Skip to content
Opens in a new window
Listen to this chapter • 3:02

[1] ಪೂರ್ವದಲ್ಲಿ ಎಫ್ರಾಯೀಮು ನುಡಿದ ಮಾತಿಗೆ ಎಲ್ಲರೂ ನಡುಗಿದರು, ಅದು ಇಸ್ರಾಯೇಲಿನಲ್ಲಿ ಉನ್ನತಸ್ಥಿತಿಗೆ ಬಂದಿತ್ತು; ಆದರೆ ಬಾಳ್ ದೇವತೆಯ ವಿಷಯದಲ್ಲಿ ದೋಷಿಯಾದಾಗ ನಾಶವಾಯಿತು.

[2] ಈಗ ಎಫ್ರಾಯೀಮ್ಯರು ಹೆಚ್ಚೆಚ್ಚಾಗಿ ಪಾಪಮಾಡುತ್ತಾರೆ, ತಮ್ಮ ಬೆಳ್ಳಿಯಿಂದ ಸ್ವಬುದ್ಧಿಗೆ ತಕ್ಕ ಎರಕದ ಬೊಂಬೆಗಳನ್ನು ರೂಪಿಸಿಕೊಂಡಿದ್ದಾರೆ; ಅವೆಲ್ಲಾ ಶಿಲ್ಪಿಗಳ ಕೈಕೆಲಸವೇ; ಇಂಥವುಗಳನ್ನು ಮಾತನಾಡಿಸುತ್ತಾರೆ, ಮನುಷ್ಯರಾದ ಪೂಜಾರಿಗಳು ಪಶುವಿನ ಮೂರ್ತಿಗಳನ್ನು ಮುದ್ದಿಸುತ್ತಾರೆ.

[3] ಹೀಗಿರಲು ಅವರು ಪ್ರಾತಃಕಾಲದ ಮೋಡದ ಹಾಗೆ, ಬೇಗನೆ ಮಾಯವಾಗುವ ಇಬ್ಬನಿಯಂತೆಯೂ, ಬಿರುಗಾಳಿಯು ಕಣದಿಂದ ಬಡಿದುಕೊಂಡುಹೋಗುವ ಹೊಟ್ಟಿನ ಹಾಗೂ, ಚಿಮಿಣಿಯಿಂದ ಹೊರಡುವ ಹೊಗೆಯೋಪಾದಿಯಲ್ಲಿಯೂ ಇರುವರು.

[4] ನಾನಾದರೋ ನೀನು ಐಗುಪ್ತ ದೇಶದಲ್ಲಿದ್ದ ಕಾಲದಿಂದ ಯೆಹೋವನೆಂಬ ನಿನ್ನ ದೇವರಾಗಿದ್ದೇನೆ; ನನ್ನ ಹೊರತು ಯಾವ ದೇವರೂ ನಿನಗೆ ಗೊತ್ತಿಲ್ಲ, ನನ್ನ ಹೊರತು ಯಾವ ರಕ್ಷಕನೂ ಇಲ್ಲ.

[5] ಅರಣ್ಯದಲ್ಲಿ, ಘೋರ ಮರುಭೂಮಿಯಲ್ಲಿ ನಿನ್ನನ್ನು ಲಕ್ಷಿಸಿದವನು ನಾನೇ.

[6] ಆಹಾರವು ನಿನ್ನವರಿಗೆ ಸಿಕ್ಕಿದಾಗ ಹೊಟ್ಟೆತುಂಬಿಸಿಕೊಂಡರು; ಹೊಟ್ಟೆ ತುಂಬಿದಾಗ ಅವರ ಮನಸ್ಸು ಉಬ್ಬಿಕೊಂಡಿತು; ಇದರಿಂದ ನನ್ನನ್ನು ಮರೆತುಬಿಟ್ಟರು.

[7] ಆದಕಾರಣ ನಾನು ಅವರ ಪಾಲಿಗೆ ಸಿಂಹ; ಚಿರತೆಯ ಹಾಗೆ ದಾರಿಯ ಮಗ್ಗುಲಲ್ಲಿ ಹೊಂಚುಹಾಕುವೆನು.

[8] ಮರಿಗಳನ್ನು ಕಳಕೊಂಡ ಕರಡಿಯಂತೆ ಅವರಿಗೆ ಎದುರು ಬಿದ್ದು ಅವರ ಎದೆಯನ್ನು ಸೀಳಿಬಿಡುವೆನು; ಅಲ್ಲೇ ಮೃಗರಾಜನಂತೆ ಅವರನ್ನು ನುಂಗುವೆನು; ಭೂಜಂತುಗಳು ಅವರನ್ನು ಹರಿದುಬಿಡುವವು.

[9] ಇಸ್ರಾಯೇಲೇ, ನಾನು ನಿನ್ನನ್ನು ನಾಶಮಾಡುವೆನು, ಯಾರು ನಿನ್ನನ್ನು ರಕ್ಷಿಸುವರು?

[10] ಈಗ ನಿನ್ನ ಅರಸನು ಎಲ್ಲಿ? ನಿನ್ನ ಪಟ್ಟಣಗಳಲ್ಲೆಲ್ಲಾ ನಿನ್ನವರನ್ನು ಉದ್ಧರಿಸುವನೋ? ನನಗೆ ರಾಜನನ್ನೂ ರಾಜ್ಯಾಧಿಕಾರಿಗಳನ್ನೂ ದಯಪಾಲಿಸು ಎಂದು ನನ್ನನ್ನು ಕೇಳಿಕೊಂಡಿಯಷ್ಟೆ; ನಿನ್ನನ್ನು ರಕ್ಷಿಸಬಲ್ಲ ನಗರಪಾಲಕರು ಎಲ್ಲಿ?

[11] ನಾನು ಕೋಪಗೊಂಡು ರಾಜರನ್ನು ಕೊಟ್ಟಿದ್ದೇನೆ; ಕೋಪೋದ್ರೇಕನಾಗಿ ಅವರನ್ನು ತೆಗೆದು ಹಾಕಿದ್ದೇನೆ.

[12] ಎಫ್ರಾಯೀಮಿನ ಅಧರ್ಮವು ಗಂಟುಕಟ್ಟಿದೆ, ಅದರ ಪಾಪವು ಭದ್ರಪಡಿಸಿದೆ.

[13] ಅದಕ್ಕೆ ಪ್ರಸವವೇದನೆಯಾಗುತ್ತಾ ಇದೆ; ಅದು ಮಂಕು ಮಗುವಿನಂತಿದೆ; ಈ ಸಮಯವು ಗರ್ಭದ್ವಾರದಲ್ಲಿ ನಿಲ್ಲತಕ್ಕ ಸಮಯವಲ್ಲ.

[14] ನಾನು ಅದನ್ನು ಪಾತಾಳದ ಅಧಿಕಾರದಿಂದ ಬಿಡಿಸಲೋ? ಮರಣದಿಂದ ಉದ್ಧರಿಸಲೋ? ಮರಣವೇ, ನಿನ್ನ ಉಪದ್ರವಗಳಲ್ಲಿ? ಪಾತಾಳವೇ, ನೀನು ಮಾಡುವ ನಾಶನವೆಲ್ಲಿ? ಕನಿಕರವು ನನಗೆ ಕಾಣಿಸದು.

[15] ಎಫ್ರಾಯೀಮು ತನ್ನ ಸಹೋದರರಲ್ಲಿ ಫಲಸಮೃದ್ಧವಾಗಿದ್ದರೂ, ಕಾಡಿನಿಂದ ಯೆಹೋವನು ಬೀಸಮಾಡುವ ಮೂಡಣ ಗಾಳಿಯು ಬರಲು ಅದರ ಬುಗ್ಗೆಯು ಬತ್ತುವುದು, ಅದರ ಒರತೆಯು ಒಣಗುವುದು. ಶತ್ರುವು ಅವರ ಪ್ರಿಯವಸ್ತುಗಳ ನಿಧಿಯನ್ನು ಸೂರೆಮಾಡುವನು.

[16] ಸಮಾರ್ಯವು ತನ್ನ ದೇವರಿಗೆ ತಿರುಗಿಬಿದ್ದುದರಿಂದ ತನ್ನ ದೋಷಫಲವನ್ನು ಅನುಭವಿಸಲೇ ಬೇಕು; ಅದರ ಜನರು ಖಡ್ಗದಿಂದ ಹತರಾಗುವರು; ವೈರಿಗಳು ಅಲ್ಲಿನ ಮಕ್ಕಳನ್ನು ಬಂಡೆಗೆ ಅಪ್ಪಳಿಸುವರು. ಗರ್ಭಿಣಿಯರ ಹೊಟ್ಟೆಯನ್ನು ಸೀಳುವರು.

ಹೋಶೇಯನು — Chapters