Skip to content
Opens in a new window
Listen to this chapter • 4:25

[1] ನಿಮ್ಮ ಸಹೋದರರನ್ನು “ಅಮ್ಮಿ” ಎಂದು, ನಿಮ್ಮ ಸಹೋದರಿಯರನ್ನು “ರುಹಾಮ” ಎಂದು ಕರೆಯಿರಿ.

[2] “ನಿಮ್ಮ ತಾಯಿಯ ಸಂಗಡ ವಾದಮಾಡಿ; ಅವಳು ನನ್ನ ಹೆಂಡತಿಯಲ್ಲ, ನಾನು ಅವಳ ಗಂಡನಲ್ಲ. ಅವಳು ವ್ಯಭಿಚಾರವನ್ನು ತನ್ನ ಮುಖಸೌಂದರ್ಯದಿಂದ, ವ್ಯಭಿಚಾರದ ಬೆಡಗನ್ನು ತನ್ನ ಸ್ತನಮಧ್ಯದಿಂದ ತೊಲಗಿಸಲಿ.

[3] ಇಲ್ಲದಿದ್ದರೆ ನಾನು ಅವಳ ಬಟ್ಟೆಯನ್ನು ಕಿತ್ತು, ಅವಳನ್ನು ಹುಟ್ಟಿದಾಗ ಇದ್ದಂತೆ ಬೆತ್ತಲೆಯಾಗಿ ನಿಲ್ಲಿಸುವೆನು ಅವಳನ್ನು ಬೆಂಗಾಡಾಗಿಸಿ, ಮರುಭೂಮಿಯ ಸ್ಥಿತಿಗೆ ತಂದು, ನೀರಡಿಕೆಯಿಂದ ಸಾಯಿಸುವೆನು.

[4] ಅವಳ ಮಕ್ಕಳನ್ನೂ ಕರುಣಿಸುವುದಿಲ್ಲ, ಅವರು ವ್ಯಭಿಚಾರದಿಂದ ಹುಟ್ಟಿದ ಮಕ್ಕಳಲ್ಲವೇ.

[5] ಅವರ ತಾಯಿ ವ್ಯಭಿಚಾರ ಮಾಡಿದ್ದಾಳೆ, ಹೆತ್ತವಳು ನಾಚಿಕೆಗೇಡಿಯಾಗಿ ನಡೆದಿದ್ದಾಳೆ. ‘ತನಗೆ ಬೇಕಾದ ಅನ್ನ ಪಾನಗಳನ್ನೂ, ಉಣ್ಣೆ ನಾರುಗಳನ್ನೂ, ತೈಲವನ್ನೂ ಪಾನಕಗಳನ್ನೂ ತನಗೆ ಕೊಡುವ ಹಾಗೂ ತನ್ನೊಂದಿಗೆ ವ್ಯಭಿಚಾರದಲ್ಲಿ ತೊಡಗಿಸಿಕೊಂಡವರ ಹಿಂದೆ ಹೋಗುವೆನು ಅಂದುಕೊಂಡಿದ್ದಾಳೆ.’”

[6] ಹೀಗಿರಲು, ಆಹಾ, ನಾನು ಅವಳ ದಾರಿಗೆ ಮುಳ್ಳುಬೇಲಿ ಹಾಕುವೆನು, ತನಗೆ ಬೇಕಾದ ಹಾದಿಗಳನ್ನು ಹಿಡಿಯದಂತೆ ಅವಳಿಗೆ ಅಡ್ಡಗೋಡೆ ಕಟ್ಟುವೆನು.

[7] ಅವಳು ತನ್ನೊಂದಿಗೆ ವ್ಯಭಿಚಾರ ಮಾಡಿದವರನ್ನು ಅನುಸರಿಸಿ ಹೋದರೂ ಅವರು ಸಿಕ್ಕುವುದಿಲ್ಲ. ಆಗ ಅವಳು, “‘ನಾನು ಮದುವೆಯಾದ ಗಂಡನ ಬಳಿಗೆ ಹಿಂದಿರುಗಿ ಹೋಗುವೆನು, ಈಗಿನ ನನ್ನ ಸ್ಥಿತಿಗಿಂತ ಆಗಿನ ಸ್ಥಿತಿಯು ಎಷ್ಟೋ ಲೇಸು’ ಅಂದುಕೊಳ್ಳುವಳು.

[8] ಅವಳಿಗೆ ಧಾನ್ಯ, ದ್ರಾಕ್ಷಾರಸ, ತೈಲಗಳು ನನ್ನಿಂದ ದೊರೆತವುಗಳೆಂದೂ, ಬಾಳನ ಪೂಜೆಗೆ ಉಪಯೋಗಿಸಿದ ಬೆಳ್ಳಿಬಂಗಾರಗಳು ನನ್ನ ಧಾರಾಳವಾದ ವರವೆಂದೂ ಅವಳಿಗೆ ತಿಳಿಯದು.

[9] ಆದಕಾರಣ ನಾನು ನನ್ನ ಧಾನ್ಯ, ದ್ರಾಕ್ಷಾರಸಗಳನ್ನು ಆಯಾ ಕಾಲದಲ್ಲಿ ಹಿಂದಕ್ಕೆ ತೆಗೆದುಕೊಳ್ಳುವೆನು, ಅವಳ ಮಾನವನ್ನು ಮರೆಮಾಡುವುದಕ್ಕೆ ನಾನು ಕೊಟ್ಟ ಉಣ್ಣೆ, ನಾರುಗಳನ್ನು ಹಿಂತೆಗೆದುಕೊಳ್ಳುವೆನು.

[10] ಈಗ ಅವಳೊಂದಿಗೆ ವ್ಯಭಿಚಾರ ಮಾಡಿದವರ ಕಣ್ಣೆದುರಿಗೆ ಅವಳ ನಾಚಿಕೆಗೇಡಿತನವನ್ನು ಬೈಲಿಗೆ ತರುವೆನು; ಅವಳನ್ನು ನನ್ನ ಕೈಯಿಂದ ಯಾರೂ ಬಿಡಿಸರು.

[11] ನಾನು ಅವಳ ಉಲ್ಲಾಸ, ಹಬ್ಬ, ಹುಣ್ಣಿಮೆ, ಅಮಾವಾಸ್ಯೆ, ಸಬ್ಬತ್ತು, ಮಹೋತ್ಸವ, ಇವುಗಳನ್ನೆಲ್ಲಾ ನಿಲ್ಲಿಸಿಬಿಡುವೆನು.

[12] ಅವಳು ಯಾವ ಅಂಜೂರ ಮತ್ತು ದ್ರಾಕ್ಷಿಗಳನ್ನು ‘ಇವು ನನ್ನೊಂದಿಗೆ ವ್ಯಭಿಚಾರ ಮಾಡಿದವರಿಂದಾದ ಪ್ರತಿಫಲ’ ಅಂದುಕೊಂಡಳೋ, ಅವುಗಳನ್ನು ನಾನು ಹಾಳುಮಾಡಿ ಕಾಡುಗಿಡಗಳ ಗತಿಗೆ ತರುವೆನು; ಅವು ಭೂಜಂತುಗಳಿಗೆ ಆಹಾರವಾಗುವವು.

[13] ಅವಳು ನನ್ನನ್ನು ಮರೆತು ಮೂಗುತಿ ಮೊದಲಾದ ಒಡವೆಗಳಿಂದ ತನ್ನನ್ನು ಶೃಂಗರಿಸಿಕೊಂಡು, ವ್ಯಭಿಚಾರಿಗಳ ಹಿಂದೆ ಹೋಗಿ ಬಾಳ್ ದೇವತೆಗಳ ಉತ್ಸವ ದಿನಗಳಲ್ಲಿ ಧೂಪಹಾಕಿದ್ದಕ್ಕೆ ನಾನು ಅವಳನ್ನು ದಂಡಿಸುವೆನು, ಇದು ಯೆಹೋವನ ನುಡಿ.”

[14] “ಆಹಾ, ನಾನು ಅವಳನ್ನು ಒಲಿಸಿ, ಅಡವಿಗೆ ಕರೆದುಕೊಂಡು ಹೋಗಿ, ಅವಳೊಂದಿಗೆ ಹೃದಯಂಗಮವಾಗಿ ಮಾತನಾಡುವೆನು.

[15] ಅವಳ ದ್ರಾಕ್ಷಿಯ ತೋಟಗಳನ್ನು ಅಲ್ಲಿರುವಾಗಲೇ ಅವಳಿಗೆ ಹಿಂದಕ್ಕೆ ಕೊಡುವೆನು. ಆಕೋರಿನ ತಗ್ಗನ್ನೇ ಅವಳ ಸುಖ ನಿರೀಕ್ಷೆಗೆ ದ್ವಾರವನ್ನಾಗಿ ಮಾಡುವೆನು. ಯೌವನದಲ್ಲಿ, ಐಗುಪ್ತದೇಶದೊಳಗಿಂದ ಹೊರಟುಬಂದ ದಿನದಲ್ಲಿ ಇದ್ದಂತೆ ಅಲ್ಲಿ ಆಕೆಯು ಮುಳುಗುವಳು.”

[16] ಯೆಹೋವನು ಇಂತೆನ್ನುತ್ತಾನೆ, “ಆ ಕಾಲದಲ್ಲಿ ನೀನು ನನ್ನನ್ನು ಇನ್ನು ‘ಬಾಳೀ’ ಅನ್ನದೆ ‘ಈಶೀ’ ಅನ್ನುವಿ.

[17] ನಾನು ಬಾಳ್ ದೇವತೆಗಳ ಹೆಸರುಗಳನ್ನು ನಿನ್ನ ಬಾಯೊಳಗಿಂದ ತೊಲಗಿಸುವೆನು; ಅವುಗಳನ್ನು ಇನ್ನು ಹೆಸರಿಸದಿರುವಿ.

[18] ಆ ಕಾಲದಲ್ಲಿ ನಾನು ನನ್ನ ಜನರಿಗಾಗಿ ಭೂಜಂತುಗಳಿಗೂ, ಆಕಾಶದ ಪಕ್ಷಿಗಳಿಗೂ, ನೆಲದ ಕ್ರಿಮಿಕೀಟಗಳಿಗೂ ನಿಬಂಧನೆಮಾಡಿ ವಿಧಿಸಿ ಬಿಲ್ಲು, ಕತ್ತಿ ಮತ್ತು ಕಾಳಗಗಳನ್ನು ದೇಶದಲ್ಲಿ ನಿಲ್ಲದಂತೆ ಧ್ವಂಸಪಡಿಸಿ, ನನ್ನ ಜನರು ನಿರ್ಭಯವಾಗಿ ವಾಸಿಸುವಂತೆ ಮಾಡುವೆನು.

[19] ನಾನು ನಿನ್ನನ್ನು ಶಾಶ್ವತವಾಗಿ ವರಿಸುವೆನು; ಹೌದು, ನೀತಿ, ನ್ಯಾಯ, ಪ್ರೀತಿ ಮತ್ತು ದಯೆಗಳಿಂದ ನಿನ್ನನ್ನು ವರಿಸುವೆನು.

[20] ನಾನು ನಿನ್ನನ್ನು ನಂಬಿಕೆಯಿಂದ ವರಿಸಲು ನೀನು ಯೆಹೋವನಾದ ನನ್ನನ್ನು ತಿಳಿದುಕೊಳ್ಳುವೆ.”

[21] ಆ ದಿನದಲ್ಲಿ ಯೆಹೋವನು, “ಆ ಕಾಲದಲ್ಲಿ ನಾನು ಒಲುಮೆ ತೋರಿಸುವೆನು. ಬೇಡುವ ಆಕಾಶಕ್ಕೆ ನಾನು ಒಲಿಯಲು, ಬೇಡುವ ಭೂಮಿಗೆ ಅದು ಒಲಿಯುವುದು.

[22] ಬೇಡುವ ಧಾನ್ಯ, ದ್ರಾಕ್ಷಾರಸ, ತೈಲಗಳಿಗೆ ಭೂಮಿಯು ಒಲಿಯುವುದು, ಬೇಡುವ ಇಜ್ರೇಲಿಗೆ ಅವು ಒಲಿಯುವವು.

[23] ನಾನು ದೇಶದಲ್ಲಿ ಇಜ್ರೇಲನ್ನು ನನಗಾಗಿ ಬಿತ್ತಿಕೊಳ್ಳುವೆನು, ಲೋ ರುಹಾಮಳಿಗೆ ವಾತ್ಸಲ್ಯವನ್ನು ತೋರಿಸುವೆನು; ಲೋ ಅಮ್ಮಿಗೆ ‘ನೀನು ನನ್ನ ಪ್ರಜೆಯೇ’ ಎಂದು ಹೇಳುವೆನು. ಅವರು ನನ್ನನ್ನು ‘ನನ್ನ ದೇವರೇ’ ಎಂದು ಭಜಿಸುವರು” ಎಂದು ನುಡಿಯುತ್ತಾನೆ.

ಹೋಶೇಯನು — Chapters