[1] ಯೆಹೂದದ ಅರಸನಾದ ಯೋಥಾಮ, ಆಹಾಜ ಮತ್ತು ಹಿಜ್ಕೀಯ ಇವರ ಕಾಲದಲ್ಲಿ ಸಮಾರ್ಯದ ಮತ್ತು ಯೆರೂಸಲೇಮಿನ ವಿಷಯವಾಗಿ ಮೋರೆಷೆತ್ ಊರಿನವನಾದ ಮೀಕನಿಗೆ ಕೇಳಿ ಬಂದ ಯೆಹೋವನ ವಾಕ್ಯ.
[2] ಜನಾಂಗಗಳೇ, ನೀವೆಲ್ಲರೂ ಕೇಳಿರಿ. ಭೂಮಂಡಲವೇ, ಭೂಮಿಯಲ್ಲಿರುವ ಸಮಸ್ತರೇ, ಕಿವಿಗೊಡಿರಿ, ಕರ್ತನಾದ ಯೆಹೋವನು ತನ್ನ ಪವಿತ್ರಾಲಯದೊಳಗಿಂದ ನಿಮಗೆ ವಿರುದ್ಧವಾಗಿ ಸಾಕ್ಷಿಕೊಡುತ್ತಾನೆ.
[3] ಇಗೋ ಯೆಹೋವನು ತನ್ನ ಸ್ಥಾನದಿಂದ ಹೊರಟು ಇಳಿದುಬರುತ್ತಿದ್ದಾನೆ. ಭೂಮಿಯ ಉನ್ನತಪ್ರದೇಶಗಳಲ್ಲಿ ನಡೆಯುತ್ತಾನೆ.
[4] ಬೆಂಕಿಗೆ ಎದುರು ಕರಗುವ ಮೇಣದಂತೆಯೂ ಮತ್ತು ಇಳಿಜಾರು ಪ್ರದೇಶದಲ್ಲಿ ರಭಸವಾಗಿ ಹರಿಯುವ ನೀರಿನಂತೆ ಕಣಿವೆಗಳು, ಪರ್ವತಗಳು ಆತನ ಮುಂದೆ ಸೀಳಿ ಕರಗಿ ಕೊಚ್ಚಿಹೊಗುತ್ತಿವೆ.
[5] ಇದಕ್ಕೆಲ್ಲಾ ಕಾರಣ ಯಾಕೋಬಿನ ದ್ರೋಹ ಮತ್ತು ಇಸ್ರಾಯೇಲ್ ವಂಶದ ಪಾಪಗಳೇ. ಯಾಕೋಬಿನ ದ್ರೋಹವೇನು? ಸಮಾರ್ಯವಲ್ಲವೇ! ಯೆಹೂದದ ಕೆಟ್ಟ ಪೂಜಾಸ್ಥಾನಗಳು ಯಾವುವು? ಯೆರೂಸಲೇಮಲ್ಲವೇ!
[6] ಆದಕಾರಣ ನಾನು ಸಮಾರ್ಯವನ್ನು ಹೊಲದಲ್ಲಿನ ಹಾಳು ದಿಬ್ಬವನ್ನಾಗಿಯೂ, ದ್ರಾಕ್ಷಿಯ ತೋಟದ ಮಡಿಗಳನ್ನಾಗಿಯೂ ಮಾಡುವೆನು. ಅದರ ಕಲ್ಲುಗಳನ್ನು ತಗ್ಗಿಗೆ ಸುರಿದುಬಿಡುವೆನು. ಅದರ ಅಸ್ತಿವಾರಗಳನ್ನು ಬಯಲನ್ನಾಗಿ ಮಾಡುವೆನು.
[7] ಅದರ ಎರಕದ ಬೊಂಬೆಗಳನ್ನೆಲ್ಲಾ ಪುಡಿಪುಡಿ ಮಾಡುವೆನು. ಅದರ ಸಮಸ್ತ ಸಂಪಾದನೆಯು ಸುಟ್ಟುಹೋಗುವುದು. ಅದರ ಸಕಲ ವಿಗ್ರಹಗಳನ್ನು ಹಾಳುಮಾಡುವೆನು. ಅದು ವೇಶ್ಯಾವಾಟಿಕೆಯಿಂದ ಸಂಪಾದನೆಯಾಗಿ ಕೂಡಿಸಿಟ್ಟುಕೊಂಡವುಗಳು ಹಾಗೂ ವೇಶ್ಯಾವಾಟಿಕೆಯ ಸಂಪಾದನೆಯಾಗಿಯೇ ಪರರ ಪಾಲಾಗುವವು.
[8] ಇದಕ್ಕಾಗಿ ನಾನು ಗೋಳಾಡಿ ರೋದಿಸುವೆನು, ಬರಿಗಾಲಾಗಿಯೂ, ಬೆತ್ತಲೆಯಾಗಿಯೂ ನಡೆದಾಡುವೆನು. ನರಿಗಳಂತೆ ಅರಚಿಕೊಳ್ಳುವೆನು. ಉಷ್ಟ್ರಪಕ್ಷಿಗಳ ಹಾಗೆ ಕಿರಿಚಿಕೊಳ್ಳುವೆನು.
[9] ಸಮಾರ್ಯಕ್ಕೆ ಬಿದ್ದ ಪೆಟ್ಟು ಗುಣಪಡಿಸಲಾಗದು. ಅದು ಯೆಹೂದಕ್ಕೂ ತಾಕಿದೆ. ನನ್ನ ಜನರ ಆಲೋಚನಾಸ್ಥಾನವಾದ ಯೆರೂಸಲೇಮಿಗೆ ಮುಟ್ಟಿದೆ.
[10] ಇದನ್ನು ಗತ್ ಊರಿನಲ್ಲಿ ತಿಳಿಸಬೇಡಿರಿ, ಅಳಲೇಬೇಡಿರಿ, ಬೇತ್ಲೆಯಪ್ರದಲ್ಲಿ ಧೂಳಿನೊಳಗೆ ಹೊರಳಾಡಿರಿ.
[11] ಶಾಫೀರಿನವರೇ, ಬೆತ್ತಲೆಯಾಗಿ ಅವಮಾನಪಟ್ಟು ತೊಲಗಿರಿ. ಚಾನಾನಿನವರು ಹೊರಡರು. ಬೇತೆಚೇಲಿನ ಗೋಳಾಟವು ಅದರ ಬೆಂಬಲವನ್ನು ನಿಮಗೆ ತಪ್ಪಿಸುವುದು.
[12] ಕೇಡು ಯೆಹೋವನಿಂದ ಹೊರಟು ಯೆರೂಸಲೇಮಿನ ಪುರದ್ವಾರಕ್ಕೆ ತಗಲಿದ ಕಾರಣ ಮಾರೋತಿನವರು ತಮಗೆ ಮೇಲುಂಟಾಗುವುದಿಲ್ಲವೋ ಎಂದು ವೇದನೆಪಡುತ್ತಾರೆ.
[13] ಲಾಕೀಷಿನವರೇ ಅಶ್ವಗಳನ್ನು ರಥಕ್ಕೆ ಕಟ್ಟಿರಿ. ನಿಮ್ಮ ಊರೇ ಚೀಯೋನ್ ನಗರಿಯ ಪಾಪಕ್ಕೆ ಮೂಲ, ಹೌದು ಇಸ್ರಾಯೇಲಿನ ದ್ರೋಹಗಳು ನಿಮ್ಮಲ್ಲಿಯೇ ಹುಟ್ಟಿಬಂದವು.
[14] ಆದಕಾರಣ ನೀವು ಮೋರೆಷತ್ ಗತ್ ಊರಿಗೆ ಬಳುವಳಿ ಕೊಡಬೇಕಾಗುವುದು. ಅಕ್ಜೀಬಿನ ಮನೆಗಳಿಂದ ಇಸ್ರಾಯೇಲಿನ ಅರಸರಿಗೆ ಮೋಸವಾಗುವುದು.
[15] ಮಾರೇಷದವರೇ, ನಿಮ್ಮನ್ನು ವಶಮಾಡಿಕೊಳ್ಳತಕ್ಕವನನ್ನು ಇನ್ನು ನಿಮ್ಮ ಬಳಿಗೆ ಬರಮಾಡುವೆನು. ಇಸ್ರಾಯೇಲಿನ ನಾಯಕರು ಅದುಲ್ಲಾಮ್ ಪಟ್ಟಣಕ್ಕೆ ಸೇರುವುದು.
[16] ಯೆಹೂದವೇ, ನಿನ್ನಿಂದ ಸೆರೆಹೋಗಿರುವ ನಿನ್ನ ಮುದ್ದು ಮಕ್ಕಳಿಗಾಗಿ ಕ್ಷೌರಮಾಡಿಸಿಕೋ ಮತ್ತು ತಲೆಬೋಳಿಸಿಕೋ. ನಿನ್ನ ಬೋಳುತನವನ್ನು ರಣಹದ್ದಿನ ಹಾಗೆ ವಿಸ್ತರಿಸಿಕೋ.