Skip to content
Opens in a new window
Listen to this chapter • 2:50

[1] ಯಾಜಕರೇ, ಇದನ್ನು ಕೇಳಿರಿ, ಇಸ್ರಾಯೇಲ್ ಕುಲದವರೇ, ಆಲಿಸಿರಿ; ರಾಜವಂಶದವರೇ, ಕಿವಿಗೊಡಿರಿ; ನೀವು ಮಿಚ್ಪದಲ್ಲಿ ಉರುಲಾಗಿಯೂ, ತಾಬೋರಿನಲ್ಲಿ ಬಲೆಯಾಗಿಯೂ ಇದ್ದ ಕಾರಣ ನಿಮಗೆ ನ್ಯಾಯತೀರ್ಪು ಬಂದಿದೆ.

[2] ನನಗೆ ತಿರುಗಿಬಿದ್ದವರು ಅಗಾಧವಾದ ಕೊಲೆಯಲ್ಲಿ ಮಗ್ನರಾಗಿದ್ದಾರೆ; ನಾನೇ ಅವರೆಲ್ಲರನ್ನೂ ಶಿಕ್ಷಿಸುವೆನು.

[3] ಎಫ್ರಾಯೀಮನ್ನು ಬಲ್ಲೆ, ಇಸ್ರಾಯೇಲ್ ನನಗೆ ಮರೆಯಾಗಿಲ್ಲ; ಎಫ್ರಾಯೀಮೇ, ನೀನೀಗ ವ್ಯಭಿಚಾರ ಮಾಡಿದ್ದಿ, ಇಸ್ರಾಯೇಲ್ ಹೊಲೆಯಾಗಿದೆ.

[4] ಅವರು ತಮ್ಮ ದೇವರ ಕಡೆಗೆ ತಿರುಗಿಕೊಳ್ಳಲು ಅವುಗಳ ದುಷ್ಕೃತ್ಯಗಳು ಅವರನ್ನು ಬಿಡುವುದಿಲ್ಲ; ವ್ಯಭಿಚಾರದ ಸ್ವಭಾವವು ಅವುಗಳಲ್ಲಿ ನೆಲೆಗೊಂಡಿದೆ, ಯೆಹೋವನನ್ನು ತಿಳಿದುಕೊಂಡಿಲ್ಲ.

[5] ಇಸ್ರಾಯೇಲಿಗೆ ಅದರ ಹೆಮ್ಮೆಯೇ ವಿರುದ್ಧ ಸಾಕ್ಷಿಯಾಗಿದೆ; ಇಸ್ರಾಯೇಲೂ ಮತ್ತು ಎಫ್ರಾಯೀಮೂ ತಮ್ಮ ದುರ್ಮಾರ್ಗದಲ್ಲಿ ಎಡವಿ ಬೀಳುವವು; ಯೆಹೂದವೂ ಅವುಗಳೊಂದಿಗೆ ಬೀಳುವುದು.

[6] ಅವು ತಮ್ಮ ದನ ಮತ್ತು ಕುರಿಗಳ ಸಂಗಡ ಯೆಹೋವನಿಗೆ ಶರಣುಹೊಗಲು ಹೊರಡುವವು; ಆತನು ಸಿಕ್ಕುವುದಿಲ್ಲ, ಅವುಗಳಿಂದ ಮರೆಯಾಗಿದ್ದಾನೆ.

[7] ಅವು ಯೆಹೋವನ ಮಕ್ಕಳಲ್ಲದ ಮಕ್ಕಳನ್ನು ಪಡೆದು ಆತನಿಗೆ ದ್ರೋಹಮಾಡಿವೆ; ಅವುಗಳನ್ನೂ, ಅವುಗಳ ಭೂಸ್ವಾಸ್ತ್ಯಗಳನ್ನೂ ಈ ಅಮಾವಾಸ್ಯೆಯು ನುಂಗಿಬಿಡುವುದು.

[8] ಗಿಬ್ಯದಲ್ಲಿ ತುತ್ತೂರಿಯನ್ನು ಊದಿರಿ, ರಾಮದಲ್ಲಿ ಕೊಂಬು ಕೂಗಲಿ, ಬೇತ್ ಅವೆನಿನಲ್ಲಿ ಆರ್ಭಟಿಸಿರಿ, ಬೆನ್ಯಾಮೀನೇ, ಹಿಂದೆ ನೋಡು!

[9] ದಂಡನೆಯ ದಿನದಲ್ಲಿ ಎಫ್ರಾಯೀಮು ಹಾಳಾಗುವುದು; ಇಸ್ರಾಯೇಲ್ ಕುಲಗಳ ಭವಿಷ್ಯತ್ತಿನ ನಿಶ್ಚಯವನ್ನು ತಿಳಿಯಪಡಿಸಿದ್ದೇನೆ.

[10] ಯೆಹೂದದ ಮುಖಂಡರು ಮೇರೆಯನ್ನು ಒತ್ತುವವರಂತಿದ್ದಾರೆ; ಅವರ ಮೇಲೆ ನನ್ನ ರೌದ್ರವನ್ನು ನೀರಿನ ಹಾಗೆ ಹೊಯ್ದುಬಿಡುವೆನು.

[11] ಎಫ್ರಾಯೀಮು ವ್ಯರ್ಥಾಚಾರಗಳನ್ನು ಅನುಸರಿಸಲು ಮನಸ್ಸುಮಾಡಿದ ಕಾರಣ, ಅದು ದೇವರ ನ್ಯಾಯತೀರ್ಪಿಗೆ ಗುರಿಯಾಗಿ ಹಿಂಸಿಸಲ್ಪಟ್ಟಿದೆ, ಜಜ್ಜಲ್ಪಟ್ಟಿದೆ.

[12] ನಾನು ಎಫ್ರಾಯೀಮಿಗೆ ನುಸಿ, ಯೆಹೂದ ಕುಲಕ್ಕೆ ಒಣ ಕುಂಟೆಯಂತಿರುವೆನು.

[13] ಹೀಗಿರಲು ಎಫ್ರಾಯೀಮು ತಾನು ರೋಗಿಯೆಂದು ತಿಳುಕೊಂಡಿತು, ಯೆಹೂದವು ತನ್ನ ವ್ರಣವನ್ನು ನೋಡಿಕೊಂಡಿತು; ಆಗ ಎಫ್ರಾಯೀಮು ಅಶ್ಶೂರದ ಕಡೆಗೆ ತಿರುಗಿಕೊಂಡು ಜಗಳಗಂಟ ಮಹಾರಾಜನ ಬಳಿಗೆ ದೂತರನ್ನು ಕಳುಹಿಸಿತು; ಆದರೆ ಅವನು ನಿಮ್ಮನ್ನು ಸ್ವಸ್ಥಮಾಡಲಾರನು, ನಿಮ್ಮ ಗಾಯವನ್ನು ಗುಣಪಡಿಸಲಾರನು.

[14] ನಾನು ಎಫ್ರಾಯೀಮಿಗೆ ಸಿಂಹವೂ, ಯೆಹೂದ ಕುಲಕ್ಕೆ ಪ್ರಾಯದ ಸಿಂಹವೂ ಆಗುವೆನು; ನಾನೇ ಸೀಳಿಬಿಟ್ಟು ಹೋಗುವೆನು, ನಾನು ಎತ್ತಿಕೊಂಡು ಹೋಗಲು ಯಾರೂ ಬಿಡಿಸರು.

[15] ನನ್ನ ಜನರು ತಮ್ಮ ದೋಷಫಲವನ್ನು ಅನುಭವಿಸಿ, ನನ್ನ ಪ್ರಸನ್ನತೆಯನ್ನು ಬೇಡಿಕೊಳ್ಳುವ ತನಕ, ನಾನು ನನ್ನ ವಾಸಸ್ಥಾನಕ್ಕೆ ಹಿಂದಿರುಗಿ ಹೋಗುವೆನು; ಅವರು ಇಕ್ಕಟ್ಟಿಗೆ ಸಿಕ್ಕಿದ ಕೂಡಲೆ ನನ್ನನ್ನು ಆಶ್ರಯಿಸುವರು.

ಹೋಶೇಯನು — Chapters