[1] ಯೇಸು ಕ್ರಿಸ್ತನ ವಂಶಾವಳಿಯಿದು. ಆತನು ದಾವೀದನ ವಂಶದವನು. ದಾವೀದನು ಅಬ್ರಹಾಮನ ವಂಶದವನು.
[2] ಅಬ್ರಹಾಮನು ಇಸಾಕನ ತಂದೆ. ಇಸಾಕನು ಯಾಕೋಬನ ತಂದೆ. ಯಾಕೋಬನು ಯೆಹೂದ ಮತ್ತು ಅವನ ಸಹೋದರರ ತಂದೆ.
[3] ಯೆಹೂದನು ಪೆರೆಚನ ಮತ್ತು ಜೆರಹನ ತಂದೆ. (ಅವರ ತಾಯಿ ತಾಮರಳು.) ಪೆರೆಚನು ಹೆಚ್ರೋನನ ತಂದೆ. ಹೆಚ್ರೋನನು ಅರಾಮನ ತಂದೆ.
[4] ಅರಾಮನು ಅಮ್ಮಿನಾದಾಬನ ತಂದೆ. ಅಮ್ಮಿನಾದಾಬನು ನಹಶೋನನ ತಂದೆ. ನಹಶೋನನು ಸಲ್ಮೋನನ ತಂದೆ.
[5] ಸಲ್ಮೋನನು ಬೋವಜನ ತಂದೆ. (ಬೋವಜನ ತಾಯಿ ರಹಾಬಳು.) ಬೋವಜನು ಓಬೇದನ ತಂದೆ. (ಓಬೇದನ ತಾಯಿ ರೂತಳು.) ಓಬೇದನು ಇಷಯನ ತಂದೆ.
[6] ಇಷಯನು ಅರಸನಾದ ದಾವೀದನ ತಂದೆ. ದಾವೀದನು ಸೊಲೊಮೋನನ ತಂದೆ. (ಸೊಲೊಮೋನನ ತಾಯಿ ಊರೀಯನ ಹೆಂಡತಿಯಾಗಿದ್ದಳು.)
[7] ಸೊಲೊಮೋನನು ರೆಹಬ್ಬಾಮನ ತಂದೆ. ರೆಹಬ್ಬಾಮನು ಅಬೀಯನ ತಂದೆ. ಅಬೀಯನು ಆಸನ ತಂದೆ.
[8] ಆಸನು ಯೆಹೋಷಾಫಾಟನ ತಂದೆ. ಯೆಹೋಷಾಫಾಟನು ಯೆಹೋರಾಮನ ತಂದೆ. ಯೆಹೋರಾಮನು ಉಜ್ಜೀಯನ ತಂದೆ.
[9] ಉಜ್ಜೀಯನು ಯೋತಾಮನ ತಂದೆ. ಯೋತಾಮನು ಆಹಾಜನ ತಂದೆ. ಆಹಾಜನು ಹಿಜ್ಕೀಯನ ತಂದೆ.
[10] ಹಿಜ್ಕೀಯನು ಮನಸ್ಸೆಯ ತಂದೆ. ಮನಸ್ಸೆಯು ಆಮೋನನ ತಂದೆ. ಆಮೋನನು ಯೋಷೀಯನ ತಂದೆ.
[11] ಯೋಷೀಯನು ಯೆಕೊನ್ಯ ಮತ್ತು ಅವನ ಸಹೋದರರ ತಂದೆ. (ಈ ಸಮಯದಲ್ಲಿಯೇ ಯೆಹೂದ್ಯ ಜನರನ್ನು ಗುಲಾಮಗಿರಿಗಾಗಿ ಬಾಬಿಲೋನಿಗೆ ಕೊಂಡೊಯ್ದದ್ದು.)
[12] ಯೆಹೂದ್ಯರನ್ನು ಬಾಬಿಲೋನಿಗೆ ಕೊಂಡೊಯ್ದ ನಂತರದ ಕುಟುಂಬದ ಚರಿತ್ರೆ: ಯೆಕೊನ್ಯನು ಶೆಯಲ್ತಿಯೇಲನ ತಂದೆ. ಶೆಯಲ್ತಿಯೇಲನು ಜೆರುಬ್ಬಾಬೆಲನ ತಂದೆ.
[13] ಜೆರುಬ್ಬಾಬೆಲನು ಅಬಿಹೂದನ ತಂದೆ. ಅಬಿಹೂದನು ಎಲ್ಯಕೀಮನ ತಂದೆ. ಎಲ್ಯಕೀಮನು ಅಜೋರನ ತಂದೆ.
[14] ಅಜೋರನು ಸದೋಕನ ತಂದೆ. ಸದೋಕನು ಅಖೀಮನ ತಂದೆ. ಅಖೀಮನು ಎಲಿಹೂದನ ತಂದೆ.
[15] ಎಲಿಹೂದನು ಎಲಿಯಾಜರನ ತಂದೆ. ಎಲಿಯಾಜರನು ಮತ್ತಾನನ ತಂದೆ. ಮತ್ತಾನನು ಯಾಕೋಬನ ತಂದೆ.
[16] ಯಾಕೋಬನು ಯೋಸೇಫನ ತಂದೆ. ಯೋಸೇಫನು ಮರಿಯಳ ಗಂಡ. ಮರಿಯಳು ಯೇಸುವಿನ ತಾಯಿ. ಯೇಸುವನ್ನು ಕ್ರಿಸ್ತ ನೆಂದು ಕರೆಯುತ್ತಿದ್ದರು.
[17] ಅಬ್ರಹಾಮನಿಂದಿಡಿದು ದಾವೀದನವರೆಗೆ ಹದಿನಾಲ್ಕು ತಲೆಮಾರುಗಳು. ದಾವೀದನಿಂದಿಡಿದು ಬಾಬಿಲೋನಿಗೆ ಸೆರೆಯೊಯ್ದ ಸಮಯದವರೆಗೆ ಹದಿನಾಲ್ಕು ತಲೆಮಾರುಗಳು. ಬಾಬಿಲೋನಿಗೆ ಸೆರೆಹಿಡಿದುಕೊಂಡು ಹೋದಂದಿನಿಂದ ಕ್ರಿಸ್ತನು ಹುಟ್ಟುವವರೆಗೆ ಹದಿನಾಲ್ಕು ತಲೆಮಾರುಗಳು.
[18] ಯೇಸು ಕ್ರಿಸ್ತನ ತಾಯಿ ಮರಿಯಳು. ಯೇಸುವಿನ ಜನನ ಈ ರೀತಿ ಸಂಭವಿಸಿತು: ಮದುವೆಮಾಡಿಕೊಳ್ಳಲು ಯೋಸೇಫನಿಗೂ ಮರಿಯಳಿಗೂ ನಿಶ್ಚಿತಾರ್ಥವಾಗಿತ್ತು. ಆದರೆ ಮದುವೆಗೆ ಮೊದಲೇ ತಾನು ಗರ್ಭಿಣಿಯಾಗಿರುವುದು ಮರಿಯಳಿಗೆ ತಿಳಿದುಬಂತು. ಮರಿಯಳು ಪವಿತ್ರಾತ್ಮನ ಪ್ರಭಾವದಿಂದ ಗರ್ಭಿಣಿಯಾಗಿದ್ದಳು.
[19] ಮರಿಯಳನ್ನು ಮದುವೆಯಾಗಲಿದ್ದ ಯೋಸೇಫನು ನೀತಿವಂತನಾಗಿದ್ದನು. ಮರಿಯಳನ್ನು ಜನರ ಮುಂದೆ ನಾಚಿಕೆಪಡಿಸಲು ಅವನು ಇಷ್ಟಪಡಲಿಲ್ಲ. ಆದ್ದರಿಂದ ಅವನು ಗುಟ್ಟಾಗಿ ನಿಶ್ಚಿತಾರ್ಥವನ್ನು ರದ್ದುಗೊಳಿಸಬೇಕೆಂದಿದ್ದನು.
[20] ಯೋಸೇಫನು ಹೀಗೆ ಆಲೋಚಿಸಿಕೊಂಡನಂತರ, ಪ್ರಭುವಿನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡನು. ಆ ದೂತನು, “ದಾವೀದನ ಮಗನಾದ ಯೋಸೇಫನೇ, ಮರಿಯಳನ್ನು ನಿನ್ನ ಹೆಂಡತಿಯಾಗಿ ಸ್ವೀಕರಿಸಲು ಭಯಪಡಬೇಡ. ಆಕೆ ಪವಿತ್ರಾತ್ಮನ ಪ್ರಭಾವದಿಂದ ಗರ್ಭಿಣಿಯಾಗಿದ್ದಾಳೆ.
[21] ಆಕೆ ಒಬ್ಬ ಮಗನನ್ನು ಹೆರುವಳು. ನೀನು ಆ ಮಗುವಿಗೆ ಯೇಸು ಎಂದು ಹೆಸರಿಡುವೆ. ನೀನು ಆತನಿಗೆ ಆ ಹೆಸರನ್ನೇ ಇಡು; ಏಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸುವನು” ಎಂದು ಹೇಳಿದನು.
[22] ಪ್ರವಾದಿಯ ಮೂಲಕ ಪ್ರಭು ತಿಳಿಸಿದ್ದೆಲ್ಲ ನೆರವೇರುವಂತೆ ಇದೆಲ್ಲಾ ನಡೆಯಿತು.
[23] ಅದೇನೆಂದರೆ: “ಕನ್ನಿಕೆಯೊಬ್ಬಳು ಗರ್ಭಿಣಿಯಾಗಿ ಒಬ್ಬ ಮಗನಿಗೆ ಜನ್ಮ ಕೊಡುತ್ತಾಳೆ. ಆತನಿಗೆ ಇಮ್ಮಾನುವೇಲ್ ಎಂಬ ಹೆಸರನ್ನು ಇಡುವರು.” (ಇಮ್ಮಾನುವೇಲ್ ಎಂದರೆ “ದೇವರು ನಮ್ಮ ಸಂಗಡ ಇದ್ದಾನೆ” ಎಂದರ್ಥ.)
[24] ಯೋಸೇಫನು ಎಚ್ಚರಗೊಂಡ ಮೇಲೆ ಪ್ರಭುವಿನ ದೂತನು ಕನಸಿನಲ್ಲಿ ಹೇಳಿದ್ದಂತೆಯೇ ಮರಿಯಳನ್ನು ಪತ್ನಿಯನ್ನಾಗಿ ಸ್ವೀಕರಿಸಿಕೊಂಡನು.
[25] ಆದರೆ ಮರಿಯಳು ಮಗನನ್ನು ಹೆರುವ ತನಕ ಯೋಸೇಫನು ಅವಳೊಂದಿಗೆ ಶರೀರ ಸಂಬಂಧವಿಲ್ಲದೆ ಇದ್ದನು. ಯೋಸೇಫನು ಆ ಮಗುವಿಗೆ “ಯೇಸು” ಎಂದು ಹೆಸರಿಟ್ಟನು.