[1] ರಾತ್ರಿಯಲ್ಲಿ ಹಾಸಿಗೆಯ ಮೇಲೆ ನನ್ನ ಪ್ರಾಣಪ್ರಿಯನನ್ನು ಹುಡುಕಿದೆನು, ಎಷ್ಟು ಹುಡುಕಿದರೂ ಸಿಕ್ಕಲಿಲ್ಲ.
[2] ನಾನು, “ಎದ್ದು ಊರಿನಲ್ಲಿ ತಿರುಗುವೆನು, ಬೀದಿಗಳಲ್ಲಿಯೂ, ಚೌಕಗಳಲ್ಲಿಯೂ ನನ್ನ ಪ್ರಾಣಪ್ರಿಯನನ್ನು ಹುಡುಕುವೆನು” ಅಂದುಕೊಂಡೆನು, ಎಷ್ಟು ಹುಡುಕಿದರೂ ಸಿಕ್ಕಲಿಲ್ಲ.
[3] ಊರಿನಲ್ಲಿ ತಿರುಗುವ ಕಾವಲುಗಾರರ ಕೈಗೆ ಸಿಕ್ಕಿದೆನು, “ನನ್ನ ಪ್ರಾಣಪ್ರಿಯನನ್ನು ಕಂಡಿರಾ?” ಎಂದು ಅವರನ್ನು ವಿಚಾರಿಸಿದೆನು.
[4] ಅವರನ್ನು ಬಿಟ್ಟ ತುಸು ಹೊತ್ತಿನೊಳಗೆ ನನ್ನ ಪ್ರಾಣಪ್ರಿಯನನ್ನು ಕಂಡುಕೊಂಡು ತಾಯಿಯ ಮನೆಗೆ, ನನ್ನನ್ನು ಹೆತ್ತವಳ ಕೋಣೆಗೆ ಸೇರುವ ತನಕ, ಬಿಡದೆ ಹಿಡಿದುಕೊಂಡೇ ಹೋದೆನು.
[5] ಯೆರೂಸಲೇಮಿನ ಮಹಿಳೆಯರೇ, ಆತನು ತಾನಾಗಿ ಎಚ್ಚರಗೊಳ್ಳುವವರೆಗೆ ಯಾರೂ ನನ್ನ ಪ್ರಿಯನನ್ನು ಎಚ್ಚರಿಸದಿರಿ, ಆತನ ವಿಶ್ರಾಂತಿಗೆ ಯಾರೂ ಭಂಗ ಮಾಡದಿರಿ ಎಂದು ವನದ ಜಿಂಕೆ ಹರಿಣಗಳ ಮೇಲೆ ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ.
[6] ವರ್ತಕರು ಮಾರುವ ಸಕಲ ಸುಗಂಧತೈಲಗಳಿಂದ, ರಸಗಂಧ, ಸಾಂಬ್ರಾಣಿಧೂಪ ಮುಂತಾದ ದ್ರವ್ಯಗಳಿಂದ ಧೂಮಸ್ತಂಭಗಳೋಪಾದಿಯಲ್ಲಿ ಹೊರಹೊಮ್ಮುತ್ತಿರುವ, ಅರಣ್ಯಮಾರ್ಗವಾಗಿ ಬರುತ್ತಿರುವ ಈ ಮೆರವಣಿಗೆ ಯಾರದು?
[7] ಅದೋ, ನೋಡು ಸೊಲೊಮೋನನ ಪಲ್ಲಕ್ಕಿ, ಇಸ್ರಾಯೇಲಿನ ಶೂರರಲ್ಲಿ ಅರುವತ್ತು ಜನರು ಅದರ ಸುತ್ತಲಿದ್ದಾರೆ.
[8] ಯುದ್ಧಪ್ರವೀಣರಾದ ಇವರೆಲ್ಲರೂ ಕೈಯಲ್ಲಿ ಕತ್ತಿಯನ್ನು ಹಿಡಿದಿದ್ದಾರೆ. ರಾತ್ರಿಯ ಅಪಾಯದ ನಿಮಿತ್ತ ಪ್ರತಿಯೊಬ್ಬನೂ ಸೊಂಟಕ್ಕೆ ಕತ್ತಿ ಕಟ್ಟಿಕೊಂಡಿದ್ದಾನೆ.
[9] ಆ ಪಲ್ಲಕ್ಕಿಯನ್ನು ರಾಜನಾದ ಸೊಲೊಮೋನನು ಲೆಬನೋನಿನ ಮರದಿಂದ ಮಾಡಿಸಿದ್ದಾನೆ.
[10] ಅದರ ಕಂಬಗಳನ್ನು ಬೆಳ್ಳಿಯಿಂದಲೂ, ಕುಳಿತು ಒರಗಿಕೊಳ್ಳುವ ಆಸನವನ್ನು ಬಂಗಾರದಿಂದಲೂ, ಆಸನವನ್ನು ಧೂಮ್ರವರ್ಣದ ವಸ್ತ್ರದಿಂದ ಮಾಡಿಸಿದನು. ಅದರ ಮಧ್ಯಭಾಗವನ್ನು ಯೆರೂಸಲೇಮಿನ ಪುತ್ರಿಯರು ತಮ್ಮ ಪ್ರೀತಿಗೆ ಗುರುತಾಗಿ ಕಸೂತಿಯಿಂದ ಅಲಂಕರಿಸಿದರು.
[11] ಚೀಯೋನಿನ ಮಹಿಳೆಯರೇ, ಹೊರಟು ಬನ್ನಿ ರಾಜನಾದ ಸೊಲೊಮೋನನನ್ನು ನೋಡ ಬನ್ನಿ. ಅವನು ವಿವಾಹ ದಿನದ ಉತ್ಸವದಂದು ಆತನ ತಾಯಿ ಆತನಿಗೆ ತೊಡಿಸಿದ ಕಿರೀಟವನ್ನು ಆತ ಧರಿಸಿರುವುದನ್ನು ನೋಡಬನ್ನಿ!