾಯಿ ಮತ್ತು ಆತನ ಸಹೋದರರು ಅಲ್ಲಿಗೆ ಬಂದರು. ಅವರು ಹೊರಗೆ ನಿಂತುಕೊಂಡು ಯೇಸುವಿಗೆ ಬರಬೇಕೆಂದು ಒಬ್ಬನ ಮೂಲಕ ಹೇಳಿ ಕಳುಹಿಸಿದರು.

[32] ಅನೇಕ ಜನರು ಯೇಸುವಿನ ಸುತ್ತಲೂ ಕುಳಿತಿದ್ದರು. ಅವನು ಯೇಸುವಿಗೆ, “ನಿನ್ನ ತಾಯಿ ಮತ್ತು ಸಹೋದರರು ನಿನಗಾಗಿ ಹೊರಗಡೆ ಕಾಯುತ್ತಿದ್ದಾರೆ” ಎಂದು ಹೇಳಿದನು.

[33] ಯೇಸು, “ನನ್ನ ತಾಯಿ ಯಾರು? ನನ್ನ ಸಹೋದರರು ಯಾರು?” ಎಂದು ಕೇಳಿ

[34] ತನ್ನ ಸುತ್ತಲೂ ಕುಳಿತಿದ್ದ ಜನರ ಕಡೆಗೆ ನೋಡಿ, “ಈ ಜನರೇ ನನ್ನ ತಾಯಿ ಮತ್ತು ನನ್ನ ಸಹೋದರರು!

[35] ದೇವರ ಚಿತ್ತಕ್ಕನುಸಾರವಾಗಿ ನಡೆಯುವ ಜನರೇ ನನ್ನ ಸಹೋದರರು, ಸಹೋದರಿಯರು ಮತ್ತು ತಾಯಿ” ಎಂದು ಹೇಳಿದನು.

ಮಾರ್ಕನ ಸುವಾರ್ತೆ — Chapters