Skip to content
Opens in a new window
Listen to this chapter • 2:48

[1] ನೀನು ನನ್ನ ತಾಯಿಯ ಹಾಲನ್ನು ಕುಡಿದ ನನ್ನ ಅಣ್ಣನ ಹಾಗಿದ್ದರೆ ಎಷ್ಟೋ ಚೆನ್ನಾಗಿತ್ತು! ನಾನು ನಿನ್ನನ್ನು ಹೊರಗೆ ಕಂಡೊಡನೆ ಮುದ್ದಿಟ್ಟರೂ ಯಾರೂ ಹೀನೈಸುತ್ತಿರಲಿಲ್ಲ.

[2] ನಿನ್ನನ್ನು ನನ್ನ ತಾಯಿಯ ಮನೆಗೆ ಕರೆದುಕೊಂಡು ಹೋಗುತ್ತಿದ್ದೆನು, ಅಲ್ಲಿ ಆಕೆಯು ನಿನಗೆ ಉಪದೇಶ ಮಾಡಬಹುದಾಗಿತ್ತು; ದ್ರಾಕ್ಷಿಯ ಮಿಶ್ರಪಾನವನ್ನು ಕೊಡುತ್ತಿದ್ದೆ, ನನ್ನ ದಾಳಿಂಬೆಯ ಸವಿರಸವನ್ನು ನಿನಗೆ ಕುಡಿಸುತ್ತಿದ್ದೆನು.

[3] ಆಗ ನಿನ್ನ ಎಡಗೈ ನನಗೆ ತಲೆದಿಂಬಾಗಿ ಬಲಗೈ ನನ್ನನ್ನು ತಬ್ಬುತ್ತಿತ್ತು.

[4] ಯೆರೂಸಲೇಮಿನ ಮಹಿಳೆಯರೇ, ಆತನು ತಾನಾಗಿ ಎಚ್ಚರಗೊಳ್ಳುವವರೆಗೆ ಯಾರೂ ನನ್ನ ಪ್ರಿಯನನ್ನು ಎಚ್ಚರಿಸದಿರಿ, ಆತನ ವಿಶ್ರಾಂತಿಗೆ ಯಾರೂ ಭಂಗ ಮಾಡದಿರಿ ಎಂದು ವನದ ಜಿಂಕೆ ಹರಿಣಗಳ ಮೇಲೆ ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ.

[5] ನಲ್ಲನನ್ನು ಒರಗಿಕೊಂಡು ಅಡವಿಯಿಂದ ಬರುವ ಇವಳು ಯಾರು? ಎಬ್ಬಿಸಿದೆನಲ್ಲಾ ನಿನ್ನನ್ನು ಆ ಸೇಬಿನ ಮರದಡಿಯಲ್ಲಿ ಇಗೋ, ಅಲ್ಲಿ ನಿನ್ನ ತಾಯಿ ನಿನ್ನನ್ನು ಗರ್ಭಧರಿಸಿದ್ದು, ಅಲ್ಲೇ ನಿನ್ನನ್ನು ಪ್ರಸವವೇದನೆಯಿಂದ ಹೆತ್ತಳು.

[6] ನಿನ್ನ ಕೈಯಲ್ಲಿನ ಮುದ್ರೆಯ ಹಾಗೆ ನಿನ್ನ ಹೃದಯದ ಮೇಲೆ ನನ್ನನ್ನು ಧರಿಸಿಕೋ. ಪ್ರೀತಿ ಮೃತ್ಯುವಿನಷ್ಟು ಶಕ್ತಿಶಾಲಿ, ಪ್ರೀತಿದ್ರೋಹದಿಂದ ಹುಟ್ಟುವ ಮತ್ಸರವು ಪಾತಾಳದಷ್ಟು ಕ್ರೂರ, ಅದರ ಜ್ವಾಲೆಯು ಬೆಂಕಿಯ ಉರಿ, ಧಗಧಗಿಸುವ ಕೋಪಾಗ್ನಿ.

[7] ನಂದಿಸಲಾರವು ಪ್ರೀತಿಯನ್ನು ಜಲರಾಶಿಗಳು, ಮುಣುಗಿಸಲಾರವು ಅದನ್ನು ಪ್ರವಾಹಗಳು. ಪ್ರೀತಿಯನ್ನು ಗಳಿಸಲು ಮನೆಮಾರುಗಳನ್ನು ಮಾರಿದರೂ ಸಿಗುವುದು ಅವನಿಗೆ ತಿರಸ್ಕಾರ.

[8] ಸ್ತನಬಾರದ ತಂಗಿಯು ನಮಗುಂಟು; ಅವಳನ್ನು ವರಿಸಲು ಯಾರಾದರು ಬಂದರೆ ಅವಳ ಹಿತಕ್ಕೆ ಏನು ಮಾಡೋಣ?

[9] ಅವಳು ಕೋಟೆಯಾದರೆ ಅದರ ಮೇಲೆ ಬೆಳ್ಳಿಯ ಬುರುಜನ್ನು ಕಟ್ಟುವೆವು, ಬಾಗಿಲಾದರೆ ದೇವದಾರು ಹಲಗೆಗಳಿಂದ ಭದ್ರಪಡಿಸುವೆವು.

[10] ನಾನು ಕೋಟೆ; ನನ್ನ ಸ್ತನಗಳು ಅದರ ಬುರುಜುಗಳು, ಹೀಗಿದ್ದು ಅವನ ದೃಷ್ಟಿಯಲ್ಲಿ ನನಗೆ ದಯೆ ದೊರಕಿತ್ತು.

[11] ಸೊಲೊಮೋನನು ಬಾಲ್ಹಾಮೋನಿನಲ್ಲಿ ಇದ್ದ ತನ್ನ ದ್ರಾಕ್ಷಿ ತೋಟವನ್ನು ಗುತ್ತಿಗೆಗೆ ಕೊಟ್ಟನು, ಪ್ರತಿಯೊಬ್ಬ ಗುತ್ತಿಗೆದಾರ ತೆರಬೇಕಾಗಿತ್ತು ಸಾವಿರ ಬೆಳ್ಳಿ ನಾಣ್ಯಗಳನ್ನು.

[12] ಸೊಲೊಮೋನನೇ, ಆ ಸಾವಿರ ಬೆಳ್ಳಿ ನಾಣ್ಯ ನಿನಗಿರಲಿ, ಅದರ ಮೇಲ್ವಿಚಾರಕರಿಗೆ ಇನ್ನೂರು ನಾಣ್ಯ ಸೇರಲಿ; ನನ್ನದೇ ಆಗಿರುವ ನನ್ನ ತೋಟವು ನನ್ನ ವಶದಲ್ಲಿಯೇ ಇದೆ.

[13] ಉದ್ಯಾನದಲ್ಲಿ ವಾಸಿಸುವವಳೇ ಗೆಳೆಯರು ನಿನ್ನ ಧ್ವನಿ ಕೇಳಬೇಕೆಂದಿದ್ದಾರೆ, ನನಗೂ ಆ ಧ್ವನಿ ಕೇಳಿಸಲಿ.

[14] ಸುಗಂಧಸಸ್ಯದ ಪರ್ವತಗಳಲ್ಲಿ ಜಿಂಕೆಯಂತೆಯೂ, ಪ್ರಾಯದ ಹರಿಣದಂತೆಯೂ ತ್ವರೆಮಾಡಿ ಬಾ ನನ್ನಿನಿಯನೇ.

ಪರಮಗೀತೆ — Chapters