Skip to content
Opens in a new window
Listen to this chapter • 3:19

[1] ಅಂತ್ಯಕಾಲದಲ್ಲಿ ಯೆಹೋವನ ಮಂದಿರದ ಬೆಟ್ಟವು ಎಲ್ಲಾ ಗುಡ್ಡ ಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವುದು. ಆಗ ಜನಾಂಗಗಳು ಅದರ ಕಡೆಗೆ ಪ್ರವಾಹಗಳಂತೆ ಬರುವರು.

[2] ಹೊರಟುಬಂದ ಬಹು ದೇಶಗಳವರು, “ಬನ್ನಿರಿ, ಯೆಹೋವನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ ಹೋಗೋಣ, ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು” ಎಂದು ಹೇಳುವರು. ಏಕೆಂದರೆ ಚೀಯೋನಿನಿಂದ ಧರ್ಮೋಪದೇಶವೂ, ಯೆರೂಸಲೇಮಿನಿಂದ ಯೆಹೋವನ ವಾಕ್ಯವೂ ಹೊರಡುವವು.

[3] ಆತನು ಬಹು ರಾಷ್ಟ್ರದವರ ವ್ಯಾಜ್ಯಗಳನ್ನು ವಿಚಾರಿಸುವನು, ಪ್ರಬಲ ಜನಾಂಗಗಳಿಗೆ ನ್ಯಾಯತೀರಿಸುವನು. ಅವರೋ ತಮ್ಮ ಕತ್ತಿಗಳನ್ನು ಕುಲುಮೆಗೆ ಹಾಕಿ ಗುಳಗಳನ್ನಾಗಿಯೂ, ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು. ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು. ಇನ್ನು ಯುದ್ಧಾಭ್ಯಾಸವು ನಡೆಯುವುದೇ ಇಲ್ಲ.

[4] ಒಬ್ಬೊಬ್ಬನು ತನ್ನ ದ್ರಾಕ್ಷಾಲತೆ ಅಂಜೂರಗಿಡ ಇವುಗಳ ನೆರಳಿನಲ್ಲಿ ಕುಳಿತುಕೊಳ್ಳುವನು. ಅವರನ್ನು ಯಾರೂ ಹೆದರಿಸರು. ಸೇನಾಧೀಶ್ವರನಾದ ಯೆಹೋವನೇ ಇದನ್ನು ನುಡಿದಿದ್ದಾನೆ.

[5] ಅನ್ಯಜನಾಂಗಗಳು ತಮ್ಮ ತಮ್ಮ ದೇವರುಗಳ ಹೆಸರಿನಲ್ಲಿ ನಡೆಯುತ್ತವೆ. ನಾವಾದರೋ ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ಯುಗಯುಗಾಂತದವರೆಗೆ ನಡೆಯುವೆವು.

[6] ಯೆಹೋವನು ಇಂತೆನ್ನುತ್ತಾನೆ, “ಆ ದಿನದಲ್ಲಿ ದೈಹಿಕವಾಗಿ ಊನವಾದ ಜನಾಂಗವನ್ನು ಒಟ್ಟುಗೂಡಿಸುವೆನು, ನಾನು ಬಾಧಿಸಿ ತಳ್ಳಿದ ಪ್ರಜೆಯನ್ನು ಸೇರಿಸುವೆನು.

[7] ಆ ಊನವಾದ ಜನವನ್ನು ಉಳಿಸಿ ಕಾಪಾಡುವೆನು, ದೂರತಳ್ಳಲ್ಪಟ್ಟ ಪ್ರಜೆಯನ್ನು ಪ್ರಬಲ ಜನಾಂಗವನ್ನಾಗಿ ಮಾಡುವೆನು, ಯೆಹೋವನು ಚೀಯೋನ್ ಪರ್ವತದಲ್ಲಿ ಈ ದಿನದಿಂದ ಎಂದೆಂದಿಗೂ ಅವರ ರಾಜನಾಗಿರುವನು.

[8] ಕುರಿಮಂದೆಗೆ ರಕ್ಷಣೆ ಕೊಡುವ ಗೋಪುರವೇ, ಚೀಯೋನ್ ಯುವತಿಯ ಸುಭದ್ರ ಕೋಟೆಯೇ, ನಿನ್ನ ಹಿಂದಿನ ಆಡಳಿತವು ನಿನಗೆ ದೊರೆಯುವುದು. ಯೆರೂಸಲೇಮ್ ಪುರಿಯ ರಾಜ್ಯಾಧಿಕಾರವು ನಿನಗೆ ಲಭಿಸುವುದು.

[9] ನೀನೀಗ ರೋದಿಸುತ್ತಿರುವುದೇಕೆ? ಪ್ರಸವವೇದನೆಯಷ್ಟು ಕಠಿಣವಾದ ಯಾತನೆಯು ನಿನ್ನನ್ನು ಬಾಧಿಸುತ್ತಿರುವುದಕ್ಕೆ ಕಾರಣವೇನು? ನಿನ್ನಲ್ಲಿ ರಾಜನಿಲ್ಲವೋ? ನಿನ್ನ ಆಲೋಚನಾಕರ್ತನು ನಾಶವಾದನೋ?

[10] ಚೀಯೋನ್ ಯುವತಿಯೇ, ಹೆರುವವಳಂತೆ ವೇದನೆಗೆ ಒಳಗಾಗು, ಯಾತನೆಪಡು. ನೀನೀಗ ಪಟ್ಟಣದಿಂದ ಹೊರಟು ಕಾಡಿನಲ್ಲಿ ವಾಸಿಸುತ್ತಾ ಬಾಬೆಲಿಗೆ ಸೇರುವಿ. ಅಲ್ಲೇ ನಿನಗೆ ಉದ್ಧಾರವಾಗುವುದು. ಅಲ್ಲೇ ಯೆಹೋವನು ಶತ್ರುಗಳ ಕೈಯಿಂದ ನಿನ್ನನ್ನು ಬಿಡಿಸುವನು.

[11] ‘ಯೆರೂಸಲೇಮ್ ಹೊಲಸಾಗಿ ಹೋಗಲಿ. ಚೀಯೋನಿನ ನಾಶನವನ್ನು ಕಣ್ಣು ತುಂಬಾ ನೋಡೋಣ’” ಎಂದು ಯೋಚಿಸುವ ಬಹು ಜನಾಂಗಗಳು ನಿನಗೆ ವಿರುದ್ಧವಾಗಿ ಕೂಡಿ ಬಂದಿವೆ.

[12] ಆಹಾ, ಅವು ಯೆಹೋವನ ಆಲೋಚನೆಗಳನ್ನು ತಿಳಿದಿಲ್ಲ, ಆತನ ಸಂಕಲ್ಪವನ್ನು ಗ್ರಹಿಸಲಿಲ್ಲ, ಕಣಕ್ಕೆ ಹಾಕಿದ ಸಿವುಡುಗಳ ಹಾಗೆ ಅವುಗಳನ್ನು ಕೂಡಿಸಿದ್ದಾನಲ್ಲಾ.

[13] ಚೀಯೋನ್ ನಗರಿಯೇ ಎದ್ದು ಒಕ್ಕಣೆ ಮಾಡು, ನಾನು ನಿನ್ನ ಕೊಂಬನ್ನು ಕಬ್ಬಿಣದ ಕೊಂಬನ್ನಾಗಿಯೂ, ನಿನ್ನ ಗೊರಸನ್ನು ತಾಮ್ರದ ಗೊರಸನ್ನಾಗಿಯೂ ಮಾಡುವೆನು. ನೀನು ಬಹು ಜನಾಂಗಗಳನ್ನು ಚೂರುಚೂರಾಗಿ ತುಳಿದುಬಿಡುವಿ, ಆ ದೇಶಗಳು ಕೊಳ್ಳೆ ಹೊಡೆದು ಸಂಪಾದಿಸಿದ್ದ ಐಶ್ವರ್ಯವನ್ನು ನೀನು ಯೆಹೋವನಿಗಾಗಿ ಮೀಸಲಾಗಿಡುವೆ. ಅವರ ಆಸ್ತಿಯನ್ನು ಲೋಕದ ಕರ್ತನ ಮುಂದೆ ಸಮರ್ಪಿಸುವಿ.

ಮೀಕನು — Chapters