[1] ನಾನು ಹೀಗೆ ಸಾರಿದೆನು; “ಯಾಕೋಬಿನ ಮುಖಂಡರೇ, ಇಸ್ರಾಯೇಲ್ ವಂಶದ ಅಧಿಪತಿಗಳೇ ಕಿವಿಗೊಟ್ಟು ಕೇಳಿರಿ. ನ್ಯಾಯ ನೀತಿ ಪಾಲನೆ ನಿಮ್ಮ ಕರ್ತವ್ಯವಲ್ಲವೇ? ನಿಮ್ಮ ಧರ್ಮವಲ್ಲವೇ?
[2] ಆಹಾ! ಇವರು ಒಳ್ಳೆಯದನ್ನು ದ್ವೇಷಿಸಿ ಕೆಟ್ಟದ್ದನ್ನು ಪ್ರೀತಿಸುತ್ತಾರೆ. ಜನರ ಮೈಮೇಲಿಂದ ಚರ್ಮವನ್ನು ಸುಲಿಯುತ್ತಾರೆ. ಅವರ ಎಲುಬುಗಳಿಂದ ಮಾಂಸವನ್ನು ಕಿತ್ತು ಬಿಡುತ್ತಾರೆ.
[3] ನನ್ನ ಪ್ರಜೆಯ ಮಾಂಸವನ್ನು ತಿನ್ನುತ್ತಾರೆ. ಅವರ ಚರ್ಮವನ್ನು ಸುಲಿದುಹಾಕಿ ಅವರ ಎಲುಬುಗಳನ್ನು ಮುರಿಯುತ್ತಾರೆ. ಹಂಡೆಯಲ್ಲಿನ ತುಂಡುಗಳಂತೆ, ಕೊಪ್ಪರಿಗೆಯಲ್ಲಿನ ಮಾಂಸದ ಹಾಗೆ ಅವರನ್ನು ಚೂರುಚೂರಾಗಿ ಕತ್ತರಿಸುತ್ತಾರೆ.
[4] ಇಷ್ಟೆಲ್ಲಾ ನಡೆಸಿ ಇವರು ಯೆಹೋವನಿಗೆ ಮೊರೆಯಿಡಲು ಆತನು ಇವರಿಗೆ ಉತ್ತರಕೊಡನು. ಇವರ ನಡತೆಯ ದುಷ್ಕೃತ್ಯಗಳಿಗೆ ತಕ್ಕ ಹಾಗೆ ಆ ಕಾಲದಲ್ಲಿ ಇವರಿಗೆ ವಿಮುಖನಾಗುವೆನು.”
[5] ನನ್ನ ಜನರನ್ನು ಸನ್ಮಾರ್ಗದಿಂದ ತಪ್ಪಿಸುವವರೂ, ತಿನ್ನುವುದಕ್ಕೆ ಕೊಡುವಂಥವರಿಗೆ, “ಸಮಾಧಾನವಿರುವುದು” ಎಂದು ಪ್ರಕಟಿಸುವರು ಮತ್ತು ತಮ್ಮ ಬಾಯಿಗೆ ರುಚಿಯಾದ ತಿಂಡಿಯನ್ನು ಕೊಡದವನ ಮೇಲೆ ಯುದ್ಧವನ್ನು ನಿರ್ಧರಿಸುವ ಪ್ರವಾದಿಗಳ ವಿಷಯವಾಗಿ ಯೆಹೋವನು ಇಂತೆನ್ನುತ್ತಾನೆ,
[6] “ನೀವು ಇಂಥವರಾದ ಕಾರಣ ನಿಮಗೆ ರಾತ್ರಿಯಾಗುವುದು, ದಿವ್ಯದರ್ಶನವಾಗದು, ನಿಮಗೆ ಕತ್ತಲು ಕವಿಯುವುದು ಮತ್ತು ಕಣಿಹೇಳಲಾಗದು. ಸೂರ್ಯನು ಪ್ರವಾದಿಗಳಿಗೆ ಮುಣುಗುವನು, ಹಗಲು ಅವರಿಗೆ ಕಾರ್ಗತ್ತಲಾಗುವುದು.
[7] ದಿವ್ಯದರ್ಶಿಗಳು ಆಶಾಭಂಗಪಡುವರು, ಕಣಿಯವರು ನಾಚಿಕೊಳ್ಳುವರು. ಎಲ್ಲರೂ ಬಟ್ಟೆಯಿಂದ ಬಾಯಿಮುಚ್ಚಿಕೊಳ್ಳುವರು. ಅವರಿಗೆ ದೈವೋತ್ತರವೇ ದೊರೆಯುವುದಿಲ್ಲ” ಎಂದು ನುಡಿಯುತ್ತಾನೆ.
[8] ನಾನಾದರೋ ಯೆಹೋವನ ಆತ್ಮ ಪ್ರೇರಣೆಯಿಂದ, ಬಲ ಪರಾಕ್ರಮ ಮತ್ತು ನ್ಯಾಯಭರಿತನಾಗಿ ಯಾಕೋಬಿಗೆ ಅದರ ದ್ರೋಹವನ್ನು, ಇಸ್ರಾಯೇಲಿಗೆ ಅದರ ಪಾಪವನ್ನು ಸಾರಲು ಶಕ್ತನಾಗಿದ್ದೇನೆ.
[9] ನ್ಯಾಯಕ್ಕೆ ಅಸಹ್ಯಪಟ್ಟು, ನೆಟ್ಟಗಿರುವುದನ್ನು ಸೊಟ್ಟಗೆ ಮಾಡುವ ಯಾಕೋಬ ವಂಶದ ಮುಖಂಡರೇ, ಇಸ್ರಾಯೇಲ್ ಮನೆತನದ ಅಧಿಪತಿಗಳೇ,
[10] ಚೀಯೋನನ್ನು ನರಹತ್ಯದಿಂದಲೂ, ಯೆರೂಸಲೇಮನ್ನು ಅನ್ಯಾಯದಿಂದಲೂ ಕಟ್ಟುವವರೇ, ಇದನ್ನು ಕಿವಿಗೊಟ್ಟು ಕೇಳಿರಿ, ಕೇಳಿರಿ.
[11] ಮುಖಂಡರು ಲಂಚಕ್ಕೆ ನ್ಯಾಯತೀರಿಸುತ್ತಾರೆ. ಯಾಜಕರು ಸಂಬಳಕ್ಕಾಗಿ ಉಪದೇಶಿಸುತ್ತಾರೆ. ಪ್ರವಾದಿಗಳು ಹಣಕ್ಕೋಸ್ಕರ ಕಣಿಹೇಳುತ್ತಾರೆ. ಆದರೂ ಯೆಹೋವನ ಮೇಲೆ ಭಾರ ಹಾಕಿ, “ಯೆಹೋವನು ನಮ್ಮ ಮಧ್ಯದಲ್ಲಿ ಇದ್ದಾನಲ್ಲಾ, ನಮಗೆ ಯಾವ ಕೇಡೂ ಸಂಭವಿಸದು” ಅಂದುಕೊಳ್ಳುತ್ತಾರೆ.
[12] ಹೀಗಿರಲು ನಿಮ್ಮ ದೆಸೆಯಿಂದ ಚೀಯೋನ್ ಪಟ್ಟಣವು ಹೊಲದಂತೆ ಉಳಲ್ಪಡುವುದು, ಯೆರೂಸಲೇಮು ಹಾಳುದಿಬ್ಬಗಳಾಗುವುದು. ಯೆಹೋವನ ಆಲಯದ ಪರ್ವತವು ಕಾಡುಗುಡ್ಡಗಳಂತಾಗುವುದು.