[1] ರಾಜಪುತ್ರಿಯೇ, ಪಾದರಕ್ಷೆಗಳಲ್ಲಿನ ನಿನ್ನ ಪಾದಗಳು ಎಷ್ಟೋ ಅಂದ! ದುಂಡಾದ ನಿನ್ನ ತೊಡೆಗಳು ಕುಶಲ ಶಿಲ್ಪಿಯು ಮಾಡಿದ ಆಭರಣಗಳಂತಿವೆ.
[2] ನಿನ್ನ ಹೊಕ್ಕಳು ಮಿಶ್ರಪಾನ ತುಂಬಿದ ಗುಂಡು ಬಟ್ಟಲು, ನಿನ್ನ ಹೊಟ್ಟೆ ನೆಲದಾವರೆಗಳಿಂದ ಅಲಂಕೃತವಾದ ಗೋದಿಯ ರಾಶಿ.
[3] ನಿನ್ನ ಸ್ತನಗಳೆರಡೂ ಜಿಂಕೆಯ ಅವಳಿಮರಿಗಳಂತಿವೆ.
[4] ನಿನ್ನ ಕೊರಳು ದಂತದ ಗೋಪುರ, ನಿನ್ನ ನೇತ್ರಗಳು ಹೆಷ್ಬೋನಿನಲ್ಲಿನ ಬತ್ ರಬ್ಬೀಮ್ ಬಾಗಿಲ ಬಳಿಯ ಕೊಳಗಳಂತಿವೆ. ನಿನ್ನ ಮೂಗು ದಮಸ್ಕದ ಕಡೆಗಿರುವ ಲೆಬನೋನಿನ ಬುರುಜಿನಂತಿದೆ.
[5] ಕರ್ಮೆಲ್ ಬೆಟ್ಟದಂತೆ ಗಂಭೀರವಾಗಿದೆ ನಿನ್ನ ಶಿರಸ್ಸು, ನಿನ್ನ ತಲೆಗೂದಲಿಗಿದೆ ಥಳಥಳಿಸುವ ನುಣುಪುಹೊಳಪಿನ ಬಣ್ಣ, ಅದರಲ್ಲಿದೆ ಅರಸನನ್ನೇ ಸೆರೆಹಿಡಿಯುವಂಥ ಆಕರ್ಷಣೆ.
[6] ಪ್ರೇಯಸಿಯೇ, ಸಕಲ ಸೌಂದರ್ಯ ಸೊಬಗಿನಿಂದ ನೀನೆಷ್ಟು ಸುಂದರ, ನೀನೆಷ್ಟು ಮನೋಹರ!
[7] ನೀಳವಾದ ನಿನ್ನ ಆಕಾರವು ಖರ್ಜೂರದ ಮರ, ನಿನ್ನ ಸ್ತನಗಳೇ ಅದರ ಗೊಂಚಲುಗಳು.
[8] ನಾನು ಆ ಮರವನ್ನು ಹತ್ತಿ, ರೆಂಬೆಗಳನ್ನು ಹಿಡಿಯುವೆನು ಅಂದುಕೊಂಡೆನು. ನಿನ್ನ ಸ್ತನಗಳು ನನಗೆ ದ್ರಾಕ್ಷಿಯ ಗೊಂಚಲುಗಳಂತಿರಲಿ, ಸೇಬುಹಣ್ಣಿನ ಪರಿಮಳದಂತೆ ನಿನ್ನ ಉಸಿರು.
[9] ನಿನ್ನ ಚುಂಬನ ಉತ್ತಮ ದ್ರಾಕ್ಷಾರಸದ ಹಾಗಿರಲಿ, ನಿದ್ರಿಸುವವರ ತುಟಿಗಳಲ್ಲಿ ನಯವಾಗಿ ಹರಿಯುವ ಈ ರಸವು ನನ್ನ ನಲ್ಲೆಯಾದ ನಿನ್ನಲ್ಲಿಯೂ ಮೆಲ್ಲನೆ ಇಳಿದು ಬರುವುದು.
[10] ನಾನು ನನ್ನ ನಲ್ಲನ ನಲ್ಲೆ, ಅವನ ಆಶೆಯು ನನ್ನ ಮೇಲೆ.
[11] ಎನ್ನಿನಿಯನೇ, ವನಕ್ಕೆ ಹೋಗೋಣ ಬಾ, ಹಳ್ಳಿಗಳ ಮಧ್ಯದಲ್ಲಿ ವಾಸಮಾಡುವ!
[12] ತೋಟಗಳಿಗೆ ಹೊತ್ತಾರೆ ಹೊರಟು ದ್ರಾಕ್ಷಿಯು ಚಿಗುರಿದೆಯೋ, ಅದರ ಹೂವು ಅರಳಿದೆಯೋ, ದಾಳಿಂಬೆ ಹೂ ಬಿಟ್ಟಿದೆಯೋ ನೋಡೋಣ ಬಾ, ಅಲ್ಲಿ ನನ್ನ ಪ್ರೀತಿಯನ್ನು ನಿನಗೆ ಸಲ್ಲಿಸುವೆನು.
[13] ಕಾಮಜನಕ ವೃಕ್ಷಗಳು ಪರಿಮಳ ಬೀರುತ್ತಿವೆ, ನನ್ನ ಕಾಂತನೇ, ನಾನು ನಿನಗಾಗಿ ಇಟ್ಟುಕೊಂಡ ಒಳ್ಳೊಳ್ಳೆಯ, ಬಗೆಬಗೆಯ ಹಳೆಯ ಮತ್ತು ಹೊಸ ಹಣ್ಣುಗಳು ನಮ್ಮ ಬಾಗಿಲುಗಳ ಬಳಿ ಸಿದ್ಧವಾಗಿವೆ.