Skip to content
Opens in a new window
Listen to this chapter • 4:16

[1] ಅಯ್ಯೋ, ನನ್ನ ಗತಿಯನ್ನು ಏನು ಹೇಳಲಿ. ಮಾಗಿದ ಹಣ್ಣನ್ನು ಕೊಯ್ದು, ದ್ರಾಕ್ಷಿಯ ಹಕ್ಕಲನ್ನು ಆಯ್ದ ತೋಟದ ಸ್ಥಿತಿಗೆ ಬಂದಿದ್ದೇನೆ. ತಿನ್ನುವುದಕ್ಕೆ ಗೊಂಚಲೇ ಇಲ್ಲ. ನನಗೆ ಪ್ರಿಯವಾದ ಮೊದಲು ಮಾಗಿದ ಅಂಜೂರದ ಹಣ್ಣು ಸಿಕ್ಕದು.

[2] ಸದ್ಭಕ್ತರು ದೇಶದೊಳಗಿಂದ ನಾಶವಾಗಿದ್ದಾರೆ. ಜನರಲ್ಲಿ ಸತ್ಯವಂತರೇ ಇಲ್ಲ. ಸರ್ವರೂ ರಕ್ತಸುರಿಸಬೇಕೆಂದು ಹೊಂಚುಹಾಕುತ್ತಾರೆ. ಒಬ್ಬರನ್ನೊಬ್ಬರು ಬಲೆಯೊಡ್ಡಿ ಬೇಟೆಯಾಡುತ್ತಾರೆ.

[3] ಎರಡು ಕೈಗಳನ್ನು ಹಾಕಿ ಕೆಟ್ಟ ಕೆಲಸವನ್ನು ಚೆನ್ನಾಗಿ ಮಾಡುತ್ತಾರೆ. ಪ್ರಭುವು ಧನವನ್ನು ಕೇಳುತ್ತಾನೆ. ನ್ಯಾಯಾಧಿಪತಿಯು ಲಂಚಕ್ಕೆ ಕೈಯೊಡ್ಡುತ್ತಾನೆ. ದೊಡ್ಡ ಮನುಷ್ಯನು ತನ್ನ ದುರಾಶೆಯನ್ನು ತಿಳಿಸುತ್ತಾನೆ. ಹೀಗೆ ಕುಯುಕ್ತಿಯನ್ನು ಹೆಣೆಯುತ್ತಾರೆ.

[4] ಅವರಲ್ಲಿ ಉತ್ತಮನೂ ಮುಳ್ಳಿನ ಪೊದೆಗೆ ಸಮಾನ, ಸತ್ಯವಂತನೂ ಕೂಡ ಮುಳ್ಳುಬೇಲಿಗಿಂತ ಕಡೆ. ನಿನ್ನ ಕಾವಲುಗಾರರು ಮುಂತಿಳಿಸಿದ ನಿನ್ನ ದಂಡನೆಯ ದಿನ ಬಂದಿದೆ. ಈಗ ನಿನ್ನ ಜನರಿಗೆ ಭ್ರಾಂತಿ ಹಿಡಿಯುವುದು.

[5] ಮಿತ್ರನನ್ನು ನಂಬಬೇಡ, ಆಪ್ತನಲ್ಲಿ ಭರವಸವಿಡಬೇಡ. ನಿನ್ನ ಎದೆಯ ಮೇಲೆ ಒರಗುವವಳಿಗೆ ನಿನ್ನ ರಹಸ್ಯ ತಿಳಿಸಬೇಡ ಭದ್ರವಾಗಿಟ್ಟುಕೋ.

[6] ಮಗನು ತಂದೆಯನ್ನು ತುಚ್ಛೀಕರಿಸುತ್ತಾನೆ. ಮಗಳು ತಾಯಿಗೆ ಎದುರೇಳುತ್ತಾಳೆ. ಸೊಸೆಯು ಅತ್ತೆಯನ್ನು ವಿರೋಧಿಸುತ್ತಾಳೆ. ಹೀಗೆ ಒಬ್ಬ ಮನುಷ್ಯನಿಗೆ ಅವನ ಮನೆಯವರೇ ವೈರಿಗಳಾಗುವರು.

[7] ನಾನಂತು ಯೆಹೋವನನ್ನು ಎದುರುನೋಡುವೆನು. ನನ್ನ ರಕ್ಷಕನಾದ ದೇವರನ್ನು ನಿರೀಕ್ಷಿಸಿಕೊಂಡಿರುವೆ. ನನ್ನ ದೇವರು ನನ್ನ ಕಡೆಗೆ ಕಿವಿಗೊಡುವನು.

[8] ನನ್ನ ಶತ್ರುವೇ, ನನ್ನ ವಿಷಯದಲ್ಲಿ ಹಿಗ್ಗಬೇಡ. ನಾನು ಬಿದ್ದಿದ್ದರೂ ಏಳುವೆನು, ಕತ್ತಲಲ್ಲಿ ಕುಳಿತ್ತಿದ್ದರೂ ಯೆಹೋವನು ನನಗೆ ಬೆಳಕಾಗಿರುವನು.

[9] ನಾನು ಯೆಹೋವನಿಗೆ ಪಾಪ ಮಾಡಿದ್ದರಿಂದ ಆತನ ಕೋಪವನ್ನು ತಾಳಿಕೊಂಡಿರುವೆನು. ಕಾಲಾನುಕಾಲಕ್ಕೆ ಆತನು ತನ್ನ ವ್ಯಾಜ್ಯವನ್ನು ನಿರ್ವಹಿಸಿ, ನನಗೆ ನ್ಯಾಯವನ್ನು ತೀರಿಸುವನು. ನನ್ನನ್ನು ಬೆಳಕಿಗೆ ತರುವನು. ಆತನ ರಕ್ಷಣಾಧರ್ಮವನ್ನು ನೋಡುವೆನು.

[10] “ನಿನ್ನ ದೇವರಾದ ಯೆಹೋವನು ಎಲ್ಲಿ?” ಎಂದು ನನ್ನನ್ನು ಹೀಯಾಳಿಸಿದ ಶತ್ರುಗಳು ಇದನ್ನು ನೋಡುವಾಗ ನಾಚಿಕೆಯು ಅವರನ್ನು ಕವಿದುಕೊಳ್ಳುವುದು. ನಾನು ಅವರನ್ನು ಕಣ್ಣಾರೆ ನೋಡುವೆನು. ಈಗಲೇ ಬೀದಿಗಳ ಕೆಸರಿನಂತೆ ತುಳಿತಕ್ಕೀಡಾಗುವರು.

[11] ಆಹಾ, ನಿನ್ನ ಪೌಳಿಗೋಡೆಗಳನ್ನು ಕಟ್ಟುವ ದಿನವು ಬರುವುದು. ಆ ದಿನದಲ್ಲಿ ನಿನ್ನ ಮೇರೆಯು ದೂರದ ತನಕ ವಿಸ್ತರಿಸಿಕೊಂಡಿರುವುದು.

[12] ಅದೇ ದಿನದಲ್ಲಿ ನಿನ್ನ ಜನರು ಅಶ್ಶೂರದಿಂದಲೂ, ಐಗುಪ್ತದ ಪಟ್ಟಣಗಳಿಂದಲೂ ನಿನ್ನ ಬಳಿಗೆ ಕೂಡಿ ಬರುವರು. ಸಮುದ್ರದಿಂದ ಸಮುದ್ರದವರೆಗೆ, ಪರ್ವತದಿಂದ ಪರ್ವತದವರೆಗೆ ಅಂತು ಐಗುಪ್ತದಿಂದ ಯೂಫ್ರೆಟಿಸ್ ನದಿಯವರೆಗೂ ಚದುರಿರುವ ನಿನ್ನ ಸಕಲ ಜನರು ನಿನ್ನನ್ನು ಸೇರುವರು.

[13] ಆದರೆ ಅಷ್ಟರೊಳಗೆ ಈ ದೇಶವು ತನ್ನ ನಿವಾಸಿಗಳ ನಿಮಿತ್ತ ಅವರ ದುಷ್ಕೃತ್ಯಗಳ ಫಲವಾಗಿ ಹಾಳುಬಿದ್ದಿರುವುದು.

[14] ಫಲವತ್ತಾದ ಭೂಮಿಯ ಮಧ್ಯದಲ್ಲಿನ ಕಾಡಿನೊಳಗೆ ಪ್ರತ್ಯೇಕವಾಗಿ ತಂಗುವ ನಿನ್ನ ಜನರನ್ನು, ನಿನ್ನ ಸ್ವತ್ತಾದ ಹಿಂಡನ್ನು ನಿನ್ನ ದಿವ್ಯಹಸ್ತದಿಂದ ಮೇಯಿಸು. ಪೂರ್ವಕಾಲದಂತೆ ಬಾಷಾನಿನಲ್ಲಿಯೂ, ಗಿಲ್ಯಾದಿನಲ್ಲಿಯೂ ಮೇಯಲಿ.

[15] ನೀನು ಐಗುಪ್ತದೇಶದೊಳಗಿಂದ ಪಾರಾಗಿ ಬಂದ ಕಾಲದಲ್ಲಿ ನಾನು ತೋರಿಸಿದಂತೆ ಅದ್ಭುತಗಳನ್ನು ತೋರಿಸುವೆನು.

[16] ಜನಾಂಗಗಳವರು ನೋಡಿ ತಮ್ಮ ಮಹಾ ಶಕ್ತಿಗೂ ನಾಚಿಕೆಪಡುವರು. ಬಾಯಿಯ ಮೇಲೆ ಕೈಯಿಟ್ಟುಕೊಳ್ಳುವರು. ಅವರ ಕಿವಿ ಕೇಳದಿರುವುದು.

[17] ಹಾವಿನಂತೆ ಧೂಳನ್ನು ನೆಕ್ಕುವರು. ನೆಲದಲ್ಲಿ ಹರಿದಾಡುವ ಕ್ರಿಮಿಕೀಟಗಳ ಹಾಗೆ ತಮ್ಮ ಗುಪ್ತಸ್ಥಳಗಳಿಂದ ನಡುಗುತ್ತಾ ಈಚೆಗೆ ಹೊರಡುವರು. ಯೆಹೋವನೆಂಬ ನಮ್ಮ ದೇವರಾದ ನಿನ್ನನ್ನು ಅಂಜುತ್ತಾ, ಸೇವಿಸಿ ನಿನಗೆ ಭಯಪಡುವರು.

[18] ನಿನಗೆ ಯಾವ ದೇವರು ಸಮಾನ? ನೀನು ನಿನ್ನ ಸ್ವತ್ತಿನವರಲ್ಲಿ ಉಳಿದಿರುವ ಅಪರಾಧವನ್ನು ಕ್ಷಮಿಸುವವನೂ, ಅವರ ದ್ರೋಹವನ್ನು ಲಕ್ಷಿಸದವನೂ ಆಗಿದ್ದೀ. ಹೌದು ನಮ್ಮ ದೇವರು ನಿತ್ಯವೂ ಕೋಪಿಸುವವನಲ್ಲ. ಕರುಣೆಯೇ ಆತನಿಗೆ ಇಷ್ಟ.

[19] ಆತನು ಮತ್ತೊಮ್ಮೆ ನಮ್ಮನ್ನು ಕನಿಕರಿಸುವನು. ನಮ್ಮ ಅಪರಾಧಗಳನ್ನು ಅಣಗಿಸುವವನು. ದೇವರೇ, ನಿನ್ನ ಜನರ ಪಾಪಗಳನ್ನೆಲ್ಲಾ ಸಮುದ್ರದ ತಳಕ್ಕೆ ಬೀಸಾಡಿಬಿಡುವಿ.

[20] ನೀನು ಪುರಾತನ ಕಾಲದಿಂದಲೂ ನಮ್ಮ ಪೂರ್ವಿಕರಿಗೆ ಪ್ರಮಾಣಮಾಡಿರುವಂತೆ ಯಾಕೋಬನ ವಂಶದವರಿಗೆ ಸತ್ಯಪರನಾಗಿಯೂ, ಅಬ್ರಹಾಮನ ವಂಶದವರಿಗೆ ಪ್ರೀತಿಪರನಾಗಿಯೂ ನಡೆಯುವಿ.

ಮೀಕನು — Chapters