[1] ನಿನವೆ ಪಟ್ಟಣದ ಬಗ್ಗೆ ದೈವೋಕ್ತಿ. ಎಲ್ಕೋಷ್ ಊರಿನ ನಹೂಮ ಎಂಬ ಪ್ರವಾದಿಗೆ ಆದ ದೈವದರ್ಶನದ ಗ್ರಂಥ.
[2] ಯೆಹೋವನು ಸ್ವಗೌರವವನ್ನು ಕಾಪಾಡಿಕೊಳ್ಳುವ ದೇವರು. ಆತನು ಮುಯ್ಯಿತೀರಿಸುವವನು; ಹೌದು ಯೆಹೋವನು ಮುಯ್ಯಿತೀರಿಸುವವನು, ಕೋಪಭರಿತನು; ಯೆಹೋವನು ತನ್ನ ವಿರೋಧಿಗಳಿಗೆ ಮುಯ್ಯಿತೀರಿಸುತ್ತಾನೆ. ತನ್ನ ಶತ್ರುಗಳ ಮೇಲೆ ದೀರ್ಘರೋಷವಿಡುತ್ತಾನೆ.
[3] ಯೆಹೋವನು ದೀರ್ಘಶಾಂತನಾಗಿದ್ದರೂ ಆತನ ಶಕ್ತಿಯು ಅಪಾರ, ಅಪರಾಧಿಗಳನ್ನು ಶಿಕ್ಷಿಸದೆ ಬಿಡನು; ಯೆಹೋವನು ಬಿರುಗಾಳಿಯಲ್ಲಿಯೂ, ತುಫಾನಿನಲ್ಲಿಯೂ ನಡೆಯುತ್ತಾನೆ; ಮೋಡಗಳು ಆತನ ಹೆಜ್ಜೆಯಿಂದೇಳುವ ಧೂಳು.
[4] ಆತನು ಸಮುದ್ರವನ್ನು ಗದರಿಸಿ ಒಣಗಿಸುತ್ತಾನೆ, ಸಕಲನದಿಗಳನ್ನು ಬತ್ತಿಸುತ್ತಾನೆ; ಬಾಷಾನೂ ಮತ್ತು ಕರ್ಮೆಲ್ ಹೊಲಗಳೂ ಕಂದುತ್ತವೆ. ಲೆಬನೋನಿನ ಚಿಗುರು ಬಾಡುತ್ತದೆ.
[5] ಆತನ ಮುಂದೆ ಬೆಟ್ಟಗಳು ಅದರುತ್ತವೆ, ಗುಡ್ಡಗಳು ಕರಗುತ್ತವೆ; ಆತನ ದರ್ಶನಕ್ಕೆ ಭೂಮಿಯು ಕಂಪಿಸುತ್ತದೆ, ಹೌದು, ಲೋಕವೂ ಲೋಕನಿವಾಸಿಗಳೆಲ್ಲರೂ ತಲ್ಲಣಿಸುತ್ತವೆ.
[6] ಆತನ ಸಿಟ್ಟಿಗೆ ಯಾರು ಎದುರು ನಿಲ್ಲಲು ಸಾಧ್ಯ? ಆತನ ರೋಷಾಗ್ನಿಯ ಎದುರು ಯಾರು ನಿಂತಾರು? ಆತನ ರೌದ್ರವು ಜ್ವಾಲಾಪ್ರವಾಹದಂತೆ ಹರಿಯುತ್ತದೆ. ಬಂಡೆಗಳು ಆತನಿಂದ ಕೆಡವಲ್ಪಟ್ಟಿವೆ.
[7] ಯೆಹೋವನು ಒಳ್ಳೆಯವನು; ಇಕ್ಕಟ್ಟಿನ ದಿನದಲ್ಲಿ ಆಶ್ರಯದುರ್ಗವಾಗಿದ್ದಾನೆ; ತನ್ನ ಮೊರೆಹೊಕ್ಕವರನ್ನು ಬಲ್ಲನು.
[8] ಆದರೆ ತುಂಬಿತುಳುಕುವ ಜಲಪ್ರವಾಹದಿಂದಲೋ ಎಂಬಂತೆ ನಿನವೆಯ ಸ್ಥಾನವನ್ನು ತೀರಾ ಹಾಳುಮಾಡಿ ತನ್ನ ವಿರೋಧಿಗಳನ್ನು ಹಿಂದಟ್ಟಿ ಅಂಧಕಾರಕ್ಕೆ ತಳ್ಳುವನು.
[9] ನೀವು ಯೆಹೋವನಿಗೆ ವಿರುದ್ಧವಾಗಿ ಯಾವರೀತಿಯ ಕುಯುಕ್ತಿಯನ್ನು ಕಲ್ಪಿಸುತ್ತೀರಿ? ಆತನು ಸಂಪೂರ್ಣವಾಗಿ ಹಾಳುಮಾಡುವನು; ಎರಡನೆಯ ಸಾರಿ ಅಪಾಯವು ತಲೆ ಎತ್ತದಂತೆ ಪೂರ್ಣವಾಗಿ ನಿಮ್ಮನ್ನು ನಾಶಮಾಡುವನು.
[10] ಆತನ ವೈರಿಗಳು ಮುಳ್ಳುಗಳಂತೆ ಹೆಣೆದುಕೊಂಡಿದ್ದರೂ, ಮಧ್ಯಪಾನದಲ್ಲೇ ಮತ್ತರಾಗಿ ಮುಳುಗಿಹೋಗಿದ್ದರೂ, ಒಣಗಿದ ಹುಲ್ಲಂತೆ ಬೆಂಕಿಗೆ ತುತ್ತಾಗುವರು.
[11] ನಿನವೆಯೇ, ಯೆಹೋವನಿಗೆ ವಿರುದ್ಧವಾಗಿ ದುಷ್ಟ ಆಲೋಚನೆ ಮಾಡಿ ಕೇಡನ್ನು ಕಲ್ಪಿಸುವವನು ನಿನ್ನೊಳಗಿಂದ ಹೊರಟಿದ್ದಾನೆ.
[12] ಯೆಹೋವನು ಇಂತೆನ್ನುತ್ತಾನೆ, “ನಿನ್ನ ಶತ್ರುಗಳು ಎಷ್ಟು ಪ್ರಬಲವಾಗಿದ್ದರೂ, ಅವರ ಸಂಖ್ಯೆ ಎಷ್ಟು ಹೆಚ್ಚಿದ್ದರೂ ಅವರು ಕಡಿಯಲ್ಪಡುವರು. ಆ ದುರಾಲೋಚಕನು ಇಲ್ಲವಾಗುವನು. ನಿನ್ನನ್ನು ಬಾಧಿಸಿದ್ದೇನೆ, ಆದರೆ ಇನ್ನು ಬಾಧಿಸೆನು.
[13] ಅವನು ಹೇರಿದ ನೊಗವನ್ನು ಈಗ ನಿನ್ನ ಮೇಲಿನಿಂದ ಮುರಿದು ಕಟ್ಟಿದ್ದ ಕಣ್ಣಿಗಳನ್ನು ಕಿತ್ತುಹಾಕುವೆನು.”
[14] ಅಶ್ಶೂರವೇ, ನಿನ್ನ ಹೆಸರಿನ ಸಂತಾನ ಬೀಜವು ಇನ್ನು ಬಿತ್ತಲ್ಪಡಬಾರದೆಂದು ಯೆಹೋವನಾದ ನಾನು ಆಜ್ಞಾಪಿಸಿದ್ದೇನೆ; ನಿನ್ನ ದೇವರ ಮಂದಿರದೊಳಗಿಂದ ಕೆತ್ತಿದ ವಿಗ್ರಹವನ್ನೂ, ಎರಕದ ಬೊಂಬೆಯನ್ನೂ ಕಡಿದುಬಿಡುವೆನು; ನಿನಗೆ ಸಮಾಧಿಯನ್ನು ಸಿದ್ಧಮಾಡುವೆನು; ನಿನ್ನ ಪಾಪಗಳು ದುರ್ವಾಸನೆ ಬೀರುತ್ತಿವೆ.
[15] ನೋಡಿರಿ ಆ ಶುಭಸಮಾಚಾರವನ್ನು ತಂದು, ಸಮಾಧಾನವನ್ನು ಪರ್ವತಗಳ ಮೇಲೆ ಸಾರುವ ದೂತನ ಪಾದಗಳು ಮೇಲೆ ತ್ವರೆಪಡುತ್ತವೆ! ಯೆಹೂದವೇ, ನಿನ್ನ ಹಬ್ಬಗಳನ್ನು ಆಚರಿಸಿಕೋ, ನಿನ್ನ ಹರಕೆಗಳನ್ನು ಸಲ್ಲಿಸು; ಆ ದುಷ್ಟರು ಇನ್ನು ಮುಂದೆ ನಿನ್ನನ್ನು ಮುತ್ತಿಗೆ ಹಾಕಿ ಸೋಲಿಸಲು ಸಾಧ್ಯವಿಲ್ಲ, ಏಕೆಂದರೆ ಅವನು ಸಂಪೂರ್ಣ ನಾಶವಾಗಿದ್ದಾನೆ.