Skip to content
Opens in a new window
Listen to this chapter • 2:30

[1] ಮಹಿಳಾಮಣಿಯೇ, ನಿನ್ನಿನಿಯನು ಹೋದುದೆಲ್ಲಿಗೆ? ನಿನ್ನೊಂದಿಗೆ ಸೇರಿ ನಾವು ಅವನನ್ನು ಹುಡುಕೋಣವೇ? ಹೇಳು, ನಿನ್ನ ನಲ್ಲನು ಹೋದುದೆಲ್ಲಿಗೆ?

[2] ನನ್ನ ಕಾಂತನು ಉದ್ಯಾನವನಗಳಲ್ಲಿ ಮಂದೆಯನ್ನು ಮೇಯಿಸುತ್ತಾ, ನೆಲದಾವರೆಗಳನ್ನು ಕೊಯ್ಯಬೇಕೆಂದು ಸುಗಂಧಸಸ್ಯದ ಪಾತಿಗಳಿರುವ ತನ್ನ ತೋಟಕ್ಕೆ ಹೋಗಿದ್ದಾನೆ.

[3] ಎನ್ನಿನಿಯನು ನನ್ನವನೇ, ನಾನು ಅವನವಳೇ, ಅವನು ನೆಲದಾವರೆಗಳ ಮಧ್ಯದಲ್ಲಿ ಮಂದೆಯನ್ನು ಮೇಯಿಸುವವನಾಗಿದ್ದಾನೆ.

[4] ನನ್ನ ಪ್ರಿಯಳೇ, ನೀನು ತಿರ್ಚದಂತೆ ಸುಂದರಿ, ಯೆರೂಸಲೇಮಿನ ಹಾಗೆ ಮನೋಹರಿ, ಧ್ವಜಗಳ್ಳುಳ್ಳ ಸೈನ್ಯದ ಹಾಗೆ ಭಯಂಕರಿ!

[5] ನಿನ್ನ ಕಣ್ಣುಗಳನ್ನು ನನ್ನ ಕಡೆಯಿಂದ ತಿರುಗಿಸು, ಅವು ನನ್ನನ್ನು ಹೆದರಿಸುತ್ತವೆ. ನಿನ್ನ ಕೂದಲು ಗಿಲ್ಯಾದ್ ಬೆಟ್ಟದ ಪಾರ್ಶ್ವದಲ್ಲಿ ಮಲಗಿರುವ ಆಡುಮಂದೆಯಂತಿದೆ.

[6] ಉಣ್ಣೆ ಕತ್ತರಿಸಿ ಸ್ನಾನಮಾಡಿಸಿದ ಕುರಿಮಂದೆಯ ಬಿಳುಪಿನಂತಿವೆ ನಿನ್ನ ಹಲ್ಲುಗಳು, ಯಾವುದೂ ಒಂಟಿಯಾಗಿರದೆ ಎಲ್ಲವೂ ಒಟ್ಟಾಗಿ ಜೋಡಿಯಾಗಿವೆ.

[7] ಮುಸುಕಿನೊಳಗಿನ ನಿನ್ನ ಕೆನ್ನೆಯು ಹೋಳು ಮಾಡಿದ ದಾಳಿಂಬೆಯ ತಿರುಳಿನಂತಿದೆ.

[8] ಅರಸನಿಗೆ ರಾಣಿಯರು ಅರುವತ್ತು ಮಂದಿ, ಉಪಪತ್ನಿಯರು ಎಂಬತ್ತು ಮಂದಿ, ಯುವತಿಯರು ಲೆಕ್ಕವಿಲ್ಲದಷ್ಟು.

[9] ನನ್ನ ಪಾರಿವಾಳವು, ನನ್ನ ನಿರ್ಮಲೆಯು ಒಬ್ಬಳೇ, ಇವಳು ಏಕಮಾತ್ರ ಪುತ್ರಿ ತಾಯಿಗೆ, ಮುದ್ದುಮಗಳು ಹೆತ್ತವಳಿಗೆ. ಧನ್ಯಳೆಂದು ಹೊಗಳಿದರು ಯುವತಿಯರು ನೋಡಿ, ರಾಣಿಯರೂ, ಉಪಪತ್ನಿಯರೂ ಕೊಂಡಾಡಿದರು ಈ ರೀತಿ.

[10] ಅರುಣೋದಯದಂತೆ ಉದಯಿಸುವಂತಿರುವಳು, ಚಂದ್ರನಂತೆ ಸೌಮ್ಯ ಸುಂದರಿಯಿವಳು, ಸೂರ್ಯನಂತೆ ಶುಭ್ರಳು, ಧ್ವಜಗಳುಳ್ಳ ಸೈನ್ಯದ ಹಾಗೆ ಭಯಂಕರಳು ಆಗಿರುವ ಇವಳಾರು?

[11] ದ್ರಾಕ್ಷಿಯು ಚಿಗುರಿದೆಯೋ, ದಾಳಿಂಬೆ ಗಿಡಗಳು ಹೂಬಿಟ್ಟಿವೆಯೋ ಎಂದು ತಗ್ಗಿನಲ್ಲಿ ಬೆಳೆದ ಸಸ್ಯಗಳನ್ನು ನೋಡಲು ಬಾದಾಮಿಯ ತೋಟಕ್ಕೆ ನಾನು ಹೋಗಿದ್ದೆ.

[12] ಇದ್ದಕ್ಕಿದ್ದ ಹಾಗೆ ನಾಯಕನಾಗಿ ನಾನು ಬಯಸಿದಂತೆ ದೇಶ ಪ್ರಧಾನರ ರಥಗಳ ನಡುವೆ ನಾನಿರುವುದನ್ನು ಅರಿತೆನು.

[13] ಶೂಲಮ್ ಊರಿನವಳೇ, ತಿರುಗು, ಹಿಂತಿರುಗು, ನಾನು ನಿನ್ನನ್ನು ನೋಡಬೇಕು; ತಿರುಗು, ಇತ್ತ ತಿರುಗು. ಎರಡು ಸಾಲಿನಲ್ಲಿ ನರ್ತಿಸುವ ನರ್ತಕಿಯರ ನಡುವೆ ನರ್ತಿಸುವವಳನ್ನು ನೋಡುವಂತೆ ಶೂಲಮ್ ಊರಿನವಳಾದ ನನ್ನನ್ನು ನೀನು ನೋಡುವುದೇಕೆ?

ಪರಮಗೀತೆ — Chapters