Skip to content
Opens in a new window
Listen to this chapter • 4:13

[1] ಸಬ್ಬತ್ ದಿನ ಕಳೆದಿತ್ತು. ಭಾನುವಾರ ಬೆಳಗಾಗುವುದರಲ್ಲಿತ್ತು. ಮಗ್ಧಲದ ಮರಿಯಳು ಮತ್ತು ಇನ್ನೊಬ್ಬ ಮರಿಯಳು ಸಮಾಧಿಯನ್ನು ನೋಡಲು ಹೋದರು.

[2] ಆಗ ಭೀಕರ ಭೂಕಂಪವಾಯಿತು. ಪ್ರಭುವಿನ ದೂತನೊಬ್ಬನು ಆಕಾಶದಿಂದ ಇಳಿದುಬಂದನು. ಆ ದೇವದೂತನು ಸಮಾಧಿಯ ಬಳಿಗೆ ಹೋಗಿ, ಸಮಾಧಿಯ ಬಾಗಿಲಿನಿಂದ ಬಂಡೆಯನ್ನು ಉರುಳಿಸಿ ಆ ಬಂಡೆಯ ಮೇಲೆ ಕುಳಿತುಕೊಂಡನು.

[3] ದೇವದೂತನು ಮಿಂಚಿನಂತೆ ಪ್ರಕಾಶಿಸುತ್ತಿದ್ದನು. ಅವನ ಬಟ್ಟೆಗಳು ಮಂಜಿನಂತೆ ಬಿಳುಪಾಗಿದ್ದವು.

[4] ಸಮಾಧಿಯನ್ನು ಕಾಯುತ್ತಿದ್ದ ಸೈನಿಕರು ದೇವದೂತನನ್ನು ಕಂಡು ಬಹಳವಾಗಿ ಹೆದರಿ ಭಯದಿಂದ ನಡುಗುತ್ತಾ ಸತ್ತಂತಾದರು.

[5] ದೇವದೂತನು ಆ ಸ್ತ್ರೀಯರಿಗೆ, “ಹೆದರಬೇಡಿ, ಶಿಲುಬೆಗೇರಿಸಲ್ಪಟ್ಟ ಯೇಸುವನ್ನು ನೀವು ಹುಡುಕುತ್ತಿದ್ದೀರೆಂಬುದು ನನಗೆ ತಿಳಿದಿದೆ.

[6] ಆದರೆ ಯೇಸು ಇಲ್ಲಿಲ್ಲ. ಆತನು ತಾನು ತಿಳಿಸಿದ್ದಂತೆಯೇ ಪುನರುತ್ಥಾನ ಹೊಂದಿದ್ದಾನೆ. ಬನ್ನಿ, ಆತನ ದೇಹವಿದ್ದ ಸ್ಥಳವನ್ನು ನೋಡಿ.

[7] ಬೇಗನೆ ಹೋಗಿ ಆತನ ಶಿಷ್ಯರಿಗೆ, ‘ಯೇಸು ಪುನರುತ್ಥಾನ ಹೊಂದಿದ್ದಾನೆ. ಆತನು ಗಲಿಲಾಯಕ್ಕೆ ಹೋಗುತ್ತಿದ್ದಾನೆ. ನಿಮಗಿಂತ ಮುಂಚೆಯೇ ಆತನು ಅಲ್ಲಿರುತ್ತಾನೆ. ನೀವು ಆತನನ್ನು ಅಲ್ಲಿ ನೋಡುತ್ತೀರಿ’ ಎಂದು ಹೇಳಿರಿ. ನಾನು ನಿಮಗೆ ತಿಳಿಸಬೇಕಾದ ಸಮಾಚಾರ ಇದೇ, ಮರೆಯದಿರಿ” ಎಂದನು.

[8] ಕೂಡಲೇ ಆ ಸ್ತ್ರೀಯರು ಭಯದಿಂದಲೂ ಸಂತೋಷದಿಂದಲೂ ಸಮಾಧಿಯಿಂದ ಹೊರಟರು. ನಡೆದ ಸಂಗತಿಯನ್ನು ಶಿಷ್ಯರಿಗೆ ತಿಳಿಸಲು ಅವರು ಓಡಿಹೋಗುತ್ತಿರಲು,

[9] ಯೇಸು ಅವರ ಮುಂದೆ ಪ್ರತ್ಯಕ್ಷನಾಗಿ, “ನಿಮಗೆ ಶುಭವಾಗಲಿ” ಎಂದನು. ಆ ಸ್ತ್ರೀಯರು ಯೇಸುವಿನ ಬಳಿಗೆ ಹೋಗಿ, ಆತನ ಪಾದಗಳನ್ನು ಹಿಡಿದುಕೊಂಡು ಆತನನ್ನು ಆರಾಧಿಸಿದರು.

[10] ಯೇಸು ಆ ಸ್ತ್ರೀಯರಿಗೆ, “ಹೆದರಬೇಡಿ, ನನ್ನ ಸಹೋದರರ ಬಳಿಗೆ ಹೋಗಿ ಗಲಿಲಾಯಕ್ಕೆ ಬರಲು ತಿಳಿಸಿರಿ. ಅವರು ನನ್ನನ್ನು ಅಲ್ಲಿ ಕಾಣುವರು” ಎಂದು ಹೇಳಿದನು.

[11] ಆ ಸ್ತ್ರೀಯರು ಶಿಷ್ಯರಿಗೆ ತಿಳಿಸಲು ಹೋದರು. ಇತ್ತ ಸಮಾಧಿಯನ್ನು ಕಾಯುತ್ತಿದ್ದ ಕೆಲವು ಸೈನಿಕರು ನಗರದೊಳಕ್ಕೆ ಹೋಗಿ ನಡೆದ ಸಂಗತಿಯನ್ನೆಲ್ಲಾ ಮಹಾಯಾಜಕರಿಗೆ ತಿಳಿಸಿದರು.

[12] ಆಗ ಮಹಾಯಾಜಕರು ಹಿರಿಯ ಯೆಹೂದ್ಯರನ್ನು ಭೇಟಿಮಾಡಿ ಚರ್ಚಿಸಿದರು ಮತ್ತು ಸೈನಿಕರಿಗೆ ಹೆಚ್ಚು ಹಣಕೊಟ್ಟು ಅವರಿಂದ ಸುಳ್ಳು ಹೇಳಿಸುವ ಉಪಾಯವನ್ನು ಮಾಡಿದರು.

[13] ಅವರು ಸೈನಿಕರಿಗೆ, “ರಾತ್ರಿ ವೇಳೆಯಲ್ಲಿ ನಾವು ನಿದ್ರಿಸುತ್ತಿದ್ದಾಗ ಯೇಸುವಿನ ಶಿಷ್ಯರು ಬಂದು ಅವನ ದೇಹವನ್ನು ಕದ್ದೊಯ್ದರೆಂದು ಜನರಿಗೆ ತಿಳಿಸಿರಿ.

[14] ಇದು ರಾಜ್ಯಪಾಲನಿಗೆ ಗೊತ್ತಾದರೂ ನಾವು ಅವನನ್ನು ಸಮಾಧಾನಪಡಿಸುತ್ತೇವೆ ಮತ್ತು ನಿಮಗೇನೂ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ” ಎಂದು ಹೇಳಿದರು.

[15] ಸೈನಿಕರು ಹಣವನ್ನು ತೆಗೆದುಕೊಂಡು, ಅವರು ಹೇಳಿದಂತೆಯೇ ಮಾಡಿದರು. ಈ ಕಥೆಯು ಇಂದಿನವರೆಗೂ ಯೆಹೂದ್ಯರಲ್ಲಿ ಹಬ್ಬಿಕೊಂಡಿದೆ.

[16] ಹನ್ನೊಂದು ಮಂದಿ ಶಿಷ್ಯರು ಗಲಿಲಾಯಕ್ಕೆ ಹೊರಟು ಯೇಸು ತಿಳಿಸಿದ್ದ ಬೆಟ್ಟಕ್ಕೆ ಬಂದರು.

[17] ಶಿಷ್ಯರು ಬೆಟ್ಟದ ಮೇಲೆ ಯೇಸುವನ್ನು ಕಂಡು ಆತನನ್ನು ಆರಾಧಿಸಿದರು. ಆದರೆ ಕೆಲವು ಶಿಷ್ಯರು ಆತನೇ ನಿಜವಾದ ಯೇಸು ಎಂಬುದನ್ನು ನಂಬಲಿಲ್ಲ.

[18] ಆದ್ದರಿಂದ ಯೇಸು ಅವರ ಬಳಿಗೆ ಬಂದು, “ಪರಲೋಕದ ಮತ್ತು ಈ ಲೋಕದ ಅಧಿಕಾರವೆಲ್ಲವನ್ನು ನನಗೆ ಕೊಡಲಾಗಿದೆ.

[19] ಆದ್ದರಿಂದ ನೀವು ಹೋಗಿ, ಲೋಕದಲ್ಲಿರುವ ಜನರೆಲ್ಲರನ್ನು ನನ್ನ ಶಿಷ್ಯರನ್ನಾಗಿ ಮಾಡಿರಿ. ತಂದೆಯ, ಮಗನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ಅವರಿಗೆಲ್ಲ ದೀಕ್ಷಾಸ್ನಾನ ಮಾಡಿಸಿ.

[20] ನಾನು ನಿಮಗೆ ಆಜ್ಞಾಪಿಸಿದವುಗಳಿಗೆಲ್ಲಾ ವಿಧೇಯರಾಗುವಂತೆ ಜನರಿಗೆ ಉಪದೇಶಿಸಿ, ಲೋಕಾಂತ್ಯದವರೆಗೂ ಸದಾಕಾಲ ನಾನು ನಿಮ್ಮೊಂದಿಗಿರುತ್ತೇನೆ” ಎಂದು ಹೇಳಿದನು.

ಮತ್ತಾಯನ ಸುವಾರ್ತೆ — Chapters