Skip to content
Opens in a new window
Listen to this chapter • 3:30

[1] ಯೆಹೋವನು ಹೇಳುವುದನ್ನು ಕೇಳಿರಿ, “ನೀನೆದ್ದು ಬೆಟ್ಟಗಳ ಮುಂದೆ ವ್ಯಾಜ್ಯ ಮಾಡು. ನಿನ್ನ ಧ್ವನಿಯು ಗುಡ್ಡಗಳಿಗೆ ಕೇಳಿಸಲಿ

[2] ಬೆಟ್ಟಗಳೇ ಯೆಹೋವನ ವ್ಯಾಜ್ಯವನ್ನು ಕೇಳಿರಿ. ಭೂಮಿಯ ಶಾಶ್ವತವಾದ ಅಸ್ತಿವಾರಗಳೇ, ಕಿವಿಗೊಡಿರಿ. ಯೆಹೋವನಿಗೆ ಆತನ ಪ್ರಜೆಯ ಮೇಲೆ ವ್ಯಾಜ್ಯವಿದೆ. ಆತನು ಇಸ್ರಾಯೇಲಿನೊಂದಿಗೆ ವಿವಾದಿಸುತ್ತಾನೆ.”

[3] “ನನ್ನ ಪ್ರಜೆಯೇ, ನಾನು ನಿನಗೇನು ಮಾಡಿದೆನು? ನಿನ್ನನ್ನು ಯಾವ ವಿಷಯದಲ್ಲಿ ಬೇಸರಗೊಳಿಸಿದೆನು? ನನ್ನ ಮೇಲೆ ಸಾಕ್ಷಿಹೇಳು.

[4] ನಾನು ನಿನ್ನನ್ನು ಐಗುಪ್ತದೇಶದೊಳಗಿಂದ ಪಾರುಮಾಡಿ ದಾಸತ್ವದಿಂದ ಬಿಡಿಸಿದೆನು. ಮೋಶೆಯನ್ನೂ, ಆರೋನನನ್ನೂ ಮತ್ತು ಮಿರ್ಯಾಮಳನ್ನೂ ನಿನಗೆ ನಾಯಕರನ್ನಾಗಿ ಕಳುಹಿಸಿದೆನು.

[5] ನನ್ನ ಜನರೇ, ಮೋವಾಬಿನ ಅರಸನಾದ ಬಾಲಾಕನು ಕೊಟ್ಟ ಸಲಹೆಯನ್ನೂ ಮತ್ತು ಬೆಯೋರನ ಮಗನಾದ ಬಿಳಾಮನು ಹೇಳಿದ ಉತ್ತರವನ್ನೂ ಜ್ಞಾಪಕಮಾಡಿಕೊಳ್ಳಿರಿ. ಯೆಹೋವನ ಧರ್ಮಕಾರ್ಯಗಳು ನಿಮ್ಮ ಗ್ರಹಿಕೆಗೆ ಬರುವ ಹಾಗೆ ನೀವು ಶಿಟ್ಟೀಮನ್ನು ಬಿಟ್ಟಂದಿನಿಂದ ಗಿಲ್ಗಾಲನ್ನು ಸೇರುವ ತನಕ ನಡೆದದ್ದನ್ನೆಲ್ಲಾ ಸ್ಮರಿಸಿಕೊಳ್ಳಿರಿ.

[6] ನಾನು ಯೆಹೋವನ ಸನ್ನಿಧಿಯಲ್ಲಿ ಯಾವ ಕಾಣಿಕೆಯೊಡನೆ ಕಾಣಿಸಿಕೊಳ್ಳಲಿ? ಯಾವುದನ್ನರ್ಪಿಸಿ ಮಹೋನ್ನತ ದೇವರ ಸಮ್ಮುಖದಲ್ಲಿ ಅಡ್ಡಬೀಳಲಿ? ಹೋಮದ ಪಶುಗಳನ್ನು ಅಥವಾ ಒಂದು ವರ್ಷದ ಕರುಗಳನ್ನು ತೆಗೆದುಕೊಂಡು ಬಂದು ಆತನ ಮುಂದೆ ಕಾಣಿಸಿಕೊಳ್ಳಲೋ?

[7] ಸಾವಿರಾರು ಟಗರುಗಳನ್ನೂ, ಲಕ್ಷೋಪಲಕ್ಷ ತೈಲ ಪ್ರವಾಹಗಳನ್ನೂ ನೋಡಿ ಯೆಹೋವನು ಮೆಚ್ಚುತ್ತಾನೆಯೇ? ನನ್ನ ದ್ರೋಹದ ನಿಮಿತ್ತ ನನ್ನ ಚೊಚ್ಚಲ ಮಗನನ್ನು ಅರ್ಪಿಸಲೋ? ನನ್ನ ಆತ್ಮದ ಪಾಪಕ್ಕಾಗಿ ನನ್ನ ಗರ್ಭದ ಫಲವನ್ನು ಸಲ್ಲಿಸಲೋ?

[8] ಮನುಷ್ಯನೇ, ಒಳ್ಳೆಯದು ಇಂಥದ್ದೇ ಎಂದು ಯೆಹೋವನು ನಿನಗೆ ತೋರಿಸಿದ್ದಾನಲ್ಲವೇ. ನ್ಯಾಯವನ್ನು ಆಚರಿಸುವುದು, ಕರುಣೆಯಲ್ಲಿ ಆಸಕ್ತನಾಗಿರುವುದು, ನಿನ್ನ ದೇವರಿಗೆ ನಮ್ರವಾಗಿ ನಡೆದುಕೊಳ್ಳುವುದು ಇಷ್ಟನ್ನೇ ಹೊರತು ಯೆಹೋವನು ನಿನ್ನಿಂದ ಇನ್ನೇನು ಅಪೇಕ್ಷಿಸುವನು?

[9] ಯೆಹೋವನ ನಾಮದಲ್ಲಿ ಭಯಭಕ್ತಿಯಿಡುವುದು ಸುಜ್ಞಾನವೇ, ಎಂದು ಯೆರೂಸಲೇಮಿನ ಪಟ್ಟಣಕ್ಕೆ ಎಚ್ಚರಿಕೆ ನೀಡುವ ಯೆಹೋವನ ನುಡಿ. ಬೀಸಿ ಬರುವ ಶಿಕ್ಷೆಯ ದಂಡಕ್ಕೆ ಎಚ್ಚರವಾಗಿರಿ. ಅದನ್ನು ನೇಮಿಸಿದವನು ಯಾರೆಂದು ತಿಳಿದುಕೊಳ್ಳಿರಿ.

[10] ದುಷ್ಟನ ಮನೆಯಲ್ಲಿ ದುಷ್ಟತನದಿಂದ ಗಳಿಸಿದ ನಿಧಿ ಮತ್ತು ಅಸಹ್ಯಕರವಾದ ಕಿರಿಯಳತೆ ಇವು ಇನ್ನೂ ಸಿಕ್ಕುತ್ತವೆಯೋ?

[11] ಕಳ್ಳ ತಕ್ಕಡಿಯೂ ಹಾಗು ಮೋಸದ ಕಲ್ಲಿನ ಚೀಲವೂ ಒಬ್ಬನಲ್ಲಿದ್ದರೆ ಅವನು ನಿರ್ದೋಷಿಯಲ್ಲವೆಂದು ತಿಳಿಯಲೋ?

[12] ಪಟ್ಟಣದ ಧನಿಕರು ತುಂಬಾ ಬಲಾತ್ಕಾರಿಗಳು. ಅದರ ನಿವಾಸಿಗಳು ಸುಳ್ಳುಗಾರರು. ಅವರ ಬಾಯನಾಲಿಗೆಯು ಮೋಸಕರ.

[13] ಆದಕಾರಣ ಯೆರೂಸಲೇಮೇ, ನಿನಗೆ ಕ್ರೂರವಾದ ಪೆಟ್ಟು ಹಾಕುವೆನು. ನಿನ್ನ ಪಾಪಗಳ ನಿಮಿತ್ತ ನಿನ್ನನ್ನು ಹಾಳುಮಾಡುವೆನು.

[14] ನೀನು ತಿಂದರೂ ನಿನಗೆ ತೃಪ್ತಿಯಾಗದು. ಹಸಿವೆಯು ನಿನ್ನೊಳಗೆ ಇದ್ದೇ ಇರುವುದು. ನೀನು ನಿನ್ನವರನ್ನು ಕಳುಹಿಸಿಬಿಟ್ಟರೂ ಅವರನ್ನು ಪಾರುಮಾಡಲಾರಿ. ಪಾರುಮಾಡಿದವರನ್ನೂ ಕತ್ತಿಗೆ ತುತ್ತನ್ನಾಗಿ ಮಾಡುವೆನು.

[15] ನೀನು ಬಿತ್ತಿದರೂ ಕೊಯ್ಯುವುದಿಲ್ಲ. ಎಣ್ಣೆಯ ಕಾಯಿಯನ್ನು ಜಜ್ಜಿದರೂ ಮೈಗೆ ಎಣ್ಣೆ ಹತ್ತಿಕೊಳ್ಳುವುದಿಲ್ಲ. ದ್ರಾಕ್ಷಿಯ ಹಣ್ಣನ್ನು ತುಳಿದರೂ ದ್ರಾಕ್ಷಾರಸವನ್ನು ಕುಡಿಯುವುದಿಲ್ಲ.

[16] ಒಮ್ರಿ ರಾಜನ ನಿಯಮಗಳೂ ಮತ್ತು ಅಹಾಬನ ಮನೆತನದ ಸಕಲ ಆಚಾರಗಳೂ ನಿನ್ನಲ್ಲಿ ಸಲ್ಲುತ್ತಿವೆ. ನಿನ್ನವರು ಅವರ ದುರ್ನೀತಿಗೆ ಅನುಸಾರವಾಗಿ ನಡೆಯುತ್ತಾರೆ. ಆದಕಾರಣ ನಾನು ನಿನ್ನನ್ನು ಬೆರಗಿಗೂ, ನಿನ್ನ ನಿವಾಸಿಗಳನ್ನು ಅಪಹಾಸ್ಯಕ್ಕೂ ಗುರಿಮಾಡುವೆನು. ನನ್ನ ಜನರಿಗೆ ಸಂಭವಿಸಬೇಕಾದ ಅವಮಾನವನ್ನು ಅನುಭವಿಸುವಿರಿ.”

ಮೀಕನು — Chapters