[1] “ತುತ್ತೂರಿಯನ್ನು ಹಿಡಿದು ಊದು. ನನ್ನ ಜನರು ನನ್ನ ಒಡಂಬಡಿಕೆಯನ್ನು ಮೀರಿ, ನನ್ನ ಧರ್ಮವಿಧಿಗಳಿಗೆ ದ್ರೋಹಮಾಡಿದ್ದರಿಂದ, ಶತ್ರುವು ಹದ್ದಿನ ಹಾಗೆ ಯೆಹೋವನಾದ ನನ್ನ ನಿವಾಸದ ಮೇಲೆ ಬರುತ್ತಾನೆ.
[2] ಅವರು ನನ್ನನ್ನು, ‘ನಮ್ಮ ದೇವರೇ, ಇಸ್ರಾಯೇಲರಾದ ನಾವು ನಿನ್ನನ್ನು ತಿಳಿದವರಾಗಿದ್ದೇವೆ’ ಎಂದು ಕೂಗಿಕೊಳ್ಳುವರು.
[3] ಇಸ್ರಾಯೇಲರು ಮೇಲನ್ನು ತಳ್ಳಿಬಿಟ್ಟಿದ್ದಾರೆ; ಶತ್ರುವು ಅವರನ್ನು ಹಿಂದಟ್ಟುವನು.
[4] ನನ್ನ ಅಪ್ಪಣೆಯಿಲ್ಲದೆ ರಾಜರನ್ನು ನೇಮಿಸಿಕೊಂಡಿದ್ದಾರೆ; ನನಗೆ ತಿಳಿಯದೆ ಅಧಿಪತಿಗಳನ್ನು ಮಾಡಿಕೊಂಡಿದ್ದಾರೆ. ತಮ್ಮ ಬೆಳ್ಳಿ ಮತ್ತು ಬಂಗಾರಗಳಿಂದ ಬೊಂಬೆಗಳನ್ನು ನಿರ್ಮಿಸಿಕೊಂಡಿದ್ದಾರೆ; ಅವರು ನಿರ್ಮಿಸಿದ್ದೆಲ್ಲಾ ನಾಶವಾಗತಕ್ಕದ್ದೇ.
[5] ಸಮಾರ್ಯವೇ, ನಾನು ನಿನ್ನ ಬಸವನನ್ನು ತಳ್ಳಿಬಿಟ್ಟಿದ್ದೇನೆ; ನನ್ನ ರೋಷಾಗ್ನಿಯು ನಿನ್ನವರ ಮೇಲೆ ಉರಿಯುತ್ತದೆ; ಅವರು ನಿರ್ಮಲರಾಗುವುದಕ್ಕೆ ಇನ್ನೆಷ್ಟು ಕಾಲ ಹಿಡಿಯುವುದೋ?
[6] ಆ ಬಸವನೂ ಇಸ್ರಾಯೇಲಿನ ಕೈಕೆಲಸ; ಶಿಲ್ಪಿಯು ಅದನ್ನು ರೂಪಿಸಿದನು; ಅದು ದೇವರಲ್ಲ; ಸಮಾರ್ಯದ ಬಸವನು ಚೂರುಚೂರಾಗುವನು.
[7] ಅವರು ಗಾಳಿಯನ್ನು ಬಿತ್ತುತ್ತಾರೆ, ಬಿರುಗಾಳಿಯನ್ನು ಕೊಯ್ದುಕೊಳ್ಳುವರು. ಇಸ್ರಾಯೇಲರ ಪೈರು ತೆನೆಗೆ ಬಾರದು; ಬೀಜ ಮೊಳೆತರೂ ಹಿಟ್ಟು ಸಿಕ್ಕದು; ಒಂದು ವೇಳೆ ಸಿಕ್ಕಿದರೂ ಅನ್ಯರು ಅದನ್ನು ನುಂಗಿಬಿಡುವರು.
[8] ಇಸ್ರಾಯೇಲೇ ನುಂಗಲ್ಪಟ್ಟಿದೆ; ಅದು ಜನಾಂಗಗಳ ಮಧ್ಯದಲ್ಲಿ ಯಾರಿಗೂ ಬೇಡವಾದ ಪಾತ್ರೆಯಂತಿದೆ.
[9] ಅದು ಒಂಟಿಯಾದ ಕಾಡುಕತ್ತೆಯಂತೆ ಮನಸ್ಸು ಬಂದ ಹಾಗೆ ನಡೆದು ಅಶ್ಶೂರಕ್ಕೆ ಹೋಗಿದೆ. ಎಫ್ರಾಯೀಮು ಹಣಕೊಟ್ಟು ಜಾರರನ್ನು (ವ್ಯಭಿಚಾರಿಗಳನ್ನು) ಸಂಪಾದಿಸಿಕೊಂಡಿದೆ.
[10] ಅದು ಜನಾಂಗಗಳೊಳಗೆ ಜಾರರನ್ನು ಸಂಪಾದಿಸಿದರೂ, ಅದನ್ನು ನಾನು ಈಗ ಸೆರೆಗೆ ಒಳಪಡಿಸುವೆನು. ರಾಜಾಧಿರಾಜನು ಹೊರಿಸುವ ಹೊರೆಯಿಂದ ಅದು ಕುಗ್ಗಿಹೋಗಲಿಕ್ಕೆ ಆರಂಭವಾಗುವುದು.
[11] ಎಫ್ರಾಯೀಮು ಯಜ್ಞವೇದಿಗಳನ್ನು ಹೆಚ್ಚೆಚ್ಚಾಗಿ ಕಟ್ಟಿ ಪಾಪಮಾಡಿದೆ; ಕಟ್ಟಿದ ಯಜ್ಞವೇದಿಗಳೇ ಅದಕ್ಕೆ ಪಾಪವಾಗಿ ಪರಿಣಮಿಸಿವೆ.
[12] ನಾನು ನನ್ನ ಧರ್ಮವನ್ನು ಲಕ್ಷಾಂತರ ವಿಧಿಗಳ ರೂಪವಾಗಿ ಅದಕ್ಕೆ ಬರೆಯಿಸಿಕೊಟ್ಟರೂ, ಅವುಗಳು ತನಗೆ ಸಂಬಂಧಪಟ್ಟವುಗಳಲ್ಲ ಎಂದು ಅದು ಭಾವಿಸುತ್ತದೆ.
[13] ಎಫ್ರಾಯೀಮ್ಯರು ಯಜ್ಞಪಶುಗಳನ್ನು ನನಗೆ ನೈವೇದ್ಯವಾಗಿ ವಧಿಸಿ ಮಾಂಸಭೋಜನ ಮಾಡುತ್ತಾರೆ; ಯೆಹೋವನು ಆ ಯಜ್ಞಗಳನ್ನು ಮೆಚ್ಚುವುದಿಲ್ಲ; ಅವರ ಅಧರ್ಮವನ್ನು ಜ್ಞಾಪಕಕ್ಕೆ ತಂದುಕೊಂಡು ಅವರ ಪಾಪಕ್ಕೆ ದಂಡನೆಮಾಡುವನು; ಅವರು ಐಗುಪ್ತಕ್ಕೆ ಹಿಂದಿರುಗಬೇಕಾಗುವುದು.
[14] ಇಸ್ರಾಯೇಲ್ ತನ್ನ ಸೃಷ್ಟಿಕರ್ತನನ್ನು ಮರೆತು ಅರಮನೆಗಳನ್ನು ಕಟ್ಟಿಕೊಂಡಿದೆ; ಯೆಹೂದವು ಕೋಟೆಕೊತ್ತಲಗಳ ಪಟ್ಟಣಗಳನ್ನು ಮಾಡಿಕೊಂಡಿದೆ; ಆಹಾ, ನಾನು ಆ ಪಟ್ಟಣಗಳ ಮೇಲೆ ಬೆಂಕಿಯನ್ನು ಸುರಿಸುವೆನು, ಅದು ಅವರ ಸೌಧಗಳನ್ನು ನುಂಗಿಬಿಡುವುದು.”