[1] “ಪರಲೋಕರಾಜ್ಯವು ಒಬ್ಬ ದ್ರಾಕ್ಷಿತೋಟದ ಯಜಮಾನನಿಗೆ ಹೋಲಿಕೆಯಾಗಿದೆ. ಒಂದು ಮುಂಜಾನೆ ಅವನು ತನ್ನ ತೋಟದಲ್ಲಿ ಕೆಲಸ ಮಾಡಲು ಬೇರೆ ಕೂಲಿಯಾಳುಗಳನ್ನು ಕರೆಯುವುದಕ್ಕೆ ಹೊರಟನು.
[2] ಒಂದು ದಿನಕ್ಕೆ ಒಬ್ಬ ಕೆಲಸಗಾರನಿಗೆ ಒಂದು ಬೆಳ್ಳಿನಾಣ್ಯವನ್ನು ಕೊಡುವುದಾಗಿ ಹೇಳಿ ಆ ಕೆಲಸಗಾರರನ್ನು ಅವನು ತೋಟಕ್ಕೆ ಕಳುಹಿಸಿದನು.
[3] “ಸುಮಾರು ಒಂಭತ್ತು ಗಂಟೆಗೆ ಯಜಮಾನನು ಪೇಟೆಯ ಸ್ಥಳಕ್ಕೆ ಹೋದನು. ಏನೂ ಕೆಲಸವಿಲ್ಲದೆ ಸುಮ್ಮನೆ ನಿಂತಿದ್ದ ಕೆಲವರನ್ನು ಅವನು ಅಲ್ಲಿ ಕಂಡನು.
[4] ಅವನು ಅವರಿಗೆ, ‘ನೀವು ಹೋಗಿ ನನ್ನ ತೋಟದಲ್ಲಿ ಕೆಲಸ ಮಾಡುವುದಾದರೆ ನಿಮ್ಮ ಕೆಲಸಕ್ಕೆ ಯೋಗ್ಯವಾದ ಕೂಲಿಯನ್ನು ಕೊಡುತ್ತೇನೆ’ ಎಂದು ಹೇಳಿದನು.
[5] ಆ ಕೂಲಿಯಾಳುಗಳು ಕೆಲಸ ಮಾಡಲು ಅವನ ತೋಟಕ್ಕೆ ಹೋದರು. “ಆ ಯಜಮಾನನು ಅದೇ ರೀತಿ ಸುಮಾರು ಹನ್ನೆರಡು ಗಂಟೆಗೊಮ್ಮೆ ಮತ್ತೆ ಮೂರು ಗಂಟೆಗೊಮ್ಮೆ ಪೇಟೆಗೆ ಹೋದನು. ಆ ಎರಡು ಸಲವೂ ತನ್ನ ಹೊಲದಲ್ಲಿ ಕೆಲಸ ಮಾಡಲು ಬೇರೆ ಕೆಲವು ಕೂಲಿಯವರನ್ನು ಅವನು ಗೊತ್ತುಮಾಡಿದನು.
[6] ಸುಮಾರು ಐದು ಗಂಟೆಗೆ ಆ ಯಜಮಾನನು ಮತ್ತೊಮ್ಮೆ ಪೇಟೆಗೆ ಹೋದನು. ಅಲ್ಲಿ ನಿಂತಿದ್ದ ಕೆಲವರನ್ನು ಅವನು ಕಂಡು, ‘ನೀವು ದಿನವಿಡೀ ಕೆಲಸ ಮಾಡದೆ ಸುಮ್ಮನೆ ಏಕೆ ನಿಂತಿದ್ದೀರಿ?’ ಎಂದು ಕೇಳಿದನು.
[7] “ಅದಕ್ಕೆ ಅವರು, ‘ನಮಗೆ ಯಾರೂ ಕೆಲಸ ಕೊಡಲಿಲ್ಲ’ ಎಂದು ಉತ್ತರಕೊಟ್ಟರು. “ಆ ಯಜಮಾನನು, ‘ಹಾಗಾದರೆ ನೀವು ಹೋಗಿ ನನ್ನ ತೋಟದಲ್ಲಿ ಕೆಲಸ ಮಾಡಿರಿ’ ಎಂದು ಹೇಳಿದನು.
[8] “ಅಂದು ಸಾಯಂಕಾಲ, ತೋಟದ ಯಜಮಾನನು ಕೆಲಸಗಾರರನ್ನು ನೋಡಿಕೊಳ್ಳುವವನಿಗೆ, ‘ಕೂಲಿಯಾಳುಗಳನ್ನು ಕರೆದು ಕೊನೆಗೆ ಬಂದವರಿಂದ ಆರಂಭಿಸಿ ಮೊದಲು ಬಂದವರ ತನಕ ಕೂಲಿ ಕೊಡು’ ಎಂದನು.
[9] “ಐದು ಗಂಟೆಯ ಸಮಯದಲ್ಲಿ ಗೊತ್ತುಮಾಡಲ್ಪಟ್ಟ ಕೂಲಿಯಾಳುಗಳು ತಮ್ಮ ಕೂಲಿಯನ್ನು ತೆಗೆದುಕೊಳ್ಳಲು ಬಂದರು. ಪ್ರತಿಯೊಬ್ಬ ಆಳಿಗೂ ಒಂದೊಂದು ಬೆಳ್ಳಿನಾಣ್ಯ ಸಿಕ್ಕಿತು.
[10] ನಂತರ ಮೊಟ್ಟಮೊದಲು ಗೊತ್ತುಮಾಡಲ್ಪಟ್ಟಿದ್ದವರು ತಮ್ಮ ಕೂಲಿಯನ್ನು ತೆಗೆದುಕೊಳ್ಳಲು ಬಂದರು. ಬೇರೆ ಆಳುಗಳಿಗಿಂತ ತಮಗೆ ಹೆಚ್ಚು ಸಿಕ್ಕುವುದೆಂದು ಅವರು ಆಲೋಚಿಸಿಕೊಂಡಿದ್ದರು. ಆದರೆ ಅವರಿಗೂ ಸಹ ಒಂದೊಂದು ಬೆಳ್ಳಿನಾಣ್ಯ ಸಿಕ್ಕಿತು.
[11] ಅವರು ತಮ್ಮ ಬೆಳ್ಳಿನಾಣ್ಯವನ್ನು ತೆಗೆದುಕೊಂಡಾಗ ತೋಟದ ಯಜಮಾನನ ಬಗ್ಗೆ ಗೊಣಗುಟ್ಟುತ್ತಾ,
[12] ‘ಕೊನೆಗೆ ಗೊತ್ತುಮಾಡಲ್ಪಟ್ಟ ಆಳುಗಳು ಒಂದು ಗಂಟೆ ಮಾತ್ರ ಕೆಲಸ ಮಾಡಿದ್ದಾರೆ. ಆದರೆ ಇವನು ಅವರಿಗೂ ನಮ್ಮಷ್ಟೇ ಕೊಟ್ಟಿದ್ದಾನೆ. ನಾವಾದರೋ ದಿನವೆಲ್ಲಾ ಬಿಸಿಲಿನಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದೇವೆ’ ಎಂದರು.
[13] “ತೋಟದ ಯಜಮಾನನು ಆ ಆಳುಗಳಲ್ಲಿ ಒಬ್ಬನಿಗೆ, ‘ಸ್ನೇಹಿತನೇ, ನಾನು ನಿನಗೆ ಅನ್ಯಾಯ ಮಾಡಲಿಲ್ಲ. ನೀನು ಒಂದು ಬೆಳ್ಳಿನಾಣ್ಯಕ್ಕಾಗಿ ಕೆಲಸ ಮಾಡಲು ಒಪ್ಪಿಕೊಂಡೆಯಲ್ಲವೇ?
[14] ಆದ್ದರಿಂದ ನೀನು ನಿನ್ನ ಕೂಲಿಯನ್ನು ತೆಗೆದುಕೊಂಡು ಹೋಗು. ನಾನು ನಿನಗೆ ಎಷ್ಟು ಕೂಲಿ ಕೊಟ್ಟೆನೋ ಅಷ್ಟೇ ಕೂಲಿಯನ್ನು ಕೊನೆಗೆ ಗೊತ್ತುಮಾಡಲ್ಪಟ್ಟವನಿಗೂ ಕೊಡಲು ಇಷ್ಟಪಡುತ್ತೇನೆ.
[15] ನನ್ನ ಸ್ವಂತ ಹಣವನ್ನು ನನಗೆ ಇಷ್ಟಬಂದ ಹಾಗೆ ನಾನು ಕೊಡಬಹುದಲ್ಲವೇ? ನಾನು ಅವರಿಗೆ ಒಳ್ಳೆಯದನ್ನು ಮಾಡಿದ್ದಕ್ಕಾಗಿ ನೀನು ಹೊಟ್ಟೆಕಿಚ್ಚುಪಡುವೆಯಾ?’ ಎಂದನು.
[16] “ಇದೇಪ್ರಕಾರ ಕಡೆಯವರು ಮೊದಲಿನವರಾಗುವರು, ಮೊದಲಿನವರು ಕಡೆಯವರಾಗುವರು.”
[17] ಯೇಸು ಜೆರುಸಲೇಮಿಗೆ ಹೋಗುತ್ತಿದ್ದನು. ಆತನ ಹನ್ನೆರಡು ಮಂದಿ ಶಿಷ್ಯರೂ ಆತನೊಂದಿಗೆ ಇದ್ದರು. ಯೇಸು ಅವರನ್ನು ಪ್ರತ್ಯೇಕವಾಗಿ ಕರೆದು,
[18] “ನಾವು ಜೆರುಸಲೇಮಿಗೆ ಹೋಗುತ್ತಿದ್ದೇವೆ. ಮನುಷ್ಯಕುಮಾರನನ್ನು ಮಹಾಯಾಜಕರಿಗೆ ಮತ್ತು ಧರ್ಮೋಪದೇಶಕರಿಗೆ ಒಪ್ಪಿಸಿಕೊಡಲಾಗುವುದು. ಅವರು ಆತನನ್ನು ಯೆಹೂದ್ಯರಲ್ಲದವರ ಕೈಗೆ ಒಪ್ಪಿಸುವರು.
[19] ಅವರು ಮನುಷ್ಯಕುಮಾರನನ್ನು ಅಪಹಾಸ್ಯ ಮಾಡಿ, ಕೊರಡೆಗಳಿಂದ ಹೊಡೆದು, ಶಿಲುಬೆಗೇರಿಸುವರು. ಆದರೆ ಆತನು ಮರಣ ಹೊಂದಿದ ನಂತರ ಮೂರನೆಯ ದಿನದಂದು ಮತ್ತೆ ಜೀವಂತನಾಗಿ ಎದ್ದುಬರುವನು” ಎಂದು ಹೇಳಿದನು.
[20] ಆಗ ಜೆಬೆದಾಯನ ಹೆಂಡತಿಯು ಯೇಸುವಿನ ಬಳಿಗೆ ಬಂದಳು. ಅವಳ ಗಂಡುಮಕ್ಕಳು ಅವಳೊಂದಿಗಿದ್ದರು. ಅವಳು ಯೇಸುವಿನ ಮುಂದೆ ಅಡ್ಡಬಿದ್ದು ತನ್ನ ಕೋರಿಕೆಯನ್ನು ಈಡೇರಿಸಬೇಕೆಂದು ಕೇಳಿಕೊಂಡಳು.
[21] ಯೇಸು, “ನಿನ್ನ ಕೋರಿಕೆ ಏನು?” ಎಂದನು. ಅವಳು, “ನಿನ್ನ ರಾಜ್ಯದಲ್ಲಿ, ನನ್ನ ಗಂಡುಮಕ್ಕಳಲ್ಲಿ ಒಬ್ಬನು ನಿನ್ನ ಬಲಗಡೆಯಲ್ಲಿಯೂ ಮತ್ತೊಬ್ಬನು ನಿನ್ನ ಎಡಗಡೆಯಲ್ಲಿಯೂ ಕುಳಿತುಕೊಳ್ಳುವಂತೆ ವಾಗ್ದಾನಮಾಡು” ಎಂದು ಕೇಳಿಕೊಂಡಳು.
[22] ಯೇಸು ಅವಳ ಮಕ್ಕಳಿಗೆ, “ನೀವು ಏನು ಕೇಳಿಕೊಳ್ಳುತ್ತಿದ್ದೀರೆಂಬುದೇ ನಿಮಗೆ ಗೊತ್ತಿಲ. ನಾನು ಅನುಭವಿಸಬೇಕಾಗಿರುವ ಸಂಕಟವನ್ನು ಅನುಭವಿಸಲು ನಿಮಗೆ ಸಾಧ್ಯವೋ?” ಎಂದು ಕೇಳಿದನು. ಅದಕ್ಕೆ ಅವರು, “ಹೌದು, ನಮಗೆ ಸಾಧ್ಯ” ಎಂದು ಉತ್ತರಕೊಟ್ಟರು.
[23] ಯೇಸು ಅವರಿಗೆ, “ನಾನು ಅನುಭವಿಸಲಿರುವ ಸಂಕಟಗಳನ್ನು ನೀವು ನಿಜವಾಗಿಯೂ ಅನುಭವಿಸುವಿರಿ. ಆದರೆ ನನ್ನ ಬಲಗಡೆಯಲ್ಲಾಗಲಿ ಎಡಗಡೆಯಲ್ಲಾಗಲಿ ಕುಳಿತುಕೊಳ್ಳುವವನನ್ನು ಆಯ್ಕೆಮಾಡುವವನು ನಾನಲ್ಲ. ನನ್ನ ತಂದೆಯು ಆ ಸ್ಥಳಗಳನ್ನು ಯಾರಿಗಾಗಿ ಕಾಯ್ದಿರಿಸಿದ್ದಾನೋ ಅವರಿಗೇ ಆ ಅವಕಾಶವನ್ನು ಕೊಡುತ್ತಾನೆ” ಎಂದನು.
[24] ಉಳಿದ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿದಾಗ ಆ ಇಬ್ಬರು ಶಿಷ್ಯರ ಮೇಲೆ ಕೋಪಗೊಂಡರು.
[25] ಯೇಸು ಶಿಷ್ಯರನ್ನೆಲ್ಲ ಒಟ್ಟಿಗೆ ಕರೆದು, “ಯೆಹೂದ್ಯರಲ್ಲದ ಅಧಿಪತಿಗಳು ಜನರ ಮೇಲೆ ತಮ್ಮ ಅಧಿಕಾರ ತೋರಿಸಲು ಇಷ್ಟಪಡುತ್ತಾರೆ ಎಂಬುದು ನಿಮಗೆ ಗೊತ್ತಿದೆ. ಮತ್ತು ಅವರ ಪ್ರಮುಖ ನಾಯಕರು ಜನರ ಮೇಲೆ ತಮ್ಮ ಅಧಿಕಾರವನ್ನೆಲ್ಲಾ ಚಲಾಯಿಸಲು ಇಷ್ಟಪಡುತ್ತಾರೆ.
[26] ಆದರೆ ನೀವು ಹಾಗೆ ಮಾಡಬಾರದು. ನಿಮ್ಮಲ್ಲಿ ದೊಡ್ಡವನಾಗಲು ಇಚ್ಫಿಸುವವನು ಸೇವಕನಂತೆ ಸೇವೆ ಮಾಡಬೇಕು.
[27] ನಿಮ್ಮಲ್ಲಿ ಮೊದಲನೆಯವನಾಗಲು ಇಚ್ಛಿಸುವವನು ಗುಲಾಮನಂತೆ ಸೇವೆ ಮಾಡಬೇಕು.
[28] ಇದೇ ನಿಯಮ ಮನುಷ್ಯಕುಮಾರನಿಗೂ ಅನ್ವಯಿಸುತ್ತದೆ. ಮನುಷ್ಯಕುಮಾರನು ಬೇರೆಯವರಿಂದ ಸೇವೆ ಮಾಡಿಸಿಕೊಳ್ಳಲು ಬರದೆ ಬೇರೆಯವರಿಗೆ ಸೇವೆ ಮಾಡುವುದಕ್ಕಾಗಿ ಮತ್ತು ಅನೇಕ ಜನರನ್ನು ರಕ್ಷಿಸುವುದಕ್ಕಾಗಿ ತನ್ನ ಪ್ರಾಣವನ್ನೇ ಈಡುಕೊಡಲು ಬಂದನು” ಎಂದು ಹೇಳಿದನು.
[29] ಯೇಸು ಮತ್ತು ಆತನ ಶಿಷ್ಯರು ಜೆರಿಕೋವಿನಿಂದ ಹೊರಟುಹೋಗುತ್ತಿರುವಾಗ ಬಹಳ ಜನರು ಯೇಸುವನ್ನು ಹಿಂಬಾಲಿಸಿದರು.
[30] ದಾರಿಯ ಪಕ್ಕದಲ್ಲಿ ಇಬ್ಬರು ಕುರುಡರು ಕುಳಿತಿದ್ದರು. ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾನೆಂಬುದನ್ನು ಅವರು ಕೇಳಿದಾಗ, “ಪ್ರಭುವೇ, ದಾವೀದನ ಕುಮಾರನೇ, ದಯಮಾಡಿ ನಮಗೆ ಸಹಾಯ ಮಾಡು!” ಎಂದು ಕೂಗಿಕೊಂಡರು.
[31] ಜನರೆಲ್ಲರೂ ಕುರುಡರನ್ನು ಗದರಿಸಿ, ಸುಮ್ಮನಿರಬೇಕೆಂದು ಹೇಳಿದರು. ಆದರೆ ಆ ಕುರುಡರು, “ಪ್ರಭುವೇ, ದಾವೀದನ ಕುಮಾರನೇ, ದಯಮಾಡಿ ನಮಗೆ ಸಹಾಯ ಮಾಡು!” ಎಂದು ಹೆಚ್ಚುಹೆಚ್ಚು ಕೂಗಿಕೊಂಡರು.
[32] ಯೇಸು ನಿಂತು, ಆ ಕುರುಡರಿಗೆ “ನಾನು ನಿಮಗೆ ಏನು ಮಾಡಬೇಕೆಂದು ಆಶಿಸುತ್ತೀರಿ?” ಎಂದನು.
[33] ಆಗ ಕುರುಡರು, “ಪ್ರಭುವೇ, ನಮಗೆ ಕಣ್ಣು ಕಾಣಿಸುವಂತೆ ಮಾಡು!” ಅಂದರು.
[34] ಯೇಸು ಅವರಿಗಾಗಿ ದುಃಖಪಟ್ಟು ಅವರ ಕಣ್ಣುಗಳನ್ನು ಮುಟ್ಟಿದನು. ಕೂಡಲೇ ಅವರಿಗೆ ದೃಷ್ಟಿ ಬಂದಿತು. ಬಳಿಕ ಅವರು ಯೇಸುವನ್ನು ಹಿಂಬಾಲಿಸಿದರು.