[1] ಪ್ರಿಯಳೇ, ವಧುವೇ, ಇಗೋ ನಾ ಬಂದಿರುವೆ ನನ್ನ ತೋಟದೊಳಗೆ, ನನ್ನ ರಕ್ತಬೋಳ ಸುಗಂಧದ್ರವ್ಯಗಳನ್ನು ಕೂಡಿಸಿರುವೆ, ನನ್ನ ಜೇನುಗೂಡನ್ನೂ ಜೇನುತುಪ್ಪವನ್ನೂ ತಿಂದಿರುವೆ, ನನ್ನ ದ್ರಾಕ್ಷಾರಸವನ್ನೂ ಹಾಲನ್ನೂ ಕುಡಿದಿರುವೆ. ಮಿತ್ರರೇ, ತಿನ್ನಿರಿ. ಪ್ರಿಯರೇ ಕುಡಿಯಿರಿ, ಬೇಕಾದಷ್ಟು ಪಾನಮಾಡಿರಿ.
[2] ನಾನು ನಿದ್ರೆಗೊಂಡಿದ್ದರೂ ನನ್ನ ಹೃದಯವು ಎಚ್ಚರಗೊಂಡಿತ್ತು. ಇಗೋ, ಎನ್ನಿನಿಯನು ಕದ ತಟ್ಟಿ, “ಪ್ರಿಯಳೇ, ಕಾಂತಳೇ, ಪಾರಿವಾಳವೇ, ನಿರ್ಮಲೆಯೇ, ಬಾಗಿಲು ತೆಗೆ! ನನ್ನ ತಲೆಯ ಮೇಲೆಲ್ಲಾ ಇಬ್ಬನಿಯು ಬಿದ್ದಿದೆ, ನನ್ನ ಕೂದಲು ರಾತ್ರಿ ಬೀಳುವ ಹನಿಗಳಿಂದ ತುಂಬಿದೆ” ಅಂದನು.
[3] “ನನ್ನ ಒಳಂಗಿಯನ್ನು ತೆಗೆದೆನಲ್ಲಾ, ಅದನ್ನು ಹೇಗೆ ಹಾಕಿಕೊಂಡೇನು? ಪಾದಗಳನ್ನು ತೊಳೆದುಕೊಂಡೆನಲ್ಲಾ, ಅವುಗಳನ್ನು ಹೇಗೆ ಕೊಳೆಮಾಡಿಕೊಳ್ಳಲಿ?” ಎಂದು ನಾನು ಅಂದುಕೊಂಡಾಗ,
[4] ನನ್ನ ಕಾಂತನು ಬಾಗಿಲ ರಂಧ್ರದಲ್ಲಿ ಕೈ ನೀಡಿದನು, ಅವನಿಗಾಗಿ ನನ್ನ ಮನ ಮಿಡಿಯಿತು.
[5] ನಾನೆದ್ದು ನನ್ನ ನಲ್ಲನಿಗೆ ಬಾಗಿಲು ತೆರೆಯಲು ಅಗುಳಿಯ ಮೇಲೆ ಕೈಯಿಟ್ಟೆನು, ನನ್ನ ಕೈಗಳಿಂದ ರಕ್ತಬೋಳವು, ನನ್ನ ಬೆರಳುಗಳಿಂದ ಅಚ್ಚರಕ್ತಬೋಳವು ತೊಟ್ಟಿಕ್ಕಿತು.
[6] ನನ್ನ ಇನಿಯನಿಗೆ ಕದ ತೆಗೆದೆನು, ಅಷ್ಟರಲ್ಲಿ ಅವನು ಹಿಂದಿರುಗಿ ಹೋಗಿದ್ದನು. ನನ್ನೆದೆಯ ಬಡಿತವೇ ನಿಂತಂತಾಯಿತು ಅವನ ದನಿಗೆ. ಎಷ್ಟು ಹುಡುಕಿದರೂ ಸಿಕ್ಕಲಿಲ್ಲ ಅವನು, ಎಷ್ಟು ಕೂಗಿದರೂ ಉತ್ತರವಿಲ್ಲ.
[7] ಊರಲ್ಲಿ ಸುತ್ತುತ್ತಿರುವ ಕಾವಲುಗಾರರು ನನ್ನನ್ನು ಕಂಡುಹಿಡಿದು, ಹೊಡೆದು ಗಾಯಪಡಿಸಿದರು, ಪೌಳಿಯ ಕಾವಲುಗಾರರು ಮೇಲೊದಿಕೆಯನ್ನು ನನ್ನಿಂದ ಕಿತ್ತುಕೊಂಡರು.
[8] ಯೆರೂಸಲೇಮಿನ ಮಹಿಳೆಯರೇ, ನೀವು ನನ್ನ ಕಾಂತನನ್ನು ಕಂಡರೆ ನಾನು ಅನುರಾಗದಿಂದ ಅಸ್ವಸ್ಥಳಾಗಿದ್ದೇನೆ ಎಂಬುವುದನ್ನು ಅವನಿಗೆ ತಿಳಿಸಬೇಕೆಂದು ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ.
[9] ಸ್ತ್ರೀರತ್ನವೇ, ಇತರರ ಕಾಂತರಿಗಿಂತ ನಿನ್ನ ಕಾಂತನ ವಿಶೇಷತೆಯೇನು? ನಮ್ಮಿಂದ ನೀನು ಹೀಗೆ ಪ್ರಮಾಣಮಾಡಿಸುವುದಕ್ಕೆ ಇತರರ ಕಾಂತರಿಗಿಂತ ನಿನ್ನ ಕಾಂತನ ಅತಿಶಯವೇನು?
[10] ನನ್ನ ನಲ್ಲನು ತೇಜೋಮಯವಾದ ಕೆಂಪು ಬಣ್ಣವುಳ್ಳವನು; ಅವನು ಹತ್ತು ಸಾವಿರ ಜನರಲ್ಲಿ ಧ್ವಜಪ್ರಾಯನು.
[11] ಅವನ ತಲೆಯು ಚೊಕ್ಕ ಬಂಗಾರದಂತಿದೆ, ಗುಂಗುರು ಗುಂಗುರಾಗಿರುವ ಅವನ ಕೂದಲು ಕಾಗೆಯಂತೆ ಕಪ್ಪಾಗಿದೆ.
[12] ಅವನ ಕಣ್ಣುಗಳೋ ತುಂಬಿತುಳುಕುವ ತೊರೆಗಳ ಹತ್ತಿರ ತಂಗುವ, ಕ್ಷೀರದಲ್ಲಿ ಸ್ನಾನಮಾಡುವ ಪಾರಿವಾಳಗಳಂತಿವೆ.
[13] ಅವನ ಕೆನ್ನೆಗಳು ಕರ್ಣಕುಂಡಲ ಗಿಡಗಳ ಪಾತಿಗಳಂತೆಯೂ ಸುಗಂಧಸಸ್ಯಗಳು ಬೆಳೆಯುವ ದಿಬ್ಬಗಳಂತೆಯೂ ಇವೆ; ಅಚ್ಚರಕ್ತಬೋಳವನ್ನು ಸುರಿಸುವ ಅವನ ತುಟಿಗಳು ಕೆಂದಾವರೆಗಳೇ.
[14] ಅವನ ಕೈಗಳು ಪೀತರತ್ನ ಖಚಿತವಾದ ಬಂಗಾರದ ಸಲಾಕಿಗಳೋಪಾದಿಯಲ್ಲಿವೆ, ಅವನ ಮೈ ಇಂದ್ರನೀಲಮಯವಾದ ದಂತಫಲಕದ ಹಾಗಿದೆ.
[15] ಅವನ ಕಾಲುಗಳು ಅಪರಂಜಿಯ ಸುಣ್ಣಪಾದಗಳ ಮೇಲಿಟ್ಟ ಚಂದ್ರಕಾಂತ ಸ್ತಂಭಗಳು; ದೇವದಾರುಗಳಷ್ಟು ರಮಣೀಯವಾದ ಅವನ ಗಾಂಭೀರ್ಯವು ಲೆಬನೋನಿಗೆ ಸಮಾನ.
[16] ಅವನ ನುಡಿ ಮಧುರ, ಅವನು ಸರ್ವಾಂಗ ಸುಂದರ. ಯೆರೂಸಲೇಮಿನ ಸ್ತ್ರೀಯರುಗಳಿರಾ, ಇವನೇ ಎನ್ನಿನಿಯನು; ಇವನೇ ನನ್ನ ಪ್ರಿಯನು.