Skip to content
Opens in a new window
Listen to this chapter • 10:14

[1] ಯೇಸು ಮತ್ತು ಆತನ ಶಿಷ್ಯರು ಸರೋವರವನ್ನು ದಾಟಿ ಗೆರಸೇನರ ಪ್ರಾಂತ್ಯಕ್ಕೆ ಹೋದರು.

[2] ಯೇಸು ದೋಣಿಯಿಂದ ಹೊರಕ್ಕೆ ಬಂದಾಗ, ಒಬ್ಬ ಮನುಷ್ಯನು ಸಮಾಧಿಯ ಗವಿಗಳಿಂದ ಆತನ ಬಳಿಗೆ ಬಂದನು. ಅವನಿಗೆ ದೆವ್ವಹಿಡಿದಿತ್ತು.

[3] ಅವನು ಸಮಾಧಿಯ ಗವಿಗಳಲ್ಲಿ ವಾಸಿಸುತ್ತಿದ್ದನು. ಅವನನ್ನು ಕಟ್ಟಿಹಾಕಲು ಯಾರಿಗೂ ಸಾಧ್ಯವಿರಲಿಲ್ಲ. ಅವನನ್ನು ಸರಪಣಿಗಳಿಂದ ಕಟ್ಟಿದರೂ ಪ್ರಯೋಜನವಾಗುತ್ತಿರಲಿಲ್ಲ.

[4] ಜನರು ಅನೇಕ ಸಾರಿ ಅವನ ಕೈ ಕಾಲುಗಳನ್ನು ಸರಪಣಿಗಳಿಂದ ಕಟ್ಟಿಹಾಕಿದರು. ಆದರೆ ಅವನು ಅವುಗಳನ್ನೆಲ್ಲ ಕಿತ್ತೊಗೆದುಬಿಟ್ಟನು. ಅವನನ್ನು ಹತೋಟಿಗೆ ತರುವ ಬಲಿಷ್ಠನು ಅಲ್ಲಿ ಯಾರೂ ಇರಲಿಲ್ಲ.

[5] ಅವನು ಹಗಲಿರುಳು ಸಮಾಧಿಯ ಗವಿಗಳ ಸುತ್ತಲು ಮತ್ತು ಬೆಟ್ಟಗಳ ಮೇಲೆ ನಡೆದಾಡುತ್ತಿದ್ದನು. ಅವನು ಕಿರುಚುತ್ತಾ ತನ್ನನ್ನು ಕಲ್ಲುಗಳಿಂದ ಜಜ್ಜಿಕೊಳ್ಳುತ್ತಿದ್ದನು.

[6] ಯೇಸು ಬಹಳ ದೂರದಲ್ಲಿದ್ದಾಗಲೇ, ಅವನು ಆತನನ್ನು ಕಂಡು, ಆತನ ಬಳಿಗೆ ಓಡಿಹೋಗಿ ಆತನ ಮುಂದೆ ಅಡ್ಡಬಿದ್ದು ನಮಸ್ಕರಿಸಿದನು.

[7] ಯೇಸು ಅವನಿಗೆ, “ಎಲೈ ದೆವ್ವವೇ, ಅವನೊಳಗಿಂದ ಹೊರಗೆ ಬಾ” ಎಂದು ಹೇಳಿದನು. ಆಗ ಅವನು ಗಟ್ಟಿಯಾದ ಧ್ವನಿಯಿಂದ ಅರಚುತ್ತಾ, “ಯೇಸುವೇ, ಪರಾತ್ಪರನಾದ ದೇವಕುಮಾರನೇ, ನನ್ನಿಂದ ನಿನಗೆ ಏನಾಗಬೇಕಾಗಿದೆ? ದೇವರಾಣೆಯಿಟ್ಟು ಬೇಡಿಕೊಳ್ಳುತ್ತೇನೆ, ನನ್ನನ್ನು ಹಿಂಸಿಸಬೇಡ” ಎಂದು ಕೇಳಿಕೊಂಡನು.

[9] ಆಗ ಯೇಸು ಅವನಿಗೆ, “ನಿನ್ನ ಹೆಸರೇನು?” ಎಂದು ಕೇಳಿದನು. ಅವನು “ನನ್ನ ಹೆಸರು ದಂಡು, ಏಕೆಂದರೆ ನನ್ನಲ್ಲಿ ಅನೇಕ ದೆವ್ವಗಳಿವೆ” ಎಂದು ಉತ್ತರಕೊಟ್ಟನು.

[10] ಆ ಮನುಷ್ಯನ ಒಳಗಿದ್ದ ದೆವ್ವಗಳು ಆ ಪ್ರದೇಶದಿಂದ ತಮ್ಮನ್ನು ಹೊರಕ್ಕೆ ಕಳುಹಿಸದಂತೆ ಯೇಸುವಿನಲ್ಲಿ ಮತ್ತೆ ಮತ್ತೆ ಬೇಡಿಕೊಂಡವು.

[11] ಅಲ್ಲಿಗೆ ಹತ್ತಿರವಿದ್ದ ಬೆಟ್ಟದ ಮೇಲೆ ಹಂದಿಗಳ ದೊಡ್ಡ ಹಿಂಡು ಮೇಯುತ್ತಿತ್ತು.

[12] ದೆವ್ವಗಳು ಯೇಸುವಿಗೆ, “ನಮ್ಮನ್ನು ಹಂದಿಗಳೊಳಗೆ ಕಳುಹಿಸಿಕೊಡು” ಎಂದು ಬೇಡಿಕೊಂಡವು.

[13] ಯೇಸು ಅವುಗಳಿಗೆ ಅಪ್ಪಣೆ ಕೊಡಲು ಅವು ಅವನನ್ನು ಬಿಟ್ಟು, ಹಂದಿಗಳೊಳಗೆ ಹೊಕ್ಕವು. ಆಗ ಹಂದಿಗಳೆಲ್ಲಾ ಬೆಟ್ಟದಿಂದ ಇಳಿದು, ಸರೋವರದೊಳಕ್ಕೆ ಬಿದ್ದು ಮುಳುಗಿಹೋದವು. ಆ ಹಿಂಡಿನಲ್ಲಿ ಸುಮಾರು ಎರಡು ಸಾವಿರ ಹಂದಿಗಳಿದ್ದವು.

[14] ಹಂದಿಗಳನ್ನು ಕಾಯುತ್ತಿದ್ದ ಜನರು ಪಟ್ಟಣದೊಳಕ್ಕೆ ಮತ್ತು ತೋಟಗಳಿಗೆ ಓಡಿಹೋಗಿ ಜನರಿಗೆಲ್ಲ ತಿಳಿಸಿದರು.

[15] ಆಗ ಜನರು ನಡೆದ ಸಂಗತಿಯನ್ನು ನೋಡಲು ಯೇಸುವಿನ ಬಳಿಗೆ ಬಂದರು. ಅನೇಕ ದೆವ್ವಗಳಿಂದ ಪೀಡಿತನಾಗಿದ್ದ ಮನುಷ್ಯನು ಬಟ್ಟೆ ಹಾಕಿಕೊಂಡು ಅಲ್ಲಿ ಕುಳಿತಿರುವುದನ್ನು ಅವರು ಕಂಡರು. ಅವನು ಮತ್ತೆ ಸ್ವಸ್ಥ ಬುದ್ಧಿಯುಳ್ಳವನಾಗಿದ್ದನು. ಆ ಜನರು ಅವನನ್ನು ನೋಡಿ ಹೆದರಿದರು.

[16] ಅಲ್ಲಿದ್ದ ಕೆಲವು ಜನರು, ಯೇಸು ಮಾಡಿದ ಈ ಕಾರ್ಯವನ್ನು ನೋಡಿದ್ದರು. ಈ ಜನರೇ ಉಳಿದ ಜನರಿಗೆಲ್ಲರಿಗೂ ನಡೆದ ಸಂಗತಿಯನ್ನು ಅಂದರೆ ದೆವ್ವದಿಂದ ಪೀಡಿತನಾಗಿದ್ದವನಿಗೂ ದೆವ್ವಗಳಿಗೂ ಮತ್ತು ಹಂದಿಗಳಿಗೂ ಸಂಭವಿಸಿದ್ದನ್ನು ತಿಳಿಸಿದರು.

[17] ಆಗ ಜನರು ತಮ್ಮ ಪ್ರಾಂತ್ಯವನ್ನು ಬಿಟ್ಟುಹೋಗಬೇಕೆಂದು ಯೇಸುವನ್ನು ಬೇಡಿಕೊಂಡರು.

[18] ಯೇಸು ಅಲ್ಲಿಂದ ಹೋಗಲು ದೋಣಿ ಹತ್ತುವುದಕ್ಕೆ ಸಿದ್ಧನಾದಾಗ ದೆವ್ವಗಳಿಂದ ಬಿಡುಗಡೆ ಹೊಂದಿದ್ದ ಮನುಷ್ಯನು, “ನಾನೂ ನಿನ್ನ ಜೊತೆಯಲ್ಲಿ ಬರುತ್ತೇನೆ” ಎಂದು ಬೇಡಿಕೊಂಡನು.

[19] ಆದರೆ ಯೇಸು ಅವನನ್ನು ಕರೆದುಕೊಂಡು ಹೋಗಲು ಒಪ್ಪದೆ, “ನಿನ್ನ ಮನೆಗೂ ನಿನ್ನ ಸ್ನೇಹಿತರ ಬಳಿಗೂ ಹೋಗು. ಪ್ರಭುವು ನಿನಗೆ ಮಾಡಿದ ಒಳ್ಳೆಯದನ್ನೂ ಆತನು ನಿನಗೆ ತೋರಿದ ಕರುಣೆಯನ್ನೂ ಅವರಿಗೆ ತಿಳಿಸು” ಎಂದು ಹೇಳಿದನು.

[20] ಆಗ ಅವನು ಅಲ್ಲಿಂದ ಹೊರಟುಹೋದನು ಮತ್ತು ಯೇಸು ತನಗೆ ಮಾಡಿದ ಉಪಕಾರವನ್ನು ಹತ್ತು ಪಟ್ಟಣಗಳ ಪ್ರದೇಶದ ಜನರಿಗೆ ತಿಳಿಸಿದನು. ಆ ಜನರೆಲ್ಲರೂ ಅತ್ಯಾಶ್ಚರ್ಯಪಟ್ಟರು.

[21] ಯೇಸು ದೋಣಿಯಲ್ಲಿ ಸರೋವರದ ಆಚೆ ದಡಕ್ಕೆ ಹೋದನು. ಸರೋವರದ ತೀರದಲ್ಲಿ ಅನೇಕ ಜನರು ಆತನ ಸುತ್ತಲೂ ಸೇರಿದರು.

[22] ಸಭಾಮಂದಿರದ ಅಧಿಕಾರಿಯೊಬ್ಬನು ಆ ಸ್ಥಳಕ್ಕೆ ಬಂದನು. ಅವನ ಹೆಸರು ಯಾಯಿರ. ಅವನು ಯೇಸುವನ್ನು ಕಂಡು, ಆತನ ಮುಂದೆ ಅಡ್ಡಬಿದ್ದು ನಮಸ್ಕರಿಸಿ,

[23] “ನನ್ನ ಚಿಕ್ಕಮಗಳು ಸಾಯುತ್ತಿದ್ದಾಳೆ. ದಯವಿಟ್ಟು ನೀನು ಬಂದು, ನಿನ್ನ ಕೈಗಳಿಂದ ಅವಳನ್ನು ಸ್ಪರ್ಶಿಸು. ಆಗ ಅವಳು ಗುಣವಾಗಿ ಬದುಕಿಕೊಳ್ಳುತ್ತಾಳೆ” ಎಂದು ಬಹಳವಾಗಿ ಬೇಡಿಕೊಂಡನು.

[24] ಯೇಸು ಅಧಿಕಾರಿಯೊಂದಿಗೆ ಹೋದನು. ಅನೇಕ ಜನರು ಯೇಸುವನ್ನು ಹಿಂಬಾಲಿಸಿದರು. ಅವರು ಆತನ ಸುತ್ತಲೂ ನೂಕುತ್ತಾ ಹೋದರು.

[25] ಆ ಜನರ ನಡುವೆ ಒಬ್ಬ ಸ್ತ್ರೀ ಇದ್ದಳು. ಆಕೆಗೆ ಹನ್ನೆರಡು ವರ್ಷಗಳಿಂದ ರಕ್ತಸ್ರಾವವಾಗುತ್ತಿತ್ತು.

[26] ಆಕೆಯು ಬಹಳ ಸಂಕಟಪಟ್ಟಿದ್ದಳು. ಅವಳಿಗೆ ಸಹಾಯ ಮಾಡಲು ಅನೇಕ ವೈದ್ಯರು ಪ್ರಯತ್ನಿಸಿದ್ದರು. ಆಕೆಯಲ್ಲಿದ್ದ ಹಣವೆಲ್ಲವೂ ವೆಚ್ಚವಾಯಿತು. ಆದರೆ ಆಕೆಗೆ ವಾಸಿಯಾಗಲಿಲ್ಲ. ಅವಳ ಕಾಯಿಲೆಯು ಇನ್ನೂ ಹೆಚ್ಚಾಗುತ್ತಿತ್ತು.

[27] ಆಕೆಗೆ ಯೇಸುವನ್ನು ಕುರಿತು ತಿಳಿದುಬಂತು. ಆದ್ದರಿಂದ ಆಕೆಯು ಜನರ ಗುಂಪಿನಲ್ಲಿ ಹಿಂದಿನಿಂದ ಬಂದು ಆತನ ಮೇಲಂಗಿಯನ್ನು ಮುಟ್ಟಿದಳು.

[28] ಆ ಸ್ತ್ರೀಯು, “ಆತನ ಉಡುಪನ್ನು ಮುಟ್ಟಿದರೆ ಸಾಕು ನಾನು ಗುಣಮುಖಳಾಗುತ್ತೇನೆ” ಎಂದುಕೊಂಡದ್ದರಿಂದ

[29] ಮುಟ್ಟಿದ ಕೂಡಲೆ, ಆಕೆಯ ರಕ್ತಸ್ರಾವ ನಿಂತುಹೋಯಿತು. ತನಗೆ ಗುಣವಾಯಿತೆಂಬುದು ಆಕೆಗೆ ಅರಿವಾಯಿತು.

[30] ತನ್ನಿಂದ ಶಕ್ತಿಯು ಹೊರಟದ್ದು ಸಹ ಯೇಸುವಿಗೆ ತಿಳಿಯಿತು. ಆತನು ಅಲ್ಲೇ ನಿಂತು ಹಿಂತಿರುಗಿ ನೋಡಿ, “ನನ್ನ ಉಡುಪನ್ನು ಮುಟ್ಟಿದವರು ಯಾರು?” ಎಂದು ಕೇಳಿದನು.

[31] ಶಿಷ್ಯರು ಯೇಸುವಿಗೆ, “ಅನೇಕ ಜನರು ನಿನ್ನ ಮೇಲೆ ಬೀಳುತ್ತಿದ್ದಾರೆ. ಹೀಗಿರಲು ‘ನನ್ನನ್ನು ಸ್ಪರ್ಶಿಸಿದವರು ಯಾರು?’ ಎಂದು ಕೇಳುತ್ತಿರುವೆಯಲ್ಲಾ” ಎಂದರು.

[32] ಆದರೆ ಯೇಸು ತನ್ನನ್ನು ಸ್ಪರ್ಶಿಸಿದವರು ಯಾರೆಂದು ಇನ್ನೂ ನೋಡುತ್ತಲೇ ಇದ್ದನು.

[33] ತನಗೆ ಗುಣವಾಯಿತೆಂಬುದು ಆ ಸ್ತ್ರೀಗೆ ತಿಳಿದಿತ್ತು. ಆದ್ದರಿಂದ ಆಕೆ ಬಂದು, ಯೇಸುವಿನ ಪಾದಗಳ ಮುಂದೆ ಅಡ್ಡಬಿದ್ದು ನಡೆದ ಸಂಗತಿಯನ್ನೆಲ್ಲಾ ಹೇಳಿದಳು.

[34] ಯೇಸು ಆಕೆಗೆ, “ಮಗಳೇ, ನಿನ್ನ ನಂಬಿಕೆಯಿಂದಲೇ ನಿನಗೆ ವಾಸಿಯಾಯಿತು. ಸಮಾಧಾನದಿಂದ ಹೋಗು. ನಿನಗೆ ಇನ್ನು ಮೇಲೆ ಆ ಕಾಯಿಲೆಯ ಬಾಧೆ ಇರುವುದಿಲ್ಲ” ಎಂದು ಹೇಳಿದನು.

[35] ಯೇಸು ಅಲ್ಲಿ ಇನ್ನೂ ಮಾತನಾಡುತ್ತಿದ್ದನು. ಅಷ್ಟರಲ್ಲಿ ಕೆಲವು ಜನರು ಸಭಾಮಂದಿರದ ಅಧಿಕಾರಿಯಾದ ಯಾಯಿರನ ಮನೆಯಿಂದ ಬಂದು ಯಾಯಿರನಿಗೆ, “ನಿನ್ನ ಮಗಳು ಸತ್ತುಹೋದಳು. ಈಗ ಬೋಧಕನಿಗೆ ತೊಂದರೆ ಕೊಡುವ ಅಗತ್ಯವಿಲ್ಲ” ಎಂದು ಹೇಳಿದರು.

[36] ಆದರೆ ಯೇಸು ಅವರ ಮಾತನ್ನು ಗಣನೆಗೆ ತಂದುಕೊಳ್ಳದೆ, ಸಭಾಮಂದಿರದ ಅಧಿಕಾರಿಗೆ, “ಹೆದರಬೇಡ, ನಂಬಿಕೆ ಮಾತ್ರ ಇರಲಿ” ಎಂದು ಹೇಳಿದನು.

[37] ಯೇಸು ಪೇತ್ರನನ್ನು, ಯಾಕೋಬನನ್ನು ಮತ್ತು ಯಾಕೋಬನ ತಮ್ಮನಾದ ಯೋಹಾನನನ್ನು ಮಾತ್ರ ತನ್ನ ಜೊತೆಯಲ್ಲಿ ಕರೆದೊಯ್ದನು.

[38] ಯೇಸು ಮತ್ತು ಈ ಶಿಷ್ಯರು ಸಭಾಮಂದಿರದ ಅಧಿಕಾರಿಯಾದ ಯಾಯಿರನ ಮನೆಗೆ ಹೋದರು. ಅಲ್ಲಿ ಅನೇಕ ಜನರು ಜೋರಾಗಿ ಅಳುತ್ತಿರುವುದನ್ನು ಯೇಸು ನೋಡಿದನು. ಅಲ್ಲಿ ಬಹಳ ಗದ್ದಲವಿತ್ತು.

[39] ಯೇಸು ಮನೆಯನ್ನು ಪ್ರವೇಶಿಸಿ, ಆ ಜನರಿಗೆ, “ನೀವು ಅಳುತ್ತಿರುವುದೇಕೆ? ಇಷ್ಟೊಂದು ಗದ್ದಲ ಮಾಡುತ್ತಿರುವುದೇಕೆ? ಈ ಹುಡುಗಿ ಸತ್ತಿಲ್ಲ, ನಿದ್ರಿಸುತ್ತಿದ್ದಾಳೆ” ಎಂದು ಹೇಳಿದನು.

[40] ಆದರೆ ಆ ಜನರೆಲ್ಲರೂ ಯೇಸುವನ್ನು ಗೇಲಿ ಮಾಡಿದರು. ಯೇಸು ಆ ಜನರೆಲ್ಲರನ್ನು ಹೊರಗೆ ಕಳುಹಿಸಿ, ಆ ಬಾಲಕಿಯ ತಂದೆತಾಯಿಗಳನ್ನು ಮತ್ತು ತನ್ನ ಮೂವರು ಶಿಷ್ಯರನ್ನು ಮಾತ್ರ ತನ್ನೊಂದಿಗೆ ಕರೆದುಕೊಂಡು ಆ ಬಾಲಕಿಯ ಕೊಠಡಿಯೊಳಕ್ಕೆ ಹೋದನು.

[41] ಯೇಸು ಆ ಬಾಲಕಿಯ ಕೈ ಹಿಡಿದು, ಅವಳಿಗೆ, “ತಲಿಥಾ ಕೂಮ್!” ಎಂದು ಹೇಳಿದನು. (ಅಂದರೆ “ಚಿಕ್ಕ ಹುಡುಗಿಯೇ, ಎದ್ದೇಳು ಎಂದು ನಾನು ಹೇಳುತ್ತಿದ್ದೇನೆ” ಎಂದರ್ಥ.)

[42] ಕೂಡಲೇ ಆ ಬಾಲಕಿ ಎದ್ದುನಿಂತು ನಡೆಯಲಾರಂಭಿಸಿದಳು. ಆ ಬಾಲಕಿಗೆ ಹನ್ನೆರಡು ವರ್ಷ ವಯಸ್ಸಾಗಿತ್ತು. ಅವಳ ತಂದೆತಾಯಿಗಳು ಮತ್ತು ಶಿಷ್ಯರು ಅತ್ಯಾಶ್ಚರ್ಯಗೊಂಡರು.

[43] ಈ ವಿಷಯವನ್ನು ಯಾರಿಗೂ ಹೇಳಕೂಡದೆಂದು ಯೇಸು ಆಕೆಯ ತಂದೆತಾಯಿಗಳಿಗೆ ಖಂಡಿತವಾಗಿ ಹೇಳಿ, “ಆ ಬಾಲಕಿಗೆ ಊಟ ಮಾಡಿಸಿರಿ” ಎಂದನು.

ಮಾರ್ಕನ ಸುವಾರ್ತೆ — Chapters