Skip to content
Opens in a new window
Listen to this chapter • 3:08

[1] ಚಿಯೋನ್ ನಗರವೇ ನಿನ್ನ ಸೇನಾವ್ಯೂಹಗಳನ್ನು ಈಗ ಒಟ್ಟುಗೂಡಿಸು. ಆಹಾ ಶತ್ರುಗಳು ನಮಗೆ ಮುತ್ತಿಗೆ ಹಾಕಿದ್ದಾರೆ. ಇಸ್ರಾಯೇಲಿನ ಅಧಿಪತಿಯ ಕೆನ್ನೆಗೆ ಕೋಲಿನಿಂದ ಹೊಡೆಯುವರು.

[2] ಎಫ್ರಾತದ ಬೇತ್ಲೆಹೇಮೇ, ನೀನು ಯೆಹೂದದ ಗ್ರಾಮಗಳಲ್ಲಿ ಚಿಕ್ಕದ್ದಾಗಿದ್ದರೂ ಇಸ್ರಾಯೇಲನ್ನು ಆಳತಕ್ಕವನು ನಿನ್ನೊಳಗಿಂದ ನನಗಾಗಿ ಹೊರಡುವನು. ಆತನ ಕುಲದ ಮೂಲವು ಪುರಾತನವೂ ಮತ್ತು ಅನಾದಿಯೂ ಆದದ್ದು.

[3] ಹೀಗಿರಲು ಪ್ರಸವವೇದನೆ ಪಡತಕ್ಕವಳು ಮಗನನ್ನು ಹೆರುವವರೆಗೂ ನನ್ನ ಜನರು ಶತ್ರುವಶವಾಗಿರುವಂತೆ ಮಾಡುವೆನು. ಅನಂತರ ಆ ಮಗನ ಸಹೋದರರಲ್ಲಿ ಉಳಿದವರು ಇಸ್ರಾಯೇಲರೊಂದಿಗೆ ಹಿಂದಿರುಗುವರು

[4] ಆತನು ಯೆಹೋವನ ಬಲವನ್ನೂ, ತನ್ನ ದೇವರಾದ ಯೆಹೋವನ ನಾಮದ ಮಹಿಮೆಯನ್ನೂ ಹೊಂದಿದವನಾಗಿ ನಿಂತು ತನ್ನ ಹಿಂಡನ್ನು ಮೇಯಿಸುವನು. ಆ ಹಿಂಡು ನೆಮ್ಮದಿಯಾಗಿ ನೆಲೆಗೊಂಡಿರುವುದು. ಆತನು ಭೂಮಿಯ ಕಟ್ಟಕಡೆಯವರೆಗೂ ಪ್ರಬಲನಾಗಿರುವನು.

[5] ಆತನೇ ನಮಗೆ ಸಮಾಧಾನಪ್ರದನು. ಅಶ್ಶೂರ್ಯರು ನಮ್ಮ ದೇಶದಲ್ಲಿ ನುಗ್ಗಿ, ನಮ್ಮ ಅರಮನೆಗಳನ್ನು ತುಳಿದುಹಾಕುವಾಗ, ನಾವು ಅವರಿಗೆ ವಿರುದ್ಧವಾಗಿ ಏಳು ಪಾಲಕರನ್ನು ಹೌದು ಎಂಟು ಪುರುಷಶ್ರೇಷ್ಠರನ್ನು ನೇಮಿಸುವೆವು.

[6] ಅವರ ಶಸ್ತ್ರಾಸ್ತ್ರಗಳು ಅಶ್ಶೂರ ದೇಶವನ್ನು ಧ್ವಂಸಮಾಡುವುದು. ನಿಮ್ರೋದ್ ಸೀಮೆಯ ಪ್ರವೇಶಸ್ಥಾನಗಳು ಅವರ ಖಡ್ಗಕ್ಕೆ ತುತ್ತಾಗುವವು. ಅಶ್ಶೂರ್ಯರು ನಮ್ಮ ದೇಶದಲ್ಲಿ ನುಗ್ಗಿ, ನಮ್ಮ ಪ್ರಾಂತ್ಯವನ್ನು ತುಳಿದುಹಾಕುವಾಗ ಆ ಸಮಾಧಾನಪ್ರದನು ನಮ್ಮನ್ನು ಅವರ ಕೈಯೊಳಗಿಂದ ಉದ್ಧರಿಸುವನು.

[7] ಯೆಹೋವನ ವರವಾದ ಇಬ್ಬನಿಯೂ ಮತ್ತು ಹುಲ್ಲನ್ನು ಬೆಳೆಯಿಸುವ ಹದಮಳೆಗಳೂ ಮಾನವರ ಪ್ರಯತ್ನವಿಲ್ಲದೆ ಹೇಗೆ ಸಮೃದ್ಧಿಯಾಗಿ ಬೆಳೆಯುವವು, ಮಾನವರ ನೆರವನ್ನು ನಿರೀಕ್ಷಿಸದೆ ಹೇಗೆ ಹಿತಕರವಾಗಿರುವವೋ, ಹಾಗೆಯೇ ಯಾಕೋಬಿನ ಜನಶೇಷವು ಬಹು ಜನಾಂಗಗಳ ಮಧ್ಯದಲ್ಲಿ ಹಿತಕರವಾಗಿರುವುದು.

[8] ಇದಲ್ಲದೆ ಸಿಂಹವು ಕಾಡುಮೃಗಗಳನ್ನು, ಪ್ರಾಯದ ಸಿಂಹವು ಕುರಿಹಿಂಡುಗಳನ್ನು ಹಾದುಹೋಗುವಾಗೆಲ್ಲಾ ಅವುಗಳನ್ನು ಯಾರೂ ರಕ್ಷಿಸಲಾರದಂತೆ ತುಳಿದು, ಸೀಳಿಹಾಕುವ ಹಾಗೆ ಯಾಕೋಬಿನ ಜನಶೇಷವು ದೇಶದೇಶಗಳ, ಬಹು ಜನಾಂಗಗಳ ಮಧ್ಯದಲ್ಲಿ ನಾಶಕರವಾಗಿರುವರು.

[9] ಯಾಕೋಬೇ, ನಿನ್ನ ಕೈ ನಿನ್ನ ವಿರೋಧಿಗಳ ಮೇಲೆ ಎತ್ತಲ್ಪಡಲಿ. ನಿನ್ನ ವೈರಿಗಳೆಲ್ಲಾ ನಿರ್ಮೂಲವಾಗಲಿ.

[10] ಯೆಹೋವನು ಇಂತೆನ್ನುತ್ತಾನೆ, “ಆ ದಿನಗಳಲ್ಲಿ ನಿನ್ನ ಕುದುರೆಗಳನ್ನು ನಿನ್ನೊಳಗಿಂದ ಕಡಿದುಬಿಡುವೆನು. ನಿನ್ನ ರಥಗಳನ್ನು ನಾಶಗೊಳಿಸುವೆನು.

[11] ನಿನ್ನ ದೇಶದ ಪಟ್ಟಣಗಳನ್ನು ಹಾಳುಮಾಡಿ, ನಿನ್ನ ಕೋಟೆಗಳನ್ನೆಲ್ಲಾ ಕೆಡವಿಹಾಕುವೆನು.

[12] ನಿನ್ನ ಕೈಯಲ್ಲಿನ ಮಂತ್ರತಂತ್ರಗಳನ್ನು ನಿಲ್ಲಿಸಿಬಿಡುವೆನು. ನಿನ್ನಲ್ಲಿ ಕಣಿಯವರು ಇರುವುದಿಲ್ಲ.

[13] ನಿನ್ನ ಮೂರ್ತಿಗಳನ್ನು, ಕಲ್ಲುಕಂಬಗಳನ್ನು ನಿನ್ನಲ್ಲಿ ನಿಲ್ಲದಂತೆ ಒಡೆದುಹಾಕುವೆನು. ನಿನ್ನ ಕೈರೂಪಿಸಿದ್ದನ್ನು ಇನ್ನು ಪೂಜಿಸದಂತೆ ಮಾಡುವೆ.

[14] ನಿನ್ನ ಅಶೇರವೆಂಬ ವಿಗ್ರಹಸ್ತಂಭಗಳನ್ನು ನಿನ್ನ ಮಧ್ಯದೊಳಗಿಂದ ಕಿತ್ತುಬಿಟ್ಟು, ನಿನ್ನ ಪಟ್ಟಣಗಳನ್ನು ನಿರ್ಮೂಲಮಾಡುವೆನು.

[15] ಅವಿಧೇಯ ಜನಾಂಗಗಳಿಗೆ ಉಗ್ರಕೋಪದಿಂದ ಮುಯ್ಯಿ ತೀರಿಸುವೆನು.”

ಮೀಕನು — Chapters