[1] ಯೇಸು ದೇವಾಲಯದಿಂದ ಹೋಗುತ್ತಿದ್ದಾಗ ಆತನ ಶಿಷ್ಯರು ದೇವಾಲಯದ ಕಟ್ಟಡಗಳನ್ನು ತೋರಿಸಲು ಆತನ ಬಳಿಗೆ ಬಂದರು.
[2] ಆಗ ಯೇಸು “ಈ ಕಟ್ಟಡಗಳನ್ನೆಲ್ಲ ನೋಡುತ್ತಿದ್ದೀರಾ? ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಇವುಗಳೆಲ್ಲಾ ನಾಶವಾಗುತ್ತವೆ. ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದಂತೆ ಎಲ್ಲಾ ಕಲ್ಲುಗಳು ಕೆಡವಲ್ಪಡುತ್ತವೆ” ಎಂದು ಹೇಳಿದನು.
[3] ಬಳಿಕ ಯೇಸು ಆಲಿವ್ ಗುಡ್ಡದ ಮೇಲೆ ಕುಳಿತುಕೊಂಡಿದ್ದಾಗ, ಶಿಷ್ಯರು ಪ್ರತ್ಯೇಕವಾಗಿ ಯೇಸುವಿನ ಬಳಿಗೆ ಬಂದು, “ಇವುಗಳೆಲ್ಲಾ ಯಾವಾಗ ಸಂಭವಿಸುತ್ತವೆ! ನೀನು ಈ ಲೋಕಕ್ಕೆ ಮತ್ತೊಮ್ಮೆ ಬರುವಾಗ ಮತ್ತು ಲೋಕದ ಸಮಾಪ್ತಿಯ ಸಮಯ ಬಂದಾಗ ಸೂಚನೆಗಾಗಿ ಏನು ಸಂಭವಿಸುವುದು? ನಮಗೆ ತಿಳಿಸು!” ಎಂದು ಕೇಳಿದರು.
[4] ಯೇಸು ಅವರಿಗೆ ಕೊಟ್ಟ ಉತ್ತರವಿದು: “ಎಚ್ಚರವಾಗಿರಿ! ನಿಮ್ಮನ್ನು ಮೋಸಗೊಳಿಸಲು ಯಾರಿಗೂ ಅವಕಾಶ ಕೊಡಬೇಡಿ.
[5] ಅನೇಕರು ನನ್ನ ಹೆಸರಿನಲ್ಲಿ ಬಂದು, ‘ನಾನೇ ಕ್ರಿಸ್ತನು’ ಎಂದು ಹೇಳಿ ಅನೇಕರನ್ನು ಮೋಸಪಡಿಸುವರು.
[6] ನಿಮ್ಮ ಸಮೀಪದಲ್ಲಿ ನಡೆಯುತ್ತಿರುವ ಯುದ್ಧಗಳ ಶಬ್ದವನ್ನೂ ಬಹು ದೂರದಲ್ಲಿ ನಡೆಯುತ್ತಿರುವ ಯುದ್ಧಗಳ ಸುದ್ದಿಯನ್ನೂ ನೀವು ಕೇಳುವಿರಿ. ಆದರೆ ಹೆದರಬೇಡಿ. ಅಂತ್ಯವು ಬರುವುದಕ್ಕಿಂತ ಮುಂಚೆ ಇವುಗಳು ಸಂಭವಿಸಲೇಬೇಕು.
[7] ಜನಾಂಗಗಳು ಬೇರೆ ಜನಾಂಗಗಳಿಗೆ ವಿರೋಧವಾಗಿ ಯುದ್ದ ಮಾಡುತ್ತವೆ. ರಾಜ್ಯಗಳು ಬೇರೆಬೇರೆ ರಾಜ್ಯಗಳಿಗೆ ವಿರೋಧವಾಗಿ ಯುದ್ಧ ಮಾಡುತ್ತವೆ. ಬರಗಾಲಗಳು ಬರುತ್ತವೆ. ಬೇರೆಬೇರೆ ಸ್ಥಳಗಳಲ್ಲಿ ಭೂಕಂಪಗಳು ಆಗುತ್ತವೆ.
[8] ಇವೆಲ್ಲಾ ಪ್ರಸವವೇದನೆಯ ಆರಂಭವಷ್ಟೇ.
[9] “ಆಗ ಜನರು ನಿಮ್ಮನ್ನು ಹಿಂಸಿಸಿ, ಮರಣದಂಡನೆ ವಿಧಿಸಲು ಅಧಿಕಾರಿಗಳಿಗೆ ಒಪ್ಪಿಸಿಕೊಡುವರು. ಜನರೆಲ್ಲರೂ ನಿಮ್ಮನ್ನು ವಿರೋಧಿಸುವರು. ನೀವು ನನ್ನಲ್ಲಿ ನಂಬಿಕೆ ಇಟ್ಟದ್ದಕ್ಕಾಗಿ ಇವುಗಳೆಲ್ಲಾ ನಿಮಗೆ ಸಂಭವಿಸುವವು.
[10] ಆ ಸಮಯದಲ್ಲಿ ಅನೇಕ ವಿಶ್ವಾಸಿಗಳು ತಮ್ಮ ನಂಬಿಕೆಯನ್ನು ಕಳೆದುಕೊಳ್ಳುವರು. ಅವರು ಒಬ್ಬರಿಗೊಬ್ಬರಿಗೆ ವಿರೋಧವಾಗಿ ತಿರುಗಿಕೊಂಡು ಒಬ್ಬರನ್ನೊಬ್ಬರು ದ್ವೇಷಿಸುವರು.
[11] ಅನೇಕ ಸುಳ್ಳುಪ್ರವಾದಿಗಳು ಬಂದು ಎಷ್ಟೋ ಜನರನ್ನು ವಂಚಿಸುವರು.
[12] ಲೋಕದಲ್ಲಿ ದುಷ್ಟತನವು ಹೆಚ್ಚಾಗಿ ಬಹುಜನ ವಿಶ್ವಾಸಿಗಳ ಪ್ರೀತಿಯು ಅಡಗಿಹೋಗುವುದು.
[13] ಆದರೆ ಕಡೆಯವರೆಗೂ ದೃಢವಾಗಿರುವವನು ರಕ್ಷಣೆಹೊಂದುತ್ತಾನೆ.
[14] ದೇವರ ರಾಜ್ಯದ ಶುಭವಾರ್ತೆಯನ್ನು ಲೋಕದಲ್ಲೆಲ್ಲಾ ಪ್ರತಿ ಜನಾಂಗಕ್ಕೂ ಸಾರಲಾಗುವುದು. ಆಗ ಅಂತ್ಯವು ಬರುತ್ತದೆ.
[15] “ಭಯಂಕರವಾದ ನಾಶಕ್ಕೆ ಕಾರಣವಾದ ವಸ್ತುವೊಂದನ್ನು ಕುರಿತು ಪ್ರವಾದಿ ದಾನಿಯೇಲನು ಹೇಳಿದ್ದಾನೆ. ಈ ಭಯಂಕರವಾದ ವಸ್ತುವು ದೇವಾಲಯದ ಪರಿಶುದ್ಧ ಸ್ಥಳದಲ್ಲಿ ನಿಂತಿರುವುದನ್ನು ನೀವು ನೋಡುವಿರಿ. (ಇದನ್ನು ಓದುತ್ತಿರುವವನು ಇದರ ಅರ್ಥವನ್ನು ಗ್ರಹಿಸಿಕೊಳ್ಳಲಿ.)
[16] ಆ ಸಮಯದಲ್ಲಿ ಜುದೇಯದಲ್ಲಿರುವ ಜನರು ಬೆಟ್ಟಗಳಿಗೆ ಓಡಿಹೋಗಲಿ.
[17] ಮಾಳಿಗೆಯ ಮೇಲಿರುವವನು ಇಳಿದು ತನ್ನ ವಸ್ತುಗಳನ್ನು ಮನೆಯಿಂದ ತೆಗೆದುಕೊಳ್ಳದೆ ಓಡಿಹೋಗಲಿ.
[18] ಹೊಲದಲ್ಲಿರುವವನು ತನ್ನ ಮೇಲಂಗಿಯನ್ನು ತೆಗೆದುಕೊಳ್ಳುವುದಕ್ಕಾಗಿ ಮನೆಗೆ ಹಿಂತಿರುಗದಿರಲಿ.
[19] “ಆ ಸಮಯದಲ್ಲಿ ಗರ್ಭಿಣಿಯರಿಗೂ ಮೊಲೆಕೂಸುಗಳಿರುವ ಸ್ತ್ರೀಯರಿಗೂ ಎಂಥಾ ಗೋಳಾಟ!
[20] ನೀವು ಓಡಿಹೋಗಬೇಕಾದ ಈ ಸಮಯವು ಚಳಿಗಾಲದಲ್ಲಾಗಲಿ ಸಬ್ಬತ್ ದಿನದಲ್ಲಾಗಲಿ ಬರದಂತೆ ಪ್ರಾರ್ಥಿಸಿರಿ.
[21] ಏಕೆಂದರೆ ಆ ಸಮಯದಲ್ಲಿ ಮಹಾ ಸಂಕಟ ಇರುವುದು. ಲೋಕವು ಸೃಷ್ಟಿಯಾದಂದಿನಿಂದ ಇಂಥ ಸಂಕಟವು ಎಂದೂ ಸಂಭವಿಸಿಲ್ಲ. ಇನ್ನು ಮುಂದೆಯೂ ಸಂಭವಿಸುವುದಿಲ್ಲ.
[22] “ದೇವರು ಭಯಂಕರವಾದ ಆ ಸಮಯವನ್ನು ಕಡಿಮೆಗೊಳಿಸಲು ತೀರ್ಮಾನಿಸಿದ್ದಾನೆ. ಇಲ್ಲವಾದರೆ, ಜೀವದಿಂದ ಉಳಿಯಲು ಯಾರಿಗೂ ಸಾಧ್ಯವಿಲ್ಲ. ತಾನು ಆರಿಸಿಕೊಂಡ ಜನರ ನಿಮಿತ್ತ ದೇವರು ಆ ಸಮಯವನ್ನು ಕಡಿಮೆ ಮಾಡಿದ್ದಾನೆ.
[23] “ಆ ಸಮಯದಲ್ಲಿ ಕೆಲವರು ನಿಮಗೆ, ‘ನೋಡಿ, ಕ್ರಿಸ್ತನು ಅಲ್ಲಿದ್ದಾನೆ!’ ಎಂದು ಹೇಳಬಹುದು. ಇಲ್ಲವೆ ಬೇರೊಬ್ಬನು, ‘ಆತನು ಇಲ್ಲಿದ್ದಾನೆ!’ ಎಂದು ಹೇಳಬಹುದು. ಆದರೆ ಅವರನ್ನು ನಂಬಬೇಡಿ.
[24] ಸುಳ್ಳುಕ್ರಿಸ್ತರು ಮತ್ತು ಸುಳ್ಳುಪ್ರವಾದಿಗಳು ಬಂದು ದೇವರು ಆರಿಸಿಕೊಂಡಿರುವ ಜನರನ್ನು ಮೋಸಗೊಳಿಸುವುದಕ್ಕಾಗಿ ಮಹತ್ಕಾರ್ಯಗಳನ್ನು ಮತ್ತು ಅದ್ಭುತಕಾರ್ಯಗಳನ್ನು ಮಾಡುವರು.
[25] ಅದು ಸಂಭವಿಸುವುದಕ್ಕೆ ಮುಂಚೆಯೇ ನಾನು ಅದರ ವಿಷಯವಾಗಿ ನಿಮಗೆ ಎಚ್ಚರಿಕೆ ಕೊಟ್ಟಿದ್ದೇನೆ.
[26] “‘ಕ್ರಿಸ್ತನು ಅಡವಿಯಲ್ಲಿದ್ದಾನೆ!’ ಎಂದು ಕೆಲವರು ಹೇಳಿದರೆ ಅಡವಿಗೆ ಹೋಗಬೇಡಿ. ‘ಕ್ರಿಸ್ತನು ಆ ಕೋಣೆ ಒಳಗೆ ಇದ್ದಾನೆ!’ ಎಂದು ಹೇಳಿದರೆ ಅದನ್ನು ನಂಬಬೇಡಿ.
[27] ಮನುಷ್ಯಕುಮಾರನು ಜನರಿಗೆಲ್ಲ ಕಾಣಿಸುವಂತೆ ಬರುತ್ತಾನೆ. ಮನುಷ್ಯಕುಮಾರನ ಪ್ರತ್ಯಕ್ಷತೆಯು ಆಕಾಶದಲ್ಲಿ ಮಿಂಚು ಹೊಳೆಯುವಂತೆ ಪ್ರಕಾಶಿಸುತ್ತಾ ಲೋಕದ ಎಲ್ಲಾ ಕಡೆಗಳಲ್ಲೂ ಕಾಣಿಸುವುದು.
[28] ಹದ್ದುಗಳು ಎಲ್ಲಿ ಕೂಡಿಬರುತ್ತವೆಯೋ ಅಲ್ಲಿ ಹೆಣವಿರುತ್ತದೆ ಎಂಬುದು ನಿಮಗೆ ಗೊತ್ತೇ ಇದೆ. ಅದೇ ರೀತಿ ನನ್ನ ಬರುವಿಕೆಯೂ ಸ್ಪಷ್ಟವಾಗಿರುವುದು.
[29] “ಆ ದಿನಗಳ ಸಂಕಟವು ತೀರಿದ ಕೂಡಲೇ, ‘ಸೂರ್ಯನು ಕತ್ತಲಾಗುವನು. ಚಂದ್ರನು ಕಾಂತಿಹೀನನಾಗುವನು. ನಕ್ಷತ್ರಗಳು ಆಕಾಶದಿಂದ ಕಳಚಿಬೀಳುವವು. ಆಕಾಶಮಂಡಲವು ಕಂಪಿಸುವುದು.’ ಯೆಶಾಯ 13:10; 34:45
[30] “ಆಗ ಮನುಷ್ಯಕುಮಾರನ ಆಗಮನದ ಸೂಚನೆಯು ಆಕಾಶದಲ್ಲಿ ಕಾಣಿಸಿಕೊಳ್ಳುವುದು. ಲೋಕದ ಜನರೆಲ್ಲಾ ಗೋಳಾಡುವರು. ಆಕಾಶದಲ್ಲಿ ಮೇಘಗಳ ಮೇಲೆ ಆತನು ಬರುವುದನ್ನು ಜನರೆಲ್ಲರೂ ನೋಡುವರು. ಆತನು ಶಕ್ತಿಸಾಮರ್ಥ್ಯದಿಂದಲೂ ಮಹಿಮೆಯಿಂದಲೂ ಬರುವನು.
[31] ಮಹಾಶಬ್ದದ ತುತ್ತೂರಿಯ ಘೋಷಣೆಯೊಡನೆ ಮನುಷ್ಯಕುಮಾರನು ತನ್ನ ದೂತರನ್ನು ಭೂಮಿಯ ಎಲ್ಲಾ ಕಡೆಗೆ ಕಳುಹಿಸುವನು. ಆತನು ಆರಿಸಿಕೊಂಡವರನ್ನು ದೇವದೂತರು ಭೂಲೋಕದ ಎಲ್ಲಾ ಕಡೆಗಳಿಂದಲೂ ಒಟ್ಟುಗೂಡಿಸುವರು.
[32] “ಅಂಜೂರದ ಮರವು ನಮಗೆ ಒಂದು ಪಾಠವನ್ನು ಕಲಿಸುತ್ತದೆ. ಅಂಜೂರದ ಮರದ ಕೊಂಬೆಗಳು ಹಸುರಾಗಿ ಎಳೆಯದಾಗಿದ್ದು ಹೊಸ ಎಲೆಗಳು ಬೆಳೆಯುವುದಕ್ಕೆ ಪ್ರಾರಂಭಿಸಿದಾಗ, ಬೇಸಿಗೆಯು ಹತ್ತಿರವಾಯಿತೆಂದು ನೀವು ತಿಳಿದುಕೊಳ್ಳುತ್ತೀರಿ.
[33] ನಾನು ನಿಮಗೆ ಹೇಳಿದ ಈ ಸಂಗತಿಗಳಿಗೂ ಅದು ಅನ್ವಯಿಸುತ್ತದೆ. ಈ ಸಂಗತಿಗಳೆಲ್ಲಾ ಸಂಭವಿಸುತ್ತಿರುವುದನ್ನು ನೀವು ನೋಡುವಾಗ ಆ ಸಮಯ ಹತ್ತಿರವಾಯಿತೆಂದೂ ಬರುವುದಕ್ಕೆ ಸಿದ್ಧವಾಗಿದೆಯೆಂದೂ ತಿಳಿದುಕೊಳ್ಳುವಿರಿ. ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ.
[34] ಇಂದಿನ ಜನರು ಇನ್ನೂ ಜೀವಿಸಿರುವಾಗಲೇ ಈ ಎಲ್ಲಾ ಸಂಗತಿಗಳು ಸಂಭವಿಸುತ್ತವೆ!
[35] ಭೂಮಿಯೂ ಆಕಾಶವೂ ನಾಶವಾಗುತ್ತವೆ, ಆದರೆ ನಾನು ಹೇಳಿದ ಮಾತುಗಳು ನಾಶವಾಗುವುದೇ ಇಲ್ಲ!
[36] “ಆ ದಿನವು ಇಲ್ಲವೆ ಆ ಸಮಯವು ಯಾವಾಗ ಬರುತ್ತದೆ ಎಂಬುದು ಯಾರಿಗೂ ತಿಳಿಯದು. ಮಗನಿಗೂ ಮತ್ತು ಪರಲೋಕದಲ್ಲಿರುವ ದೇವದೂತರಿಗೂ ಆ ದಿನವು ಅಥವಾ ಆ ಸಮಯವು ಯಾವಾಗ ಬರುತ್ತದೆ ಎಂಬುದು ತಿಳಿಯದು. ತಂದೆಗೆ ಮಾತ್ರ ಗೊತ್ತಿದೆ.
[37] “ನೋಹನ ಕಾಲದಲ್ಲಿ ಸಂಭವಿಸಿದಂತೆಯೇ ಮನುಷ್ಯಕುಮಾರನು ಬರುವಾಗಲೂ ಸಂಭವಿಸುತ್ತದೆ.
[38] ಜಲಪ್ರಳಯಕ್ಕಿಂತ ಮುಂಚೆ ಜನರು ತಿನ್ನುತ್ತಿದ್ದರು, ಕುಡಿಯುತ್ತಿದ್ದರು, ಮದುವೆಯಾಗುತ್ತಿದ್ದರು ಮತ್ತು ತಮ್ಮ ಮಕ್ಕಳಿಗೂ ಮದುವೆ ಮಾಡಿಕೊಡುತ್ತಾ ಇದ್ದರು. ನೋಹನು ನಾವೆಯೊಳಗೆ ಹೋಗುವ ತನಕ ಜನರು ಅವುಗಳನ್ನು ಮಾಡುತ್ತಲೇ ಇದ್ದರು.
[39] ಏನು ಸಂಭವಿಸುತ್ತಿದೆ ಎಂಬುದು ಅವರಿಗೆ ತಿಳಿದಿರಲಿಲ್ಲ. ಆಗ ಜಲಪ್ರಳಯವು ಬಂದು ಆ ಜನರನ್ನೆಲ್ಲಾ ನಾಶಮಾಡಿತು. “ಮನುಷ್ಯಕುಮಾರನು ಬರುವಾಗಲೂ ಅದೇ ರೀತಿಯಾಗುವುದು.
[40] ಹೊಲದಲ್ಲಿ ಇಬ್ಬರು ಒಟ್ಟಿಗೆ ಕೆಲಸ ಮಾಡುತ್ತಿದ್ದರೆ ಒಬ್ಬನನ್ನು ತೆಗೆದುಕೊಳ್ಳಲಾಗುವುದು, ಮತ್ತೊಬ್ಬನನ್ನು ಬಿಡಲಾಗುವುದು.
[41] ಇಬ್ಬರು ಹೆಂಗಸರು ಬೀಸುವ ಕಲ್ಲಿನಲ್ಲಿ ಧಾನ್ಯ ಬೀಸುತ್ತಿದ್ದರೆ ಅವರಲ್ಲಿ ಒಬ್ಬಳನ್ನು ತೆಗೆದುಕೊಳ್ಳಲಾಗುವುದು ಮತ್ತೊಬ್ಬಳನ್ನು ಬಿಡಲಾಗುವುದು.
[42] “ಆದ್ದರಿಂದ ಯಾವಾಗಲೂ ಸಿದ್ಧವಾಗಿರಿ. ನಿಮ್ಮ ಪ್ರಭು ಬರುವ ದಿನ ನಿಮಗೆ ತಿಳಿಯದು.
[43] ಇದನ್ನು ಜ್ಞಾಪಿಸಿಕೊಳ್ಳಿ. ಕಳ್ಳನು ಯಾವಾಗ ಬರುತ್ತಾನೆಂದು ಮನೆಯ ಯಜಮಾನನಿಗೆ ತಿಳಿದಿದ್ದರೆ, ಅವನು ಎಚ್ಚರವಾಗಿದ್ದು ಕಳ್ಳನನ್ನು ಮನೆಯೊಳಗೆ ಬರಗೊಡಿಸುತ್ತಿರಲಿಲ್ಲ.
[44] ಆದ್ದರಿಂದ ನೀವು ಸಹ ಸಿದ್ಧವಾಗಿರಿ. ನೀವು ನೆನಸದ ಸಮಯದಲ್ಲಿ ಮನುಷ್ಯಕುಮಾರನು ಬರುತ್ತಾನೆ.
[45] “ವಿವೇಕಿಯೂ ನಂಬಿಗಸ್ತನೂ ಆದ ಸೇವಕನು ಯಾರು? ಇತರ ಸೇವಕರಿಗೆ ಆಹಾರವನ್ನು ತಕ್ಕ ಸಮಯದಲ್ಲಿ ಕೊಡುವುದಕ್ಕಾಗಿ ಯಜಮಾನನು ಯಾವ ಸೇವಕನ ಮೇಲೆ ಭರವಸೆಯಿಡುತ್ತಾನೋ ಅವನೇ.
[46] ತನಗೆ ಕೊಟ್ಟ ಕೆಲಸವನ್ನು ಮಾಡುತ್ತಿರುವಾಗ ಯಜಮಾನನು ಬಂದರೆ ಆ ಸೇವಕನಿಗೆ ಬಹಳ ಸಂತೋಷವಾಗುತ್ತದೆ.
[47] ನಾನು ನಿಮಗೆ ಸತ್ಯವನ್ನೇ ಹೇಳುತ್ತೇನೆ. ಆ ಯಜಮಾನನು ತನ್ನ ಆಸ್ತಿಗೆಲ್ಲಾ ಆ ಸೇವಕನನ್ನು ಮೇಲ್ವಿಚಾರಕನನ್ನಾಗಿ ನೇಮಿಸುವನು.
[48] “ಆದರೆ ಸೇವಕನು ದುಷ್ಟನಾಗಿದ್ದರೆ ಮತ್ತು ತನ್ನ ಯಜಮಾನನು ಬೇಗನೆ ಹಿಂತಿರುಗಿ ಬರುವುದಿಲ್ಲ ಎಂದು ನೆನಸಿಕೊಂಡಿದ್ದರೆ ಅವನಿಗೆ ಏನು ಸಂಭವಿಸುತ್ತದೆ?
[49] ಆ ಸೇವಕನು ಇತರ ಸೇವಕರನ್ನು ಹೊಡೆಯುತ್ತಾ ತನ್ನಂಥ ಜನರೊಂದಿಗೆ ಸೇರಿಕೊಂಡು ತಿನ್ನುತ್ತಾ ಕುಡಿಯುತ್ತಾ ಇರುವನು.
[50] ಹೀಗೆ ಅವನಿನ್ನೂ ಸಿದ್ಧನಾಗಿಲ್ಲದಿರುವಾಗ ಯಜಮಾನನು ಅನಿರೀಕ್ಷಿತವಾಗಿ ಬಂದು
[51] ಅವನನ್ನು ಶಿಕ್ಷಿಸಿ ಕಪಟಿಗಳಿರುವ ಸ್ಥಳಕ್ಕೆ ನೂಕಿಸುವನು. ಆ ಸ್ಥಳದಲ್ಲಿ ಜನರು ಬಾಧೆಯಿಂದ ಗೋಳಾಡುತ್ತಾ ತಮ್ಮ ಹಲ್ಲುಗಳನ್ನು ಕಡಿಯುತ್ತಾ ಇರುವರು.