Skip to content
Opens in a new window
Listen to this chapter • 3:28

[1] ಇಸ್ರಾಯೇಲರೇ, ಯೆಹೋವನ ವಾಕ್ಯವನ್ನು ಕೇಳಿರಿ; ಯೆಹೋವನು ದೇಶನಿವಾಸಿಗಳ ಮೇಲೆ ವಿವಾದ ಹಾಕಿದ್ದಾನೆ. ಏಕೆಂದರೆ ಪ್ರೀತಿ, ಸತ್ಯ, ದೇವಜ್ಞಾನಗಳು ದೇಶದಲ್ಲಿಲ್ಲ.

[2] ಸುಳ್ಳುಸಾಕ್ಷಿ, ನರಹತ್ಯ, ಕಳ್ಳತನ, ವ್ಯಭಿಚಾರ, ಇವುಗಳೇ ನಡೆಯುತ್ತವೆ; ದೊಂಬಿಗಳು ನಡೆಯುತ್ತಿವೆ, ದೇಶವೆಲ್ಲಾ ರಕ್ತಮಯವಾಗಿದೆ.

[3] ಹೀಗಿರಲು ದೇಶವು ನರಳುವುದು, ಅದರಲ್ಲಿ ವಾಸಿಸುವ ಸಕಲ ಭೂಜಂತುಗಳೂ ಮತ್ತು ಆಕಾಶದ ಪಕ್ಷಿಗಳೂ ಬಳಲಿ ಹೋಗುವವು; ಸಮುದ್ರದ ಮೀನುಗಳು ಸಹ ನಶಿಸಿ ಹೋಗುವವು.

[4] ಯಾರೂ ಪ್ರತಿಭಟಿಸದಿರಲಿ, ಯಾರೂ ಖಂಡಿಸದಿರಲಿ; ನಿಮ್ಮ ಜನರು ಯಾಜಕನೊಂದಿಗೆ ಹೋರಾಡುವವರಂತಿದ್ದಾರೆ.

[5] ಆಹಾ, ಯಾಜಕರೇ, ನೀವು ಹಗಲಿನಲ್ಲಿ ಎಡವುವಿರಿ; ರಾತ್ರಿಯಲ್ಲಿ ನಿಮ್ಮೊಂದಿಗೆ ಪ್ರವಾದಿಗಳೂ ಎಡವುವರು; ನಾನು ನಿಮ್ಮ ವಂಶಮೂಲವನ್ನು ನಾಶಮಾಡುವೆನು.

[6] ನನ್ನ ಜನರು ಜ್ಞಾನಹೀನರಾಗಿ ಹಾಳಾಗಿದ್ದಾರೆ; ನೀವು ಜ್ಞಾನವನ್ನು ತಳ್ಳಿಬಿಟ್ಟಿದ್ದರಿಂದ ಇನ್ನು ನನಗೆ ಯಾಜಕಸೇವೆ ಮಾಡದಂತೆ ನಾನು ನಿಮ್ಮನ್ನು ತಳ್ಳಿಬಿಡುವೆನು. ನೀವು ನಿಮ್ಮ ದೇವರ ಧರ್ಮೋಪದೇಶವನ್ನು ಮರೆತ ಕಾರಣ, ನಾನು ನಿಮ್ಮ ಸಂತತಿಯವರನ್ನು ಮರೆತು ಬಿಡುವೆನು.

[7] ಅವರು ಹೆಚ್ಚಿದ ಹಾಗೆಲ್ಲಾ ನನ್ನ ವಿರುದ್ಧ ಹೆಚ್ಚೆಚ್ಚಾಗಿ ಪಾಪಮಾಡುತ್ತಾ ಬಂದರು; ನಾನು ಅವರ ಮಾನವನ್ನು ಅವಮಾನವನ್ನಾಗಿ ಮಾರ್ಪಡಿಸುವೆನು.

[8] ನನ್ನ ಜನರ ಪಾಪವೇ ಅವರಿಗೆ ಜೀವನ; ಅವರು ಅಧರ್ಮವನ್ನು ಆಶಿಸುತ್ತಾರೆ.

[9] ಜನರೂ, ಯಾಜಕರೂ ಒಂದೇ; ಅವರ ದುಷ್ಕಾರ್ಯಗಳಿಗೆ ಅವರನ್ನು ದಂಡಿಸುವೆನು, ಅವರ ದುಷ್ಕೃತ್ಯಗಳನ್ನು ಅವರಿಗೆ ಕಟ್ಟುವೆನು.

[10] ಅವರು ಉಣ್ಣುತ್ತಿದ್ದರೂ ತೃಪ್ತಿ ದೊರೆಯದು, ಹಾದರ ಮಾಡುತ್ತಿದ್ದರೂ ಪ್ರಜಾಭಿವೃದ್ಧಿಯಾಗದು; ಯೆಹೋವನ ಕಡೆಗೆ ಗಮನಿಸುವುದನ್ನು ಬಿಟ್ಟುಬಿಟ್ಟಿದ್ದಾರಷ್ಟೆ.

[11] ವ್ಯಭಿಚಾರ, ದ್ರಾಕ್ಷಾರಸ ಮತ್ತು ಮದ್ಯಗಳು ಬುದ್ಧಿಯನ್ನು ಕೆಡಿಸುತ್ತವೆ.

[12] ನನ್ನ ಜನರು ತಮ್ಮ ಮರದ ತುಂಡನ್ನು ಹಿಡಿದು ಕಣಿಕೇಳುತ್ತಾರೆ, ಅವರು ಮರದ ತುಂಡಿನಿಂದ ಪರಿಹಾರ ನಿರೀಕ್ಷಿಸುತ್ತಾರೆ. ವ್ಯಭಿಚಾರ ಗುಣವು ಅವರನ್ನು ಭ್ರಾಂತಿಗೊಳಿಸಿದೆ; ತಮ್ಮ ದೇವರಿಗೆ ಪತಿಭಕ್ತಿಯನ್ನು ಸಲ್ಲಿಸದೆ ದ್ರೋಹಿಗಳಾಗಿದ್ದಾರೆ.

[13] ಪರ್ವತಾಗ್ರಗಳಲ್ಲಿ ಯಜ್ಞ ಮಾಡುತ್ತಾರೆ, ಗುಡ್ಡಗಳ ಮೇಲೆ ಧೂಪ ಹಾಕುತ್ತಾರೆ. ಅಲ್ಲೋನ್, ಲಿಬ್ನೆ, ಏಲಾ ಮರಗಳ ನೆರಳು ದಟ್ಟವಾಗಿರುವುದರಿಂದ ಅವುಗಳ ಕೆಳಗೆ ಇವುಗಳನ್ನು ನಡೆಸುತ್ತಾರೆ. ಹೀಗಿರಲು ನನ್ನ ಜನರೇ, ನಿಮ್ಮ ಕುಮಾರಿಯರು ವ್ಯಭಿಚಾರಿಗಳಾಗಿ ನಡೆಯುವುದೂ, ನಿಮ್ಮ ವಧುಗಳು ವ್ಯಭಿಚಾರ ಮಾಡುವುದೂ ಏನಾಶ್ಚರ್ಯ?

[14] ವ್ಯಭಿಚಾರಿಣಿಯರಾಗಿ ನಡೆಯುವ ನಿಮ್ಮ ಕುಮಾರಿಯರನ್ನೂ ವ್ಯಭಿಚಾರ ಮಾಡುವ ನಿಮ್ಮ ವಧುಗಳನ್ನೂ ನಾನು ದಂಡಿಸುವುದಿಲ್ಲ; ನೀವೇ ವ್ಯಭಿಚಾರಿಗಳನ್ನು ಕರೆದುಕೊಂಡು ಓರೆಯಾಗಿ ಹೋಗುತ್ತೀರಿ; ದೇವದಾಸಿಯರೊಂದಿಗೆ ಯಜ್ಞಮಾಡುತ್ತೀರಿ; ಆಹಾ, ವಿವೇಕವಿಲ್ಲದ ಜನರು ಕೆಡವಲ್ಪಡುವರು.

[15] ಇಸ್ರಾಯೇಲೇ, ನೀನು ವ್ಯಭಿಚಾರಿಯಾಗಿ ನಡೆದರೂ ಯೆಹೂದವು ಆ ದೋಷಕ್ಕೆ ಒಳಗಾಗದಿರಲಿ. ಯೆಹೂದ್ಯರೇ, ಗಿಲ್ಗಾಲಿಗೆ ಸೇರಬೇಡಿರಿ, ಬೇತ್ ಅವೆನಿಗೆ ಯಾತ್ರೆ ಹೋಗಬೇಡಿರಿ, “ಯೆಹೋವನ ಜೀವದಾಣೆ” ಎಂದು ಶಪಥ ಮಾಡಬಾರದು.

[16] ಇಸ್ರಾಯೇಲು ಮೊಂಡ ಹಸುವಿನಂತೆ ಮೊಂಡುತನದಿಂದ ನಡೆದಿದೆ; ಈಗ ಯೆಹೋವನು ಅದನ್ನು ಕುರಿಯಂತೆ ವಿಶಾಲ ಸ್ಥಳದಲ್ಲಿ ಮೇಯಿಸುವನೋ?

[17] ಎಫ್ರಾಯೀಮು ವಿಗ್ರಹಗಳಲ್ಲಿ ಬೆರತುಹೋಗಿದೆ; ಅದನ್ನು ಬಿಟ್ಟುಬಿಡಿರಿ.

[18] ಮದ್ಯಪಾನ ಮುಗಿದ ಕೂಡಲೆ ವ್ಯಭಿಚಾರದಲ್ಲಿ ತೊಡಗುತ್ತಾರೆ; ದೇಶಪಾಲಕರು ಅವಮಾನದಲ್ಲಿ ಅತ್ಯಾಶೆಪಡುತ್ತಾರೆ.

[19] ಗಾಳಿಯು ಅವರನ್ನು ತನ್ನ ರೆಕ್ಕೆಗಳಲ್ಲಿ ಸುತ್ತಿಕೊಂಡು ಹೋಗುವುದು; ತಾವು ಮಾಡುತ್ತಿದ್ದ ವಿಗ್ರಹದ ಯಜ್ಞಗಳಿಗೆ ನಾಚಿಕೆಪಡುವರು.

ಹೋಶೇಯನು — Chapters