Skip to content
Opens in a new window
Listen to this chapter • 7:55

[1] ಆ ಸಮಯದಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು, “ಪರಲೋಕರಾಜ್ಯದಲ್ಲಿ ಯಾರಿಗೆ ಅತ್ಯುತ್ತಮ ಸ್ಥಾನ ದೊರೆಯುತ್ತದೆ” ಎಂದು ಕೇಳಿದರು.

[2] ಯೇಸು ಚಿಕ್ಕ ಮಗುವನ್ನು ತನ್ನ ಹತ್ತಿರಕ್ಕೆ ಕರೆದು ತನ್ನ ಶಿಷ್ಯರ ಮುಂದೆ ಆ ಮಗುವನ್ನು ನಿಲ್ಲಿಸಿ ಹೀಗೆಂದನು:

[3] “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ನೀವು ಬದಲಾವಣೆ ಹೊಂದಿಕೊಂಡು ನಿಮ್ಮ ಹೃದಯದಲ್ಲಿ ಚಿಕ್ಕ ಮಕ್ಕಳಂತೆ ಆಗಬೇಕು. ಇಲ್ಲವಾದರೆ, ನೀವು ಪರಲೋಕರಾಜ್ಯಕ್ಕೆ ಸೇರುವುದೇ ಇಲ್ಲ.

[4] ಈ ಚಿಕ್ಕ ಮಗುವಿನಂತೆ ತನ್ನನ್ನು ತಗ್ಗಿಸಿಕೊಳ್ಳುವವನೇ ಪರಲೋಕರಾಜ್ಯದಲ್ಲಿ ಅತ್ಯುತ್ತಮ ಸ್ಥಾನ ಪಡೆಯುತ್ತಾನೆ.

[5] “ಯಾವನಾದರೂ ನನ್ನ ಹೆಸರಿನಲ್ಲಿ ಒಂದು ಚಿಕ್ಕ ಮಗುವನ್ನು ಸ್ವೀಕರಿಸಿಕೊಂಡರೆ ಅವನು ನನ್ನನ್ನೇ ಸ್ವೀಕರಿಸಿಕೊಂಡಂತಾಯಿತು.

[6] “ದೀನತೆಯಿಂದ ನನ್ನನ್ನು ಹಿಂಬಾಲಿಸುವವರಲ್ಲಿ ಯಾರನ್ನಾದರೂ ಪಾಪಕ್ಕೆ ನಡೆಸುವವನಿಗೆ ಬಹಳ ಕೇಡಾಗುವುದು. ಅವನು ತನ್ನ ಕೊರಳಿಗೆ ಬೀಸುವ ಕಲ್ಲನ್ನು ಕಟ್ಟಿಕೊಂಡು, ಆಳವಾದ ಸಮುದ್ರದಲ್ಲಿ ಮುಳುಗುವುದೇ ಉತ್ತಮ.

[7] ಜನರನ್ನು ಪಾಪಕ್ಕೆ ನಡೆಸುವ ಸಂಗತಿಗಳ ನಿಮಿತ್ತ ನಾನು ಈ ಲೋಕದ ವಿಷಯದಲ್ಲಿ ದುಃಖಪಡುತ್ತೇನೆ. ಅವು ಯಾವಾಗಲೂ ಇರುತ್ತವೆ. ಆದರೆ ಅವುಗಳಿಗೆ ಕಾರಣವಾಗುವ ವ್ಯಕ್ತಿಗೆ ಬಹಳ ಕೇಡಾಗುವುದು.

[8] “ನಿನ್ನ ಕೈಯಾಗಲಿ, ನಿನ್ನ ಕಾಲಾಗಲಿ ನಿನ್ನ ಪಾಪಕ್ಕೆ ಕಾರಣವಾದರೆ ಅದನ್ನು ಕತ್ತರಿಸಿ ಎಸೆದುಬಿಡು. ಕೈಯನ್ನಾಗಲಿ ಕಾಲನ್ನಾಗಲಿ ಕಳೆದುಕೊಂಡು ನಿತ್ಯಜೀವ ಹೊಂದುವುದೇ ನಿನಗೆ ಉತ್ತಮ. ಎರಡು ಕೈ ಮತ್ತು ಎರಡು ಕಾಲುಳ್ಳವನಾಗಿದ್ದು ಶಾಶ್ವತವಾದ ಬೆಂಕಿಯ ನರಕದಲ್ಲಿ ಹಾಕಿಸಿಕೊಳ್ಳುವುದಕ್ಕಿಂತ ಅದು ಎಷ್ಟೋ ಉತ್ತಮ.

[9] ನಿನ್ನ ಕಣ್ಣು ನಿನ್ನನ್ನು ಪಾಪಕ್ಕೆ ನಡೆಸಿದರೆ, ಅದನ್ನು ಕಿತ್ತು ಎಸೆದುಬಿಡು. ಎರಡು ಕಣ್ಣುಳ್ಳವನಾಗಿದ್ದು ಬೆಂಕಿಯ ನರಕದಲ್ಲಿ ಹಾಕಿಸಿಕೊಳ್ಳುವದಕ್ಕಿಂತ ಒಂದೇ ಕಣ್ಣುಳ್ಳವನಾಗಿದ್ದು ನಿತ್ಯಜೀವ ಹೊಂದುವುದೇ ನಿನಗೆ ಉತ್ತಮ.

[10] “ಎಚ್ಚರವಾಗಿರಿ! ಈ ಚಿಕ್ಕ ಮಕ್ಕಳಿಗೆ ಬೆಲೆಯೇ ಇಲ್ಲವೆಂದು ನೆನೆಸಬೇಡಿ. ಇವರಿಗಾಗಿ ಪರಲೋಕದಲ್ಲಿ ದೂತರನ್ನು ನೇಮಿಸಲಾಗಿದೆ. ಆ ದೂತರು ಪರಲೋಕದಲ್ಲಿರುವ ನನ್ನ ತಂದೆಯ ಸಮ್ಮುಖದಲ್ಲಿ ಇರುತ್ತಾರೆ.

[11]

[12] “ಒಬ್ಬ ಮನುಷ್ಯನಿಗೆ ನೂರು ಕುರಿಗಳಿದ್ದು ಅದರಲ್ಲಿ ಒಂದು ಕುರಿಯು ತಪ್ಪಿಸಿಕೊಂಡರೆ, ಅವನು ಉಳಿದ ತೊಂಭತ್ತೊಂಭತ್ತು ಕುರಿಗಳನ್ನು ಬೆಟ್ಟದ ಮೇಲೆಯೇ ಬಿಟ್ಟು ತಪ್ಪಿಸಿಕೊಂಡ ಕುರಿಯನ್ನು ಹುಡುಕಲು ಹೋಗುತ್ತಾನಲ್ಲವೇ?

[13] ತಪ್ಪಿಸಿಕೊಂಡ ಕುರಿಯು ಸಿಕ್ಕಿದರೆ, ತಪ್ಪಿಸಕೊಳ್ಳದಿದ್ದ ತೊಂಭತ್ತೊಂಭತ್ತು ಕುರಿಗಳಿಗಿಂತ ಆ ಒಂದು ಕುರಿಯ ವಿಷಯದಲ್ಲಿ ಅವನು ಬಹಳ ಸಂತೋಷಪಡುವನು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.

[14] ಅದೇ ರೀತಿ ಈ ಚಿಕ್ಕ ಮಕ್ಕಳಲ್ಲಿ ಒಬ್ಬರಾದರೂ ತಪ್ಪಿಸಿಕೊಳ್ಳಬಾರದೆಂಬುದೇ ಪರಲೋಕದಲ್ಲಿರುವ ನಿಮ್ಮ ತಂದೆಯ ಚಿತ್ತವಾಗಿದೆ.

[15] “ನಿನ್ನ ಸಹೋದರನಾಗಲಿ ಸಹೋದರಿಯಾಗಲಿ ನಿನಗೆ ಯಾವುದಾದರೂ ತಪ್ಪು ಮಾಡಿದರೆ, ನೀನು ಹೋಗಿ ಅವನೊಬ್ಬನೇ ಇರುವಾಗ ಅವನ ತಪ್ಪನ್ನು ತಿಳಿಸು. ಅವನು ನಿನ್ನ ಮಾತಿಗೆ ಕಿವಿಗೊಟ್ಟರೆ, ಮತ್ತೆ ನಿನ್ನ ಸಹೋದರನಾಗಿರಲು ನೀನೇ ಅವನಿಗೆ ಸಹಾಯ ಮಾಡಿದಂತಾಗುವುದು.

[16] ಆದರೆ ಅವನು ನಿನ್ನ ಮಾತನ್ನು ಕೇಳದಿದ್ದರೆ, ನಿನ್ನೊಂದಿಗೆ ಒಬ್ಬಿಬ್ಬರನ್ನು ಕರೆದುಕೊಂಡು ಮತ್ತೆ ಅವನ ಬಳಿಗೆ ಹೋಗು. ಆಗ ಪ್ರತಿಯೊಂದು ದೂರಿನ ವಿಷಯದಲ್ಲೂ ಇಬ್ಬರು ಅಥವಾ ಮೂವರು ಸಾಕ್ಷಿಗಳಿರುವರು.

[17] ಅವನು ಅವರ ಮಾತನ್ನೂ ಕೇಳದಿದ್ದರೆ, ಸಭೆಗೆ ತಿಳಿಸು. ಅವನು ಸಭೆಯ ಮಾತನ್ನೂ ಕೇಳದಿದ್ದರೆ ಅವನನ್ನು ದೇವರಲ್ಲಿ ನಂಬಿಕೆ ಇಡದ ಮನುಷ್ಯನಂತಾಗಲಿ ಸುಂಕವಸೂಲಿಗಾರನಂತಾಗಲಿ ಪರಿಗಣಿಸಿರಿ.

[18] “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಈ ಲೋಕದಲ್ಲಿ ನೀಡುವ ನಿಷಿದ್ಧಾಜ್ಞೆಯು ದೇವರೇ ನೀಡಿದ ನಿಷಿದ್ಧಾಜ್ಞೆಯಾಗಿರುತ್ತದೆ. ನೀವು ಭೂಲೋಕದಲ್ಲಿ ನೀಡುವ ಅನುಮತಿಯು ದೇವರೇ ನೀಡಿದ ಅನುಮತಿಯಾಗಿರುತ್ತದೆ.

[19] ಇದಲ್ಲದೆ ನಿಮ್ಮಲ್ಲಿ ಇಬ್ಬರು ಈ ಲೋಕದಲ್ಲಿ ಒಮ್ಮನಸ್ಸಿನಿಂದ ಏನನ್ನೇ ಬೇಡಿಕೊಂಡರೂ ಪರಲೋಕದಲ್ಲಿರುವ ನನ್ನ ತಂದೆ ಅದನ್ನು ನೆರವೇರಿಸುತ್ತಾನೆ.

[20] ಇದು ಸತ್ಯ. ಏಕೆಂದರೆ ಎಲ್ಲಿ ಇಬ್ಬರಾಗಲಿ ಮೂವರಾಗಲಿ ನನ್ನಲ್ಲಿ ನಂಬಿಕೆಯನ್ನಿಟ್ಟು ಒಟ್ಟಾಗಿ ಸೇರಿಬಂದಿರುತ್ತಾರೋ ಅವರ ಮಧ್ಯದಲ್ಲಿ ನಾನಿರುತ್ತೇನೆ.”

[21] ಆಗ ಪೇತ್ರನು ಯೇಸುವಿನ ಬಳಿಗೆ ಬಂದು, “ಪ್ರಭುವೇ, ನನ್ನ ಸಹೋದರನು ನನಗೆ ಯಾವುದಾದರೂ ತಪ್ಪು ಮಾಡುತ್ತಲೇ ಇದ್ದರೆ ನಾನು ಎಷ್ಟು ಸಲ ಅವನನ್ನು ಕ್ಷಮಿಸಬೇಕು? ನಾನು ಅವನನ್ನು ಏಳು ಸಲ ಕ್ಷಮಿಸಬೇಕೋ?” ಎಂದು ಕೇಳಿದನು.

[22] ಯೇಸು, “ಏಳು ಸಲಕ್ಕಿಂತಲೂ ಹೆಚ್ಚಾಗಿ ಕ್ಷಮಿಸಬೇಕು. ಅವನು ನಿನಗೆ ಎಪ್ಪತ್ತೇಳು ಸಲ ತಪ್ಪು ಮಾಡಿದರೂ ನೀನು ಅವನನ್ನು ಕ್ಷಮಿಸುತ್ತಲೇ ಇರಬೇಕೆಂದು ನಾನು ನಿನಗೆ ಹೇಳುತ್ತೇನೆ” ಎಂದನು.

[23] “ಪರಲೋಕರಾಜ್ಯವು ತನ್ನ ಸೇವಕರು ತನಗೆ ಕೊಡಬೇಕಿದ್ದ ಸಾಲದ ಹಣವನ್ನು ವಸೂಲಿ ಮಾಡಲು ತೀರ್ಮಾನಿಸಿದ ಒಬ್ಬ ರಾಜನಿಗೆ ಹೋಲಿಕೆಯಾಗಿದೆ.

[24] ರಾಜನು ತನ್ನ ಹಣವನ್ನು ವಸೂಲಿ ಮಾಡುವುದಕ್ಕೆ ಪ್ರಾರಂಭಿಸಿದನು. ಒಬ್ಬ ಸೇವಕನು ಹತ್ತು ಸಾವಿರ ಬೆಳ್ಳಿಯ ನಾಣ್ಯಗಳನ್ನು ರಾಜನಿಗೆ ಸಾಲ ಕೊಡಬೇಕಿತ್ತು.

[25] ಆ ಸೇವಕನು ತನ್ನ ಯಜಮಾನನಾದ ರಾಜನಿಗೆ ಹಣವನ್ನು ಕೊಡಲು ಸಮರ್ಥನಾಗಿರಲಿಲ್ಲ. ಆದ್ದರಿಂದ ಆ ಸೇವಕನನ್ನು ಮತ್ತು ಅವನಲ್ಲಿದ್ದ ಪ್ರತಿಯೊಂದನ್ನೂ ಅವನ ಹೆಂಡತಿ ಮತ್ತು ಮಕ್ಕಳ ಸಮೇತವಾಗಿ ಮಾರಿ, ಬಂದ ಹಣವನ್ನೆಲ್ಲಾ ಕೊಡಬೇಕಾದ ಸಾಲಕ್ಕೆ ವಜಾ ಮಾಡಬೇಕೆಂದು ರಾಜನು ಆಜ್ಞಾಪಿಸಿದನು.

[26] “ಆಗ ಸೇವಕನು ರಾಜನ ಕಾಲಿಗೆ ಬಿದ್ದು, ‘ಸ್ವಲ್ಪ ತಾಳ್ಮೆ ತಂದುಕೊಳ್ಳಿ. ನಾನು ನಿಮಗೆ ಕೊಡಬೇಕಾದ ಸಾಲವನ್ನೆಲ್ಲಾ ತೀರಿಸುತ್ತೇನೆ.’ ಎಂದು ಬೇಡಿಕೊಂಡನು.

[27] ರಾಜನು ತನ್ನ ಸೇವಕನ ವಿಷಯದಲ್ಲಿ ದುಃಖಪಟ್ಟು ಅವನು ಕೊಡಬೇಕಾದ ಸಾಲವನ್ನು ಮನ್ನಿಸಿ ಅವನನ್ನು ಬಿಡುಗಡೆ ಮಾಡಿದನು.

[28] “ತರುವಾಯ, ಅದೇ ಸೇವಕನು ತನಗೆ ನೂರು ಬೆಳ್ಳಿಯ ನಾಣ್ಯಗಳನ್ನು ಕೊಡಬೇಕಾಗಿದ್ದ ಬೇರೊಬ್ಬ ಸೇವಕನನ್ನು ಕಂಡು ಅವನ ಕುತ್ತಿಗೆ ಹಿಡಿದು, ‘ನೀನು ನನಗೆ ಕೊಡಬೇಕಾಗಿರುವ ಹಣವನ್ನು ಕೊಡು’ ಎಂದನು.

[29] “ಆ ಸೇವಕನು ಅವನ ಕಾಲಿಗೆ ಬಿದ್ದು, ‘ಸ್ವಲ್ಪ ತಾಳ್ಮೆಯಿಂದಿರು. ನಾನು ನಿನಗೆ ಕೊಡಬೇಕಾದ ಸಾಲವನ್ನೆಲ್ಲಾ ತೀರಿಸುತ್ತೇನೆ’ ಎಂದು ಬೇಡಿಕೊಂಡನು.

[30] “ಆದರೆ ಮೊದಲನೇ ಸೇವಕನು ತಾಳಿಕೊಳ್ಳಲಿಲ್ಲ. ತನಗೆ ಸಾಲ ಕೊಡಬೇಕಾಗಿದ್ದ ಸೇವಕನ ವಿಷಯದಲ್ಲಿ ನ್ಯಾಯಾಧಿಪತಿಗೆ ದೂರುಕೊಟ್ಟು ಅವನನ್ನು ಸೆರೆಮನೆಗೆ ಹಾಕಿಸಿದನು. ಆ ಸೇವಕನು ಸಾಲ ತೀರಿಸುವವರೆಗೂ ಸೆರೆಮನೆಯಲ್ಲಿ ಇರಬೇಕಾಯಿತು.

[31] ಇದನ್ನು ಕಂಡ ಇತರ ಸೇವಕರೆಲ್ಲರೂ ಬಹಳವಾಗಿ ದುಃಖಪಟ್ಟು ನಡೆದ ಸಂಗತಿಯನ್ನೆಲ್ಲಾ ಯಜಮಾನನಿಗೆ ತಿಳಿಸಿದರು.”

[32] “ಆಗ ಯಜಮಾನನು ತನ್ನ ಸೇವಕನನ್ನು ಒಳಗೆ ಕರೆದು, ‘ನೀನು ದುಷ್ಟ ಸೇವಕನು. ನೀನು ನನಗೆ ಹೆಚ್ಚು ಹಣ ಕೊಡಬೇಕಾಗಿತ್ತು. ಆದರೆ ನೀನು ನನ್ನನ್ನು ಬೇಡಿಕೊಂಡದ್ದರಿಂದ ನಿನ್ನ ಸಾಲವನ್ನೆಲ್ಲ ನಾನು ಮನ್ನಿಸಿಬಿಟ್ಟೆ.

[33] ಹೀಗಿರಲು ನಾನು ನಿನಗೆ ಕರುಣೆ ತೋರಿದಂತೆ ನಿನ್ನ ಜೊತೆ ಸೇವಕನಿಗೂ ನೀನು ಕರುಣೆ ತೋರಿಸಬೇಕಿತ್ತು’ ಎಂದು ಹೇಳಿ

[34] ಬಹುಕೋಪಗೊಂಡು ಅವನನ್ನು ಶಿಕ್ಷಿಸುವುದಕ್ಕಾಗಿ ಸೆರೆಮನೆಗೆ ಹಾಕಿಸಿದನು. ಆ ಸೇವಕನು ತನ್ನ ಸಾಲವನ್ನೆಲ್ಲಾ ತೀರಿಸುವ ತನಕ ಸೆರೆಮನೆಯಲ್ಲಿ ಇರಬೇಕಾಯಿತು.

[35] “ಪರಲೋಕದ ನನ್ನ ತಂದೆಯು ನಿಮಗೆ ಮಾಡುವಂತೆಯೇ ಈ ರಾಜನು ಮಾಡಿದನು. ನೀವು ನಿಮ್ಮ ಸಹೋದರನನ್ನಾಗಲಿ ಸಹೋದರಿಯನ್ನಾಗಲಿ ನಿಜವಾಗಿಯೂ ಕ್ಷಮಿಸಬೇಕು. ಇಲ್ಲದಿದ್ದರೆ ಪರಲೋಕದ ನನ್ನ ತಂದೆಯೂ ನಿಮ್ಮನ್ನು ಕ್ಷಮಿಸುವುದಿಲ್ಲ” ಎಂದು ಹೇಳಿದನು.

ಮತ್ತಾಯನ ಸುವಾರ್ತೆ — Chapters