[1] ಸೊಲೊಮೋನನು ರಚಿಸಿದ ಪರಮಗೀತೆ.
[2] ನಿನ್ನ ಬಾಯ ಮುದ್ದುಗಳಿಂದ ನನಗೆ ಮುದ್ದಿಡು ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತಲೂ ಉತ್ತಮ.
[3] ನಿನ್ನ ತೈಲವು ಸುಗಂಧ; ನಿನ್ನ ಹೆಸರು ಸುರಿದ ತೈಲದ ಸುಗಂಧದಂತೆ ವ್ಯಾಪಿಸಿರುವುದರಿಂದ, ತರುಣಿಯರು ನಿನ್ನನ್ನು ಪ್ರೀತಿಸುವರು.
[4] ನನ್ನನ್ನು ನಿನ್ನಡೆಗೆ ಸೆಳೆದುಕೋ; ನಿನ್ನ ಹಿಂದೆ ಓಡಿ ಬರುವೆನು; ರಾಜನು ನನ್ನನ್ನು ಅಂತಃಪುರಕ್ಕೆ ಬರಮಾಡಿದ್ದಾನೆ; ನಿನ್ನಲ್ಲಿ ಹರ್ಷಿಸಿ ಉಲ್ಲಾಸಿಸುವೆವು, ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತಲೂ ಉತ್ತಮವಾದುದು; ಸ್ತ್ರೀಯರು ನಿನ್ನನ್ನು ಯಥಾರ್ಥವಾಗಿ ಪ್ರೀತಿಸುವರು.
[5] ಯೆರೂಸಲೇಮಿನ ಮಹಿಳೆಯರೇ, ನಾನು ಕೇದಾರಿನ ಗುಡಾರಗಳಂತೆ ಕಪ್ಪಾಗಿದ್ದರೂ, ಸೊಲೊಮೋನನ ಪರದೆಗಳಂತೆ ಚೆಲುವಾಗಿದ್ದೇನೆ.
[6] ನಾನು ಕಪ್ಪಾಗಿದ್ದೇನೆ ಎಂದು ನನ್ನನ್ನು ದಿಟ್ಟಿಸಿ ನೋಡಬೇಡಿರಿ. ನಾನು ಕಪ್ಪಾಗಿರುವುದು ಸೂರ್ಯನ ತಾಪದಿಂದ. ನನ್ನ ಸಹೋದರರು ನನ್ನ ಮೇಲೆ ಕೋಪಗೊಂಡು ದ್ರಾಕ್ಷಿತೋಟಗಳನ್ನು ಕಾಯುವುದಕ್ಕೆ ಇಟ್ಟರು; ಆದುದರಿಂದ ನನ್ನ ಸ್ವಂತ ದ್ರಾಕ್ಷಿ ತೋಟವನ್ನೂ ನಾನು ಕಾಯ್ದುಕೊಳ್ಳಲಾಗಲಿಲ್ಲ.
[7] ನನ್ನ ಪ್ರಾಣಪ್ರಿಯನೇ, ನಿನ್ನ ಮಂದೆಯನ್ನು ಎಲ್ಲಿ ಮೇಯಿಸುವೆ? ನಡುಹಗಲಲ್ಲಿ ನಿನ್ನ ಮಂದೆಯು ಎಲ್ಲಿ ವಿಶ್ರಮಿಸುತ್ತಾರೆ? ಹೇಳು. ನಾನೇಕೆ ಅಲೆಮಾರಿಗಳಂತೆ ನಿನ್ನ ಗೆಳೆಯರ ಮಂದೆಗಳ ಹತ್ತಿರ ಅಲೆಯಬೇಕು?
[8] ಸ್ತ್ರೀಯರಲ್ಲಿ ಅತಿ ಸುಂದರವಾದ ಹೆಣ್ಣು ನೀನು, ನಿನಗಿದು ಗೊತ್ತಿಲ್ಲವಾದರೆ ಹಿಂಡಿನ ಹೆಜ್ಜೆಯ ಜಾಡನ್ನು ಹಿಡಿದು ಹೋಗಿ, ಕುರುಬರ ಗುಡಾರಗಳ ಬಳಿಯಲ್ಲಿ ನಿನ್ನ ಮೇಕೆಮರಿಗಳನ್ನು ಮೇಯಿಸು.
[9] ಪ್ರಿಯಳೇ, ನಿನ್ನನ್ನು ಫರೋಹನ ರಥವನ್ನೆಳೆವ ಹೆಣ್ಣು ಕುದುರೆಗೆ ಹೋಲಿಸಿದ್ದೇನೆ.
[10] ನಿನ್ನ ಕೆನ್ನೆಗಳು ಆಭರಣಗಳಿಂದಲೂ, ನಿನ್ನ ಕಂಠವು ಹಾರಗಳಿಂದಲೂ ಎಷ್ಟೋ ಅಂದವಾಗಿವೆ!
[11] ನಾನು ನಿನಗಾಗಿ ಬಂಗಾರದ ಅಂಚಿನಿಂದ ಕೂಡಿರುವ, ಬೆಳ್ಳಿಯ ಕುಚ್ಚಗಳನ್ನು ಮಾಡಿಸುವೆನು.
[12] ರಾಜನು ಔತಣದಲ್ಲಿದ್ದಾಗ ಇತ್ತ ನನ್ನ ಸುಗಂಧತೈಲವು ಪರಿಮಳವನ್ನು ಬೀರುತ್ತಿತ್ತು.
[13] ಎನ್ನಿನಿಯನು ನನ್ನ ಸ್ತನಗಳ ಮಧ್ಯದಲ್ಲಿನ ರಕ್ತಬೋಳದ ಚೀಲ;
[14] ನನ್ನ ಪಾಲಿಗೆ ನನ್ನ ನಲ್ಲನು ಏನ್ಗೆದಿಯ ದ್ರಾಕ್ಷಿ ತೋಟಗಳ ಗೋರಂಟೆಯ ಹೂಗೊಂಚಲು.
[15] ಆಹಾ, ನನ್ನ ಪ್ರಿಯಳೇ, ನೀನು ಎಷ್ಟು ಚೆಲುವೆ, ಆಹಾ, ನೀನು ಎಷ್ಟು ಸುಂದರಿ! ನಿನ್ನ ನೇತ್ರಗಳು ಪಾರಿವಾಳಗಳಂತಿವೆ.
[16] ಆಹಾ, ಎನ್ನಿನಿಯನೇ, ನೀನೆಷ್ಟು ಸುಂದರ, ನೀನೆಷ್ಟು ಮನೋಹರ! ಹಚ್ಚ ಹಸಿರು ಚಿಗುರುಗಳು ನಮ್ಮ ಮಂಚ,
[17] ನಮ್ಮ ಮನೆಯ ಛಾವಣಿ ತುರಾಯಿ ಮರಗಳೇ; ತೊಲೆಗಳು ದೇವದಾರು ವೃಕ್ಷಗಳೇ.