[1] ಆಮೇಲೆ ಯೇಸು ಜನರಿಗೆ, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಇಲ್ಲಿ ನಿಂತಿರುವ ನಿಮ್ಮಲ್ಲಿ ಕೆಲವು ಜನರು ತಾವು ಸಾಯುವುದಕ್ಕೆ ಮುಂಚೆ ದೇವರ ರಾಜ್ಯವು ಅಧಿಕಾರದೊಡನೆ ಬರುವುದನ್ನು ನೋಡುತ್ತಾರೆ” ಎಂದು ಹೇಳಿದನು.
[2] ಆರು ದಿನಗಳ ನಂತರ ಪೇತ್ರ, ಯಾಕೋಬ ಮತ್ತು ಯೋಹಾನರನ್ನು ಕರೆದುಕೊಂಡು ಯೇಸು ಎತ್ತರವಾದ ಬೆಟ್ಟದ ಮೇಲೆ ಹೋದನು. ಅಲ್ಲಿ ಅವರು ಮಾತ್ರ ಇದ್ದರು. ಈ ಶಿಷ್ಯರು ಯೇಸುವನ್ನು ನೋಡುತ್ತಿರಲು, ಇದ್ದಕ್ಕಿದ್ದಂತೆ ಆತನು ರೂಪಾಂತರ ಹೊಂದಿದನು.
[3] ಯೇಸುವಿನ ಬಟ್ಟೆಗಳು ಬಿಳುಪಾಗಿ ಹೊಳೆಯುತ್ತಿದ್ದವು. ಅಷ್ಟು ಬಿಳುಪಾದ ಬಟ್ಟೆಗಳನ್ನು ತಯಾರಿಸಲು ಸಾಧ್ಯವಿರಲಿಲ್ಲ.
[4] ಆಗ ಮೋಶೆ ಮತ್ತು ಎಲೀಯ ಅಲ್ಲಿ ಪ್ರತ್ಯಕ್ಷರಾಗಿ ಯೇಸುವಿನೊಂದಿಗೆ ಮಾತಾಡುತ್ತಿದ್ದರು.
[5] ಪೇತ್ರನು ಯೇಸುವಿಗೆ, “ಗುರುವೇ, ನಾವು ಇಲ್ಲೇ ಇರುವುದು ಒಳ್ಳೆಯದು. ನಾವು ಇಲ್ಲಿ ಮೂರು ಗುಡಾರಗಳನ್ನು ಹಾಕುತ್ತೇವೆ. ಒಂದು ನಿನಗೆ, ಒಂದು ಮೋಶೆಗೆ ಮತ್ತೊಂದು ಎಲೀಯನಿಗೆ” ಎಂದು ಹೇಳಿದನು.
[6] ಪೇತ್ರನಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ಏಕೆಂದರೆ ಅವನು ಮತ್ತು ಉಳಿದ ಇನ್ನಿಬ್ಬರು ಶಿಷ್ಯರು ಬಹಳ ಭಯಗೊಂಡಿದ್ದರು.
[7] ಆಗ ಮೋಡವು ಬಂದು, ಅವರನ್ನು ಮುಸುಕಿತು. ಆ ಮೋಡದ ಒಳಗಿಂದ ಒಂದು ಧ್ವನಿಯು, “ಈತನು ನನ್ನ ಪ್ರಿಯ ಮಗನು. ಈತನಿಗೆ ವಿಧೇಯರಾಗಿ” ಎಂದು ಹೇಳಿತು.
[8] ಆಗ ಪೇತ್ರ, ಯಾಕೋಬ ಮತ್ತು ಯೋಹಾನರು ಕಣ್ಣೆತ್ತಿ ನೋಡಿದಾಗ ಯೇಸು ಒಬ್ಬನೇ ಅಲ್ಲಿದ್ದನು.
[9] ಯೇಸು ಮತ್ತು ಆ ಶಿಷ್ಯರು ಹಿಂತಿರುಗಿ ಬೆಟ್ಟದಿಂದ ಕೆಳಗಿಳಿದು ಬರುತ್ತಿರುವಾಗ, ಆತನು ಅವರಿಗೆ, “ನೀವು ಬೆಟ್ಟದ ಮೇಲೆ ನೋಡಿದ ಸಂಗತಿಗಳ ಬಗ್ಗೆ ಯಾರಿಗೂ ಹೇಳಬೇಡಿ. ಮನುಷ್ಯಕುಮಾರನು ಸತ್ತು ಜೀವಂತವಾಗಿ ಎದ್ದುಬರುವವರೆಗೆ ಕಾದುಕೊಂಡಿರಿ” ಎಂದು ಆಜ್ಞಾಪಿಸಿದನು.
[10] ಆದ್ದರಿಂದ ಆ ಶಿಷ್ಯರು ಈ ಸಂಗತಿಗಳನ್ನು ಯಾರಿಗೂ ತಿಳಿಸಲಿಲ್ಲ. ಆದರೆ “ಸತ್ತು ಜೀವಂತವಾಗಿ ಎದ್ದುಬರುವುದು” ಎಂದರೇನು? ಎಂದು ತಮ್ಮತಮ್ಮಲ್ಲಿಯೇ ಚರ್ಚಿಸಿದರು.
[11] ಶಿಷ್ಯರು ಯೇಸುವಿಗೆ, “ಎಲೀಯನೇ ಮೊದಲು ಬರಬೇಕೆಂದು ಧರ್ಮೋಪದೇಶಕರು ಹೇಳಲು ಕಾರಣವೇನು?” ಎಂದು ಕೇಳಿದರು.
[12] ಯೇಸು ಅವರಿಗೆ, “ಎಲೀಯನೇ ಮೊದಲು ಬರಬೇಕೆಂದು ಅವರು ಹೇಳುವುದು ಸರಿ. ಎಲೀಯನು ಎಲ್ಲವನ್ನು ಸರಿಪಡಿಸುತ್ತಾನೆ. ಆದರೆ ಮನುಷ್ಯಕುಮಾರನು ಬಹಳ ಸಂಕಟವನ್ನು ಅನುಭವಿಸುವನೆಂತಲೂ ಜನರು ಆತನನ್ನು ಹೀನೈಸುವರೆಂತಲೂ ಪವಿತ್ರಗ್ರಂಥವು ಏಕೆ ಹೇಳುತ್ತದೆ?
[13] ಎಲೀಯನು ಈಗಾಗಲೇ ಬಂದಿದ್ದಾನೆಂದು ನಾನು ನಿಮಗೆ ಹೇಳುತ್ತೇನೆ ಮತ್ತು ಜನರು ತಮ್ಮ ಮನಸ್ಸಿಗೆ ಬಂದಂತೆ ಅವನಿಗೆ ಕೇಡನ್ನು ಮಾಡಿದರು. ಅವನಿಗೆ ಹೀಗಾಗುವುದೆಂದು ಪವಿತ್ರಗ್ರಂಥದಲ್ಲಿ ಮೊದಲೇ ಬರೆದಿತ್ತು” ಎಂದು ಉತ್ತರಿಸಿದನು.
[14] ನಂತರ ಯೇಸು, ಪೇತ್ರ, ಯಾಕೋಬ ಮತ್ತು ಯೋಹಾನ ಇತರ ಶಿಷ್ಯರ ಬಳಿಗೆ ಹೋದರು. ಆ ಶಿಷ್ಯರ ಸುತ್ತಲೂ ಅನೇಕ ಜನರು ನೆರೆದಿದ್ದರು. ಧರ್ಮೋಪದೇಶಕರು ಅವರೊಡನೆ ವಾದ ಮಾಡುತ್ತಾ ಇದ್ದರು.
[15] ಆ ಜನರು ಯೇಸುವನ್ನು ನೋಡಿದಾಗ ಬಹಳ ಆಶ್ಚರ್ಯಪಟ್ಟು ಆತನನ್ನು ಸ್ವಾಗತಿಸಲು ಆತನ ಬಳಿಗೆ ಬಂದರು.
[16] ಯೇಸು, “ನೀವು ಯಾವುದರ ಬಗ್ಗೆ ವಾದಿಸುತ್ತಿದ್ದೀರಿ?” ಎಂದು ಕೇಳಿದನು.
[17] ಒಬ್ಬನು, “ಗುರುವೇ, ನನ್ನ ಮಗನಿಗೆ ದೆವ್ವ ಹಿಡಿದಿದ್ದ ಕಾರಣ ನಾನು ಅವನನ್ನು ನಿನ್ನ ಶಿಷ್ಯರ ಬಳಿಗೆ ತಂದೆನು. ಅವನು ಮಾತಾಡಲಾರ.
[18] ಆ ದೆವ್ವವು ಅವನ ಮೇಲೆ ಆಕ್ರಮಣ ಮಾಡಿದಾಗಲೆಲ್ಲಾ ಅವನನ್ನು ನೆಲಕ್ಕೆ ಕೆಡವುತ್ತದೆ. ನನ್ನ ಮಗನು ಬಾಯಿಂದ ನೊರೆ ಸುರಿಸುತ್ತಾ ಹಲ್ಲುಗಳನ್ನು ಕಟಕಟನೆ ಕಡಿಯುತ್ತಾನೆ ಮತ್ತು ಬಹಳ ಬಿರುಸಾಗುತ್ತಾನೆ. ಅವನನ್ನು ಆ ದೆವ್ವದಿಂದ ಬಿಡಿಸುವಂತೆ ನಾನು ನಿನ್ನ ಶಿಷ್ಯರನ್ನು ಕೇಳಿಕೊಂಡೆನು. ಆದರೆ ಅವರಿಗೆ ಸಾಧ್ಯವಾಗಲಿಲ್ಲ” ಎಂದು ಹೇಳಿದನು.
[19] ಯೇಸು, “ವಿಶ್ವಾಸವಿಲ್ಲದ ಸಂತಾನವೇ, ನಾನು ನಿಮ್ಮೊಡನೆ ಇನ್ನೆಷ್ಟು ಕಾಲ ಇರಲಿ? ಇನ್ನೆಷ್ಟು ಕಾಲ ಸಹಿಸಿಕೊಳ್ಳಲಿ? ಆ ಹುಡುಗನನ್ನು ನನ್ನ ಬಳಿಗೆ ತನ್ನಿರಿ!” ಎಂದು ಉತ್ತರಿಸಿದನು.
[20] ಆಗ ಶಿಷ್ಯರು ಆ ಹುಡುಗನನ್ನು ಯೇಸುವಿನ ಬಳಿಗೆ ತಂದರು. ಆ ದೆವ್ವವು ಯೇಸುವನ್ನು ನೋಡಿದ ಕೂಡಲೇ ಆ ಹುಡುಗನ ಮೇಲೆ ಆಕ್ರಮಣ ಮಾಡಿತು. ಆ ಹುಡುಗನು ಕೆಳಗೆ ಬಿದ್ದು, ಬಾಯಿಂದ ನೊರೆಯನ್ನು ಸುರಿಸುತ್ತಾ ಒದ್ದಾಡತೊಡಗಿದನು.
[21] ಯೇಸು, “ಎಷ್ಟು ಕಾಲದಿಂದ ಹೀಗಾಗುತ್ತಿದೆ?” ಎಂದು ಆ ಹುಡುಗನ ತಂದೆಯನ್ನು ಕೇಳಿದನು. ಅದಕ್ಕೆ ತಂದೆಯು, “ಬಾಲ್ಯದಿಂದಲೇ ಹೀಗಾಗುತ್ತಿದೆ.
[22] ಆಗಿಂದಾಗ್ಗೆ ದೆವ್ವವು ಅವನನ್ನು ಕೊಲ್ಲಲು ಬೆಂಕಿಯೊಳಗೆ ಅಥವಾ ನೀರಿನೊಳಗೆ ಎಸೆಯುತ್ತದೆ. ನಿನಗೆ ಸಾಧ್ಯವಿರುವುದಾದರೆ, ದಯವಿಟ್ಟು ನಮ್ಮ ಮೇಲೆ ಕರುಣೆಯಿಟ್ಟು ಸಹಾಯಮಾಡು” ಎಂದು ಉತ್ತರಿಸಿದನು.
[23] ಅದಕ್ಕೆ ಯೇಸು, “‘ನಿನಗೆ ಸಾಧ್ಯವಿರುವುದಾದರೆ’ ಎಂದು ನೀನು ಹೇಳುವುದೇಕೆ? ನಂಬಿಕೆಯಿಡುವ ವ್ಯಕ್ತಿಗೆ ಎಲ್ಲವೂ ಸಾಧ್ಯ” ಎಂದು ಹೇಳಿದನು.
[24] ಆ ಹುಡುಗನ ತಂದೆಯು ಸಂತೋಷದಿಂದ, “ನಾನು ನಂಬುತ್ತೇನೆ. ಇನ್ನೂ ಹೆಚ್ಚಾಗಿ ನಂಬಲು ನನಗೆ ಸಹಾಯ ಮಾಡು” ಎಂದನು.
[25] ಅಲ್ಲಿ ನಡೆಯುತ್ತಿರುವುದನ್ನು ನೋಡಲು ಜನರೆಲ್ಲರೂ ಓಡಿಬರುತ್ತಿರುವುದನ್ನು ಕಂಡ ಯೇಸು, ಆ ದೆವ್ವಕ್ಕೆ, “ಎಲೈ ಕಿವುಡು ಮೂಕ ದೆವ್ವವೇ, ಈ ಹುಡುಗನಿಂದ ಹೊರಗೆ ಬರುವಂತೆಯೂ ಇವನೊಳಗೆ ಇನ್ನೆಂದಿಗೂ ಪ್ರವೇಶಿಸದಂತೆಯೂ ನಾನು ನಿನಗೆ ಆಜ್ಞಾಪಿಸುತ್ತೇನೆ!” ಎಂದನು.
[26] ಆ ದೆವ್ವವು ಅರಚಿತು. ಅದು ಆ ಹುಡುಗನನ್ನು ಮತ್ತೆ ನೆಲದ ಮೇಲೆ ಬೀಳಿಸಿ, ಒದ್ದಾಡಿಸಿ ಹೊರಬಂದಿತು. ಆ ಹುಡುಗನು ಸತ್ತವನಂತೆ ಬಿದ್ದಿದ್ದನು. ಅನೇಕ ಜನರು, “ಅವನು ಸತ್ತುಹೋದನು” ಎಂದರು.
[27] ಆದರೆ ಯೇಸು ಆ ಹುಡುಗನ ಕೈ ಹಿಡಿದೆತ್ತಿ, ಎದ್ದುನಿಲ್ಲಲು ಅವನಿಗೆ ಸಹಾಯಮಾಡಿದನು.
[28] ಯೇಸು ಮನೆಯೊಳಗೆ ಹೋದ ಮೇಲೆ ಆತನ ಶಿಷ್ಯರು ಪ್ರತ್ಯೇಕವಾದ ಸ್ಥಳದಲ್ಲಿ ಆತನಿಗೆ, “ಆ ದೆವ್ವವನ್ನು ಬಿಡಿಸಲು ನಮಗೆ ಏಕೆ ಸಾಧ್ಯವಾಗಲಿಲ್ಲ?” ಎಂದು ಕೇಳಿದರು.
[29] ಯೇಸು, “ಈ ಬಗೆಯ ದೆವ್ವವನ್ನು ಪ್ರಾರ್ಥನೆಯಿಂದ ಮಾತ್ರ ಬಿಡಿಸಲು ಸಾಧ್ಯ” ಎಂದು ಉತ್ತರಿಸಿದನು.
[30] ನಂತರ ಯೇಸು ಮತ್ತು ಆತನ ಶಿಷ್ಯರು ಆ ಸ್ಥಳದಿಂದ ಹೊರಟು ಗಲಿಲಾಯದ ಮೂಲಕ ಪ್ರಯಾಣ ಮಾಡಿದರು. ತಾವು ಎಲ್ಲಿದ್ದೇವೆಂಬುದು ಜನರಿಗೆ ತಿಳಿಯಬಾರದೆಂಬುದು ಯೇಸುವಿನ ಉದ್ದೇಶವಾಗಿತ್ತು.
[31] ಏಕೆಂದರೆ ಆತನು ತನ್ನ ಶಿಷ್ಯರಿಗೆ ಏಕಾಂತವಾಗಿ ಉಪದೇಶಿಸಬೇಕೆಂದಿದ್ದನು. ಯೇಸು ಅವರಿಗೆ, “ಮನುಷ್ಯಕುಮಾರನನ್ನು ಜನರ ವಶಕ್ಕೆ ಕೊಡುವರು. ಜನರು ಆತನನ್ನು ಕೊಲ್ಲುವರು. ಕೊಲ್ಲಲ್ಪಟ್ಟ ಮೂರನೆಯ ದಿನದಲ್ಲಿ ಆತನು ಜೀವಂತವಾಗಿ ಎದ್ದುಬರುವನು” ಎಂದು ಹೇಳಿದನು.
[32] ಆದರೆ ಯೇಸು ಹೇಳಿದ್ದು ಶಿಷ್ಯರಿಗೆ ಅರ್ಥವಾಗಲಿಲ್ಲ. ಮತ್ತು ಅದರ ಅರ್ಥವನ್ನು ಕೇಳುವುದಕ್ಕೂ ಅವರು ಭಯಪಟ್ಟರು.
[33] ಯೇಸು ಮತ್ತು ಆತನ ಶಿಷ್ಯರು ಕಪೆರ್ನೌಮಿಗೆ ಹೋದರು. ಅವರು ಒಂದು ಮನೆಯೊಳಗಿದ್ದಾಗ ಆತನು ತನ್ನ ಶಿಷ್ಯರಿಗೆ, “ಈ ದಿನ ನೀವು ದಾರಿಯಲ್ಲಿ ವಾದಮಾಡುತ್ತಿದ್ದುದ್ದನ್ನು ಕೇಳಿಸಿಕೊಂಡೆ. ನೀವು ಯಾವುದರ ಬಗ್ಗೆ ವಾದಮಾಡುತ್ತಿದ್ದಿರಿ?” ಎಂದನು.
[34] ಆದರೆ ಶಿಷ್ಯರು ಉತ್ತರಿಸಲಿಲ್ಲ. ಏಕೆಂದರೆ ತಮ್ಮಲ್ಲಿ ಎಲ್ಲರಿಗಿಂತಲೂ ದೊಡ್ಡವನು ಯಾರೆಂಬುದರ ಕುರಿತು ಅವರು ವಾಗ್ವಾದ ಮಾಡಿದ್ದರು.
[35] ಯೇಸು ಕುಳಿತುಕೊಂಡು, ಹನ್ನೆರಡು ಜನ ಅಪೊಸ್ತಲರನ್ನು ತನ್ನ ಬಳಿಗೆ ಕರೆದು ಅವರಿಗೆ, “ನಿಮ್ಮಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಯಾಗಬೇಕೆಂದು ಬಯಸುವವನು ಉಳಿದ ಎಲ್ಲರನ್ನು ತನಗಿಂತಲೂ ಹೆಚ್ಚು ಪ್ರಮುಖರೆಂದು ಭಾವಿಸಿಕೊಂಡು ಎಲ್ಲರ ಸೇವೆಮಾಡಬೇಕು” ಎಂದು ಹೇಳಿದನು.
[36] ನಂತರ ಯೇಸು ಒಂದು ಚಿಕ್ಕ ಮಗುವನ್ನು ಕರೆದು, ಆ ಮಗುವನ್ನು ಶಿಷ್ಯರ ಮುಂದೆ ನಿಲ್ಲಿಸಿ, ಅದನ್ನು ತನ್ನ ಕೈಗಳಲ್ಲಿ ಎತ್ತಿಕೊಂಡು ಅವರಿಗೆ,
[37] “ನನ್ನ ಹೆಸರಿನಲ್ಲಿ ಇಂಥ ಮಕ್ಕಳನ್ನು ಸ್ವೀಕರಿಸಿಕೊಳ್ಳುವವನು ನನ್ನನ್ನೇ ಸ್ವೀಕರಿಸಿಕೊಂಡಂತಾಯಿತು. ನನ್ನನ್ನು ಸ್ವೀಕರಿಸಿಕೊಳ್ಳುವವನು, ನನ್ನನ್ನು ಕಳುಹಿಸಿದಾತನನ್ನೇ ಸ್ವೀಕರಿಸಿಕೊಂಡಂತಾಯಿತು” ಎಂದು ಹೇಳಿದನು.
[38] ಆಗ ಯೋಹಾನನು, “ಗುರುವೇ, ಯಾರೋ ಒಬ್ಬನು ನಿನ್ನ ಹೆಸರಿನ ಮೂಲಕ ದೆವ್ವಗಳನ್ನು ಬಿಡಿಸುತ್ತಿರುವುದನ್ನು ನಾವು ನೋಡಿದೆವು. ಅವನು ನಮ್ಮವನಲ್ಲ. ಆದ್ದರಿಂದ ನಿನ್ನ ಹೆಸರನ್ನು ಹೇಳಕೂಡದೆಂದು ಅವನಿಗೆ ಹೇಳಿದೆವು” ಎಂದನು.
[39] ಯೇಸು ಅವರಿಗೆ, “ಅವನನ್ನು ತಡೆಯಬೇಡಿ. ನನ್ನ ಹೆಸರಿನ ಮೂಲಕ ಅದ್ಭುತಕಾರ್ಯಗಳನ್ನು ಮಾಡುವವನು ಆ ಕೂಡಲೇ ನನ್ನ ಬಗ್ಗೆ ಕೆಟ್ಟ ಸಂಗತಿಗಳನ್ನು ಹೇಳಲು ಸಾಧ್ಯವಿಲ್ಲ.
[40] ನಮ್ಮ ವೈರಿಯಲ್ಲದವನು ನಮ್ಮ ಮಿತ್ರನೇ ಸರಿ.
[41] ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಕ್ರಿಸ್ತನವರೆಂದು ಯಾವನಾದರೂ ನಿಮಗೆ ಕುಡಿಯಲು ನೀರು ಕೊಟ್ಟರೂ ಅವನಿಗೆ ಅದರ ಪ್ರತಿಫಲ ಖಂಡಿತವಾಗಿ ಸಿಕ್ಕುವುದು.
[42] “ನನ್ನಲ್ಲಿ ನಂಬಿಕೆಯಿಟ್ಟಿರುವ ಈ ಚಿಕ್ಕ ಮಕ್ಕಳಲ್ಲಿ ಒಬ್ಬನನ್ನು ಪಾಪಕ್ಕೆ ನಡೆಸುವ ವ್ಯಕ್ತಿಯು ತನ್ನ ಕುತ್ತಿಗೆಗೆ ಬೀಸುವ ಕಲ್ಲನ್ನು ಕಟ್ಟಿಕೊಂಡು, ಸಮುದ್ರದಲ್ಲಿ ಮುಳುಗುವುದೇ ಒಳ್ಳೆಯದು.
[43] ನಿನ್ನ ಕೈ ನಿನ್ನನ್ನು ಪಾಪದಲ್ಲಿ ಸಿಲುಕಿಸುವುದಾದರೆ ಅದನ್ನು ಕತ್ತರಿಸಿಬಿಡು. ಎರಡು ಕೈಗಳನ್ನು ಇಟ್ಟುಕೊಂಡು, ನಂದಿಹೋಗದ ಬೆಂಕಿಯಿರುವ ನರಕಕ್ಕೆ ಹೋಗುವುದಕ್ಕಿಂತ ಅಂಗವಿಕಲನಾಗಿದ್ದು ನಿತ್ಯಜೀವವನ್ನು ಪಡೆಯುವುದೇ ಮೇಲು. ಆ ಸ್ಥಳದಲ್ಲಿ ಬೆಂಕಿ ಆರಿಹೋಗುವುದೇ ಇಲ್ಲ.
[45] ನಿನ್ನ ಕಾಲು ನಿನ್ನನ್ನು ಪಾಪದಲ್ಲಿ ಸಿಕ್ಕಿಸುವುದಾದರೆ, ಅದನ್ನು ಕತ್ತರಿಸಿಬಿಡು. ಎರಡು ಕಾಲುಗಳನ್ನು ಇಟ್ಟುಕೊಂಡು ನರಕದೊಳಗೆ ಎಸೆಯಲ್ಪಡುವುದಕ್ಕಿಂತ ಕುಂಟನಾಗಿರುವುದೇ ಮೇಲು.
[47] ನಿನ್ನ ಕಣ್ಣು ನಿನ್ನನ್ನು ಪಾಪದಲ್ಲಿ ಸಿಲುಕಿಸುವುದಾದರೆ, ಅದನ್ನು ಕಿತ್ತುಬಿಡು. ಎರಡು ಕಣ್ಣುಗಳನ್ನಿಟ್ಟುಕೊಂಡು ನರಕದೊಳಗೆ ಎಸೆಯಲ್ಪಡುವುದಕ್ಕಿಂತ ಒಂದೇ ಕಣ್ಣುಳ್ಳವನಾಗಿದ್ದು ನಿತ್ಯಜೀವವನ್ನು ಹೊಂದಿಕೊಳ್ಳುವುದೇ ಮೇಲು.
[48] ನರಕದಲ್ಲಿ ಮನುಷ್ಯರನ್ನು ತಿನ್ನುವ ಹುಳಗಳು ಸಾಯುವುದೇ ಇಲ್ಲ ಮತ್ತು ಬೆಂಕಿಯು ಆರುವುದೇ ಇಲ್ಲ.
[49] “ಪ್ರತಿಯೊಬ್ಬನನ್ನೂ ಬೆಂಕಿಯಿಂದ ಶಿಕ್ಷಿಸಲಾಗುತ್ತದೆ.
[50] “ಉಪ್ಪು ಒಳ್ಳೆಯದು. ಆದರೆ ಉಪ್ಪು ತನ್ನ ರುಚಿಯನ್ನು ಕಳೆದುಕೊಂಡರೆ, ಅದನ್ನು ಮತ್ತೆ ನೀವು ಉಪ್ಪನ್ನಾಗಿ ಮಾಡಲಾರಿರಿ. ಆದ್ದರಿಂದ ಒಳ್ಳೆಯತನದಿಂದ ತುಂಬಿದವರಾಗಿರಿ ಮತ್ತು ಒಬ್ಬರೊಡನೊಬ್ಬರು ಸಮಾಧಾನದಿಂದಿರಿ” ಎಂದು ಹೇಳಿದನು.