Skip to content
Opens in a new window
Listen to this chapter • 2:59

[1] ಆಹಾ, ನನ್ನ ಪ್ರಿಯಳೇ, ನೀನು ಎಷ್ಟು ಚೆಲುವೆ! ಆಹಾ, ನೀನು ಎಷ್ಟು ಸುಂದರಿ! ಮುಸುಕಿನೊಳಗಿನ ನಿನ್ನ ನೇತ್ರಗಳು ಪಾರಿವಾಳಗಳು, ನಿನ್ನ ಕೂದಲು ಗಿಲ್ಯಾದ್ ಬೆಟ್ಟದಿಂದ ಇಳಿದು ಹೋಗುವ ಆಡಿನ ಮಂದೆ.

[2] ಉಣ್ಣೆ ಕತ್ತರಿಸಿ ಸ್ನಾನಮಾಡಿಸಿದ ಕುರಿಮಂದೆಯ ಬಿಳುಪಿನಂತಿವೆ ನಿನ್ನ ಹಲ್ಲುಗಳು, ಯಾವುದೂ ಒಂಟಿಯಾಗಿರದೆ ಎಲ್ಲವೂ ಒಟ್ಟಾಗಿ ಜೋಡಿಯಾಗಿವೆ.

[3] ನಿನ್ನ ತುಟಿಗಳು ಕೆಂಪು ದಾರದಂತಿವೆ. ನಿನ್ನ ಬಾಯಿ ರಮ್ಯ. ಮುಸುಕಿನೊಳಗಿನ ನಿನ್ನ ಕೆನ್ನೆಯು ಹೋಳು ಮಾಡಿದ ದಾಳಿಂಬೆಯ ತಿರುಳಿನಂತಿದೆ.

[4] ನಿನ್ನ ಕೊರಳು ದಾವೀದನು ಕಟ್ಟಿಸಿದ ನುಣುಪಾದ ಗೋಪುರದಂತಿದೆ, ನಿನ್ನ ಕತ್ತಿನ ಹಾರ ಸಾವಿರ ಶೂರರ ಗುರಾಣಿಗಳನ್ನು ನೇತುಹಾಕಿರುವ ದಾವೀದನ ಬುರುಜಿನ ಹಾಗಿದೆ.

[5] ನಿನ್ನ ಎರಡು ಸ್ತನಗಳು ನೆಲದಾವರೆಗಳ ಮಧ್ಯದಲ್ಲಿ ಮೇಯುತ್ತಿರುವ ಅವಳಿ ಜಿಂಕೆಮರಿಗಳಂತಿವೆ.

[6] ಕತ್ತಲು ಕಳೆಯುವ ತನಕ, ಹೊತ್ತು ಮೂಡುವವರೆಗೆ ರಕ್ತಬೋಳದ ಬೆಟ್ಟಕ್ಕೂ, ಧೂಪದ ಗುಡ್ಡಕ್ಕೂ ತೆರಳಿ ಸಂಚರಿಸುವೆ ನಾನು.

[7] ನನ್ನ ಪ್ರಿಯಳೇ, ನೀನು ಸರ್ವಾಂಗಸುಂದರಿ, ನಿನ್ನಲ್ಲಿ ಯಾವ ಕೊರತೆಯೂ ಇಲ್ಲ.

[8] ಬಾ ವಧುವೇ, ಎನ್ನೊಂದಿಗೆ ಲೆಬನೋನಿನಿಂದ. ಬಾ ನನ್ನೊಂದಿಗೆ, ಲೆಬನೋನಿನಿಂದ, ಇಳಿದು ಬಾ ಅಮಾನದ ತುದಿಯಿಂದ, ಶೆನೀರ್ ಮತ್ತು ಹೆರ್ಮೋನ್ ಶಿಖರಗಳಿಂದ. ಹೊರಟು ಬಾ, ಸಿಂಹಗಳ ಗುಹೆಗಳಿಂದ ಚಿರತೆಗಳ ಗುಡ್ಡಗಳಿಂದ.

[9] ಪ್ರಿಯಳೇ, ವಧುವೇ, ನನ್ನ ಹೃದಯವನ್ನು ಅಪಹರಿಸಿರುವೆ ನಿನ್ನ ಒಂದು ಕುಡಿನೋಟದಿಂದ; ನನ್ನ ಹೃದಯವನ್ನು ವಶಮಾಡಿಕೊಂಡಿರುವೆ ನಿನ್ನ ಕಂಠಹಾರದ ಒಂದು ರತ್ನದಿಂದ.

[10] ಪ್ರಿಯಳೇ, ವಧುವೇ, ನಿನ್ನ ಪ್ರೀತಿ ಅದೆಷ್ಟೋ ರಮ್ಯ! ನಿನ್ನ ಪ್ರೇಮ ದ್ರಾಕ್ಷಾರಸಕ್ಕಿಂತ ಎಷ್ಟೋ ಉತ್ತಮ! ನಿನ್ನ ತೈಲದ ಪರಿಮಳ ಸಕಲಸುಗಂಧ ದ್ರವ್ಯಗಳಿಗಿಂತ ಎಷ್ಟೋ ಮನೋಹರ!

[11] ವಧುವೇ, ನಿನ್ನ ತುಟಿಗಳು ಜೇನುಗರೆಯುತ್ತವೆ; ಜೇನೂ ಮತ್ತು ಹಾಲೂ ನಿನ್ನ ನಾಲಿಗೆಯ ಅಡಿಯಲ್ಲಿವೆ, ನಿನ್ನ ಉಡುಪುಗಳು ಲೆಬನೋನಿನ ಸುಗಂಧ ಸೂಸುತ್ತಿದೆ.

[12] ನನ್ನ ಪ್ರಿಯಳು, ನನ್ನ ಮದಲಗಿತ್ತಿಯು, ಸುಭದ್ರವಾದ ಉದ್ಯಾನ, ಬೇಲಿಯೊಳಗೆ ಮುಚ್ಚಿ ಮುದ್ರಿಸಿದ ಚಿಲುಮೆ.

[13] ನಿನ್ನ ಉದ್ಯಾನದಲ್ಲಿವೆ ದಾಳಿಂಬೆಯಂತಹ ಉತ್ತಮ ವೃಕ್ಷಗಳು, ಜಟಮಾಂಸಿ ಮತ್ತು ಗೋರಂಟೆಗಳು,

[14] ಜಟಮಾಂಸಿ, ಕುಂಕುಮ, ಬಜೆ, ಲವಂಗಚಕ್ಕೆ, ಸಮಸ್ತ ವಿಧವಾದ ಸಾಂಬ್ರಾಣಿ ಗಿಡಗಳು, ರಕ್ತಬೋಳ, ಅಗುರು, ಸಕಲ ಮುಖ್ಯ ಸುಗಂಧದ್ರವ್ಯ ಇವುಗಳೇ ಚಿಗುರುತ್ತವೆ.

[15] ಉದ್ಯಾನಗಳಿಗೆ ಹಾದು ಹೋಗುವ ಬುಗ್ಗೆ, ಉಕ್ಕುತ್ತಿರುವ ಬಾವಿ, ಲೆಬನೋನಿನಿಂದ ಹರಿಯುವ ಕಾಲುವೆ ನಿನ್ನಲ್ಲಿವೆ.

[16] ಉತ್ತರದ ಗಾಳಿಯೇ ಏಳು, ದಕ್ಷಿಣದ ಗಾಳಿಯೇ ಬೀಸು! ನನ್ನ ತೋಟದ ಸುಗಂಧಗಳು ಹರಡುವ ಹಾಗೆ ಅದರ ಮೇಲೆ ಸುಳಿದಾಡು. ಎನ್ನಿನಿಯನು ತನ್ನ ತೋಟದೊಳಗೆ ಸೇರಿ ತನ್ನ ಉತ್ತಮ ಫಲಗಳನ್ನು ತಾನೇ ಭುಜಿಸಲಿ.

ಪರಮಗೀತೆ — Chapters