Skip to content
Opens in a new window
Listen to this chapter • 9:01

[1] ಮತ್ತೊಂದು ಸಮಯದಲ್ಲಿ ಯೇಸು ಸರೋವರದ ತೀರದಲ್ಲಿ ಉಪದೇಶಿಸಲಾರಂಭಿಸಿದನು. ಅನೇಕಾನೇಕ ಜನರು ಆತನ ಸುತ್ತಲೂ ಸೇರಿದರು. ಯೇಸು ಒಂದು ದೋಣಿಯೊಳಕ್ಕೆ ಹೋಗಿ ಕುಳಿತು ಸರೋವರದ ದಡದಿಂದ ಸ್ವಲ್ಪದೂರ ಹೋದನು. ಜನರೆಲ್ಲರೂ ಸರೋವರದ ದಡದ ಮೇಲಿದ್ದರು.

[2] ಯೇಸು ದೋಣಿಯಲ್ಲಿ ಕುಳಿತುಕೊಂಡು ಅವರಿಗೆ ಅನೇಕ ಸಾಮ್ಯಗಳ ಮೂಲಕ ಉಪದೇಶಿಸಿದನು. ಆತನು ಹೇಳಿದ್ದೇನೆಂದರೆ:

[3] “ಕೇಳಿರಿ! ಒಬ್ಬ ರೈತನು ಬೀಜ ಬಿತ್ತಲು ಹೊಲಕ್ಕೆ ಹೋದನು.

[4] ಬಿತ್ತುವಾಗ ಕೆಲವು ಬೀಜಗಳು ರಸ್ತೆಯ ಮಗ್ಗುಲಲ್ಲಿ ಬಿದ್ದವು. ಹಕ್ಕಿಗಳು ಬಂದು ಆ ಬೀಜಗಳನ್ನೆಲ್ಲ ತಿಂದುಬಿಟ್ಟವು.

[5] ಕೆಲವು ಬೀಜಗಳು ಬಂಡೆಯ ನೆಲದ ಮೇಲೆ ಬಿದ್ದವು. ಆ ನೆಲದಲ್ಲಿ ಸಾಕಷ್ಟು ಮಣ್ಣಿರಲಿಲ್ಲ. ನೆಲವು ಆಳವಾಗಿಲ್ಲದಿದ್ದ ಕಾರಣ ಬೀಜಗಳು ಬಹಳ ಬೇಗನೆ ಮೊಳೆತವು.

[6] ಆದರೆ ಸೂರ್ಯನು ಮೇಲೇರಿದಾಗ, ಆಳವಾದ ಬೇರಿಲ್ಲದ ಕಾರಣ ಆ ಸಸಿಗಳು ಒಣಗಿಹೋದವು.

[7] ಬೇರೆ ಕೆಲವು ಬೀಜಗಳು ಮುಳ್ಳುಗಿಡಗಳಲ್ಲಿ ಬಿದ್ದವು. ಮುಳ್ಳುಗಿಡಗಳು ಬೆಳೆದು, ಒಳ್ಳೆಯ ಗಿಡಗಳನ್ನು ಬೆಳೆಯದಂತೆ ತಡೆದವು. ಆದ್ದರಿಂದ ಆ ಗಿಡಗಳು ಫಲ ಕೊಡಲಿಲ್ಲ.

[8] ಬೇರೆ ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದವು. ಆ ಬೀಜಗಳು ಮೊಳೆತು, ಬೆಳೆದು, ಫಲಬಿಟ್ಟವು. ಕೆಲವು ಗಿಡಗಳು ಮೂವತ್ತರಷ್ಟು ಹೆಚ್ಟಾಗಿ, ಇನ್ನು ಕೆಲವು ಗಿಡಗಳು ಅರವತ್ತರಷ್ಟು ಹೆಚ್ಚಾಗಿ ಮತ್ತು ಬೇರೆ ಕೆಲವು ಗಿಡಗಳು ನೂರರಷ್ಟು ಹೆಚ್ಚಾಗಿ ಫಲಕೊಟ್ಟವು.”

[9] ನಂತರ ಯೇಸು, “ನನ್ನ ಮಾತನ್ನು ಕೇಳುವ ಜನರೇ, ಆಲಿಸಿರಿ!” ಎಂದು ಹೇಳಿದನು.

[10] ತರುವಾಯ, ಯೇಸು ಒಬ್ಬನೇ ಇದ್ದಾಗ ಹನ್ನೆರಡು ಮಂದಿ ಅಪೊಸ್ತಲರು ಮತ್ತು ಯೇಸುವಿನ ಇತರ ಶಿಷ್ಯರು ಆ ಸಾಮ್ಯಗಳ ಕುರಿತು ಆತನನ್ನು ಕೇಳಿದರು.

[11] ಯೇಸು, “ದೇವರ ರಾಜ್ಯದ ಸತ್ಯದ ಗುಟ್ಟನ್ನು ನೀವು ಮಾತ್ರ ತಿಳಿದುಕೊಳ್ಳತಕ್ಕದ್ದು. ಆದರೆ ಇತರ ಎಲ್ಲಾ ಜನರಿಗೆ ನಾನು ಸಾಮ್ಯಗಳ ಮೂಲಕವಾಗಿ ಎಲ್ಲವನ್ನೂ ಹೇಳುತ್ತೇನೆ.

[12] ಏಕೆಂದರೆ: ‘ಅವರು ಕಣ್ಣಾರೆ ನೋಡಿಯೂ ಕಾಣರು. ಕಿವಿಯಾರೆ ಕೇಳಿಯೂ ಗ್ರಹಿಸರು. ಅವರು ನೋಡಿ ಗ್ರಹಿಸಿಕೊಂಡರೆ, ಪರಿವರ್ತನೆಗೊಂಡು ಪಾಪಕ್ಷಮೆ ಹೊಂದಿಯಾರು’” ಎಂದನು. ಯೆಶಾಯ 6:9-10

[13] ನಂತರ ಯೇಸು ತನ್ನ ಶಿಷ್ಯರಿಗೆ, “ನಿಮಗೆ ಈ ಸಾಮ್ಯ ಅರ್ಥವಾಯಿತೇ? ನೀವು ಇದನ್ನೇ ಅರ್ಥಮಾಡಿಕೊಳ್ಳದಿದ್ದರೆ ಬೇರೆ ಯಾವ ಸಾಮ್ಯವನ್ನು ಅರ್ಥಮಾಡಿಕೊಳ್ಳುವಿರಿ?

[14] ರೈತನು ದೇವರ ವಾಕ್ಯವನ್ನು ಬಿತ್ತುವವನಿಗೆ ಹೋಲಿಕೆಯಾಗಿದ್ದಾನೆ.

[15] ಕೆಲವು ಜನರು ದೇವರ ವಾಕ್ಯವನ್ನು ಕೇಳುತ್ತಾರೆ. ಆದರೆ ಅವರಲ್ಲಿ ಬಿತ್ತಿದ ವಾಕ್ಯವನ್ನು ಸೈತಾನನು ಬಂದು ತೆಗೆದುಬಿಡುತ್ತಾನೆ. ಈ ಜನರೇ ದಾರಿಯ ಮಗ್ಗುಲಾಗಿದ್ದಾರೆ.

[16] “ಇನ್ನು ಕೆಲವರು ದೇವರ ವಾಕ್ಯವನ್ನು ಕೇಳುತ್ತಾರೆ ಮತ್ತು ಸಂತೋಷದಿಂದ ಅದನ್ನು ಬೇಗನೆ ಸ್ವೀಕರಿಸಿಕೊಳ್ಳುತ್ತಾರೆ.

[17] ಆದರೆ ಆ ವಾಕ್ಯವು ತಮ್ಮಲ್ಲಿ ಆಳವಾಗಿ ಬೇರೂರಲು ಅವರು ಅವಕಾಶ ನೀಡುವುದಿಲ್ಲ. ಅವರು ಆ ವಾಕ್ಯವನ್ನು ಸ್ವಲ್ಪಕಾಲ ಮಾತ್ರ ಸ್ವೀಕರಿಸಿಕೊಂಡಿರುತ್ತಾರೆ. ಆ ವಾಕ್ಯದ ದೆಸೆಯಿಂದ ತೊಂದರೆಯಾಗಲಿ ಹಿಂಸೆಯಾಗಲಿ ಬಂದಾಗ ಅವರು ಅದನ್ನು ಬಹುಬೇಗನೆ ತ್ಯಜಿಸುತ್ತಾರೆ. ಇವರೇ ಬೀಜಬಿದ್ದ ಬಂಡೆಯ ನೆಲವಾಗಿದ್ದಾರೆ.

[18] “ಇನ್ನು ಕೆಲವರು ಮುಳ್ಳಿನ ಗಿಡಗಳ ನೆಲದಂತಿರುವರು. ಈ ಜನರು ವಾಕ್ಯವನ್ನು ಕೇಳುತ್ತಾರೆ.

[19] ಆದರೆ ಈ ಜೀವಿತದ ಚಿಂತೆಗಳು, ಹಣದ ಮೇಲಿನ ವ್ಯಾಮೋಹ ಮತ್ತು ಇತರ ಎಲ್ಲಾ ವಿಧವಾದ ಆಸೆಗಳು ಅವರಲ್ಲಿ ಬಿದ್ದ ವಾಕ್ಯಕ್ಕೆ ಬೆಳೆಯಲು ಅವಕಾಶ ಕೊಡುವುದಿಲ್ಲ. ಆದ್ದರಿಂದ ಅವರ ಜೀವಿತದಲ್ಲಿ ವಾಕ್ಯವು ಫಲ ಫಲಿಸುವುದಿಲ್ಲ.

[20] “ಇನ್ನು ಕೆಲವರು ಬೀಜಬಿದ್ದ ಒಳ್ಳೆಯ ನೆಲದಂತಿದ್ದಾರೆ. ಅವರು ವಾಕ್ಯವನ್ನು ಸ್ವೀಕರಿಸಿಕೊಂಡು ಫಲವನ್ನು ಫಲಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಮೂವತ್ತರಷ್ಟು ಹೆಚ್ಚಾಗಿ, ಇನ್ನು ಕೆಲವು ಸಂದರ್ಭಗಳಲ್ಲಿ ಅರವತ್ತರಷ್ಟು ಹೆಚ್ಚಾಗಿ, ಮತ್ತೆ ಕೆಲವು ಸಂಧರ್ಭಗಳಲ್ಲಿ ನೂರರಷ್ಟು ಹೆಚ್ಚಾಗಿ ಫಲ ಫಲಿಸುತ್ತಾರೆ” ಎಂದು ಹೇಳಿದನು.

[21] ನಂತರ ಯೇಸು ಅವರಿಗೆ, “ನೀವು ಉರಿಯುತ್ತಿರುವ ದೀಪವನ್ನು ಪಾತ್ರೆಯ ಒಳಗಾಗಲಿ ಮಂಚದ ಕೆಳಗಾಗಲಿ ಇಡುತ್ತೀರಾ? ಇಲ್ಲ! ದೀಪವನ್ನು ದೀಪಸ್ತಂಭದ ಮೇಲೆ ಇಡುವಿರಿ.

[22] ಆಗ ಪ್ರತಿಯೊಂದೂ ಸ್ಪಷ್ಟವಾಗಿ ಗೋಚರವಾಗುವುದು. ರಹಸ್ಯವಾದ ಪ್ರತಿಯೊಂದೂ ಬಟ್ಟಬಯಲಾಗುವುದು.

[23] ನನ್ನ ಮಾತುಗಳನ್ನು ಕೇಳುತ್ತಿರುವ ಜನರೇ, ಆಲಿಸಿರಿ!

[24] ನೀವು ಕೇಳುತ್ತಿರುವ ಪ್ರತಿಯೊಂದು ವಿಷಯವನ್ನು ಎಚ್ಚರಿಕೆಯಿಂದ ಆಲೋಚಿಸಿರಿ. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು; ನೀವು ಕೊಟ್ಟದ್ದಕ್ಕಿಂತ ಹೆಚ್ಚಾಗಿ ಕೊಡುವರು.

[25] ಯಾವನಲ್ಲಿ ಹೆಚ್ಚಾಗಿರುತ್ತದೆಯೋ ಅವನಿಗೆ ಇನ್ನೂ ಕೊಡಲಾಗುವುದು. ಯಾವನಲ್ಲಿ ಇರುವುದಿಲ್ಲವೋ ಅವನಿಂದ ಇದ್ದದ್ದನ್ನೂ ತೆಗೆದುಕೊಳ್ಳಲಾಗುವುದು” ಎಂದು ಹೇಳಿದನು.

[26] ನಂತರ ಯೇಸು, “ದೇವರ ರಾಜ್ಯವು ಭೂಮಿಯಲ್ಲಿ ಬೀಜ ಬಿತ್ತಿದ ಮನುಷ್ಯನಂತಿದೆ.

[27] ಬೀಜವು ಹಗಲಿರುಳು ಬೆಳೆಯುತ್ತದೆ. ರೈತನು ಮಲಗಿರುವಾಗಲೂ ಎಚ್ಚರದಿಂದಿರುವಾಗಲೂ ಬೀಜ ಬೆಳೆಯುತ್ತಲೇ ಇರುವುದು. ಬೀಜ ಹೇಗೆ ಬೆಳೆಯುತ್ತದೆಂಬುದು ರೈತನಿಗೆ ತಿಳಿಯುವುದಿಲ್ಲ.

[28] ಭೂಮಿಯು ಮೊದಲು ಸಸಿಯನ್ನೂ ಅನಂತರ ಹೊಡೆಯನ್ನೂ ತರುವಾಯ ತೆನೆತುಂಬ ಕಾಳನ್ನೂ ತನ್ನಷ್ಟಕ್ಕೇ ತಾನೇ ಉತ್ಪತ್ತಿಮಾಡುತ್ತದೆ.

[29] ತೆನೆಯು ಬಲಿತಾಗ ರೈತನು ಗಿಡವನ್ನು ಕೊಯ್ಯುವನು. ಇದನ್ನೇ ಸುಗ್ಗಿಕಾಲ ಎನ್ನುವರು” ಎಂದು ಹೇಳಿದನು.

[30] ನಂತರ ಯೇಸು, “ದೇವರ ರಾಜ್ಯದ ಬಗ್ಗೆ ವಿವರಿಸಲು ನಾನು ನಿಮಗೆ ಯಾವ ಸಾಮ್ಯವನ್ನು ಹೇಳಲಿ?

[31] ದೇವರ ರಾಜ್ಯವು ಸಾಸಿವೆ ಕಾಳಿನಂತಿರುತ್ತದೆ. ನೀವು ಭೂಮಿಯಲ್ಲಿ ಬಿತ್ತುವ ಕಾಳುಗಳಲ್ಲಿ ಸಾಸಿವೆ ಕಾಳು ಅತ್ಯಂತ ಸಣ್ಣದಾಗಿದೆ.

[32] ಆದರೆ ನೀವು ಈ ಕಾಳನ್ನು ಬಿತ್ತಿದಾಗ, ಅದು ಬೆಳೆದು, ನಿಮ್ಮ ತೋಟದ ಇತರ ಗಿಡಗಳಿಗಿಂತ ಅತಿ ದೊಡ್ಡದಾಗುತ್ತದೆ. ಅದಕ್ಕೆ ದೊಡ್ಡದೊಡ್ಡ ರೆಂಬೆಗಳಿರುತ್ತವೆ. ಕಾಡಿನ ಹಕ್ಕಿಗಳು ಬಂದು, ಅಲ್ಲಿ ಗೂಡುಗಳನ್ನು ಕಟ್ಟಿಕೊಂಡು ಸೂರ್ಯನ ತಾಪದಿಂದ ತಪ್ಪಿಸಿಕೊಳ್ಳುತ್ತವೆ” ಎಂದು ಹೇಳಿದನು.

[33] ಯೇಸು ಇಂಥ ಅನೇಕ ಸಾಮ್ಯಗಳ ಮೂಲಕ ಜನರಿಗೆ ಅರ್ಥವಾಗುವಂತೆ ಉಪದೇಶಿಸಿದನು.

[34] ಯೇಸುವು ಜನರಿಗೆ ಯಾವಾಗಲೂ ಸಾಮ್ಯಗಳ ಮೂಲಕ ಉಪದೇಶಿಸಿದನು. ಆದರೆ ತನ್ನ ಶಿಷ್ಯರು ಮಾತ್ರ ಇರುವಾಗ ಎಲ್ಲವನ್ನೂ ಅವರಿಗೆ ವಿವರಿಸಿ ತಿಳಿಸುತ್ತಿದ್ದನು.

[35] ಆ ದಿನ ಸಂಜೆ, ಯೇಸು ತನ್ನ ಶಿಷ್ಯರಿಗೆ “ನನ್ನೊಂದಿಗೆ ಬನ್ನಿ, ಸರೋವರದ ಆಚೆದಡಕ್ಕೆ ಹೋಗೋಣ” ಎಂದು ಹೇಳಿದನು.

[36] ಯೇಸು ಮತ್ತು ಆತನ ಶಿಷ್ಯರು ಅಲ್ಲಿದ್ದ ಜನರನ್ನು ಅಲ್ಲಿಯೇ ಬಿಟ್ಟುಹೋದರು. ಯೇಸು ಕುಳಿತುಕೊಂಡು ಉಪದೇಶಿಸುತ್ತಿದ್ದ ದೋಣಿಯಲ್ಲಿಯೇ ಅವರು ಹೋದರು. ಅವರೊಂದಿಗೆ ಬೇರೆ ದೋಣಿಗಳೂ ಇದ್ದವು.

[37] ಅವರು ಹೋಗುತ್ತಿರಲು ಸರೋವರದ ಮೇಲೆ ಬಿರುಗಾಳಿ ಬೀಸಿತು. ಎತ್ತರವಾದ ಅಲೆಗಳು ದೋಣಿಗೆ ಅಪ್ಪಳಿಸತೊಡಗಿದ್ದರಿಂದ ದೋಣಿಯು ನೀರಿನಿಂದ ತುಂಬಿಹೋಯಿತು.

[38] ಯೇಸುವು ದೋಣಿಯ ಹಿಂಭಾಗದಲ್ಲಿ ತಲೆದಿಂಬಿನ ಮೇಲೆ ತಲೆಯನ್ನಿಟ್ಟು ನಿದ್ರಿಸುತ್ತಿದ್ದನು. ಶಿಷ್ಯರು ಆತನ ಬಳಿಗೆ ಹೋಗಿ, ಆತನನ್ನು ಎಬ್ಬಿಸಿ, “ಗುರುವೇ, ನೀನು ನಮ್ಮ ಬಗ್ಗೆ ಚಿಂತಿಸುವುದಿಲ್ಲವೆ? ನಾವು ಮುಳುಗಿಹೋಗುತ್ತಿದ್ದೇವೆ!” ಎಂದರು.

[39] ಯೇಸು ಎಚ್ಚೆತ್ತು ಬಿರುಗಾಳಿ ಮತ್ತು ಅಲೆಗಳಿಗೆ, “ಪ್ರಶಾಂತವಾಗಿರಿ! ಮೊರೆಯದಿರಿ!” ಎಂದು ಆಜ್ಞಾಪಿಸಿದನು. ಆಗ ಬಿರುಗಾಳಿ ನಿಂತುಹೋಯಿತು ಮತ್ತು ಸರೋವರವು ಪ್ರಶಾಂತವಾಯಿತು.

[40] ಯೇಸು ತನ್ನ ಶಿಷ್ಯರಿಗೆ, “ನೀವೇಕೆ ಹೆದರುತ್ತೀರಿ? ನಿಮ್ಮಲ್ಲಿ ಇನ್ನೂ ನಂಬಿಕೆಯಿಲ್ಲವೇ?” ಎಂದು ಕೇಳಿದನು.

[41] ಶಿಷ್ಯರು ಬಹಳ ಭಯಪಟ್ಟು, “ಈತನು ಯಾರಿರಬಹುದು? ಗಾಳಿ ಮತ್ತು ನೀರು ಸಹ ಈತನ ಮಾತನ್ನು ಕೇಳುತ್ತವೆಯಲ್ಲಾ?” ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು.

ಮಾರ್ಕನ ಸುವಾರ್ತೆ — Chapters