[1] ಮರುದಿನ ಮುಂಜಾನೆ, ಮಹಾಯಾಜಕರೆಲ್ಲರೂ ಮತ್ತು ಹಿರಿಯ ನಾಯಕರೆಲ್ಲರೂ ಯೇಸುವನ್ನು ಕೊಲ್ಲಲು ತೀರ್ಮಾನಿಸಿದರು.
[2] ಅವರು ಆತನನ್ನು ಸರಪಣಿಗಳಿಂದ ಬಂಧಿಸಿ ರಾಜ್ಯಪಾಲನಾದ ಪಿಲಾತನ ಬಳಿಗೆ ಕರೆದೊಯ್ದು ಅವನಿಗೆ ಒಪ್ಪಿಸಿದರು.
[3] ಯೇಸುವನ್ನು ಆತನ ವೈರಿಗಳಿಗೆ ಒಪ್ಪಿಸಿಕೊಟ್ಟ ಯೂದನು, ಯೇಸುವಿಗೆ ಸಂಭವಿಸಿದ್ದನ್ನು ಕಂಡು, ತಾನು ಮಾಡಿದ ದ್ರೋಹಕ್ಕಾಗಿ ಬಹಳ ಪಶ್ಚಾತ್ತಾಪಪಟ್ಟನು. ಅವನು ಬೆಳ್ಳಿಯ ನಾಣ್ಯಗಳನ್ನು ಮಹಾಯಾಜಕರ ಮತ್ತು ಹಿರಿಯನಾಯಕರ ಬಳಿಗೆ ತೆಗೆದುಕೊಂಡು ಹೋಗಿ,
[4] “ನಾನು ಪಾಪ ಮಾಡಿದೆ, ನಿರಪರಾಧಿಯನ್ನು ಕೊಲ್ಲಲು ನಿಮಗೆ ಒಪ್ಪಿಸಿಬಿಟ್ಟೆ” ಎಂದು ಹೇಳಿದನು. ಯೆಹೂದ್ಯ ನಾಯಕರು, “ಅದಕ್ಕೆ ನಾವೇನು ಮಾಡೋಣ! ಅದು ನಿನ್ನ ಸಮಸ್ಯೆ, ನಮ್ಮದಲ್ಲ!” ಎಂದು ಉತ್ತರಕೊಟ್ಟರು.
[5] ಆಗ ಯೂದನು ಆ ಹಣವನ್ನು ದೇವಾಲಯದೊಳಗೆ ಬಿಸಾಡಿ ಹೊರಟುಹೋಗಿ ನೇಣು ಹಾಕಿಕೊಂಡನು.
[6] ಮಹಾಯಾಜಕರು ದೇವಾಲಯದಲ್ಲಿದ್ದ ಬೆಳ್ಳಿಯ ನಾಣ್ಯಗಳನ್ನು ಆಯ್ದುಕೊಂಡು, “ಈ ಹಣವನ್ನು ಒಬ್ಬ ಮನುಷ್ಯನ ಹತ್ಯೆಗಾಗಿ ಕೊಟ್ಟಿದ್ದ ಕಾರಣ ಇದನ್ನು ದೇವಾಲಯದ ಹಣದೊಂದಿಗೆ ಸೇರಿಸುವುದು ನಮ್ಮ ಧರ್ಮಶಾಸ್ತ್ರಕ್ಕೆ ವಿರುದ್ಧ” ಎಂದು ಹೇಳಿದರು.
[7] ಆದ್ದರಿಂದ ಅವರು ಆ ಹಣದಿಂದ “ಕುಂಬಾರನ ಹೊಲ” ಎಂಬ ಜಮೀನನ್ನು ಕೊಂಡುಕೊಳ್ಳಲು ತೀರ್ಮಾನಿಸಿದರು. ಜೆರುಸಲೇಮಿಗೆ ಪ್ರವಾಸ ಬಂದವರು ಸತ್ತರೆ, ಅವರನ್ನು ಈ ಹೊಲದಲ್ಲಿ ಸಮಾಧಿ ಮಾಡಬೇಕೆಂದು ನಿರ್ಧರಿಸಲಾಯಿತು.
[8] ಆದಕಾರಣವೇ ಆ ಹೊಲವನ್ನು ಇಂದಿಗೂ “ಜೀವಹತ್ಯೆಯ ಹೊಲ”ವೆಂದು ಕರೆಯುತ್ತಾರೆ.
[9] ಹೀಗೆ ಪ್ರವಾದಿಯಾದ ಯೆರೆಮೀಯನು ಹೇಳಿದ ಮಾತು ನೆರವೇರಿತು. ಅದೇನೆಂದರೆ: “ಅವರು ಮೂವತ್ತು ಬೆಳ್ಳಿಯ ನಾಣ್ಯಗಳನ್ನು ತೆಗೆದುಕೊಂಡರು. ಯೆಹೂದ್ಯರು ಆತನ ಜೀವಕ್ಕೆ ನಿರ್ಧರಿಸಿದ ಬೆಲೆಯೇ ಅಷ್ಟು.
[10] ಪ್ರಭುವು ನನಗೆ ಆಜ್ಞಾಪಿಸಿದಂತೆ, ಅವರು ಮೂವತ್ತು ಬೆಳ್ಳಿಯ ನಾಣ್ಯಗಳಿಂದ ಕುಂಬಾರನ ಹೊಲವನ್ನು ಕೊಂಡುಕೊಂಡರು.”
[11] ಯೇಸುವನ್ನು ರಾಜ್ಯಪಾಲ ಪಿಲಾತನ ಎದುರಿನಲ್ಲಿ ನಿಲ್ಲಿಸಿದರು. ಪಿಲಾತನು ಆತನಿಗೆ, “ನೀನು ಯೆಹೂದ್ಯರ ರಾಜನೇ?” ಎಂದು ಕೇಳಿದನು. ಯೇಸು, “ಹೌದು, ನೀನು ಹೇಳಿದಂತೆ ಆತನೇ ನಾನು” ಎಂದು ಉತ್ತರಕೊಟ್ಟನು.
[12] ಮಹಾಯಾಜಕರು ಮತ್ತು ಯೆಹೂದ್ಯರ ಹಿರಿಯ ನಾಯಕರು ಯೇಸುವಿನ ಮೇಲೆ ದೂರು ಹೇಳಿದಾಗ, ಆತನು ಮೌನವಾಗಿದ್ದನು.
[13] ಆದ್ದರಿಂದ ಪಿಲಾತನು ಯೇಸುವನ್ನು, “ಈ ಜನರು ನಿನ್ನ ಮೇಲೆ ಹೇಳುತ್ತಿರುವ ಈ ದೂರುಗಳನ್ನೆಲ್ಲ ನೀನು ಕೇಳುತ್ತಿದ್ದರೂ ಏಕೆ ಉತ್ತರ ಕೊಡುತ್ತಿಲ್ಲ?” ಎಂದು ಕೇಳಿದನು.
[14] ಆದರೆ ಯೇಸು ಪಿಲಾತನಿಗೆ ಉತ್ತರ ಕೊಡಲೇ ಇಲ್ಲ. ಪಿಲಾತನಿಗೆ ಬಹಳ ಆಶ್ಚರ್ಯವಾಯಿತು.
[15] ಪ್ರತಿವರ್ಷವೂ ಪಸ್ಕಹಬ್ಬದ ಸಮಯದಲ್ಲಿ ಜನರು ಬಯಸುವ ಕೈದಿಗಳಲ್ಲಿ ಒಬ್ಬನನ್ನು ರಾಜ್ಯಪಾಲನು ಬಿಡುಗಡೆ ಮಾಡಬೇಕೆಂಬುದು ಅಂದಿನ ಪದ್ಧತಿಯಾಗಿತ್ತು.
[16] ಆ ಕಾಲದಲ್ಲಿ ಪ್ರಸಿದ್ಧನಾದ ಕೈದಿಯೊಬ್ಬನು ಸೆರೆಮನೆಯಲ್ಲಿದ್ದನು. ಅವನ ಹೆಸರು ಬರಬ್ಬ.
[17] ಜನರೆಲ್ಲರೂ ಪಿಲಾತನ ಭವನದ ಬಳಿ ನೆರೆದಿದ್ದರು. ಪಿಲಾತನು ಅವರಿಗೆ, “ನಾನು ನಿಮಗಾಗಿ ಯಾವ ಕೈದಿಯನ್ನು ಬಿಡುಗಡೆ ಮಾಡಲಿ, ಬರಬ್ಬನನ್ನೋ ಅಥವಾ ಕ್ರಿಸ್ತನೆಂದು ಕರೆಸಿಕೊಳ್ಳುವ ಯೇಸುವನ್ನೋ?” ಎಂದು ಕೇಳಿದನು.
[18] ಜನರು ಹೊಟ್ಟೆಕಿಚ್ಚಿನಿಂದ ಯೇಸುವನ್ನು ತನಗೆ ಒಪ್ಪಿಸಿದ್ದಾರೆಂಬುದು ಪಿಲಾತನಿಗೆ ಗೊತ್ತಿತ್ತು.
[19] ಪಿಲಾತನು ನ್ಯಾಯಸ್ಥಾನದಲ್ಲಿ ಕುಳಿತುಕೊಂಡಿದ್ದಾಗ ಅವನ ಪತ್ನಿಯು ಒಂದು ಸಂದೇಶವನ್ನು ಕಳುಹಿಸಿದ್ದಳು. “ಆ ಮನುಷ್ಯನಿಗೆ ಏನನ್ನೂ ಮಾಡಬೇಡ. ಅವನು ತಪ್ಪಿತಸ್ಥನಲ್ಲ. ಆತನ ನಿಮಿತ್ತ ಕಳೆದ ರಾತ್ರಿ ಕನಸಿನಲ್ಲಿ ಬಹಳ ಸಂಕಟಪಟ್ಟಿದ್ದೇನೆ” ಎಂಬುದೇ ಆ ಸಂದೇಶ.
[20] ಆದರೆ ಮಹಾಯಾಜಕರು ಮತ್ತು ಹಿರಿಯ ಯೆಹೂದ್ಯ ನಾಯಕರು, ಬರಬ್ಬನನ್ನು ಬಿಡುಗಡೆ ಮಾಡಬೇಕೆಂದೂ ಯೇಸುವನ್ನು ಕೊಲ್ಲಿಸಬೇಕೆಂದೂ ಕೇಳಿಕೊಳ್ಳಲು ಜನರಿಗೆ ಹೇಳಿಕೊಟ್ಟರು.
[21] ಪಿಲಾತನು, “ನಿಮಗಾಗಿ ನಾನು ಯಾರನ್ನು ಬಿಡುಗಡೆ ಮಾಡಲಿ? ಬರಬ್ಬನನ್ನೋ? ಯೇಸುವನ್ನೋ?” ಎಂದು ಕೇಳಿದನು. ಜನರು “ಬರಬ್ಬನನ್ನು!” ಎಂದು ಉತ್ತರಕೊಟ್ಟರು.
[22] ಪಿಲಾತನು, “ಹಾಗಾದರೆ ಕ್ರಿಸ್ತನೆಂದು ಕರೆಸಿಕೊಳ್ಳುವ ಯೇಸುವನ್ನು ನಾನೇನು ಮಾಡಲಿ?” ಎಂದು ಕೇಳಿದನು. ಜನರೆಲ್ಲರೂ, “ಅವನನ್ನು ಶಿಲುಬೆಗೇರಿಸು!” ಎಂದು ಉತ್ತರಕೊಟ್ಟರು.
[23] ಪಿಲಾತನು, “ಅವನನ್ನು ಶಿಲುಬೆಗೇರಿಸೆಂದು ನೀವು ಕೇಳುವುದೇಕೆ? ಅವನೇನು ತಪ್ಪುಮಾಡಿದ್ದಾನೆ?” ಎಂದು ಕೇಳಿದನು. ಆದರೆ ಜನರೆಲ್ಲರೂ, “ಅವನನ್ನು ಶಿಲುಬೆಗೇರಿಸು!” ಎಂದು ಜೋರಾಗಿ ಕೂಗಿದರು.
[24] ಜನರ ಮನಸ್ಸನ್ನು ಬದಲಾಯಿಸಲು ತನಗೆ ಸಾಧ್ಯವಿಲ್ಲವೆಂದೂ ಜನರು ಗಲಭೆ ಆರಂಭಿಸಲಿದ್ದಾರೆಂದೂ ತಿಳಿದುಕೊಂಡ ಪಿಲಾತನು ಸ್ವಲ್ಪ ನೀರನ್ನು ತೆಗೆದುಕೊಂಡು ಜನರೆಲ್ಲರ ಎದುರಿನಲ್ಲಿ ತನ್ನ ಕೈಗಳನ್ನು ತೊಳೆದುಕೊಳ್ಳುತ್ತಾ, “ಈ ಮನುಷ್ಯನ ಸಾವಿಗೆ ನಾನು ಜವಾಬ್ದಾರನಲ್ಲ. ಆತನನ್ನು ಶಿಲುಬೆಗೇರಿಸುತ್ತಿರುವವರು ನೀವೇ!” ಎಂದು ಹೇಳಿದನು.
[25] ಜನರೆಲ್ಲರೂ, “ಅವನ ಸಾವಿಗೆ ನಾವೇ ಜವಾಬ್ದಾರರು. ಅವನ ಸಾವಿಗೆ ಏನಾದರೂ ದಂಡನೆಯಿದ್ದರೆ ಅದನ್ನು ನಾವು ಮತ್ತು ನಮ್ಮ ಮಕ್ಕಳು ಅನುಭವಿಸುತ್ತೇವೆ” ಎಂದು ಉತ್ತರಕೊಟ್ಟರು.
[26] ಆಗ ಪಿಲಾತನು ಬರಬ್ಬನನ್ನು ಬಿಡುಗಡೆ ಮಾಡಿ, ಯೇಸುವನ್ನು ಕೊರಡೆಗಳಿಂದ ಹೊಡೆಯಿಸಿ ಶಿಲುಬೆಗೇರಿಸಲು ಸೈನಿಕರಿಗೆ ಒಪ್ಪಿಸಿಬಿಟ್ಟನು.
[27] ಪಿಲಾತನ ಸೈನಿಕರು ಯೇಸುವನ್ನು ರಾಜಭವನದ ಒಳಕ್ಕೆ ಕರೆದೊಯ್ದರು. ಸೈನಿಕರೆಲ್ಲರೂ ಯೇಸುವನ್ನು ಸುತ್ತುಗಟ್ಟಿದರು.
[28] ಸೈನಿಕರು ಆತನ ಬಟ್ಟೆಗಳನ್ನು ತೆಗೆದುಹಾಕಿ ಆತನಿಗೆ ಒಂದು ಕೆಂಪು ನಿಲುವಂಗಿಯನ್ನು ತೊಡಿಸಿದರು.
[29] ಮುಳ್ಳಿನ ಬಳ್ಳಿಯಿಂದ ಒಂದು ಕಿರೀಟವನ್ನು ಹೆಣೆದು ಆತನ ತಲೆಯ ಮೇಲಿಟ್ಟರು. ಆತನ ಬಲಗೈಗೆ ಒಂದು ಕೋಲನ್ನು ಕೊಟ್ಟರು. ಬಳಿಕ ಸೈನಿಕರು ಯೇಸುವಿನ ಮುಂದೆ ಬಾಗಿ, “ಯೆಹೂದ್ಯರ ರಾಜನೇ, ನಮಸ್ಕಾರ” ಎಂದು ಅಪಹಾಸ್ಯ ಮಾಡಿದರು.
[30] ಆತನ ಮೇಲೆ ಉಗುಳಿದರು. ಆತನ ಕೈಯಿಂದ ಕೋಲನ್ನು ತೆಗೆದುಕೊಂಡು ತಲೆಯ ಮೇಲೆ ಹೊಡೆದರು.
[31] ಹೀಗೆ ಅಪಹಾಸ್ಯ ಮಾಡಿದ ಬಳಿಕ, ಆತನ ನಿಲುವಂಗಿಯನ್ನು ತೆಗೆದುಹಾಕಿ ಆತನ ಬಟ್ಟೆಗಳನ್ನು ಮತ್ತೆ ಆತನಿಗೆ ತೊಡಿಸಿ ಶಿಲುಬೆಗೇರಿಸಲು ಕರೆದೊಯ್ದರು.
[32] ಸೈನಿಕರು ಯೇಸುವಿನೊಂದಿಗೆ ನಗರದಿಂದ ಹೊರಕ್ಕೆ ಹೋಗುತ್ತಿರುವಾಗ ಸಿರೇನ ಪಟ್ಟಣದ “ಸಿಮೋನ” ಎಂಬ ವ್ಯಕ್ತಿಯನ್ನು ಕಂಡರು. ಆತನ ಶಿಲುಬೆ ಹೊರುವುದಕ್ಕಾಗಿ ಅವರು ಅವನನ್ನು ಬಲವಂತಪಡಿಸಿದರು.
[33] ಅವರು ಗೊಲ್ಗೊಥಾ ಎಂಬ ಸ್ಥಳಕ್ಕೆ ಬಂದರು. (ಗೊಲ್ಗೊಥಾ ಎಂದರೆ “ಕಪಾಲ ಸ್ಥಳ” ಎಂದರ್ಥ.)
[34] ಗೊಲ್ಗೊಥಾದಲ್ಲಿ ಸೈನಿಕರು ಆತನಿಗೆ ಕುಡಿಯಲು ದ್ರಾಕ್ಷಾರಸವನ್ನು ಕೊಟ್ಟರು. ಈ ದ್ರಾಕ್ಷಾರಸಕ್ಕೆ ನೋವು ನಿವಾರಕ ಔಷಧಿಯನ್ನು ಬೆರೆಸಿದ್ದರು. ಆತನು ದ್ರಾಕ್ಷಾರಸದ ರುಚಿ ನೋಡಿ ಅದನ್ನು ಕುಡಿಯಲಿಲ್ಲ.
[35] ಸೈನಿಕರು ಆತನನ್ನು ಶಿಲುಬೆಗೆ ಮೊಳೆಗಳಿಂದ ಜಡಿದರು. ನಂತರ ಉಡುಪಿಗಾಗಿ ತಮ್ಮಲ್ಲಿಯೇ ಚೀಟಿಹಾಕಿ ತೆಗೆದುಕೊಂಡರು.
[36] ಸೈನಿಕರು ಯೇಸುವನ್ನು ಕಾಯುತ್ತಾ ಅಲ್ಲೇ ಕುಳಿತಿದ್ದರು.
[37] ಇದಲ್ಲದೆ ಆತನ ಮೇಲೆ ಹೊರಿಸಿದ ಅಪರಾಧವನ್ನು ಬರೆದು ಆತನ ತಲೆಯ ಮೇಲ್ಗಡೆ ಹಚ್ಚಿದರು. “ಈತನು ಯೇಸು, ಯೆಹೂದ್ಯರ ರಾಜ” ಎಂಬುದೇ ಆ ಅಪರಾಧ.
[38] ಯೇಸುವಿನ ಪಕ್ಕದಲ್ಲಿ ಇಬ್ಬರು ಕಳ್ಳರನ್ನು ಶಿಲುಬೆಗೆ ಹಾಕಿದ್ದರು. ಒಬ್ಬ ಕಳ್ಳನನ್ನು ಯೇಸುವಿನ ಬಲಗಡೆಯಲ್ಲಿಯೂ ಮತ್ತೊಬ್ಬ ಕಳ್ಳನನ್ನು ಯೇಸುವಿನ ಎಡಗಡೆಯಲ್ಲಿಯೂ ಹಾಕಿದ್ದರು.
[39] ದಾರಿಯಲ್ಲಿ ಹೋಗುತ್ತಿದ್ದ ಜನರು ತಲೆಯಾಡಿಸುತ್ತಾ,
[40] “ನೀನು ದೇವಾಲಯವನ್ನು ಕೆಡವಿ, ಅದನ್ನು ಮತ್ತೆ ಮೂರು ದಿನಗಳಲ್ಲಿ ನಿರ್ಮಿಸುತ್ತೇನೆಂದು ಹೇಳುತ್ತಿದ್ದೆ. ಆದರೆ ಈಗ ನಿನ್ನನ್ನು ನೀನೇ ರಕ್ಷಿಸಿಕೊ! ನೀನು ನಿಜವಾಗಿಯೂ ದೇವರ ಮಗನಾಗಿದ್ದರೆ, ಶಿಲುಬೆಯಿಂದ ಕೆಳಗಿಳಿದು ಬಾ!” ಎಂದು ಹಾಸ್ಯಮಾಡಿದರು.
[41] ಮಹಾಯಾಜಕರೂ ಧರ್ಮೋಪದೇಶಕರೂ ಮತ್ತು ಹಿರಿಯ ಯೆಹೂದ್ಯ ನಾಯಕರೂ ಅಲ್ಲಿದ್ದರು. ಇವರು ಸಹ ಇತರ ಜನರಂತೆ ಯೇಸುವನ್ನು ಗೇಲಿ ಮಾಡಿದರು.
[42] “ಇವನು ಬೇರೆಯವರನ್ನು ರಕ್ಷಿಸಿದನು. ಆದರೆ ತನ್ನನ್ನು ರಕ್ಷಿಸಿಕೊಳ್ಳಲಾರ! ಇಸ್ರೇಲರ ರಾಜ ಎಂದು ಜನ ಹೇಳುತ್ತಾರೆ. ಇವನು ರಾಜನಾಗಿದ್ದರೆ ಶಿಲುಬೆಯಿಂದ ಕೆಳಗಿಳಿದು ಬರಲಿ. ಆಗ ನಾವು ಇವನನ್ನು ನಂಬುತ್ತೇವೆ.
[43] ಇವನು ದೇವರನ್ನು ನಂಬಿದ್ದನು. ಈಗ ದೇವರಿಗೆ ನಿಜವಾಗಿಯೂ ಇವನು ಬೇಕಿದ್ದರೆ, ದೇವರೇ ಇವನನ್ನು ಕಾಪಾಡಲಿ. ‘ನಾನು ದೇವರ ಮಗನು’ ಎಂದು ಇವನೇ ಹೇಳಿಕೊಂಡನಲ್ಲಾ” ಎಂದು ಅವರು ಹೇಳಿದರು.
[44] ಅದೇ ರೀತಿಯಲ್ಲಿ ಯೇಸುವಿನ ಎಡಬಲಗಳಲ್ಲಿ ಶಿಲುಬೆಗೆ ಹಾಕಲ್ಪಟ್ಟಿದ್ದ ಕಳ್ಳರು ಸಹ ಆತನನ್ನು ನಿಂದಿಸಿದರು.
[45] ಅಂದು ಮಧ್ಯಾಹ್ನ ಹನ್ನೆರಡು ಗಂಟೆಯಿಂದ ಮೂರು ಗಂಟೆಯವರೆಗೆ ದೇಶದಲ್ಲೆಲ್ಲಾ ಕತ್ತಲೆ ಕವಿಯಿತು.
[46] ಸುಮಾರು ಮೂರು ಗಂಟೆಯ ಸಮಯದಲ್ಲಿ ಯೇಸು, “ಏಲೀ, ಏಲೀ, ಲಮಾ ಸಬಕ್ತಾನಿ?” ಎಂದು ಗಟ್ಟಿಯಾದ ಧ್ವನಿಯಲ್ಲಿ ಕೂಗಿದನು. ಹೀಗೆಂದರೆ, “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈ ಬಿಟ್ಟುಬಿಟ್ಟೆ?” ಎಂದರ್ಥ.
[47] ಅಲ್ಲಿ ನಿಂತಿದ್ದ ಕೆಲವು ಜನರು ಇದನ್ನು ಕೇಳಿ, “ಇವನು ಎಲೀಯನನ್ನು ಕರೆಯುತ್ತಿದ್ದಾನೆ” ಎಂದು ಹೇಳಿದರು.
[48] ಆ ಜನರಲ್ಲಿ ಒಬ್ಬನು ಓಡಿಹೋಗಿ ಸ್ಪಂಜನ್ನು ತಂದು, ಅದರಲ್ಲಿ ಹುಳಿರಸವನ್ನು ತುಂಬಿಸಿ, ಅದನ್ನು ಒಂದು ಕೋಲಿಗೆ ಕಟ್ಟಿ ಆ ಕೋಲಿನಿಂದ ಸ್ಪಂಜನ್ನು ಯೇಸುವಿಗೆ ಕುಡಿಯಲು ಕೊಟ್ಟನು.
[49] ಆದರೆ ಇತರ ಜನರು, “ಅವನ ಬಗ್ಗೆ ಚಿಂತಿಸಬೇಡ, ಅವನನ್ನು ರಕ್ಷಿಸಲು ಎಲೀಯನು ಬರಬಹುದೇನೋ ನೋಡೋಣ” ಎಂದು ಹೇಳಿದರು.
[50] ಬಳಿಕ ಯೇಸು ಮತ್ತೆ ಗಟ್ಟಿಯಾದ ಧ್ವನಿಯಲ್ಲಿ ಕೂಗಿ ಪ್ರಾಣಬಿಟ್ಟನು.
[51] ಆಗ ದೇವಾಲಯದ ತೆರೆಯು ಮೇಲ್ಗಡೆಯಿಂದ ತಳಭಾಗದವರೆಗೂ ಹರಿದು ಎರಡು ಭಾಗವಾಯಿತು. ಭೂಮಿಯು ನಡುಗಿತು. ಬಂಡೆಗಳು ಒಡೆದುಹೋದವು.
[52] ಸಮಾಧಿಗಳು ತೆರೆದವು, ಸತ್ತುಹೋಗಿದ್ದ ಅನೇಕ ದೇವಜನರು ಸಮಾಧಿಗಳೊಳಗಿಂದ ಜೀವಂತವಾಗಿ ಮೇಲೆದ್ದರು.
[53] ಯೇಸು ಪುನರುತ್ಥಾನ ಹೊಂದಿದ ಬಳಿಕ, ಅವರು ಪವಿತ್ರ ನಗರವಾದ ಜೆರುಸಲೇಮಿಗೆ ಹೋದರು. ಜನರು ಅವರನ್ನು ಕಣ್ಣಾರೆ ಕಂಡರು.
[54] ಯೇಸುವನ್ನು ಕಾಯುತ್ತಿದ್ದ ಸೇನಾಧಿಪತಿ ಮತ್ತು ಸೈನಿಕರು ಭೂಕಂಪವನ್ನು ಮತ್ತು ನಡೆದದ್ದನ್ನು ಕಂಡು ಬಹಳವಾಗಿ ಹೆದರಿ, “ಈತನು ನಿಜವಾಗಿಯೂ ದೇವರ ಮಗನಾಗಿದ್ದನು!” ಎಂದು ಹೇಳಿದರು.
[55] ಯೇಸುವಿನ ಸೇವೆ ಮಾಡುತ್ತಾ ಗಲಿಲಾಯದಿಂದ ಆತನನ್ನು ಹಿಂಬಾಲಿಸಿಕೊಂಡು ಬಂದಿದ್ದ ಅನೇಕ ಸ್ತ್ರೀಯರು ದೂರದಲ್ಲಿ ನೋಡುತ್ತಾ ನಿಂತಿದ್ದರು.
[56] ಮಗ್ದಲದ ಮರಿಯಳು, ಯಾಕೋಬ ಮತ್ತು ಯೋಸೇಫನ ತಾಯಿಯಾದ ಮರಿಯಳು, ಹಾಗೂ ಯೋಹಾನ ಮತ್ತು ಯಾಕೋಬನ ತಾಯಿ ಅಲ್ಲಿದ್ದರು.
[57] ಆ ಸಂಜೆ ಯೋಸೇಫ ಎಂಬ ಶ್ರೀಮಂತ ವ್ಯಕ್ತಿ ಜೆರುಸಲೇಮಿಗೆ ಬಂದನು. ಅರಿಮತಾಯ ಪಟ್ಟಣದವನಾದ ಇವನು ಯೇಸುವಿನ ಶಿಷ್ಯನಾಗಿದ್ದನು.
[58] ಇವನು ಪಿಲಾತನ ಬಳಿಗೆ ಹೋಗಿ, ಯೇಸುವಿನ ದೇಹವನ್ನು ತನಗೆ ಕೊಡಬೇಕೆಂದು ಕೇಳಿದನು. ಯೇಸುವಿನ ದೇಹವನ್ನು ಯೋಸೇಫನಿಗೆ ಕೊಡುವಂತೆ ಪಿಲಾತನು ಸೈನಿಕರಿಗೆ ಅಪ್ಪಣೆ ಮಾಡಿದನು.
[59] ಯೋಸೇಫನು ಆತನ ದೇಹವನ್ನು ತೆಗೆದುಕೊಂಡು, ಅದನ್ನು ಹೊಸ ನಾರುಮಡಿಯ ಬಟ್ಟೆಯಿಂದ ಸುತ್ತಿ
[60] ಬಂಡೆಯಲ್ಲಿ ತಾನು ತೋಡಿಸಿದ್ದ ಹೊಸ ಸಮಾಧಿಯಲ್ಲಿ ಇಟ್ಟನು. ಸಮಾಧಿಯ ಬಾಗಿಲಿಗೆ ಒಂದು ದೊಡ್ಡ ಬಂಡೆಯನ್ನು ಉರುಳಿಸಿ ಹೊರಟುಹೋದನು.
[61] ಮಗ್ದಲದ ಮರಿಯಳು ಮತ್ತು ಇನ್ನೊಬ್ಬ ಮರಿಯಳು ಆ ಸಮಾಧಿಯ ಹತ್ತಿರ ಕುಳಿತುಕೊಂಡಿದ್ದರು.
[62] ಶುಕ್ರವಾರ ಮುಗಿದ ಮೇಲೆ ಮಹಾಯಾಜಕರು ಮತ್ತು ಫರಿಸಾಯರು ಪಿಲಾತನ ಬಳಿಗೆ ಹೋಗಿ,
[63] “ಸ್ವಾಮೀ, ಆ ಸುಳ್ಳುಗಾರನು ಬದುಕಿದ್ದಾಗ, ‘ಮೂರು ದಿನಗಳ ಬಳಿಕ ನಾನು ಪುನರುತ್ಥಾನ ಹೊಂದುತ್ತೇನೆ’ ಎಂದು ಹೇಳಿದ್ದು ನಮಗಿನ್ನೂ ನೆನಪಿದೆ.
[64] ಆದ್ದರಿಂದ ಮೂರು ದಿನಗಳವರೆಗೆ ಆ ಸಮಾಧಿಯನ್ನು ಭದ್ರವಾಗಿ ಕಾಯಲು ಆಜ್ಞಾಪಿಸಿರಿ. ಅವನ ಶಿಷ್ಯರು ಬಂದು, ಅವನ ದೇಹವನ್ನು ಕದ್ದುಕೊಂಡು ಹೋಗಿ, ಅವನು ಸಮಾಧಿಯಿಂದ ಮೇಲೆದ್ದಿದ್ದಾನೆ ಎಂದು ಜನರಿಗೆ ಹೇಳಬಹುದು. ಆಗ ಮೊದಲನೆಯ ಮೋಸಕ್ಕಿಂತ ಕಡೆಯದೇ ಕಡು ಮೋಸವಾದೀತು” ಎಂದು ಹೇಳಿದರು.
[65] ಪಿಲಾತನು, “ಕೆಲವು ಸೈನಿಕರನ್ನು ಕರೆದುಕೊಂಡು ಹೋಗಿ, ನಿಮಗೆ ಬೇಕಾದ ರೀತಿಯಲ್ಲಿ ಸಮಾಧಿಯನ್ನು ಭದ್ರಪಡಿಸಿರಿ” ಎಂದು ಹೇಳಿದನು.
[66] ಅವರು ಹೋಗಿ, ಸಮಾಧಿಗೆ ಮುದ್ರೆ ಹಾಕಿ, ಸೈನಿಕರನ್ನು ಕಾವಲಿರಿಸಿ, ಸಮಾಧಿಯನ್ನು ಸುಭದ್ರಪಡಿಸಿದರು.