Skip to content
Opens in a new window
Listen to this chapter • 1:54

[1] ಅವರು, “ಯೆಹೋವನ ಕಡೆಗೆ ಹಿಂದಿರುಗಿ ಹೋಗೋಣ ಬನ್ನಿರಿ; ನಮ್ಮನ್ನು ಸೀಳಿಬಿಟ್ಟವನು ಆತನೇ, ಆತನೇ ಸ್ವಸ್ಥ ಮಾಡುವನು; ಹೊಡೆದವನು ಆತನೇ, ಆತನೇ ನಮ್ಮ ಗಾಯಗಳನ್ನು ಕಟ್ಟುವನು.

[2] ಒಂದೆರಡು ದಿನದ ಮೇಲೆ ಆತನು ನಮ್ಮನ್ನು ಬದುಕಿಸುವನು; ಮೂರನೆಯ ದಿನದಲ್ಲಿ ಆತನು ನಮ್ಮನ್ನೆಬ್ಬಿಸಲು ಆತನ ಸಾನ್ನಿಧ್ಯದಲ್ಲಿ ಬಾಳುವೆವು.

[3] ಯೆಹೋವನನ್ನು ತಿಳಿದುಕೊಳ್ಳೋಣ, ನಿರಂತರವಾಗಿ ಹುಡುಕಿ ತಿಳಿದುಕೊಳ್ಳೋಣ, ಆತನ ಆಗಮನವು ಉದಯದಂತೆ ನಿಶ್ಚಯ; ಆತನು ಮುಂಗಾರಿನಂತೆಯೂ, ಭೂಮಿಯನ್ನು ತಂಪುಮಾಡುವ ಹಿಂಗಾರಿನಂತೆಯೂ ನಮಗೆ ಸಿಕ್ಕುವನು” ಅಂದುಕೊಂಡು ನನ್ನನ್ನು ಮೊರೆಹೋಗುವರು.

[4] ಎಫ್ರಾಯೀಮೇ, ನಾನು ನಿನ್ನನ್ನು ಹೇಗೆ ತಿದ್ದಲಿ? ಯೆಹೂದವೇ, ನಿನ್ನನ್ನು ಹೇಗೆ ಸರಿಮಾಡಲಿ? ನಿಮ್ಮ ಭಕ್ತಿಯು ಪ್ರಾತಃಕಾಲದ ಮೋಡಕ್ಕೂ, ಬೇಗನೆ ಮಾಯವಾಗುವ ಇಬ್ಬನಿಗೂ ಸಮಾನವಾಗಿದೆ.

[5] ಆದಕಾರಣ ನಾನು ನಿಮ್ಮ ಜನರನ್ನು ಪ್ರವಾದಿಗಳ ಮೂಲಕ ಹತಿಸಿದ್ದೇನೆ, ನನ್ನ ಬಾಯಿಯ ಮಾತುಗಳಿಂದ ಸಂಹರಿಸಿದ್ದೇನೆ; ನನ್ನ ನ್ಯಾಯದಂಡನೆಯು ಮಿಂಚಿನಂತೆ ಹೊರಡುವುದು.

[6] ನನಗೆ ಯಜ್ಞವು ಬೇಡ, ಕರುಣೆಯೇ ಬೇಕು; ಹೋಮಗಳಿಗಿಂತ ದೇವಜ್ಞಾನವೇ ಇಷ್ಟ.

[7] ಅವರು ಆದಾಮನಂತೆ ನನ್ನ ನಿಬಂಧನೆಯನ್ನು ಮೀರಿದ್ದಾರೆ; ಅಲ್ಲಲ್ಲಿ ನನಗೆ ದ್ರೋಹಮಾಡಿದ್ದಾರೆ.

[8] ಗಿಲ್ಯಾದು ಅಧರ್ಮಿಗಳು ತುಂಬಿದ ಪಟ್ಟಣ, ಅಲ್ಲಿನ ಹೆಜ್ಜೆಜಾಡುಗಳು ರಕ್ತಮಯವೇ.

[9] ಕಳ್ಳರ ಗುಂಪು ಒಬ್ಬನಿಗೆ ಹೊಂಚು ಹಾಕುವಂತೆ ಯಾಜಕರು ಗುಂಪಾಗಿ ದಾರಿಯಲ್ಲಿ ಹೊಂಚಿಕೊಂಡಿದ್ದು, ಶೆಕೆಮಿಗೆ ಯಾತ್ರೆ ಹೋಗುವವರನ್ನು ದೋಚಿ ಕೊಂದುಹಾಕುತ್ತಾರೆ; ಹೌದು, ಘೋರಕೃತ್ಯವನ್ನು ನಡೆಸುತ್ತಾರೆ.

[10] ನಾನು ಇಸ್ರಾಯೇಲ್ ಮನೆತನದಲ್ಲಿ ಅಸಹ್ಯವನ್ನು ನೋಡಿದ್ದೇನೆ; ಎಫ್ರಾಯೀಮಿನೊಳಗೆ ವ್ಯಭಿಚಾರವು ನಡೆಯುತ್ತದೆ, ಇಸ್ರಾಯೇಲು ಹೊಲೆಯಾಗಿದೆ.

[11] ಯೆಹೂದವೇ, ನಿನಗೂ ಅಧರ್ಮಫಲದ ಸುಗ್ಗಿಯು ನೇಮಕವಾಗಿದೆ.

ಹೋಶೇಯನು — Chapters