[1] ಇಸ್ರಾಯೇಲ್ ಸೊಂಪಾಗಿ ಬೆಳೆದ ದ್ರಾಕ್ಷಾಲತೆಯಾಗಿದೆ; ಹಣ್ಣುಬಿಟ್ಟುಕೊಂಡಿದೆ; ಅದರ ಹಣ್ಣುಗಳು ಹೆಚ್ಚಿದಷ್ಟೂ ಯಜ್ಞವೇದಿಗಳನ್ನು ಹೆಚ್ಚಿಸಿಕೊಂಡಿದೆ; ಅದರ ಭೂಮಿಯು ಎಷ್ಟು ಒಳ್ಳೆಯದೋ, ಅಷ್ಟು ಒಳ್ಳೆಯ ವಿಗ್ರಹ ಸ್ತಂಭಗಳನ್ನು ನಿರ್ಮಾಣ ಮಾಡಿಕೊಂಡಿದೆ.
[2] ಇಸ್ರಾಯೇಲರ ಮನಸ್ಸು ನುಣುಚಿಕೊಳ್ಳುತ್ತದೆ; ಈಗ ದಂಡನೆಗೆ ಈಡಾಗಿದ್ದಾರೆ. ಯೆಹೋವನೇ ಅವರ ಯಜ್ಞವೇದಿಗಳನ್ನು ಮುರಿದುಬಿಡುವನು. ಅವರ ವಿಗ್ರಹ ಸ್ತಂಭಗಳನ್ನು ಹಾಳುಮಾಡುವನು.
[3] “ನಮಗೆ ರಾಜನೇ ಇಲ್ಲ; ನಾವು ಯೆಹೋವನಲ್ಲಿ ಭಯಭಕ್ತಿಯಿಟ್ಟವರಲ್ಲ. ರಾಜನಾದರೋ ನಮಗಾಗಿ ಏನು ಮಾಡಿಯಾನು?” ಎಂದು ಈಗ ಅವರು ಅಂದುಕೊಳ್ಳಬೇಕಾಯಿತು.
[4] ಹರಟೆಹರಟುತ್ತಾರೆ, ಸುಳ್ಳಾಣೆಯಿಡುತ್ತಾರೆ, ಸಂಧಾನ ಮಾಡಿಕೊಳ್ಳುತ್ತಾರೆ; ಅಲ್ಲಿನ ನ್ಯಾಯವು ನೇಗಿಲಗೆರೆಗಳಲ್ಲಿ ಹುಟ್ಟುವ ವಿಷದ ಕಳೆಗಳಂತಿದೆ.
[5] ಸಮಾರ್ಯದ ನಿವಾಸಿಗಳು ಬೇತಾವೆನಿನ ಬಸವನ ವಿಷಯದಲ್ಲಿ ಭಯಪಡುವರು. ಅದರ ಭಕ್ತ ಜನರು ಅದಕ್ಕಾಗಿ ಎದೆಬಡಿದುಕೊಳ್ಳುವರು; ಅದರ ಮಹಿಮೆಯು ನಂದಿಹೋಯಿತು ಎಂದು ಪೂಜಾರಿಗಳು ಅದಕ್ಕಾಗಿ ನಡುಗುವರು.
[6] ಅದು ಜಗಳಗಂಟ ಮಹಾರಾಜನಿಗೆ ಕಾಣಿಕೆಯಾಗಿ ಅಶ್ಶೂರಕ್ಕೆ ಒಯ್ಯಲ್ಪಡುವುದು. ಎಫ್ರಾಯೀಮಿಗೆ ಅವಮಾನವಾಗುವುದು, ಇಸ್ರಾಯೇಲ್ ತಾನು ಸಂಕಲ್ಪಿಸಿಕೊಂಡ ವಿಷಯಕ್ಕಾಗಿ ನಾಚಿಕೆಪಡುವುದು.
[7] ಸಮಾರ್ಯದ ರಾಜನು ಹಾಳಾಗಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುವ ಮರದ ಚಕ್ಕೆಗೆ ಸಮಾನನಾಗಿದ್ದಾನೆ.
[8] ಇಸ್ರಾಯೇಲಿಗೆ ಪಾಪಾಸ್ಪದವಾದ ಆವೆನಿನ ಪೂಜಾಸ್ಥಾನಗಳು ನಾಶವಾಗುವವು. ಮುಳ್ಳುಗಿಡಗಳೂ, ಕಳೆಗಳೂ ಅಲ್ಲಿನ ಯಜ್ಞವೇದಿಗಳ ಮೇಲೆ ಹುಟ್ಟುವವು; ಅಲ್ಲಿನ ಜನರು, “ಬೆಟ್ಟಗಳೇ, ನಮ್ಮನ್ನು ಮುಚ್ಚಿಕೊಳ್ಳಿರಿ, ಗುಡ್ಡಗಳೇ, ನಮ್ಮ ಮೇಲೆ ಬೀಳಿರಿ” ಎಂದು ಕೂಗಿಕೊಳ್ಳುವರು.
[9] ಇಸ್ರಾಯೇಲೇ, ಗಿಬ್ಯದಲ್ಲಿ ದುರಾಚಾರವು ನಡೆದಂದಿನಿಂದ ನೀನು ಪಾಪಮಾಡುತ್ತಾ ಬಂದಿದ್ದಿ; ಆಹಾ, ನಿನ್ನ ಜನರು ಅಲ್ಲಿ ನಿಂತಿದ್ದಾರೆ, ದುರಾಚಾರಿಗಳಿಗೆ ವಿರುದ್ಧವಾದ ಗಿಬ್ಯದಲ್ಲಿ ನಡೆದ ಯುದ್ಧಕ್ಕೆ ಅವರು ತುತ್ತಾಗುವುದಿಲ್ಲವೋ?.
[10] ನನಗಿಷ್ಟವಾದಾಗ ನಾನು ಅವರನ್ನು ದಂಡಿಸುವೆನು; ಅವರ ಎರಡು ಅಪರಾಧಗಳ ದಂಡನೆಗೋಸ್ಕರ ಜನಾಂಗಗಳು ಅವರಿಗೆ ವಿರುದ್ಧವಾಗಿ ಒಟ್ಟುಗೂಡುವವು.
[11] ಎಫ್ರಾಯೀಮು ಹತೋಟಿಗೆ ಬಂದು ತೆನೆಹುಲ್ಲನ್ನು ತುಳಿಯುತ್ತಿರುವುದರಲ್ಲಿಯೇ ಇಷ್ಟಪಡುವ ಕಡಸಾಗಿದೆ; ಈಗಲಾದರೋ ಅದರ ಅಂದವಾದ ಹೆಗಲಿನ ಮೇಲೆ ಕೈಹಾಕಿದ್ದೇನೆ, ಎಫ್ರಾಯೀಮನ್ನು ನೊಗಕ್ಕೆ ಹೂಡುವೆನು, ಯೆಹೂದವು ಉಳಬೇಕು, ಯಾಕೋಬು ಕುಂಟೆ ಎಳೆಯಬೇಕು.
[12] ನೀತಿಯ ಬೀಜವನ್ನು ಬಿತ್ತಿರಿ, ಪ್ರೀತಿಯ ಫಲವನ್ನು ಕೊಯ್ಯಿರಿ, ಹಾಳಾದ ನಿಮ್ಮ ಭೂಮಿಯನ್ನು ಫಲವತ್ತಾಗಿಸಿ; ಯೆಹೋವನು ಬಂದು ನಮ್ಮ ಮೇಲೆ ನೀತಿಯನ್ನು ವರ್ಷಿಸಲೆಂದು ಆತನಿಗೆ ಶರಣುಹೋಗುವ ಸಮಯವು ಒದಗಿದೆ.
[13] ನೀವು ಮಾಡಿದ ವ್ಯವಸಾಯವು ದುಷ್ಟತನ, ನಿಮಗಾದ ಬೆಳೆಯು ಅನ್ಯಾಯ ನೀವು ನಿಮ್ಮ ಕಟ್ಟುಪಾಡಿನಲ್ಲಿಯೂ, ನಿಮ್ಮ ಶೂರರ ರಥಗಳಲ್ಲಿಯೂ ಭರವಸವಿಟ್ಟಿದ್ದರಿಂದ ಮೋಸದ ಫಲವನ್ನು ಅನುಭವಿಸಿದ್ದೀರಿ.
[14] ಹೀಗಿರಲು ನಿಮ್ಮ ಕುಲಗಳವರಿಗೆ ವಿರುದ್ಧವಾಗಿ ಯುದ್ಧಘೋಷವು ಮೊಳಗುವುದು. ಕಾಳಗದ ದಿನದಲ್ಲಿ ಶಲ್ಮಾನನು ತಾಯಿ ಮತ್ತು ಮಕ್ಕಳನ್ನು ಒಟ್ಟಿಗೆ ಬಂಡೆಗೆ ಅಪ್ಪಳಿಸಲ್ಪಡುವುದು. ಬೇತ್ ಅರ್ಬೇಲ್ ಪಟ್ಟಣವನ್ನು ಸೂರೆಮಾಡಿದಂತೆ ನಿಮ್ಮ ಎಲ್ಲಾ ಕೋಟೆಗಳು ಸೂರೆಮಾಡಲ್ಪಡುವವು.
[15] ನಿಮ್ಮ ದುಷ್ಟತನವು ಬಹಳವಾಗಿರುವುದರಿಂದ ಬೇತೇಲು ಇಂಥ ದುರ್ಗತಿಯನ್ನು ನಿಮಗೆ ತರುವುದು; ಬೆಳಗಾಗುವುದರೊಳಗೆ ಇಸ್ರಾಯೇಲಿನ ರಾಜನು ತೀರಾ ಹಾಳಾಗುವನು.