Skip to content
Opens in a new window
Listen to this chapter • 10:42

[1] ದೇವಕುಮಾರನಾದ ಯೇಸು ಕ್ರಿಸ್ತನನ್ನು ಕುರಿತ ಸುವಾರ್ತೆಯ ಆರಂಭವಿದು.

[2] ಪ್ರವಾದಿಯಾದ ಯೆಶಾಯನು ತನ್ನ ಪ್ರವಾದನೆಯ ಗ್ರಂಥದಲ್ಲಿ ಹೀಗೆ ಬರೆದಿದ್ದಾನೆ. “ಇಗೋ! ನಾನು ನನ್ನ ಸಂದೇಶಕನನ್ನು ನಿನ್ನ ಮುಂದೆ ಕಳುಹಿಸುತ್ತೇನೆ. ಅವನು ನಿನಗಾಗಿ ಮಾರ್ಗವನ್ನು ಸಿದ್ಧಪಡಿಸುತ್ತಾನೆ.” ಮಲಾಕಿ 3:1

[3] “‘ಪ್ರಭುವಿಗಾಗಿ ಮಾರ್ಗವನ್ನು ಸಿದ್ಧಗೊಳಿಸಿರಿ, ಆತನ ದಾರಿಯನ್ನು ಸುಗಮಗೊಳಿಸಿರಿ’ ಎಂದು ಒಬ್ಬ ವ್ಯಕ್ತಿಯು ಅಡವಿಯಲ್ಲಿ ಕೂಗುತ್ತಿದ್ದಾನೆ.” ಯೆಶಾಯ 40:3

[4] ಅಂತೆಯೇ ಸ್ನಾನಿಕ ಯೋಹಾನನು ಬಂದು, ಅಡವಿಯಲ್ಲಿ ಜನರಿಗೆ, “ನೀವು ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ದೀಕ್ಷಾಸ್ನಾನ ಮಾಡಿಸಿಕೊಳ್ಳಿರಿ. ಆಗ ನಿಮಗೆ ಪಾಪಕ್ಷಮೆ ಆಗುವುದು” ಎಂದು ಉಪದೇಶಿಸುತ್ತಿದ್ದನು ಮತ್ತು ದೀಕ್ಷಾಸ್ನಾನ ಕೊಡುತ್ತಾ ಇದ್ದನು.

[5] ಜುದೇಯ ಮತ್ತು ಜೆರುಸಲೇಮಿನ ಜನರೆಲ್ಲರೂ ಯೋಹಾನನ ಬಳಿಗೆ ಬಂದು ತಮ್ಮ ಪಾಪಗಳನ್ನು ಅರಿಕೆಮಾಡಿಕೊಂಡರು. ಆಗ ಯೋಹಾನನು ಅವರಿಗೆ ಜೋರ್ಡನ್ ನದಿಯಲ್ಲಿ ದೀಕ್ಷಾಸ್ನಾನ ಕೊಟ್ಟನು.

[6] ಯೋಹಾನನು ಒಂಟೆಯ ತುಪ್ಪಟದಿಂದ ಮಾಡಿದ ಹೊದಿಕೆಯನ್ನು ಹೊದ್ದುಕೊಂಡು ಸೊಂಟಕ್ಕೆ ತೊಗಲಿನ ನಡುಪಟ್ಟಿಯನ್ನು ಕಟ್ಟಿಕೊಳ್ಳುತ್ತಿದ್ದನು. ಅವನು ಮಿಡತೆಗಳನ್ನು ಮತ್ತು ಕಾಡುಜೇನನ್ನು ತಿನ್ನುತ್ತಿದ್ದನು.

[7] ಯೋಹಾನನು ಜನರಿಗೆ, “ನನ್ನ ತರುವಾಯ ಬರುವಾತನು ನನಗಿಂತಲೂ ಶಕ್ತನಾಗಿದ್ದಾನೆ. ನಾನು ಮೊಣಕಾಲೂರಿ, ಆತನ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ಯೋಗ್ಯನಲ್ಲ.

[8] ನಾನು ನಿಮಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುತ್ತೇನೆ, ಆದರೆ ಆತನು ನಿಮಗೆ ಪವಿತ್ರಾತ್ಮನಲ್ಲಿ ದೀಕ್ಷಾಸ್ನಾನ ಮಾಡಿಸುತ್ತಾನೆ” ಎಂದು ಬೋಧಿಸಿದನು.

[9] ಆ ದಿನಗಳಲ್ಲಿ ಯೇಸು ಗಲಿಲಾಯದ ನಜರೇತಿನಿಂದ ಯೋಹಾನನಿದ್ದ ಸ್ಥಳಕ್ಕೆ ಬಂದನು. ಯೋಹಾನನು ಯೇಸುವಿಗೆ ಜೋರ್ಡನ್ ನದಿಯಲ್ಲಿ ದೀಕ್ಷಾಸ್ನಾನ ಮಾಡಿಸಿದನು.

[10] ಯೇಸು ನೀರಿನಿಂದ ಮೇಲಕ್ಕೆ ಬರುತ್ತಿದ್ದಾಗ, ಆಕಾಶವು ತೆರೆಯಂತೆ ಹರಿದುಹೋಯಿತು; ಮತ್ತು ಪವಿತ್ರಾತ್ಮನು ತನ್ನ ಮೇಲೆ ಪಾರಿವಾಳದ ರೂಪದಲ್ಲಿ ಇಳಿದುಬರುತ್ತಿರುವುದನ್ನು ಕಂಡನು.

[11] ಆಗ ಪರಲೋಕದಿಂದ ಧ್ವನಿಯೊಂದು ಹೊರಟು, “ನೀನೇ ನನ್ನ ಪ್ರಿಯ ಮಗನು. ನಾನು ನಿನ್ನನ್ನು ಮೆಚ್ಚಿಕೊಂಡಿದ್ದೇನೆ” ಎಂದು ಹೇಳಿತು.

[12] ಆಗ ದೇವರಾತ್ಮನು ಯೇಸುವನ್ನು ಅಡವಿಗೆ ನಡೆಸಿದನು.

[13] ಯೇಸು ಅಲ್ಲಿ ನಲವತ್ತು ದಿನಗಳ ಕಾಲ ಕಾಡುಮೃಗಗಳೊಂದಿಗಿದ್ದು ಸೈತಾನನಿಂದ ಪರಿಶೋಧಿಸಲ್ಪಟ್ಟನು. ಬಳಿಕ ದೇವದೂತರು ಬಂದು ಯೇಸುವಿಗೆ ಉಪಚಾರ ಮಾಡಿದರು.

[14] ಯೋಹಾನನನ್ನು ಸೆರೆಮನೆಗೆ ಹಾಕಿದ ಮೇಲೆ, ಯೇಸು ಗಲಿಲಾಯಕ್ಕೆ ಹೋಗಿ ಜನರಿಗೆ,

[15] “ಕಾಲ ಪರಿಪೂರ್ಣವಾಯಿತು. ದೇವರ ರಾಜ್ಯ ಸಮೀಪಿಸಿತು. ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ಸುವಾರ್ತೆಯನ್ನು ನಂಬಿರಿ” ಎಂಬ ದೇವರ ಸುವಾರ್ತೆಯನ್ನು ಉಪದೇಶಿಸಿದನು.

[16] ಯೇಸು ಗಲಿಲಾಯ ಸರೋವರದ ಬಳಿ ನಡೆದುಹೋಗುತ್ತಿದ್ದಾಗ ಸೀಮೋನನನ್ನು ಮತ್ತು ಸೀಮೋನನ ಸಹೋದರನಾದ ಅಂದ್ರೆಯನನ್ನು ಕಂಡನು. ಇವರಿಬ್ಬರೂ ಬೆಸ್ತರಾಗಿದ್ದರು. ಇವರು ಮೀನುಗಳನ್ನು ಹಿಡಿಯಲು ಸರೋವರದೊಳಕ್ಕೆ ಬಲೆಯನ್ನು ಬೀಸುತ್ತಿದ್ದರು.

[17] ಯೇಸು, “ಬನ್ನಿರಿ, ನನ್ನನ್ನು ಹಿಂಬಾಲಿಸಿರಿ, ನಾನು ನಿಮ್ಮನ್ನು ಬೇರೆ ವಿಧದ ಬೆಸ್ತರನ್ನಾಗಿ ಮಾಡುವೆನು. ಇನ್ನು ಮೇಲೆ ನೀವು ಒಂದುಗೂಡಿಸುವುದು ಜನರನ್ನೇ, ಮೀನುಗಳನ್ನಲ್ಲ” ಎಂದು ಅವರಿಗೆ ಹೇಳಿದನು.

[18] ಆಗ ಅವರು ತಮ್ಮ ಬಲೆಗಳನ್ನು ಅಲ್ಲಿಯೇ ಬಿಟ್ಟು ಆತನನ್ನು ಹಿಂಬಾಲಿಸಿದರು.

[19] ಯೇಸು ಗಲಿಲಾಯ ಸರೋವರದ ಬಳಿಯಲ್ಲಿ ಇನ್ನೂ ತಿರುಗಾಡುತ್ತಲೇ ಇದ್ದಾಗ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರೆಂಬ ಇಬ್ಬರು ಸಹೋದರರನ್ನು ಕಂಡನು. ಅವರು ಮೀನುಗಳನ್ನು ಹಿಡಿಯಲು ಬಲೆಯನ್ನು ಸಿದ್ಧಪಡಿಸುತ್ತಾ ತಮ್ಮ ದೋಣಿಯಲ್ಲಿದ್ದರು.

[20] ಅವರ ತಂದೆಯಾದ ಜೆಬೆದಾಯನೂ ಅವನ ಕೆಲಸಗಾರರೂ ಸಹೋದರರೊಂದಿಗೆ ದೋಣಿಯಲ್ಲಿದ್ದರು. ಯೇಸು ಅವರನ್ನು ಕರೆದನು. ಕೂಡಲೇ ಅವರು ತಮ್ಮ ತಂದೆಯನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು.

[21] ಯೇಸು ಮತ್ತು ಆತನ ಶಿಷ್ಯರು ಕಪೆರ್ನೌಮಿಗೆ ಹೋದರು. ಸಬ್ಬತ್‌ದಿನದಂದು ಯೇಸು ಸಭಾಮಂದಿರಕ್ಕೆ ಹೋಗಿ ಜನರಿಗೆ ಉಪದೇಶಮಾಡಿದನು.

[22] ಯೇಸುವಿನ ಉಪದೇಶವನ್ನು ಕೇಳಿ ಅಲ್ಲಿದ್ದ ಜನರು ಆಶ್ಚರ್ಯಗೊಂಡರು. ಆತನು ಅವರ ಧರ್ಮೋಪದೇಶಕರಂತೆ ಉಪದೇಶಮಾಡದೆ, ಅಧಿಕಾರವುಳ್ಳವನಂತೆ ಉಪದೇಶ ಮಾಡಿದನು.

[23] ಯೇಸು ಸಭಾಮಂದಿರದಲ್ಲಿದ್ದಾಗ, ದೆವ್ವದಿಂದ ಪೀಡಿತನಾಗಿದ್ದ ಒಬ್ಬ ಮನುಷ್ಯನು ಅಲ್ಲಿದ್ದನು. ಅವನು,

[24] “ನಜರೇತಿನ ಯೇಸುವೇ! ನಮ್ಮಿಂದ ನಿನಗೆ ಏನಾಗಬೇಕಾಗಿದೆ? ನಮ್ಮನ್ನು ನಾಶಗೊಳಿಸಲು ಬಂದಿರುವೆಯಾ? ನೀನು ದೇವರಿಂದ ಬಂದ ಪರಿಶುದ್ಧನೆಂದು ನನಗೆ ಗೊತ್ತಿದೆ!” ಎಂದು ಕೂಗಿಕೊಂಡನು.

[25] ಯೇಸು, “ಸುಮ್ಮನಿರು! ಅವನೊಳಗಿಂದ ಹೊರಗೆ ಬಾ!” ಎಂದು ಆಜ್ಞಾಪಿಸಿದನು.

[26] ದೆವ್ವವು ಅವನನ್ನು ಒದ್ದಾಡಿಸಿ ಗಟ್ಟಿಯಾಗಿ ಅರಚುತ್ತಾ ಅವನೊಳಗಿಂದ ಹೊರಬಂದಿತು.

[27] ಜನರೆಲ್ಲರೂ ದಿಗ್ಭ್ರಮೆಗೊಂಡು, “ಇದೇನು? ಹೊಸದೊಂದನ್ನು ಈತನು ಅಧಿಕಾರದಿಂದ ಉಪದೇಶಿಸುತ್ತಿದ್ದಾನೆ! ಈತನ ಆಜ್ಞೆಗೆ ದೆವ್ವಗಳೂ ವಿಧೇಯವಾಗುತ್ತಿವೆ” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು.

[28] ಯೇಸುವಿನ ಸುದ್ದಿಯು ಗಲಿಲಾಯ ಪ್ರದೇಶದ ಎಲ್ಲೆಡೆಯಲ್ಲಿಯೂ ಹರಡಿತು.

[29] ಯೇಸು ಮತ್ತು ಆತನ ಶಿಷ್ಯರು ಸಭಾಮಂದಿರದಿಂದ ಹೊರಟು ಯಾಕೋಬ ಮತ್ತು ಯೋಹಾನರ ಸಂಗಡ ಸೀಮೋನ ಮತ್ತು ಅಂದ್ರೆಯರ ಮನೆಗೆ ಹೋದರು.

[30] ಸೀಮೋನನ ಅತ್ತೆ ಜ್ವರದಿಂದ ಹಾಸಿಗೆಯಲ್ಲಿ ಮಲಗಿದ್ದಳು. ಅಲ್ಲಿನ ಜನರು ಅವಳ ಬಗ್ಗೆ ಯೇಸುವಿಗೆ ಹೇಳಿದರು.

[31] ಆದ್ದರಿಂದ ಯೇಸು ಅವಳ ಹಾಸಿಗೆಯ ಬಳಿ ಹೋಗಿ ಆಕೆಯ ಕೈಗಳನ್ನು ಹಿಡಿದುಕೊಂಡು, ಮೇಲೇಳಲು ಸಹಾಯ ಮಾಡಿದನು. ಕೂಡಲೇ ಅವಳಿಗೆ ಗುಣವಾಯಿತು. ಆಕೆ ಎದ್ದು ಅವರಿಗೆ ಉಪಚಾರ ಮಾಡಿದಳು.

[32] ಅಂದು ಸೂರ್ಯನು ಮುಳುಗಿದ ಮೇಲೆ, ಜನರು ಕಾಯಿಲೆಯವರನ್ನೂ ದೆವ್ವಗಳಿಂದ ಪೀಡಿತರಾಗಿದ್ದವರನ್ನೂ ಆತನ ಬಳಿಗೆ ಕರೆತಂದರು.

[33] ಊರಿನ ಜನರೆಲ್ಲರೂ ಆ ಮನೆಯ ಮುಂದೆ ಒಟ್ಟುಗೂಡಿದರು.

[34] ಯೇಸು ನಾನಾ ಬಗೆಯ ರೋಗಗಳಿಂದ ನರಳುತ್ತಿದ್ದ ಅನೇಕ ಜನರನ್ನು ಗುಣಪಡಿಸಿದನು; ದೆವ್ವಗಳಿಂದ ಪೀಡಿತರಾಗಿದ್ದ ಅನೇಕರನ್ನು ಬಿಡಿಸಿದನು. ಆದರೆ ಆ ದೆವ್ವಗಳಿಗೆ ಮಾತನಾಡಲು ಆತನು ಅವಕಾಶ ಕೊಡಲಿಲ್ಲ; ಏಕೆಂದರೆ ಯೇಸು ಯಾರೆಂಬುದು ದೆವ್ವಗಳಿಗೆ ಗೊತ್ತಿತ್ತು.

[35] ಮರುದಿನ ಮುಂಜಾನೆ, ಇನ್ನೂ ಕತ್ತಲೆ ಇರುವಾಗಲೇ ಯೇಸು ಎದ್ದು ಪ್ರಾರ್ಥಿಸುವುದಕ್ಕಾಗಿ ಏಕಾಂತವಾದ ಸ್ಥಳಕ್ಕೆ ಹೋದನು.

[36] ತರುವಾಯ, ಸೀಮೋನ ಮತ್ತು ಅವನ ಗೆಳೆಯರು ಯೇಸುವನ್ನು ಹುಡುಕುತ್ತಾ ಹೋದರು.

[37] ಅವರು ಯೇಸುವನ್ನು ಕಂಡುಕೊಂಡು, “ಜನರೆಲ್ಲರೂ ನಿನ್ನನ್ನೇ ಎದುರು ನೋಡುತ್ತಿದ್ದಾರೆ!” ಎಂದು ಹೇಳಿದರು.

[38] ಯೇಸು, “ಇಲ್ಲಿಗೆ ಸಮೀಪದಲ್ಲಿರುವ ಊರುಗಳಿಗೆ ನಾವು ಹೋಗೋಣ. ಆ ಸ್ಥಳಗಳಲ್ಲಿಯೂ ನಾನು ಉಪದೇಶಿಸಬೇಕು. ಅದಕ್ಕಾಗಿಯೇ ನಾನು ಇಲ್ಲಿಗೆ ಬಂದೆನು” ಎಂದು ಹೇಳಿದನು.

[39] ಹೀಗೆ ಯೇಸು ಗಲಿಲಾಯದ ಎಲ್ಲಾ ಕಡೆಗೆ ಪ್ರವಾಸಮಾಡಿ ಸಭಾಮಂದಿರಗಳಲ್ಲಿ ಉಪದೇಶಿಸಿದನು; ದೆವ್ವಗಳಿಂದ ಪೀಡಿತರಾಗಿದ್ದವರನ್ನು ಬಿಡಿಸಿದನು.

[40] ಒಬ್ಬ ಕುಷ್ಠರೋಗಿಯು ಯೇಸುವಿನ ಬಳಿಗೆ ಬಂದು ಮೊಣಕಾಲೂರಿ ಆತನಿಗೆ, “ನೀನು ಇಷ್ಟಪಟ್ಟರೆ, ನನ್ನನ್ನು ಗುಣಪಡಿಸಬಲ್ಲೆ” ಎಂದು ಬೇಡಿಕೊಂಡನು.

[41] ಯೇಸು ಅವನಿಗಾಗಿ ದುಃಖಪಟ್ಟು ಅವನನ್ನು ಮುಟ್ಟಿ, “ನಿನ್ನನ್ನು ಗುಣಪಡಿಸಲು ನನಗೆ ಇಷ್ಟವಿದೆ. ನಿನಗೆ ಗುಣವಾಗಲಿ” ಎಂದು ಹೇಳಿದನು.

[42] ಆ ಕೂಡಲೇ ಅವನಿಗೆ ಗುಣವಾಯಿತು.

[43] ಯೇಸು ಅವನಿಗೆ, “ನಾನು ನಿನ್ನನ್ನು ಗುಣಪಡಿಸಿದೆನೆಂದು ಯಾರಿಗೂ ಹೇಳದೆ, ನೇರವಾಗಿ ಯಾಜಕನ ಬಳಿಗೆ ಹೋಗಿ ಮೈ ತೋರಿಸು. ನೀನು ಗುಣಹೊಂದಿರುವುದರಿಂದ ಮೋಶೆಯ ಆಜ್ಞಾನುಸಾರವಾಗಿ ದೇವರಿಗೆ ಕಾಣಿಕೆಯನ್ನು ಅರ್ಪಿಸು. ನಿನಗೆ ಗುಣವಾಯಿತು ಎಂಬುದಕ್ಕೆ ಇದು ಜನರಿಗೆ ಸಾಕ್ಷಿಯಾಗಿರುವುದು” ಎಂದು ಎಚ್ಚರಿಕೆ ನೀಡಿ ಕಳುಹಿಸಿಬಿಟ್ಟನು.

[45] ಅವನು ಅಲ್ಲಿಂದ ಹೋಗಿ ಯೇಸುವೇ ತನ್ನನ್ನು ಗುಣಪಡಿಸಿದನೆಂದು ಜನರೆಲ್ಲರಿಗೆ ತಿಳಿಸಿದನು. ಈ ಸುದ್ದಿಯು ಎಲ್ಲೆಡೆ ಹರಡಿದ್ದರಿಂದ ಆತನು ಬಹಿರಂಗವಾಗಿ ಊರೊಳಗೆ ಹೋಗಲು ಸಾಧ್ಯವಾಗದೆ ಏಕಾಂತವಾದ ಸ್ಥಳಗಳಲ್ಲಿ ವಾಸಿಸಬೇಕಾಯಿತು. ಆದರೂ ಎಲ್ಲಾ ಕಡೆಗಳಿಂದ ಜನರು ಯೇಸುವಿದ್ದಲ್ಲಿಗೆ ಬರುತ್ತಿದ್ದರು.

ಮಾರ್ಕನ ಸುವಾರ್ತೆ — Chapters